Homeಮುಖಪುಟಪಂಜಾಬಿನ ಪುಟ್ಟ ಮಕ್ಕಳಿಗೂ ಗೊತ್ತು ಈ ರೈತ ವಿರೋಧಿ ನೀತಿಗಳ ಪರಿಣಾಮ ಏನೆಂದು..

ಪಂಜಾಬಿನ ಪುಟ್ಟ ಮಕ್ಕಳಿಗೂ ಗೊತ್ತು ಈ ರೈತ ವಿರೋಧಿ ನೀತಿಗಳ ಪರಿಣಾಮ ಏನೆಂದು..

ಭಾರತದ ಬಹಳಷ್ಟು ರಾಜ್ಯ ಸರ್ಕಾರಗಳು ಈಗಾಗಲೇ ಎಪಿಎಂಸಿ ಕಾಯ್ದೆಯನ್ನು ತೆಗೆದುಹಾಕಿಯೇ ಬಿಟ್ಟಿವೆ. ಅದರಿಂದ ರೈತರ ಆದಾಯಕ್ಕೆ ಹೇಗೆ ಹೊಡೆತ ಬೀಳಬಹುದೆಂಬುದಕ್ಕೆ ಬಿಹಾರ ಒಂದು ದುರದೃಷ್ಟಕರ ಉದಾಹರಣೆ.

- Advertisement -
- Advertisement -

ಜಿಸ್ ಖೇತ್ ಕೆ ದೆಹಖಾನ್ ಕೋ ಮುಯಸ್ಸರ್‌ನ ಹೋ ರೋಜಿ
ಉಸ್ ಖೇತ್ ಕೆ ಹರ್ ಖೋಶಾ-ಎ-ಗಂದಾಂ ಕೋ ಜಲಾ ದೋ!
(ಯಾವ ಹೊಲದ ಬೆಳೆಗೆ ಉಳುವ ರೈತ ಹಕ್ಕುದಾರನಲ್ಲವೋ
ಅಂತಹ ಹೊಲದ ಬೆಳೆಯ ಪ್ರತಿ ಇಂಚನ್ನೂ ಸುಟ್ಟು ಹಾಕಿ)
ಕವಿ ಅಲ್ಲಮ ಇಕ್ಬಾಲ್

ದುಡಿಯುವ ವರ್ಗ ಯಾವಾಗ ಎಚ್ಚೆತ್ತುಕೊಳ್ಳುತ್ತದೆಯೋ, ಅದು ಇಡೀ ಜಗತ್ತನ್ನೇ ಅಲ್ಲಾಡಿಸುತ್ತದೆ! ಬ್ರಿಟಿಷ್ ರಾಜ್‌ನ ನಂತರದ ಕಾಲದಲ್ಲಿ ನಾವು ಕಂಡರಿಯದಿದ್ದ ಐತಿಹಾಸಿಕ ರೈತ ಹೋರಾಟವೊಂದು ನಮ್ಮ ಕಣ್ಣೆದುರು ಬಿಚ್ಚಿಕೊಳ್ಳುತ್ತಲಿದೆ.

ಇಡೀ ಜಗತ್ತು ಕೋವಿಡ್ 19ರ ವಿರುದ್ಧ ಹೋರಾಟದಲ್ಲಿದ್ದರೆ, ಜಗತ್ತಿನ ಅಧಿಕಾರಶಾಹಿ ಪ್ರಭುತ್ವಗಳು ಜಾಗತಿಕ ಸಾಂಕ್ರಾಮಿಕವನ್ನು ಜನರ ಕತ್ತಿನ ಸುತ್ತಲಿನ ಉರುಳನ್ನು ಬಿಗಿಗೊಳಿಸಲು ಬಳಸಿಕೊಳ್ಳುತ್ತಿವೆ. ಅದರ ಪರಿಣಾಮ ಇನ್ನಷ್ಟು ಬಂಧನಗಳು, ದಮನ ಮತ್ತು ಜನವಿರೋಧಿ ನೀತಿಗಳು.

