ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ದೆಹಲಿಯ ಸರಸ್ವತಿ ವಿಹಾರ್ ಪ್ರದೇಶದಲ್ಲಿ ನಡೆದ ಇಬ್ಬರು ವ್ಯಕ್ತಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಅವರನ್ನು ದೆಹಲಿ ನ್ಯಾಯಾಲಯ ಬುಧವಾರ (ಫೆ.12) ದೋಷಿ ಎಂದು ಘೋಷಿಸಿದೆ.
ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಅಪರಾಧ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದು, ಫೆಬ್ರವರಿ 18 ರಂದು ಶಿಕ್ಷೆ ಪ್ರಕಟಿಸಲಿದ್ದಾರೆ.
ದೋಷಿ ಎಂದು ತೀರ್ಪು ಪ್ರಕಟಿಸುವ ವೇಳೆ ಸಜ್ಜನ್ ಕುಮಾರ್ ಅವರನ್ನು ತಿಹಾರ್ ಜೈಲಿನಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಸಿಖ್ ವಿರೋಧಿ ದಂಗೆಯ ಸಂದರ್ಭ ನವೆಂಬರ್ 1, 1984ರಂದು ದೆಹಲಿಯಲ್ಲಿ ಜಸ್ವಂತ್ ಸಿಂಗ್ ಮತ್ತು ಅವರ ಮಗ ತರುಣದೀಪ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ಆರಂಭದಲ್ಲಿ ದೆಹಲಿಯ ಪಂಜಾಬಿ ಬಾಗ್ ಠಾಣೆಯ ಪೊಲೀಸರು ಕೈಗೆತ್ತಿಕೊಂಡಿದ್ದರು. ಬಳಿಕ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ತನಿಖೆಯನ್ನು ವಹಿಸಲಾಗಿತ್ತು.
ಡಿಸೆಂಬರ್ 16, 2021ರಂದು, ನ್ಯಾಯಾಲಯವು ಸಜ್ಜನ್ ಕುಮಾರ್ ವಿರುದ್ಧ ಆರೋಪಗಳನ್ನು ಹೊರಿಸಿತ್ತು. ಅವರ ವಿರುದ್ದ ಆರೋಪ ಪ್ರಾಥಮಿಕವಾಗಿ ಸಾಭೀತಾಗಿದೆ ಎಂದಿತ್ತು.
ಪ್ರಾಸಿಕ್ಯೂಷನ್ ಪ್ರಕಾರ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಮಾರಕ ಆಯುಧಗಳನ್ನು ಹಿಡಿದ ಬೃಹತ್ ಗುಂಪೊಂದು ದೊಡ್ಡ ಪ್ರಮಾಣದಲ್ಲಿ ಸಿಖ್ಖರನ್ನು ಲೂಟಿ ಮಾಡಿತ್ತು. ಬೆಂಕಿ ಹಚ್ಚು ಅವರ ಆಸ್ತಿಪಾಸ್ತಿಗಳ ನಾಶ ಮಾಡಿತ್ತು.
ಈ ಪ್ರಕರಣದಲ್ಲಿ ಸಂತ್ರಸ್ತ ಜಸ್ವಂತ್ ಸಿಂಗ್ ಅವರ ಪತ್ನಿಯ ಮನೆ ಮೇಲೆ ದಾಳಿ ಮಾಡಿದ್ದ ಗುಂಪೊಂದು, ಜಸ್ವಂತ್ ಸಿಂಗ್ ಮತ್ತು ಅವರ ಮಗನನ್ನು ಹತ್ಯೆ ಮಾಡಿತ್ತು. ಮನೆಯನ್ನು ಲೂಟಿಗೈದು ಬೆಂಕಿ ಹಚ್ಚಿತ್ತು ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.
ಸಜ್ಜನ್ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಾಲಯ, ಸಜ್ಜನ್ ಕುಮಾರ್ ಗಲಭೆಯಲ್ಲಿ ಸ್ವತಃ ಭಾಗವಹಿಸಿದ್ದು ಮಾತ್ರವಲ್ಲದೆ, ಜನ ಸಮೂಹವನ್ನು ಮುನ್ನಡೆಸಿದ್ದಾರೆ ಎಂಬ ಪ್ರಾಥಮಿಕ ಅಭಿಪ್ರಾಯ ರೂಪಿಸಲು ಹಲವು ಸಾಕ್ಷ್ಯಗಳನ್ನು ಕಂಡುಕೊಂಡಿದೆ ಎಂದು ವರದಿಗಳು ಹೇಳಿವೆ.


