Homeಪುಸ್ತಕ ವಿಮರ್ಶೆಅಂತಾರಾಷ್ಟ್ರೀಯ ಮಹಿಳಾ ದಿನ; ಕೇಟ್ ಮಿಲ್ಲೆಟ್ ಅವರ ’ಸೆಕ್ಷುವಲ್ ಪಾಲಿಟಿಕ್ಸ್’ ಅನುವಾದದ ಒಂದು ಭಾಗ

ಅಂತಾರಾಷ್ಟ್ರೀಯ ಮಹಿಳಾ ದಿನ; ಕೇಟ್ ಮಿಲ್ಲೆಟ್ ಅವರ ’ಸೆಕ್ಷುವಲ್ ಪಾಲಿಟಿಕ್ಸ್’ ಅನುವಾದದ ಒಂದು ಭಾಗ

- Advertisement -
- Advertisement -

ನಮ್ಮ ಸಮುದಾಯ ಸಂಬಂಧಗಳನ್ನು, ವ್ಯಕ್ತಿ ಸಂಬಂಧಗಳನ್ನು, ಅದರಲ್ಲಿಯೂ ಗಂಡು ಮತ್ತು ಹೆಣ್ಣುಗಳ ನಡುವೆ ಇರುವ ಲೈಂಗಿಕ ಸಂಬಂಧಗಳನ್ನು ಸಾಧಾರಣವಾಗಿ ಭಾವನಾತ್ಮಕ ನೆಲೆಗಳಿಂದ ನೋಡುವುದು ನಮಗೆ ಹೆಚ್ಚು ರೂಢಿಯಾಗಿದೆ. ಹೆಚ್ಚಿನ ವೈಚಾರಿಕತೆಯಿಂದ ಗಮನಿಸುತ್ತಿದ್ದೇವೆ ಎಂದಾಗಲೂ ಈ ಪರೀಕ್ಷೆಯೂ ನಿರಾಸಕ್ತಿಯಿಂದಲೇ ನಡೆಯುತ್ತದೆ. ಏಕೆಂದರೆ ಮೊದಲಿಗೆ ಈ ಪರೀಕ್ಷೆಗಾಗಿ ಬಳಸುತ್ತಿರುವ ನಮ್ಮ ’ವೈಚಾರಿಕತೆ’ಯನ್ನು ನಾವು ಗಳಿಸಿರುವುದೇ ನಮಗೆ ದೊರೆತ ಸಾಂಪ್ರದಾಯಿಕ ಕಲಿಕೆಯಲ್ಲಿ. ರಾಜಕಾರಣ ಎಂಬ ಪರಿಭಾಷೆಯನ್ನು ಕೂಡಾ ನಾವು ಇಲ್ಲಿಯೇ ಕಲಿತದ್ದು. ಆದರೆ ನಾವೇ ಕಂಡುಕೊಂಡ ನಮ್ಮ ಹೊಸ ಅರಿವಿನ ಬೆಳಕಿನಲ್ಲಿ ನೋಡಿದಾಗ ಮಾತ್ರವೇ, ಸಂಬಂಧಗಳನ್ನು ಭಾವನಾತ್ಮಕ ನೆಲೆಗಳ ಆಚೆಗೂ ವಿಸ್ತರಿಸಿ ನೋಡುವ ಅಗತ್ಯ ಇದೆ ಎಂಬುದು ತಿಳಿಯುತ್ತದೆ.