ಸೆಪ್ಟೆಂಬರ್‌ನಲ್ಲಿ ಮೋದಿ ಸರ್ಕಾರವು ಕೃಷಿ ವಲಯದ ಹಕ್ಕುದಾರರ ಯಾವುದೇ ಅಭಿಪ್ರಾಯವನ್ನೂ ಪರಿಗಣಿಸದೆ, ದೇಶದುದ್ದಕ್ಕೂ ನಡೆಯುತ್ತಿದ್ದ ಪ್ರತಿಭಟನೆಗಳು ಮತ್ತು ಸಂಸತ್ತಿನಲ್ಲಿ ವಿರೋಧ ಪಕ್ಷದ ತೀವ್ರ ಆಕ್ಷೇಪಣೆಯ ನಡುವೆಯೂ ಮೂರು ರೈತವಿರೋಧಿ ಮಸೂದೆಗಳನ್ನು ಜಾರಿಗೆ ತಂದಿತು. ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ನಿರ್ವಹಣಾ) ಮಸೂದೆ, ರೈತರ (ಸಬಲೀಕರಣ ಮತ್ತು ಸಂರಕ್ಷಣೆಯ) ಬೆಲೆ ಖಾತರಿ ಒಪ್ಪಂದ ಮತ್ತು ತೋಟಗಾರಿಕಾ ಸೇವೆಗಳ ಮಸೂದೆ, ಜೀವನಾವಶ್ಯಕ ಸರಕುಗಳ (ತಿದ್ದುಪಡಿ) ಮಸೂದೆ. ಈ ಮೂರನ್ನೂ ತೀವ್ರ ಪ್ರತಿರೋಧದ ನಡುವೆಯೂ ಸುಗ್ರೀವಾಜ್ಞೆಯ ರೂಪದಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿ ಜಾರಿಗೊಳಿಸಲಾಗುತ್ತಿದೆ. ಇವು ರೈತರ ವಿರೋಧಿ ಮತ್ತು ಕಾರ್ಪೊರೇಟ್ ವಲಯದ ಪರವಾದ ಮಸೂದೆಗಳೆಂದು ವ್ಯಾಪಕ ಟೀಕೆಗೆ ಗುರಿಯಾಗಿವೆ.

ದೇಶದ ಎಲ್ಲ ರೈತ ಸಂಘಟನೆಗಳ ಜಂಟಿ ವೇದಿಕೆಯಾದ ಆಲ್ ಇಂಡಿಯಾ ಕಿಸಾನ್ ಸಂಘರ್ಷ್ ಕೋಆರ್ಡಿನೇಶನ್ ಕಮಿಟಿ (ಎಐಕೆಎಸ್‌ಸಿಸಿ)ಯು ನವೆಂಬರ್ 26ರಂದು ದೆಹಲಿ ಚಲೋಗೆ ಕರೆ ನೀಡಿತ್ತು. ಇದಕ್ಕೆ ಪ್ರತಿಸ್ಪಂದಿಸಿದ ರೈತ ಸಮುದಾಯ-ವಿಶೇಷವಾಗಿ ದೆಹಲಿಯ ಅಕ್ಕಪಕ್ಕದ ರಾಜ್ಯಗಳಾದ ಪಂಜಾಬ್ ಮತ್ತು ಹರ್ಯಾಣದ ರೈತರು ತಮ್ಮ ರಾಜ್ಯಗಳಿಗೆ ದೆಹಲಿ ಹತ್ತಿರದಲ್ಲಿರುವ ಕಾರಣಕ್ಕೂ ಸೇರಿ- ದೊಡ್ಡ ಸಂಖ್ಯೆಯಲ್ಲಿ ದೆಹಲಿಯನ್ನು ಪ್ರವೇಶಿಸಲು ಪ್ರಯತ್ನಿಸಿದರು. ಅವರನ್ನು ದೆಹಲಿಯ ಗಡಿಯ ಬಳಿಯೇ ತಡೆಯಲಾಯಿತು. ಹಾಗೆ ತಡೆಯುವುದಕ್ಕಾಗಿ ದೆಹಲಿ ಪೊಲೀಸರು ಬ್ಯಾರಿಕೇಡುಗಳನ್ನು, ನೀರಿನ ಫಿರಂಗಿಯನ್ನು, ಸಿಮೆಂಟ್ ಬೌಲ್ಡರ್‌ಗಳನ್ನು ಜಮೆ ಮಾಡಿಟ್ಟಿದ್ದರು; ರೈತರು ಒಳಹೋಗುವ ಮಾರ್ಗಗಳಲ್ಲಿ ಕಂದಕಗಳನ್ನು ತೋಡಿದ್ದರು. ಆದರೆ, ಇದ್ಯಾವುದರಿಂದಲೂ, ಪ್ರತಿದಿನ ಹಳ್ಳಿಗಳಿಂದ ತಂಡೋಪತಂಡಗಳಾಗಿ ನುಗ್ಗಿಬಂದು ರೈತರು ದೆಹಲಿಯನ್ನು ತನ್ನ ಜೋಂಪಿನಿಂದ ಎಬ್ಬಿಸುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ರೈತರು ಕಂದಕಗಳನ್ನು ತುಂಬಿದರು, ಪೊಲೀಸರ ಲಾಠಿ ಜಲಫಿರಂಗಿಗಳ ಹೊಡೆತಗಳನ್ನು ತಿಂದರು, ಬೌಲ್ಡರ್‌ಗಳನ್ನು, ಬ್ಯಾರಿಕೇಡ್‌ಗಳನ್ನು ಪಕ್ಕಕ್ಕೆ ಸರಿಸಿದರು ಮತ್ತು ದೆಹಲಿಯ ರಸ್ತೆಗಳನ್ನು ತುಂಬಿದರು. ರೈತರ ಮೇಲಿನ ಪೊಲೀಸರ ಬಹಿರಂಗ ದೌರ್ಜನ್ಯವು ಎಲ್ಲ ವಲಯಗಳಿಂದ ಟೀಕೆಗೆ ಗುರಿಯಾಗುತ್ತಿದೆ.

