ಕವಿತೆ ಓದಿದ್ದಕ್ಕೆ ಸಿರಾಜ್ ಬಿಸ್ರಳ್ಳಿಯವರನ್ನು ಬಂಧಿಸಿರುವ ಕ್ರಮವನ್ನು ತೀವ್ರವಾಗಿ ಟೀಕಿಸಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ಅದೇ ಕವನವನ್ನು ವಿಧಾನಸಭಾ ಅಧಿವೇಶನದಲ್ಲಿ ಓದಿದ್ದಾರೆ.
ಈ ಕವನದಲ್ಲಿ ದೂರು ದಾಖಲಿಸುವಂತದ್ದು ಏನಿದೆ ಎಂದು ಕಿಡಿಕಾರಿದ ಅವರು ಈ ಹಿಂದೆ ನಿಸಾರ್ ಅಹಮದ್ ರವರು ಕುರಿಗಳು ಸಾರ್ ಕುರಿಗಳು ಎಂಬ ಹಾಡು ಬರೆದಿದ್ದು ನಮ್ಮಂತ ರಾಜಕಾರಣಿಗಳ ಮೇಲಲ್ಲವೇ? ಗೋಪಾಲಕೃಷ್ಣ ಅಡಿಗರು ಸರ್ಕಾರವನ್ನು ಟೀಕಿಸಿ ಬರೆದಿರಲ್ಲಿಲ್ಲವೇ? ಅವರನ್ನು ಬಂಧಿಸಲಾಗಿತ್ತೆ ಎಂದು ಪ್ರಶ್ನಿಸಿದ್ದಾರೆ.
ಸಿರಾಜ್ ರವರು ಆನೆಗೊಂದಿ ಉತ್ಸವದಲ್ಲಿ ಓದಿದ್ದ ಕವಿದೆ ಇದು.
ನಿನ್ನ ದಾಖಲೆ ಯಾವಾಗ ನೀಡುತ್ತಿ?
ಆಧಾರು, ರೇಷನ್ ಕಾರ್ಡಗಳ ಕ್ಯೂನಲ್ಲಿ
ಥಂಬಿನ, ಸರ್ವರಿನ ಮಂಗನಾಟದಲ್ಲಿ
ಬದುಕ ಕಳೆದುಕೊಳ್ಳು ತ್ತಿರುವವರ ದಾಖಲೆ
ಕೇಳುವವನೇ ನಿನ್ನ ದಾಖಲೆ ಯಾವಾಗ ನೀಡುತ್ತಿ?
ನಾಡಿನ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಲೇ ನೇಣಿಗೇರಿದವರ ,
ಹೆಸರೂ ಬೇಡವೆಂದು ಹುತಾತ್ಮರಾದವರ
ಇತಿಹಾಸದ ಹಾಳೆಗಳ ಹರಿಯುತ್ತಿರುವವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ.?
ತಾಜ್ ಮಹಲ್, ಚಾರ್ ಮಿನಾರು ಗುಂಬಜಗಳಿಗೆ
ಕೆಂಪು ಕೋಟೆ ಕುತುಬ್ ಮಿನಾರುಗಳಿಗೆ ಸಾಕ್ಷಿ ಕೇಳುತ್ತಿರುವವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ?
ಬ್ರಿಟಿಷರ ಬೂಟು ನೆಕ್ಕಿದ ತಲೆಹಿಡುಕರ
ಧರ್ಮ ದ್ವೇಷದ ಅಮಲಿನಲ್ಲಿ ರಕ್ತ ಕುಡಿಯುತ್ತಿರುವ
ಗೊಬೆಲ್ ಸಂತತಿಯವನೇ
ನಿನ್ನ ದಾಖಲೆ ಯಾವಾಗ ನೀಡುತ್ತಿ?
ಪಕೋಡ ಮಾರಿ ಬದುಕಿದವನು
ಚಾ ಮಾರಿ ಬದುಕಿದವನು ನನ್ನೂರಿನಲ್ಲಿ
ಮನುಷ್ಯತ್ವ ಮಾರಿಕೊಂಡಿಲ್ಲ
ಸ್ವಾಭಿಮಾನ ಮಾರಿಕೊಂಡಿಲ್ಲ,
ಸುಳ್ಳಿನ ಕಂತೆಗಳ ಕತೆ ಕಟ್ಟಿಲ್ಲ
ಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ?
ಮುಳ್ಳು ಚುಚ್ಚಿ, ಹರಿದು, ಸಿಡಿದು ಹೋದ
ಟ್ಯೂಬುಗಳ, ಟೈಯರುಗಳ ತಿದ್ದಿ ತೀಡಿ ಗಾಳಿ ತುಂಬಿದ
ಪಂಚರ್ ನವನು ತನ್ನತನವನ್ನು ಮಾರಿಕೊಳ್ಳಲಿಲ್ಲ
ನೀನು ದೇಶವನ್ನೇ ಮಾರಿಬಿಟ್ಟೆಯಲ್ಲ
ಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ?
ದೇಶವನ್ನೇ ಯಾಮಾರಿಸಿದ ನಿನಗೆ
ನಕಲಿ ದಾಖಲೆಗಳು ದೊಡ್ಡದಲ್ಲ ಬಿಡು
ಕನಿಷ್ಟ ಮನುಷ್ಯತ್ವವೂ ನಿನಗಿದೆ
ಎನ್ನುವ ದಾಖಲೆ ಯಾವಾಗ ನೀಡುತ್ತಿ?