ಲೈಂಗಿಕ ಸಂಬಂಧಗಳ ಮಾತಿಗೆ ಇದು ಇನ್ನಷ್ಟು ಪ್ರಸ್ತುತವಾದದ್ದು ಎನ್ನಬಹುದು. ಈ ಸಂಬಂಧಗಳು ದಬ್ಬಾಳಿಕೆ ಮತ್ತು ಅಧೀನತೆಯ ಮಾತಾಗಿದೆ ಎಂಬುದು ಇಂದು ಕಂಡುಕೊಂಡ ಒಂದು ಹೊಸ ಸತ್ಯ ಎಂದೇನಲ್ಲ. ಸಮಾಜ ವ್ಯವಸ್ಥೆ ಎಂಬುದರ ಜೊತೆಗೇ ಈ ಮಾದರಿಯು ಹುಟ್ಟಿಕೊಂಡಿತು; ಅಂದಿನಿಂದ ಇಂದಿನವರೆಗೂ ಈ ವಿದ್ಯಮಾನವು ಯಾವುದೇ ಅಡೆತಡೆಗಳಿಲ್ಲದೆ ಸಾಗಿಬಂದಿದೆ ಎಂಬುದು ಒಂದು ಚಾರಿತ್ರಿಕ ಸತ್ಯವೇ ಆಗಿದೆ. ಆದರೆ ಇದರ ಸ್ವರೂಪವನ್ನು ನಾವು ಇನ್ನೂ ಸರಿಯಾಗಿ ಗ್ರಹಿಸಲು ಪ್ರಯತ್ನಿಸಿಲ್ಲ ಎನಿಸುತ್ತದೆ. ಹೆಚ್ಚೆಂದರೆ ಈ ವಿದ್ಯಮಾನವನ್ನು ’ಹೆಣ್ಣನ್ನು ಆವರಿಸಿರುವ ಬಂಧನದ ಸರಪಣಿ’ ಎಂದು ವಿವರಿಸಿಕೊಂಡಿದ್ದೇವೆ ಅಷ್ಟೇ. ಏಕೆಂದರೆ ದಬ್ಬಾಳಿಕೆ ಮತ್ತು ಅಧೀನತೆ ಎಂಬ ಮಾದರಿಯಲ್ಲಿ, ಯಾವಾಗಲೂ ದಬ್ಬಾಳಿಕೆಯನ್ನು ನಡೆಸುವ ಪುರುಷ, ಮತ್ತು ಆಧೀನತೆಯಲ್ಲಿ ಉಳಿಯುವ ಮಹಿಳೆ ಎಂಬ ಲೆಕ್ಕವೇ ಆಗುವುದೇಕೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ಇಲ್ಲ. ಯಾವುದೇ ಸಮುದಾಯದ ಎಲ್ಲ ಪುರುಷರಿಗೂ, ಯಾವುದೇ ಸಮುದಾಯದ ಯಾವುದೇ ಮಹಿಳೆಯ ಮೇಲಾದರೂ ಅಧಿಕಾರವನ್ನು ನಡೆಸುವ ಹಕ್ಕು ದೊರೆತುಬಿಡಬಹುದು.

ಇಡೀ ವಿದ್ಯಮಾನವೇ ಒಂದು ಸಾಂಸ್ಥಿಕ ರಚನೆಯಾಗಿದೆ ಎಂಬುದನ್ನು ಗ್ರಹಿಸದ ಹೊರತು ಇದು ಹೇಗೆ ಸಾಧ್ಯವಾಗುತ್ತದೆ ಎಂಬುದರ ಸುಳಿವು ಕೂಡಾ ದೊರೆಯುವುದಿಲ್ಲ. ಇಡೀ ವ್ಯವಸ್ಥೆಯಲ್ಲಿ ಇಷ್ಟೊಂದು ಚಾತುರ್ಯವನ್ನು ತೋರಿರುವ ತಂತ್ರಗಾರಿಕೆ ಬೇರೊಂದಿಲ್ಲ. ಒಂದು ಆಂತರಿಕ ವಸಾಹತುಶಾಹಿಯೇ ಆಗಿ ಭದ್ರವಾಗಿ ನೆಲೆಗೊಂಡಿರುವ ಇದರ ಪರಿಯನ್ನು ಅರ್ಥಮಾಡಿಕೊಳ್ಳುವುದು ಒಂದು ದೊಡ್ಡ ಸವಾಲೇ ಸರಿ. ಇಡೀ ಸಮಾಜ ವ್ಯವಸ್ಥೆಯ ಶ್ರೇಣೀಕರಣಗಳ ಪೈಕಿ ’ಪುರುಷರು ಮಹಿಳೆಯರನ್ನು ಆಳುತ್ತಾರೆ’ ಎಂಬ ಪ್ರಯೋಗವೇ ಅತ್ಯಂತ ತೀಕ್ಷ್ಣವಾದುದು. ಇದು ಹೆಚ್ಚು ದೃಢವಾದುದು, ಇಲ್ಲಿ ನಡೆಯುವ ಪ್ರತ್ಯೇಕೀಕರಣದ ರಾಜಕಾರಣವಂತೂ ಅಸದೃಶವಾದುದು, ಇಲ್ಲಿ ಕಾಣುವ ಮಾರಣಾಂತಿಕವಾದ ಕ್ರೌರ್ಯದ ಮಾದರಿಯು ಇನ್ನೆಲ್ಲಿಯೂ ಕಾಣಲಾರದು. ಈ ಮಾದರಿಯು ಪುರುಷರು ಮತ್ತು ಮಹಿಳೆಯರ ನಡುವೆ ಏರ್ಪಡಬಹುದಾದ ಯಾವುದೇ ಸಾಮಾಜಿಕ ಸಂಬಂಧಗಳ ಮಾತಿಗೂ ಏಕರೂಪವಾಗಿದೆ ಎಂಬಂತೆ ಅನ್ವಯವಾಗಿಬಿಡುತ್ತದೆ. ಇಂದಿನ ಕಾಲಕ್ಕೆ ಈ ವಿವರಗಳು ಸ್ವಲ್ಪಮಟ್ಟಿಗೆ ಮಸುಕಾಗಿ ಎಂಬಂತೆ ಆಗಾಗ ತೋರಲೂಬಹುದು. ಮರೆಯೇ ಆಗಿದೆ ಎಂದೂ ವಾದಿಸಿ ಬಿಡಬಹುದು. ಆದರೆ ’ಅಧಿಕಾರ’ದ ಮೂಲ ತತ್ವವು ನಮ್ಮ ಸಂಸ್ಕೃತಿಗಳಲ್ಲಿ ಹೇಗೆ ಹಾಸುಹೊಕ್ಕಾಗಿ ಸೇರಿಹೋಗಿದೆ ಎಂಬುದನ್ನು ವಿವರಿಸಿಕೊಳ್ಳಲು ಈ ಮಾದರಿಯನ್ನು ಹೆಚ್ಚಿನ ಸೂಕ್ಷ್ಮತೆಯಲ್ಲಿ ಅಧ್ಯಯನಗಳಿಗೆ ಒಳಗುಮಾಡುವುದೇ ಉತ್ತಮ ದಾರಿಯಾಗಬಹುದು.

ಏಕೆಂದರೆ ಜಗತ್ತಿನ ಎಲ್ಲ ನಾಗರಿಕ ಸಮಾಜಗಳೂ ಇಂದು ಪಿತೃಪ್ರಧಾನತೆಯವೇ ಆಗಿವೆ. ಕೆಲವು ಸಮುದಾಯಗಳ ಹೊರ ಚಹರೆಗಳನ್ನಷ್ಟೇ ಗುರುತಾಗಿ ನೋಡಿ ಇಲ್ಲಿ ಮಾತೃಪ್ರಧಾನತೆಯೇ ಇರುವುದು ಎಂದು ಕೆಲವೊಮ್ಮೆ ವಾದಿಸುವುದಿದೆ. ಆದರೆ ಅಲ್ಲಿನ ಒಳ ವಿವರಗಳನ್ನು ಗಮನಿಸಿದರೆ, ಅಲ್ಲಿ ಇರುವುದು ಮಾತೃವಂಶೀಯತೆಯ ಕೆಲವು ಗುಣಗಳಷ್ಟೇ ಎಂಬುದು ತಿಳಿಯುತ್ತದೆ. ಇವು ಮಾತೃಪ್ರಧಾನತೆಯ ಪಳೆಯುಳಿಕೆಗಳು ಮಾತ್ರವೇ ಆಗಿವೆ; ಇನ್ನೂ ಸರಿಯಾಗಿ ಹೇಳಬೇಕೆಂದರೆ ಮಾತೃಪ್ರಧಾನತೆಯು ಪೂರ್ಣವಾಗಿ ಪಿತೃಪ್ರಧಾನತೆಗೆ ಹೊರಳಿಕೊಳ್ಳುವ ಮುನ್ನದ ಮಧ್ಯಂತರ ಹಂತವಷ್ಟೇ ಎಂದು ಮಾನವ ಶಾಸ್ತಜ್ಞರು ಇವನ್ನು ಗುರುತಿಸುತ್ತಾರೆ. ಹಾಗಾಗಿ ಇಂಥಾ ಸಮುದಾಯಗಳನ್ನು ಉದಾಹರಣೆಯಾಗಿ ನೋಡಿ ಪಿತೃಪ್ರಧಾನತೆಗೆ ಇಲ್ಲೊಂದು ಅಪವಾದ ದೊರೆಯಿತು ಎಂದು ತೀರ್ಮಾನಿಸುವಂತಿಲ್ಲ.