ಥೇಟ್ ಬ್ರಿಟಿಷ್ ಪ್ರಭುತ್ವದ ಹಾಗೆಯೇ ಮೋದಿ ಸರ್ಕಾರವೂ ಕೂಡಾ ಒಂದೇ ದಿನದಲ್ಲಿ ಬಿಜೆಪಿ ಐಟಿ ಸೆಲ್ ಮೂಲಕ ಈ ರೈತರು ತಪ್ಪುದಾರಿಗೆಳೆಯಲ್ಪಟ್ಟ ಅಶಿಕ್ಷಿತ ಹಳ್ಳಿಜನರೆಂದೂ, ವಿರೋಧ ಪಕ್ಷದಿಂದ ಪ್ರೇರಿತರೆಂದೂ, ಪ್ರತ್ಯೇಕತಾವಾದಿಗಳೆಂದೂ ದಾಳಿ ಆರಂಭಿಸಿದೆ. ಬಿಜೆಪಿ ಐಟಿ ಸೆಲ್ ಕಣಕ್ಕಿಳಿದ ತಕ್ಷಣ ಅವರ ಹಿಂದೆಯೇ ಸರತಿ ಸಾಲಿನಲ್ಲಿ ನಿಂತುಕೊಂಡ ಬಹುತೇಕ ಮಾಧ್ಯಮಗಳೂ ಇದೇ ಪ್ರಚಾರವನ್ನು ಮುಂದುವರೆಸುತ್ತಾ, ಪಂಜಾಬ್‌ನ ರೈತರಿಗೆ ಮಾತ್ರವೇ ತೊಂದರೆಯಾಗಿದೆಯೆಂದೂ ಉಳಿದ ಯಾರಿಗೂ ವಿರೋಧವಿಲ್ಲವೆಂದೂ ತಪ್ಪುವ್ಯಾಖ್ಯಾನವನ್ನು ಬಲಗೊಳಿಸಲಾರಂಭಿಸಿವೆ.

ಈ ಸಂದರ್ಭದಲ್ಲಿ ಈ ಆಂದೋಲನಕ್ಕೆ ಕರೆ ನೀಡಿರುವ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ಪದಾಧಿಕಾರಿಗಳಾದ ಅವಿಕ್ ಸಹಾ ಅವರನ್ನು ಮತ್ತು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಏಕ್ತಾ (ದಾಕೊಂಡ- ಪಂಜಾಬ್)ನ ಹಿರಿಯ ನಾಯಕರಾದ ಕಮಲ್‌ಜಿತ್ ಖನ್ನಾ ಅವರನ್ನು ಮಾತಾಡಿಸಿದೆವು. ರೈತರ ಈ ಆಂದೋಲನದ ಬಗ್ಗೆ ಬಿಂಬಿಸಲಾಗುತ್ತಿರುವ ತಪ್ಪುಕಲ್ಪನೆಗಳನ್ನು ದೂರೀಕರಿಸುವಂತೆ ಹೋರಾಟದ ಕುರಿತು ಅವರಿಬ್ಬರೂ ಮಾತನಾಡಿದ್ದಾರೆ.

