ಎಲ್ಗರ್ ಪರಿಷತ್-ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ, ಹೋರಾಟಗಾರ ಮಹೇಶ್ ರಾವತ್ ಅವರಿಗೆ ವೈದ್ಯಕೀಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಮಂಗಳವಾರ (ಸೆ.16) ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ.
ಸೆಪ್ಟೆಂಬರ್ 2023ರಲ್ಲಿ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ್ದರೂ, ತನ್ನ ಜೈಲು ಶಿಕ್ಷೆ ಮುಂದುವರಿಸಿರುವುದನ್ನು ಪ್ರಶ್ನಿಸಿ ಮಹೇಶ್ ರಾವತ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ.ಎಂ ಸುಂದರೇಶ್ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಸುಪ್ರೀಂ ಕೋರ್ಟ್ ಪೀಠ ವಿಚಾರಣೆ ನಡೆಸುತ್ತಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮೇಲ್ಮನವಿ ಸಲ್ಲಿಸಲು ಸಮಯ ಕೋರಿದ ಹಿನ್ನೆಲೆ, ಬಾಂಬೆ ಹೈಕೋರ್ಟ್ ಆದೇಶಕ್ಕೆ ಆರಂಭದಲ್ಲಿ ಸುಪ್ರೀಂ ಕೋರ್ಟ್ ಒಂದು ವಾರ ತಡೆ ನೀಡಿತ್ತು. ನಂತರ ತಡೆಯಾಜ್ಞೆ ವಿಸ್ತರಿಸಿದೆ.
ರಾವತ್ ಪರ ಸುಪ್ರೀಂ ಕೋರ್ಟ್‌ಗೆ ಹಾಜರಾಗಿದ್ದ ಹಿರಿಯ ವಕೀಲ ಸಿ.ಯು ಸಿಂಗ್, ರುಮಟಾಯ್ಡ್ ಸಂಧಿವಾತದಿಂದ ಬಳಲುತ್ತಿರುವ ರಾವತ್ ಅವರಿಗೆ ಜೈಲಿನಲ್ಲಿ ಅಥವಾ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ವಿಶೇಷ ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂದು ಹೇಳಿದ್ದರು. ಹೈಕೋರ್ಟ್ ಜಾಮೀನು ನೀಡಿ ಎರಡು ವರ್ಷಗಳಾಗಿವೆ ಎಂಬುವುದನ್ನು ಉಲ್ಲೇಖಿಸಿದ್ದರು.
ಎನ್‌ಐಎ ಪರ ವಕೀಲರು ಅರ್ಜಿಗೆ ವಿರೋಧ ವ್ಯಕ್ತಪಡಿಸಿದ, ರಾವತ್ ಅವರ ಮೇಲೆ ಮಾವೋವಾದಿಗಳಿಗೆ ಹಣವನ್ನು ವರ್ಗಾಯಿಸಿದ ಆರೋಪವಿರುವುದರಿಂದ ಈ ಪ್ರಕರಣ ಗಂಭೀರವಾದುದು ಎಂದು ವಾದಿಸಿದ್ದರು.
ವಾದ ಆಲಿಸಿ ರಾವತ್ ಅವರಿಗೆ ಮಧ್ಯಂತರ ಪರಿಹಾರ ನೀಡಿದ ಕೋರ್ಟ್, “ಅರ್ಜಿದಾರರು ನಿಜವಾಗಿಯೂ ಜಾಮೀನು ದೊರೆತಿದೆ ಎಂಬ ಅಂಶದೊಂದಿಗೆ ವೈದ್ಯಕೀಯ ಆಧಾರದ ಮೇಲೆ ಜಾಮೀನು ಕೋರುತ್ತಿದ್ದಾರೆ. ನಾವು ಆರು ವಾರಗಳ ಅವಧಿಗೆ ವೈದ್ಯಕೀಯ ಜಾಮೀನು ನೀಡಲು ಒಲವು ತೋರುತ್ತೇವೆ” ಎಂದು ಹೇಳಿದೆ.
ಜನವರಿ 1, 2018 ರಂದು ಭೀಮಾ-ಕೋರೆಗಾಂವ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜೂನ್ 2018 ರಲ್ಲಿ ಪುಣೆ ಪೊಲೀಸರು ರಾವತ್ ಅವರನ್ನು ಬಂಧಿಸಿದ್ದರು. ಪುಣೆಯ ಶನಿವಾರವಾಡದಲ್ಲಿ ಡಿಸೆಂಬರ್ 2017 ರಲ್ಲಿ ನಡೆದ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣದ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಲಾಗಿದೆ ಎಂದು ಎನ್‌ಐಎ ಆರೋಪಿಸಿದೆ.
ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಬಂಧಿತರಾಗಿರುವ ಮಹೇಶ್ ರಾವತ್, ಪ್ರಸ್ತುತ ಮಹಾರಾಷ್ಟ್ರದ ತಲೋಜಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಜಗ್ತಾಪ್ ಜಾಮೀನು ಅರ್ಜಿ ಅಕ್ಟೋಬರ್‌ನಲ್ಲಿ ವಿಚಾರಣೆ
ಪ್ರಕರಣದ ಮತ್ತೊಬ್ಬರು ಆರೋಪ, ಹೋರಾಟಗಾರ್ತಿ ಜ್ಯೋತಿ ಜಗ್ತಾಪ್ ಕೂಡ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಹಿರಿಯ ವಕೀಲೆ ಅಪರ್ಣಾ ಭಟ್ ಅವರು ಜಗ್ತಾಪ್ ಅವರ ಅರ್ಜಿಯನ್ನು ಪೀಠದ ಮುಂದೆ ಪ್ರಸ್ತಾಪಿಸಿ, “ಜಗ್ತಾಪ್ ಸೆಪ್ಟೆಂಬರ್ 2020ರಿಂದ ವಿಚಾರಣೆಯಿಲ್ಲದೆ ಬಂಧನದಲ್ಲಿದ್ದಾರೆ” ಎಂದು ತಿಳಿಸಿದ್ದಾರೆ.
ಎಲ್ಗರ್ ಪರಿಷತ್ ಕಾರ್ಯಕ್ರಮದಲ್ಲಿ ಕಬೀರ್ ಕಲಾ ಮಂಚ್‌ನ ಇತರ ಸದಸ್ಯರೊಂದಿಗೆ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಜಗ್ತಾಪ್ ಅವರನ್ನು ಬಂಧಿಸಲಾಗಿದೆ. ಎನ್‌ಐಎ ಪ್ರಕಾರ, ಕಬೀರ್ ಕಲಾ ಮಂಚ್ ಸಿಪಿಐ (ಮಾವೋವಾದಿ) ಮುಂಚೂಣಿ ಸಾಂಸ್ಕೃತಿಕ ಸಂಘಟನೆಯಾಗಿದೆ ಎಂದು ಹೇಳಲಾಗ್ತಿದೆ.
ಜಾರ್ಖಂಡ್: ನಕ್ಸಲರ ಕೇಂದ್ರ ಸಮಿತಿ ಸದಸ್ಯ ಸಹದೇವ್ ಸೊರೆನ್ ಸೇರಿ ಪ್ರಮುಖ 3 ನಕ್ಸಲರ ಹತ್ಯೆ


