‘ಆಳಂದ ಮತಗಳ್ಳತನ’ ಪ್ರಕರಣ ಸಂಬಂಧ ಬಂಧನ ಭೀತಿಯಲ್ಲಿರುವ ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿ ನಾಯಕ ಸುಭಾಷ್ ಗುತ್ತೇದಾರ್ ಮತ್ತು ಅವರ ಮಗ ಹರ್ಷಾ ಗುತ್ತೇದಾರ್ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ.
ಅಪ್ಪ-ಮಗ ಇಬ್ಬರೂ ಜಾಮೀನು ಕೋರಿ ಬುಧವಾರ (ಅ.29) ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಶೇಷ ಸಾರ್ವಜನಿಕ ಅಭಿಯೋಜಕ ಅರ್ಜಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಸಮಯ ಕೋರಿದ್ದಾರೆ. ಹಾಗಾಗಿ, ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ವಿಚಾರಣೆಯನ್ನು ಗುರುವಾರಕ್ಕೆ (ಅ.30) ಮುಂದೂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಹೇಳಿದೆ.
ನಕಲಿ ಫಾರ್ಮ್ 7ರ ಮೂಲಕ ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದ 6 ಸಾವಿರಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಪ್ರಯತ್ನಪಟ್ಟಿರುವುದು 2023ರ ವಿಧಾನಸಭಾ ಚುನಾವಣೆಗೆ ಮುನ್ನ ಬೆಳಕಿಗೆ ಬಂದಿತ್ತು.
ಈ ಸಂಬಂಧ ಆಳಂದದ ಆಗಿನ ಚುನಾವಣಾಧಿಕಾರಿ ಹಾಗೂ ಕಲಬುರಗಿಯ ಸಹಾಯಕ ಆಯುಕ್ತೆಯಾಗಿದ್ದ ಮಮತಾ ದೇವಿ ಅವರು 2023ರ ಫೆಬ್ರವರಿ 21ರಂದು ಆಳಂದ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆರಂಭದಲ್ಲಿ ಆಳಂದ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದರು. ಬಳಿಕ ತನಿಖೆ ಸಿಐಡಿಗೆ ವರ್ಗಾವಣೆಯಾಗಿತ್ತು.
ಆರೋಪಿಗಳನ್ನು ಬಂಧಿಸಲು ಅಗತ್ಯವಾದ ನಿರ್ಣಾಯಕ ದತ್ತಾಂಶಗಳನ್ನು ಚುನಾವಣಾ ಆಯೋಗ ಸಿಐಡಿ ಜೊತೆ ಹಂಚಿಕೊಳ್ಳದ ಕಾರಣ ಪ್ರಕರಣ ಬಹುತೇಕ ಹಳ್ಳಹಿಡಿದಂತೆ ಕಾಣುತ್ತಿದೆ ಎಂದು ದಿ ಹಿಂದೂ ಪತ್ರಿಕೆ 2025ರ ಸೆಪ್ಟೆಂಬರ್ 7ರಂದು ವಿಸ್ತೃತ ವರದಿ ಪ್ರಕಟಿಸಿತ್ತು.
ಸೆಪ್ಟೆಂಬರ್ 18ರಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಳಂದ ಪ್ರಕರಣದ ದಾಖಲೆ ಬಿಡುಗಡೆ ಮಾಡಿದ್ದರು.
ಆ ಬಳಿಕ, ಆಳಂದ ಸೇರಿದಂತೆ ರಾಜ್ಯದಾದ್ಯಂತ ದಾಖಲಾಗಿರುವ ಮತ್ತು ಮುಂದೆ ದಾಖಲಾಗಲಿರುವ ಎಲ್ಲಾ ‘ಮತಗಳ್ಳತನ’ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ 2025ರ ಸೆಪ್ಟೆಂಬರ್ 20ರಂದು ರಾಜ್ಯ ಸರ್ಕಾರ ಆದೇಶಿಸಿತ್ತು.
2025ರ ಸೆಪ್ಟೆಂಬರ್ 26ರಂದು ಪ್ರಕರಣವನ್ನು ಸಿಐಡಿಯಿಂದ ಎಸ್‌ಐಟಿ ವಹಿಸಿಕೊಂಡಿದೆ. ಆ ಬಳಿಕ ಹಳ್ಳ ಹಿಡಿದಿದ್ದ ತನಿಖೆ ಚುರುಕುಗೊಂಡಿದೆ.
ಮತದಾರರ ಪಟ್ಟಿಯಿಂದ ಮತದಾರರ ಹೆಸರು ಅಳಿಸುವಂತೆ ನಕಲಿ ಫಾರ್ಮ್-7ರ ಮೂಲಕ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲು ಪ್ರತಿ ಅರ್ಜಿಗೆ 80 ರೂಪಾಯಿಯನ್ನು ಡೇಟಾ ಸೆಂಟರ್ ಅಪರೇಟರ್‌ಗೆ ಪಾವತಿಸಲಾಗಿದೆ ಎಂಬುವುದು ಎಸ್‌ಐಟಿ ತನಿಖೆಯಿಂದ ಬಯಲಾಗಿದೆ.
ಡಿಸೆಂಬರ್ 2022ರಿಂದ ಫೆಬ್ರವರಿ 2023ರವರೆಗೆ ಕ್ಷೇತ್ರದ ಒಟ್ಟು 6,018 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲು ನಕಲಿ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಇದಕ್ಕಾಗಿ ಒಟ್ಟು 4.8 ಲಕ್ಷ ರೂ. ಪಾವತಿಸಲಾಗಿದೆ ಎಂದು ಎಸ್‌ಐಟಿ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಎಸ್‌ಐಟಿ, ಕಳೆದ ವಾರ 2023ರಲ್ಲಿ ಕಾಂಗ್ರೆಸ್‌ನ ಬಿ. ಆರ್ ಪಾಟೀಲ್ ವಿರುದ್ಧ ಸೋತಿದ್ದ ಬಿಜೆಪಿ ನಾಯಕ, ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ಕೈಗೊಂಡಿದೆ ಎಂದು ವರದಿಯಾಗಿದೆ.
ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲು ಕಲಬುರಗಿಯ ಕೇಂದ್ರ ಸ್ಥಾನದಲ್ಲಿರುವ ಒಂದು ಡೇಟಾ ಸೆಂಟರ್‌ನಿಂದ ನಕಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬುವುದನ್ನು ಎಸ್‌ಐಟಿ ಪತ್ತೆ ಮಾಡಿದೆ. ಸ್ಥಳೀಯ ನಿವಾಸಿ ಮೊಹಮ್ಮದ್ ಅಶ್ಫಾಕ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಸೂಚನೆಗಳು ಎಸ್‌ಐಟಿ ತನಿಖೆಯಲ್ಲಿ ಕಂಡುಬಂದಿವೆ.
ಇದೀಗ, ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮತ್ತು ಅವರ ಮಗ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷ ಗುತ್ತೇದಾರ್‌ಗೆ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ. ಇದರಿಂದ ಬಂಧನ ಭೀತಿಯಲ್ಲಿರುವ ಅವರು ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ.
ಕನೇರಿ ಸ್ವಾಮಿಗೆ ಸುಪ್ರೀಂ ಛೀಮಾರಿ: “ನಿಮ್ಮನ್ನು ಗಡಿಪಾರು ಮಾಡಲೂ ಅಧಿಕಾರ ಇದೆ”.