ಹೋರಾಟ ಹೇಗೆ ಆರಂಭವಾಯಿತು ಮತ್ತು ಅದರ ಹಿಂದೆ ಯಾರಿದ್ದಾರೆ?

ರೈತ ವಿರೋಧಿ ಸುಗ್ರೀವಾಜ್ಞೆಗಳು ಇದೇ 2020ರ ಜೂನ್ 5ರಂದು ಮಂಡಿಸಲ್ಪಟ್ಟವು. ಅದೇ ದಿನ ಪಂಜಾಬ್‌ನ ರೈತ ಸಂಘಟನೆಗಳ ಎಲ್ಲ ಬಣಗಳನ್ನು ಎಐಕೆಎಸ್‌ಸಿಸಿ ಸಂಪರ್ಕಿಸಿತು. ಈ ಪ್ರಯತ್ನದ ಫಲವಾಗಿ ಈಗಾಗಲೇ ಎಐಕೆಎಸ್‌ಸಿಸಿಯ ಭಾಗವಾಗಿರುವ 10 ಸಂಘಟನೆಗಳನ್ನೂ ಒಳಗೊಂಡಂತೆ ಪಂಜಾಬ್‌ನ 30 ರೈತ ಸಂಘಟನೆಗಳ ಒಕ್ಕೂಟವನ್ನು ರಚಿಸಲು ಸಾಧ್ಯವಾಯಿತು. ಈಗ ಸೆಪ್ಟೆಂಬರ್ 29ರಂದು ನೀಡಲಾದ ದೆಹಲಿ ಚಲೋಗೆ ಮುಂಚೂಣಿಯ ಪಾತ್ರ ವಹಿಸಿದ್ದು ಈ ಸಂಘಟನೆಗಳೆ. ಪಂಜಾಬ್‌ನ ರೈತ ಸಂಘಟನೆಗಳ ಕಾರ್ಯಕರ್ತರ ಜೊತೆಗೆ ದೆಹಲಿಯ ಗಡಿಗಳಲ್ಲಿ ಮತ್ತು ರಸ್ತೆಗಳಲ್ಲಿ ಹರ್ಯಾಣ, ಉತ್ತರಾಖಂಡ್, ರಾಜಸ್ಥಾನ ಮೊದಲಾದ ಇನ್ನೂ ಅನೇಕ ರಾಜ್ಯಗಳ ರೈತರೂ ಸೇರಿಕೊಂಡಿದ್ದಾರೆ. ಈ ಹೋರಾಟವನ್ನು ಬೆಂಬಲಿಸಿದ ವಿದ್ಯಾರ್ಥಿ, ಯುವಜನ, ಶಿಕ್ಷಕ ಸಂಘಟನೆಗಳ ಪ್ರತಿನಿಧಿಗಳೂ ಕೂಡಾ ಪಾಲ್ಗೊಳ್ಳುತ್ತಿದ್ದಾರೆ. ಎಐಕೆಎಸ್‌ಎಸ್‌ನ ಭಾಗವಾಗಿರುವ ಸಿಪಿಐ, ಸಿಪಿಎಂ, ಲಿಬರೇಶನ್ ಮೊದಲಾದ ಎಡಪಕ್ಷಗಳ ರೈತ ಸಂಘಟನೆಗಳೂ ಇವೆ.

ಈ ಹೋರಾಟಗಾರರ ಹಕ್ಕೊತ್ತಾಯಗಳೇನು?

