ಬೆಳಗಾವಿಯ ಪೀರನವಾಡಿ ವೃತ್ತದಲ್ಲಿ ಸ್ಥಾಪಿಸಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ಮತ್ತು ಕನ್ನಡ ಹೋರಾಟಗಾರರ ಮೇಲಿನ ಲಾಠಿಚಾರ್ಜ್ ಖಂಡಿಸಿ, ಅದೇ ಸ್ಥಳದಲ್ಲಿ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಿಸಿ ಎಂದು ಬೆಳಗಾವಿಯ ಪೀರನವಾಡಿ ಮತ್ತು ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಭಾರೀ ಪ್ರತಿಭಟನೆ ನಡೆದಿದೆ.
ಬೆಳಗಾವಿಯ ಪೀರನವಾಡಿಯಲ್ಲಿ ಜಮಾಯಿಸಿದ ಕನ್ನಡ ಸಂಘಟನೆಯಗಳ ಕಾರ್ಯಕರ್ತರು ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೀರನವಾಡಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ನಡೆಸಿ ಕೂಡಲೇ ಅದೇ ಸ್ಥಳದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.
ನಾವು ಒಂದು ತಿಂಗಳ ಮುಂಚೆಯೇ ಪ್ರತಿಮೆ ಸ್ಥಾಪನೆಗೆ ಅವಕಾಶ ಕೊಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಅವರು ಬೇಕಂತಲೇ ಅವಕಾಶ ನೀಡದೇ ಕನ್ನಡಿಗರ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹಾಗಾಗಿ ಅನಿವಾರ್ಯವಾಗಿ ನಾವು ರಾಯಣ್ಣರ ಜನ್ಮದಿನದಂದು ರಾತ್ರೋರಾತ್ರಿ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದೆವು. ಭಾರತದ ತ್ರಿವರ್ಣ ಧ್ವಜವನ್ನು ಸಹ ಹಾರಿಸಿದ್ದೆವು. ಆದರೆ ಪೊಲೀಸರು ಅದನ್ನು ತೆರವುಗೊಳಿಸುವ ಮೂಲಕ ಕನ್ನಡಿಗರಿಗೆ, ರಾಯಣ್ಣನವರಿಗೆ ಅವಮಾನ ಮಾಡಲಾಗಿದೆ ಎಂದು ಹಲವರು ಆರೋಪಿಸಿದ್ದಾರೆ.
ನೂರಾರು ಮಹಿಳೆಯರು ಸೇರಿದಂತೆ 500ಕ್ಕೂ ಹೆಚ್ಚು ಪ್ರತಿಭಟನಾಕಾರರು ಭಾಗವಹಿಸಿದ ಪ್ರತಿಭಟನೆಯಲ್ಲಿ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಬೆಳವಾಡಿ ಮಲ್ಲಣ್ಣಿನಿಗೆ ಜಯವಾಗಲಿ ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಬೆಂಗಳೂರು ವರದಿ:
ಕನ್ನಡಪರ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ ಶಿವರೆಡ್ಡಿಯವರನ್ನು ಅಮಾನತು ಮಾಡಬೇಕು, ಬೆಳಗಾವಿಯ ಪೀರನವಾಡಿಯ ಅದೇ ಸ್ಥಳದಲ್ಲಿ ಕೂಡಲೇ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಣಧೀರರ ಪಡೆಯ ನೇತೃತ್ವದಲ್ಲಿ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯಾಧ್ಯಕ್ಷ ಬಿ.ಹರೀಶ್ ಕುಮಾರ್ ಮಾತನಾಡಿ, “ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ತೆರವುಗೊಳಿಸಿರುವುದನ್ನು ಎಲ್ಲಾ ಕನ್ನಡಿಗರಿ ಪರವಾಗಿ ಖಂಡಿಸುತ್ತೇವೆ. ರಾಯಣ್ಣ ದೇಶದ್ರೋಹಿ ಕೆಲಸ ಮಾಡಿಲ್ಲ. ಆದರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಪ್ರತಿಮೆಗೆ ಅವಮಾನ ಮಾಡಲಾಗಿದೆ. ನಾಲ್ಕು ವರ್ಷದಿಂದಲೂ ಅನುಮತಿಗಾಗಿ ಕನ್ನಡಿಗರು ಅಲೆಯುತ್ತಿದ್ದರೂ ಪೊಲೀಸರು ಅನುಮತಿ ಕೊಟ್ಟಿಲ್ಲ. ಹಾಗಾಗಿ ಸರ್ಕಾರಕ್ಕೆ ಒಂದು ವಾರದ ಗಡುವು ನೀಡುತ್ತೇವೆ. ಅಷ್ಟರಲ್ಲಿ ಪ್ರತಿಮೆ ನಿರ್ಮಾಣ ಮಾಡದಿದ್ದರೆ ಬೆಳಗಾವಿ ಚಲೋ ಕಾರ್ಯಕ್ರಮಕ್ಕೆ ಮುಂದಾಗುತ್ತೇವೆ” ಎಂದಿದ್ದಾರೆ.
ಪ್ರತಿಭಟನೆಯ ನಂತರ ಕಂದಾಯ ಸಚಿವರಾದ ಆರ್ ಅಶೋಕ್‌ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಂಜು ಗಣಪತಿಪುರ, ದೊಡ್ಡಯ್ಯ ಆನೇಕಲ್, ಮನೋಹರ್ ಎಸ್.ಎಂ, ರಾಜಶೇಖರ್ ಮುಂತಾದವರು ಇದ್ದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು: ಕನ್ನಡಿಗರಿಂದ ತೀವ್ರ ಆಕ್ರೋಶ