ಮಾತೃವಂಶೀಯತೆಯು ಹೆಣ್ಣು ತಲೆಮಾರುಗಳಲ್ಲಿ ಅಧಿಕಾರದ ಹಕ್ಕುಗಳನ್ನು ದಾಟಿಸುತ್ತಿದೆ ಎಂಬುದು ಒಂದು ಹೊರ ವಿವರ ಮಾತ್ರವೇ ಆಗಿ ಉಳಿದಿರುವುದು; ವಾಸ್ತವದಲ್ಲಿ ಆ ಹಕ್ಕುಗಳು ಅಂತಿಮವಾಗಿ ಗಂಡಿನ ಸುಪರ್ದಿಗೇ ಬರುತ್ತವೆ ಎಂಬುದನ್ನು ತಿಳಿಯಲು ಒಂದಿಷ್ಟು ಸೂಕ್ಷ್ಮತೆ ಅಗತ್ಯ. ಅಲ್ಲಿ ಗಂಡಿಗೆ ಅಧಿಕಾರವನ್ನು ದಾಟಿಸುವ ಒಂದು ಸೇತುವೆಯಾಗಿ ಮಾತ್ರವೇ ಹೆಣ್ಣು ಉಳಿದಿರುತ್ತಾಳೆ. ಉದಾಹರಣೆಗೆ, ಮದುವೆಯ ನಂತರದಲ್ಲಿ ಮನೆಯ ಮಗಳು ಅದೇ ಮನೆಯಲ್ಲಿ ಉಳಿಯುತ್ತಾಳೆ ನಿಜ. ಆದರೆ ಅವಳನ್ನು ಮದುವೆಯಾಗಿ ಬಂದ ಗಂಡಿಗೆ, ತನ್ನ ಸೋದರಿಯರ ಗಂಡು ಮಕ್ಕಳೊಂದಿಗೆ ಉಳಿಸಿಕೊಳ್ಳುವ ಸಂಬಂಧಗಳೇ ಹೆಚ್ಚು ಪ್ರಾಮುಖ್ಯದವು. ಈ ಚರ್ಚೆ ಇಲ್ಲಿ ಕೇವಲ ಸಾಂದರ್ಭಿಕ ಮಾತ್ರವಾಗಿದ್ದು ಹೆಚ್ಚಿನ ವಿವರಗಳಿಗೆ ಇಲ್ಲಿ ಅವಕಾಶಗಳಿಲ್ಲ. ಜಗತ್ತಿನ ಎಲ್ಲೆಡೆ ಪಿತೃಪ್ರಧಾನ ನಾಗರಿಕತೆಗಳೇ ಇರುವುದು ಎಂಬುದನ್ನು ತಿಳಿಯಲು ಇಷ್ಟು ದೂರವೇನೂ ಹೋಗಬೇಕಿಲ್ಲ. ನಮ್ಮ ಸುತ್ತಲಿನ ಕೆಲವು ವಾಸ್ತವ ಸಂಗತಿಗಳನ್ನು ನೋಡೋಣ.

ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗಗಳ ವಿಸ್ತರಣೆಗಳಾದ ಮಿಲಿಟರಿ, ಜನರ ಮೇಲೆ ಹತೋಟಿಯನ್ನು ಸಾಧಿಸಲೆಂದೇ ರಚನೆಗೊಂಡಿರುವ ಪೊಲೀಸ್ ಇಲಾಖೆ, ಉದ್ಯಮ, ತಂತ್ರಜ್ಞಾನ, ವಿಜ್ಞಾನ, ರಾಜಕೀಯ ವಲಯದ ಕಾರ್ಯಾಲಯಗಳು, ಹಣಕಾಸು ಇಲಾಖೆಗಳು, ಜ್ಞಾನವಲಯಗಳ ಪ್ರಸಾರ ಕೇಂದ್ರಗಳು ಎಂದು ಬಿಂಬಿಸಲಾಗುವ ಉನ್ನತ ಶಿಕ್ಷಣ ಸಂಸ್ಥೆಗಳು ಎಂಬ ಎಲ್ಲವೂ ಅಧಿಕಾರದ ಹೆದ್ದಾರಿಗಳೇ ಆಗಿವೆ ಎಂಬುದನ್ನು ವಿಶೇಷವಾಗಿಯೇ ಗುರುತಿಸಬೇಕಾಗುತ್ತದೆ; ಮತ್ತು ಈ ಎಲ್ಲ ಕಡೆಯ ಅಧಿಕಾರ ಸ್ಥಾನಗಳೂ ಪುರುಷರ ಕೈಯಲ್ಲಿಯೇ ಇರುತ್ತವೆ ಎಂಬುದನ್ನೂ ಗಮನಿಸಬೇಕು. ರಾಜಕಾರಣ ಎಂದರೇನೇ ಅಧಿಕಾರ; ಎಂದಮೇಲೆ ಇಲ್ಲೆಲ್ಲೂ ಮಹಿಳೆಯರು ಇಲ್ಲವೇಕೆ ಎಂಬ ಪ್ರಶ್ನೆಯೇ ಹಾಸ್ಯಾಸ್ಪದ. ಅಧಿಕಾರ ದೇವತೆಯೇ ಆಗಿಬಿಡುವ ಪುರುಷನು ಈಗ ಸಮಾಜದ ಎಲ್ಲ ಸಂಗತಿಗಳನ್ನೂ ನಿರ್ದೇಶಿಸುತ್ತಾನೆ. ನ್ಯಾಯ ಸಂಹಿತೆಗಳು, ಮೌಲ್ಯ ವ್ಯವಸ್ಥೆಗಳು, ತತ್ವಜ್ಞಾನಗಳು, ಕೊನೆಗೆ ಕಲೆ ಎಂಬ ಎಲ್ಲವೂ ಇವನವೇ ಸೃಷ್ಟಿಗಳು.

ಇಂಥಾ ಪಿತೃಪ್ರಧಾನ ಆಡಳಿತ ಎಂದರೆ ಅದು ಪುರುಷರ ಅಧಿಕಾರವನ್ನು ನಿರಂತರವಾಗಿ ಉಳಿಸುವ ಒಂದು ಸುಸ್ಥಿರ ವ್ಯವಸ್ಥೆಯೇ ಅದು ಎಂಬುದನ್ನು ಮೊದಲಿಗೆ ಗ್ರಹಿಸುವುದು ಮುಖ್ಯವಾಗುತ್ತದೆ. ಸಂಖ್ಯಾಬಲದಲ್ಲಿ ತಮಗೆ ಸರಿಸಮಾನರೇ ಆಗಿರುವ ಮಹಿಳೆಯರನ್ನು ಪುರುಷರು ನಿಯಂತ್ರಣಕ್ಕೆ ಪಡೆದುಬಿಡುತ್ತಾರೆ. ದಬ್ಬಾಳಿಕೆಯನ್ನು ನಡೆಸುವ ಮಾತು ಬಂದಾಗ ಪಿತೃಪ್ರಧಾನತೆಯು ಎರಡು ಒಳ ಪದರಗಳನ್ನು ಸೃಷ್ಟಿಸುತ್ತದೆ. ಅದರಲ್ಲಿ ಬಹಳ ಮುಖ್ಯವಾಗಿ ಪುರುಷರು ಎಲ್ಲ ಮಹಿಳೆಯರ ಮೇಲೂ ದಬ್ಬಾಳಿಕೆಯನ್ನು ನಡೆಸುತ್ತಾರೆ ಎಂಬುದು ಒಂದು ಸಾಮಾನ್ಯೀಕರಣಗೊಂಡ ಬಗೆ. ಜೊತೆಗೆ ತಮಗಿಂತ ಕಿರಿಯರಾದ ಎಲ್ಲರ ಮೇಲೆ ಕೂಡಾ ಈ ದಬ್ಬಾಳಿಕೆಯನ್ನು ಪುರುಷರು ನಡೆಸಬಹುದು ಎಂಬ ಅಧಿಕಾರವನ್ನೂ ಪಡೆದಿರುತ್ತಾರೆ. ಆದರೆ ಇದರ ಒಳವಿವರಗಳು ಇನ್ನಷ್ಟು ಸತ್ಯಗಳನ್ನು ಕಾಣಿಸುತ್ತವೆ. ಇಲ್ಲಿ ಕಿರಿಯರು ಎಂದರೆ ವಯಸ್ಸಿನಲ್ಲಿ ಮಾತ್ರ ಎಂದಲ್ಲ; ಸಾಮಾಜಿಕ ಶ್ರೇಣೀಕರಣದಲ್ಲಿ ತಳ ಹಂತದವರು ಎಂದು ಉಳಿಯುವ ಎಲ್ಲರೂ ಕಿರಿಯರೇ ಆಗುತ್ತಾರೆ ಎಂಬುದೂ ತಿಳಿಯುತ್ತದೆ. ಕೆಳ ಶ್ರೇಣಿಗಳ ಪುರುಷರಿಗೆ ಇವು ಭಿನ್ನವಾಗಿ ಅನ್ವಯವಾಗುತ್ತವೆ.