ರೈತರ ಹಕ್ಕೊತ್ತಾಯಗಳೇನೆಂದರೆ, ಈ ಮೂರೂ ಸುಗ್ರೀವಾಜ್ಞೆಗಳನ್ನು ಹಿಂಪಡೆಯಬೇಕು ಹಾಗೂ ವಿದ್ಯುತ್ ಮಸೂದೆ 2020ನ್ನು ಸಂಸತ್ತಿನಲ್ಲಿ ಮಂಡಿಸಬಾರದು. ಹಾಗೆಯೇ ಮೊದಲಿನಿಂದಲೂ ರೈತರು ಕನಿಷ್ಟ ಬೆಂಬಲ ಬೆಲೆಯು ತಮಗೆ ಒಂದು ಕಡ್ಡಾಯ ಹಕ್ಕಿನ ರೂಪದಲ್ಲಿ ಸಿಗಬೇಕೆಂದು ಒತ್ತಾಯಿಸುತ್ತಲೇ ಇದ್ದಾರೆ. ಇದನ್ನೆಲ್ಲ ಬಿಟ್ಟು ಈ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ರೈತರ ಆದಾಯ ಹೆಚ್ಚಿಸುತ್ತವೇನೋ ಎಂಬ ಭ್ರಮೆ ಹುಟ್ಟಿಸುವಂತಹ, ವಾಸ್ತವದಲ್ಲಿ ರೈತ ವಿರೋಧಿಯಾದ ಈ ಮಸೂದೆಗಳನ್ನು ಮುಂದಿಟ್ಟಿದ್ದಾರೆ. ರೈತರು ಈ ಕಣ್ಕಟ್ಟನ್ನು ನಂಬುವುದಿಲ್ಲ.

ಈಗ ತರಲು ಹೊರಟಿರುವ ಮಸೂದೆಗಳು ಎಪಿಎಂಸಿ ಮಂಡಿಗಳನ್ನು ಮುಚ್ಚಿಸಿಬಿಡಲಿವೆ. ಈ ಸಂಗತಿಯನ್ನು ಸರ್ಕಾರ ರೈತರಿಗೆ ಲಾಭದಾಯಕ ಎಂದು ಬಿಂಬಿಸಲು ನೋಡುತ್ತಿದೆ. ರೈತರಿಗೆ ಸ್ವಾತಂತ್ರ್ಯ ಸಿಗುವುದರಿಂದ ಅವರು ಸ್ಫರ್ಧಾತ್ಮಕ ಬೆಲೆಗೆ ತಮ್ಮ ಬೆಳೆಗಳನ್ನು ಮಾರುವ ಮೂಲಕ ಹೆಚ್ಚು ಲಾಭ ಗಳಿಸಬಹುದೆಂದು ಹೇಳಲಾಗುತ್ತಿದೆ. ಆದರೆ, ಒಮ್ಮೆ ಮಂಡಿಗಳು ಮುಚ್ಚಿದರೆ ಖಾಸಗಿ ದೊಡ್ಡ ವ್ಯಾಪಾರಿಗಳು ಕೃಷಿ ಮಾರುಕಟ್ಟೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲಿದ್ದಾರೆ. ಕನಿಷ್ಟ ಬೆಂಬಲ ಬೆಲೆಯ ನೀತಿಯೂ ಕಡ್ಡಾಯವಾಗಿಲ್ಲದಿರುವ ಸಂದರ್ಭದಲ್ಲಿ ಖಾಸಗಿ ವ್ಯಾಪಾರಿಗಳ ಶೋಷಕ ಬೆಲೆಗೆ ರೈತರು ಬೆಳೆ ಮಾರುತ್ತಾ ವಿಷವೃತ್ತದಲ್ಲಿ ಸಿಲುಕುವುದು ಮತ್ತು ಆ ಮೂಲಕ ಕೃಷಿಯನ್ನು ತ್ಯಜಿಸುವುದು ಅನಿವಾರ್ಯವಾಗುತ್ತದೆ. ಹೀಗೆ ಇಡೀ ಕೃಷಿ, ಕಾರ್ಪೊರೇಟ್‌ಗಳ ಹಿಡಿತಕ್ಕೆ ಹೋಗುತ್ತಿದೆ. ಇದನ್ನು ಪಂಜಾಬಿನ ಪುಟ್ಟ ಮಗುವೂ ತಿಳಿದಿದೆ.

