1944 ರಿಂದ ಪ.ಜಾತಿ/ಪ.ಪಂಗಡದ ವಿದ್ಯಾರ್ಥಿಗಳಿಗಾಗಿ ಜಾರಿಯಲ್ಲಿರುವ “ಮೆಟ್ರಿಕ್ ನಂತರದ ಸ್ಕಾಲರ್‌ಶಿಪ್ (ಪಿಎಂಎಸ್)” ನಿಲ್ಲಿಸಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ದಲಿತರ ಶೈಕ್ಷಣಿಕ ನ್ಯಾಯವನ್ನು ಕಸಿದುಕೊಳ್ಳುವ ಹುನ್ನಾರ ಎಂದು ‘ದಲಿತ ಮಾನವ ಹಕ್ಕುಗಳ ರಾಷ್ಟ್ರೀಯ ಅಭಿಯಾನ’ ಆತಂಕ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯು “ಕೇಂದ್ರದಿಂದ ಶೇ. 100 ಪ್ರಮಾಣದಲ್ಲಿ ಆರ್ಥಿಕ ಅನುದಾನ ಬರುತ್ತಿದ್ದ, ಶೋಷಿತ ಸಮುದಾಯಗಳಿಗೆ ಆರ್ಥಿಕ ನೆರವನ್ನು ಕೊಡುವ, ಶೈಕ್ಷಣಿಕ ನ್ಯಾಯ ಒದಗಿಸುವ ಅಂಬೇಡ್ಕರ್‌ರವರ ಪ್ರಿಯವಾದ ಯೋಜನೆಯನ್ನು ಮೋದಿ ಸರಕಾರ ನಿಲ್ಲಿಸಬಾರದು. ಅಸ್ಪೃಶ್ಯತೆಯನ್ನು ನಿಲ್ಲಿಸಿ, ಅಸ್ಪೃಶ್ಯತೆಯನ್ನು ಅಡ್ರೆಸ್ ಮಾಡುವ ಸ್ಕಾಲರ್‌ಶಿಪ್‌ನಲ್ಲ” ಎಂದು ಆಗ್ರಹಿಸಿದೆ.
ಈ ‘ಪಿಎಂಎಸ್’ ಅಡಿಯಲ್ಲಿ ವಾರ್ಷಿಕ ವರಮಾನ 2.5 ಲಕ್ಷಕ್ಕಿಂತ ಕಡಿಮೆ ಇರುವ ಪ.ಜಾತಿ/ಪ.ಪಂಗಡದ ಬಡ ಕುಟುಂಬದ ಸುಮಾರು 60 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ದೊರಕುತ್ತಿತ್ತು. ಆದರೆ ಆ ಹಣವನ್ನು ಇನ್ನು ಮುಂದೆ ಜೈಲು ಕಟ್ಟುವ, ಟೆಲಿಕಾಂ ಕಂಪನಿಗಳಿಗೆ ಕೇಬಲ್ ಹಾಕುವುದಕ್ಕೆ ಬಳಸಲು ಮೋದಿ ಸರ್ಕಾರ ಮುಂದಾಗುತ್ತಿದೆ ಎಂದು ಆರೋಪಿಸಲಾಗಿದೆ.
ಜುಲೈ 2019ರಲ್ಲಿ ಈ ‘ಪಿಎಂಎಸ್’ ಗೆ ತಿದ್ದುಪಡಿ ಮಾಡಿ ಸಂಪೂರ್ಣ ಕೇಂದ್ರದ ಯೋಜನೆಯಾಗಿದ್ದ (national scheme) ಇದರ ಸ್ವರೂಪವನ್ನು ಕೇಂದ್ರ-ರಾಜ್ಯಗಳ 60:40 ಅನುಪಾತಕ್ಕೆ ಬದಲಿಸಿದೆ. ಇದರಿಂದ ಇಲ್ಲಿಯವರೆಗೂ ಆರ್ಥಿಕ ಕೊರತೆಯ ನೆಪವೊಡ್ಡಿ ಬಿಹಾರ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರಖಂಡ ರಾಜ್ಯಗಳು ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಿಲ್ಲ. ಹಾಗಾಗಿ ಮೊದಲಿದ್ದ ಹಾಗೆ ಕೇಂದ್ರ ಸರ್ಕಾರವೇ ಈ ಯೋಜನೆಯ ಜವಾಬ್ದಾರಿ ಹೊತ್ತುಕೊಳ್ಳಬೇಕೆಂದು ‘ದಲಿತ ಆರ್ಥಿಕ ಅಧಿಕಾರಕ್ಕಾಗಿ ದಲಿತ ಮಾನವ ಹಕ್ಕುಗಳ ರಾಷ್ಟ್ರೀಯ ಅಭಿಯಾನ’ದ ಪ್ರಧಾನ ಕಾರ್ಯದರ್ಶಿ ಬೀನಾ ಪಲ್ಲಿಕಲ್ ಒತ್ತಾಯಿಸಿದ್ದಾರೆ.
ಈ ಕೂಡಲೇ ಕೇಂದ್ರ ಸರ್ಕಾರ ಸ್ಕಾಲರ್‌ಶಿಪ್‌ಗಾಗಿ ಅಗತ್ಯವಿರುವ 10,000 ಕೋಟಿ ರೂ ಹಣವನ್ನು ಬಿಡುಗಡೆ ಮಾಡಬೇಕು, ಯೋಜನೆಯ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಹೊತ್ತುಕೊಳ್ಳಬೇಕು, ಸ್ಕಾಲರ್‌ಶಿಪ್ ಮೊತ್ತವನ್ನು ಹೆಚ್ಚಿಸಬೇಕು, ಎಲ್ಲಾ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ಸಿಗುತ್ತಿದೆಯೇ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮೇಲ್ವಿಚಾರಣೆ ನಡೆಸಬೇಕು, ವಿದ್ಯಾರ್ಥಿ ವೇತನ ನೀಡದ ಸಂಸ್ಥೆಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ದೇಶದ 60 ಲಕ್ಷಕ್ಕೂ ಹೆಚ್ಚು ದಲಿತ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಮೊಟಕುಗೊಳಿಸಬೇಕಾದ ಪರಿಸ್ಥಿತಿ ಬಂದಿದೆ. ಹಾಗಾಗಿ ಕೇಂದ್ರದ ಈ ದಲಿತ ವಿರೋಧಿ ನೀತಿಯನ್ನು ಖಂಡಿಸಿ ದೇಶದ ಎಲ್ಲಾ ದಲಿತ ಸಂಘಟನೆಗಳು ಹೋರಾಟಕ್ಕೆ ಮುಂದಾಗಬೇಕೇಂದು ಬೀನಾ ಪಲ್ಲಿಕಲ್ ಕರೆ ನೀಡಿದ್ದಾರೆ.
ಇದನ್ನೂ ಓದಿ: SC/ST ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ಸ್ಕಾಲರ್‌ಶಿಪ್ ನಿಲ್ಲುವ ಅಪಾಯ!