ಅವರು ತಮ್ಮದೇ ಸಮುದಾಯದ ಕಿರಿಯರ ಮೇಲೆ ಅಧಿಕಾರದ ಹಕ್ಕನ್ನು ಪಡೆದಿರುತ್ತಾರೆ; ಕೆಳ ಶ್ರೇಣಿಯವರೇ ಆದರೂ ಆ ಪುರುಷರಿಗೂ ಎಲ್ಲ ಮಹಿಳೆಯರ ಮೇಲೆ ಅಧಿಕಾರವು ದಕ್ಕಿರುತ್ತದೆ. ಆದರೂ ಅವರು ತಳ ಸಮುದಾಯಕ್ಕೆ ಸೇರಿದವರು; ಈ ಕಾರಣದಿಂದಾಗಿ ಅವರು ತೀರಾ ಸಲೀಸಾಗಿ ಮೇಲು ಶ್ರೇಣಿಗಳ ಮಹಿಳೆಯರ ಮೇಲೆ ಅಧಿಕಾರವನ್ನು ಚಲಾಯಿಸಲಾರರು. ಅಷ್ಟೇಕೆ ಅಲ್ಲಿನ ಕಿರಿಯರ ಮೇಲೆ ಇಲ್ಲಿನ ಹಿರಿಯ ಮಹಿಳೆಯರಿಗಾಗಲೀ, ಅಥವಾ ಪುರುಷರಿಗೇ ಆಗಲೀ ಅಂಥಾ ಅಧಿಕಾರವು ದೊರೆಯಲಾರದು. ಹಾಗೂ ಆ ಪುರುಷರು ಇದನ್ನು ಮೀರಿದರೆ ಕಠಿಣವಾದ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಇದೇ ಪಿತೃಪ್ರಧಾನತೆಯ ಮುಖ್ಯ ತತ್ವ. ಕಣ್ಣೆದುರೇ ಇರುವ ಕೆಲವೊಂದು ವಾಸ್ತವ ಸಂಗತಿಗಳು ಈ ತತ್ವವೇನೂ ನಿಜವಲ್ಲವೇನೋ ಎನಿಸುವಂತೆ ತೋರಬಹುದು. ಆದರೆ ಇಂಥ ಪ್ರಕರಣಗಳು ಕೇವಲ ಅಪವಾದಗಳು ಮಾತ್ರವೇ ಆಗಿರುತ್ತವೆ. ಪಿತೃಪ್ರಧಾನತೆಯು ಒಂದು ಬಲವಾದ ಸಾಂಸ್ಥಿಕ ಆಕಾರವನ್ನು ತಳೆದು ಸಾಕಷ್ಟು ದೀರ್ಘ ಕಾಲವೇ ಕಳೆದಿದೆ. ತನ್ನ ಮೂಲ ತತ್ವವನ್ನು ಅದು ಶಾಖಾನುಶಾಖೆಗಳಲ್ಲಿ ಹಬ್ಬಿಸಿ ಹರಡಿದೆ.