ಹೆಚ್ಚಾಗಿ ಪಂಜಾಬ್ ಮತ್ತು ಹರ್ಯಾಣದ ರೈತರು ತೀವ್ರವಾಗಿ ಹೋರಾಟಕ್ಕಿಳಿದಿರುವುದಕ್ಕೆ ಕಾರಣವೇನಿರಬಹುದು? ಅದಕ್ಕೆ ಎರಡು ಕಾರಣಗಳಿವೆ. ಪಂಜಾಬ್ ಮತ್ತು ಹರ್ಯಾಣಗಳು ದೆಹಲಿಗೆ ಹತ್ತಿರದಲ್ಲಿವೆಯೆಂಬುದು ಮಾತ್ರವಲ್ಲ. ಪಂಜಾಬ್, ಹರ್ಯಾಣ, ಆಂಧ್ರ, ತೆಲಂಗಾಣ ಮತ್ತು ಪಶ್ಚಿಮ ಒರಿಸ್ಸಾಗಳ ರೈತರುಗಳೇ ಎಂಎಸ್‌ಪಿಯ ಮೂಲಕ ಅತಿಹೆಚ್ಚಿನ ಬೆಳೆಗಳನ್ನು ಸರ್ಕಾರಕ್ಕೆ ಮಾರುತ್ತಿರುವವರು. ಆದ್ದರಿಂದ ಎಂಎಸ್‌ಪಿಯನ್ನು ಕಸಿದುಕೊಳ್ಳುವ ನೀತಿಯಿಂದ ಎಷ್ಟು ದೊಡ್ಡ ಹಾನಿಯಾಗುತ್ತದೆಂಬುದನ್ನು ಈ ರಾಜ್ಯಗಳ ರೈತರು ಸರಿಯಾಗಿ ಅರಿತುಕೊಳ್ಳಬಲ್ಲರು.

ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಮೂಲಕ ಸರ್ಕಾರಗಳು ರೈತರಿಂದ ಬೆಲೆಯನ್ನು ಖರೀದಿಸುವುದು ಎರಡು ರೀತಿಗಳಲ್ಲಿ ನಡೆಯುತ್ತದೆ. ಮೊದಲನೆಯದ್ದು ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ (ಎಫ್‌ಸಿಐ) ಮೂಲಕ ರೈತರಿಂದ ಖರೀದಿಸುವುದು. ಎರಡನೆಯದ್ದು ಸರ್ಕಾರವೇ ನೇರವಾಗಿ ವಿವಿಧ ಆಹಾರ ಭದ್ರತೆಯ ಕಾರ್ಯಕ್ರಮಗಳಿಗಾಗಿ ಅಥವಾ ತನ್ನ ಏಜನ್ಸಿಗಳ ಮೂಲಕ ಮಾಡಿಕೊಳ್ಳುವ ಖರೀದಿ. ಈ ಎರಡೂ ರೂಪಗಳಲ್ಲಿ ನಿಗದಿಯಾದ ಬೆಲೆಗೆ ಸರ್ಕಾರಕ್ಕೆ ಈ ರಾಜ್ಯಗಳಲ್ಲಿ ರೈತರು ಬೆಳೆಗಳನ್ನು ದೊಡ್ಡ ಪ್ರಮಾಣಗಳಲ್ಲಿ ಮಾರುತ್ತಾ ಬಂದಿದ್ದಾರೆ. ಆದ್ದರಿಂದ ಕನಿಷ್ಟ ಬೆಂಬಲ ಬೆಲೆ ಕುರಿತ ಅರಿವೂ ಕೂಡಾ ಇಲ್ಲಿನ ರೈತರಿಗೆ ಅತಿಹೆಚ್ಚಿನ ಪ್ರಮಾಣದಲ್ಲಿದೆ. ಎಲ್ಲಿ ನಷ್ಟ ಹೆಚ್ಚಿರುತ್ತದೋ ಅಲ್ಲಿ ಪ್ರತಿರೋಧವೂ ತೀವ್ರವಾಗಿರುತ್ತದೆ.

ಭಾರತದ ಬಹಳಷ್ಟು ರಾಜ್ಯ ಸರ್ಕಾರಗಳು ಈಗಾಗಲೇ ಎಪಿಎಂಸಿ ಕಾಯ್ದೆಯನ್ನು ತೆಗೆದುಹಾಕಿಯೇ ಬಿಟ್ಟಿವೆ. ಅದರಿಂದ ರೈತರ ಆದಾಯಕ್ಕೆ ಹೇಗೆ ಹೊಡೆತ ಬೀಳಬಹುದೆಂಬುದಕ್ಕೆ ಬಿಹಾರ ಒಂದು ದುರದೃಷ್ಟಕರ ಉದಾಹರಣೆ.

ಪಂಜಾಬ್‌ನಲ್ಲಿ ಕಳೆದ ಎರಡು ತಿಂಗಳುಗಳಿಂದಲೂ ರೈತರ ಹೋರಾಟಗಳು ನಿರಂತರವಾಗಿ ನಡೆಯುತ್ತಲೇ ಇವೆ. ದೆಹಲಿ ಚಲೋ ಆರಂಭಿಸುವ ಮೊದಲು ಸೆಪ್ಟೆಂಬರ್ 25ರಂದು ಕರೆ ನೀಡಲಾಗಿದ್ದ ಪಂಜಾಬ್ ಬಂದ್ ಸಂಪೂರ್ಣ ಯಶಸ್ವಿಯಾಗಿ ಇಡೀ ರಾಜ್ಯ ಸ್ತಬ್ಧಗೊಂಡಿತ್ತು. ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಬೆಂಬಲ ನೀಡಿದರು. ರೈತ ಹೋರಾಟಗಾರರು ತಾವಾಗಿಯೇ ರಸ್ತೆತಡೆ, ರೈಲುತಡೆ ಮುಂತಾದ ಹೋರಾಟಗಳ ಮೂಲಕ ಸರ್ಕಾರಕ್ಕೆ ಕಟುಸಂದೇಶ ನೀಡಿದ್ದರು. ರೈತರ ಆಕ್ರೋಶದ ಅರಿವಾದ ನಂತರವೂ ಸರ್ಕಾರ ರೈತರ ಆಂದೋಲನವನ್ನು ತಡೆಯುವುದಕ್ಕಾಗಿ ಬಳಸಿದ ಕೆಳದರ್ಜೆಯ ತಂತ್ರಗಳಿಂದಾಗಿ ಆ ಆಕ್ರೋಶ ಇನ್ನಷ್ಟು ಹೆಚ್ಚಾಯಿತು. ಪಶ್ಚಿಮ ಬಂಗಾಳ, ರಾಜಸ್ಥಾನ, ಛತ್ತೀಸ್‌ಗಢ ಮೊದಲಾದೆಡೆಗಳಿಂದ ಸಂಚರಿಸುವ ರೈಲುಗಳ ಸಂಚಾರ ವ್ಯತ್ಯಯಗೊಳಿಸಿದ್ದು, ಅವುಗಳಲ್ಲಿ ಪ್ರಯಾಣಿಸುತ್ತಿದ್ದ ರೈತ ಹೋರಾಟಗಾರರನ್ನು ತಡೆದದ್ದು, ರೈಲುಗಳು ನಿಲ್ದಾಣಗಳಿಗೇ ಬರದಂತೆ ನೋಡಿಕೊಂಡದ್ದು, ಹೆದ್ದಾರಿಗಳನ್ನು ಮುಚ್ಚಿದ್ದು-ಇಂತಹ ಕುತಂತ್ರಗಳು ರೈತರನ್ನು ರೊಚ್ಚಿಗೆಬ್ಬಿಸಿದವು. ಅಷ್ಟಾಗಿಯೂ ಹೋರಾಟವನ್ನು ತಡೆಯಲಾಗಲಿಲ್ಲ. ಈ ಹಂತದಲ್ಲಿ ದೆಹಲಿಯ ವಿವಿಧ ಗಡಿಗಳಲ್ಲಿ 20000ಕ್ಕೂ ಹೆಚ್ಚು ಟ್ರಾಕ್ಟರ್ ಟ್ರಾಲಿಗಳು ಬಂದು ತಲುಪಿವೆ. ಇನ್ನೂ ಹಲವು ಮಾರ್ಗಗಳ ಮೂಲಕ ಸುಮಾರು 11 ರಾಜ್ಯಗಳ ಸಾವಿರಾರು ರೈತರು ದೆಹಲಿಯೆಡೆಗೆ ಹೊರಟಿದ್ದಾರೆ. ಗಡಿಗಳಲ್ಲಿ ರೈತರ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿದ್ದು, ರಾಜಧಾನಿಯ 5 ಕಡೆಯ ಗಡಿಗಳು ಸಂಪೂರ್ಣ ಸೀಲ್ ಆಗಿವೆ. ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಹೋರಾಟವನ್ನು ಸೇರಿಕೊಳ್ಳಲಿದ್ದಾರೆ.

ಸರ್ಕಾರದ ಪ್ರತಿಕ್ರಿಯೆಯ ಬಗ್ಗೆ ಏನನ್ನಿಸುತ್ತದೆ?

ಸರ್ಕಾರವು ಈ ಪ್ರತಿಭಟನೆಗಳನ್ನು ಕೇವಲ ಸಣ್ಣಮಟ್ಟದ ಪಂಜಾಬ್-ಹರ್ಯಾಣಗಳಿಗೆ ಸೀಮಿತವಾದ ಪ್ರತಿಭಟನೆಗಳೆಂದು ಬಿಂಬಿಸಲು ಪ್ರಯತ್ನಿಸುತ್ತದೆ. ಇದರ ಹಿಂದೆ ವಿರೋಧ ಪಕ್ಷ ಅಥವಾ ವ್ಯಾಪಾರಿಗಳಿದ್ದಾರೆಂದು ಪುಕಾರು ಹಬ್ಬಿಸಲು ನೋಡುತ್ತಿದೆ. ಆದರೆ, ಈಗಾಗಲೇ ರೈತರ ಹೋರಾಟ ಈ ಸುದ್ದಿಗಳು ಸುಳ್ಳೆಂಬುದನ್ನು ತೋರಿಸಿದೆ. ಬಿಜೆಪಿ ತನ್ನ ರೈತ ವಿರೋಧಿತನದಿಂದ ಎಲ್ಲರ ವಿರೋಧ ಕಟ್ಟಿಕೊಂಡಿದೆ. ಸ್ವತಃ ತನ್ನ ಎನ್‌ಡಿಎ ಮಿತ್ರಪಕ್ಷಗಳನ್ನೂ ಮನವೊಲಿಸಲು, ಪಂಜಾಬ್‌ನ ಬಿಜೆಪಿ ಕಾರ್ಯದರ್ಶಿಯನ್ನೂ, ತಮ್ಮದೇ ಕ್ಯಾಬಿನೆಟ್ ಸಚಿವರನ್ನು ಒಪ್ಪಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಹೈಕಮಾಂಡ್‌ನ ನಿಲುವಿಗೆ ಮಣಿಯುತ್ತಿರುವ ಕರ್ನಾಟಕ ಸರ್ಕಾರದಂತಹ ಸರ್ಕಾರಗಳಿರುವ ರಾಜ್ಯಗಳಲ್ಲಿ (ಕರ್ನಾಟಕದಲ್ಲಿ ಐತಿಹಾಸಿಕವಾಗಿ ರೈತ ಚಳುವಳಿ ಬಲವಾಗಿದೆ) ಜನರ ವಿರೋಧ ಎದುರಿಸುವುದು ಖಚಿತ.

ರೈತ ಹೋರಾಟಗಾರರು ಈ ಬಾರಿ ನಿರ್ಣಾಯಕ ಹೋರಾಟಕ್ಕೆ ಸರ್ವಸನ್ನದ್ಧರಾಗಿದ್ದಾರೆ. ಹೆಚ್ಚೂ ಕಡಿಮೆ 3-4 ತಿಂಗಳಿಗಾಗುವ ಆಹಾರ, ಬಟ್ಟೆ ಇತ್ಯಾದಿಗಳನ್ನು ಕಟ್ಟಿಕೊಂಡೇ ಹೊರಟಿದ್ದಾರೆ. ರೈತ ವಿರೋಧಿ ನೀತಿಗಳನ್ನು ಸರ್ಕಾರ ಬೇಷರತ್ತಾಗಿ ಹಿಂಪಡೆಯುವವರೆಗೆ ಅವರು ಮಣಿಯುವವರಲ್ಲ!

ಅನುವಾದ: ಮಲ್ಲಿಗೆ ಸಿರಿಮನೆ


ಇದನ್ನೂ ಓದಿ: ಕೇಂದ್ರದೊಂದಿಗೆ ರೈತ ಮುಖಂಡರ ಸಭೆ: ಸಂಸತ್ ಅಧಿವೇಶನ ಕರೆದು ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲು ರೈತರ ತಾಕೀತು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...