ರಾಜಕೀಯ, ಸಾಮಾಜಿಕ ಅಥವಾ ಆರ್ಥಿಕ ವಲಯಗಳು ಇದನ್ನು ಜಾರಿಗೊಳಿಸಲೆಂದೇ ಪ್ರವರ್ತಿಸುವ ಉಪಸಂಸ್ಥೆಗಳೇ ಆಗಿವೆ. ಜಾತಿ, ಜನಾಂಗ, ಬ್ಯುರೋಕ್ರಸಿ, ಊಳಿಗ ಮಾನ್ಯತೆ, ಪ್ರಮುಖ ಮತಧರ್ಮಗಳು.. ಎಂಬ ಎಲ್ಲವೂ ಇವುಗಳ ಅಧೀನ ಸಂಸ್ಥೆಗಳೇ ಆಗಿಬಿಡುತ್ತವೆ. ಅಷ್ಟೇಕೆ, ಚರಿತ್ರೆ, ಪ್ರಾದೇಶಿಕತೆ ಎಂಬವು ಕೂಡಾ ಈ ತತ್ವವನ್ನು ಆಧರಿಸಿ ತಿದ್ದುಪಡಿಗಳನ್ನು ಪಡೆದುಬಿಡುತ್ತವೆ. ಪ್ರಜಾಪ್ರಭುತ್ವ ಎಂಬ ಆದರ್ಶದ ರಾಜಕೀಯ ವಲಯವನ್ನೇ ಗಮನಿಸೋಣ. ಅಲ್ಲಿಯೂ ಮಹಿಳಾ ಪ್ರಾತಿನಿಧ್ಯ ಎಂಬುದು ಹೋರಾಟದ ವಿಷಯವಾಗಿಯೇ ಉಳಿಯುತ್ತದೆ. ಹೋರಾಟಗಳ ಒತ್ತಡಗಳು ಹೆಚ್ಚಾದಾಗ ಬೆರಳೆಣಿಕೆಯ ಕೆಲವೊಂದು ಸ್ಥಾನಗಳು ಮಹಿಳೆಯರಿಗೆ ಅಲ್ಲಿ ದೊರೆಯಬಹುದು. ಆದರೆ ಆ ಸ್ಥಾನಗಳು ಸಂಖ್ಯೆಯ ಮಾತಿರಲಿ, ದೊರೆತಷ್ಟು ಸ್ಥಾನಗಳಾದರೂ ಕನಿಷ್ಠ ಪ್ರಾಮುಖ್ಯವನ್ನು ಪಡೆದಿರುತ್ತವೆಯೇ ಎಂಬುದನ್ನು ನೋಡಬಹುದು.

ಇನ್ನೂ ಮುಂದುವರೆದು ಹೇಳಬೇಕೆಂದರೆ ಹೆಂಗಸಿನ ಪಾಲಿಗೆ ದೊರೆಯುವ ಆ ಸಾಮಾನ್ಯ ಗುಣದ ಸ್ಥಾನವು ಕೂಡಾ ಸ್ವತಂತ್ರ ನಿರ್ವಹಣೆಯದಾಗಿ ಇರುವುದಿಲ್ಲ; ಅವಳ ಮೇಲೆ ನಿಯಂತ್ರಣವನ್ನು ಹೊಂದಿರುವ ಮೇಲಧಿಕಾರದ ಸ್ಥಾನಗಳಲ್ಲಿ ಪುರುಷರ ಸಾಲೇ ಇರುತ್ತದೆ. ಇಂತಹ ಪ್ರಾತಿನಿಧ್ಯದ ರಾಜಕಾರಣದಲ್ಲಿ ಮಹಿಳೆಯು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದಷ್ಟೇ ಇರುತ್ತಾಳೆ. ತೀವ್ರವಾದೀ ಪ್ರಜಾಪ್ರಭುತ್ವವು ಪಿತೃಪ್ರಧಾನತೆಯ ರಾಜಕಾರಣವನ್ನು ಗುರುತಿಸುತ್ತದೆ ನಿಜ. ಆದರೆ ಇದು ಈಗಿನ ಮಟ್ಟಿಗೆ ಕಾಣುವ ಸಮಾಧಾನ ಮಾತ್ರವೇ ಆಗಿ ಉಳಿದಿದೆ. ಜಗತ್ತಿನಲ್ಲಿ ಅವೆಷ್ಟೋ ಕಡೆ ಪ್ರಜಾಪ್ರಭುತ್ವವೇ ಇದೆಯಲ್ಲ ಎನಿಸುತ್ತಿರಬಹುದು; ಆದರೆ ಮಹಿಳೆಯರು ಆ ಪ್ರಜಾಪ್ರಭುತ್ವಗಳ ಪಾಲಿಗೂ ಅನ್ಯರಾಗಿಯೇ ಉಳಿದಿರುವುದು; ಅಲ್ಲಿಯೂ ಅಧಿಕಾರ ಸ್ಥಾನಗಳಲ್ಲಿ ಮಹಿಳೆಯರು ಇರುವುದು ತೀರಾ ಅಪರೂಪವೇ, ಅಪವಾದಗಳು ಎಂಬಂತೆ. ಇನ್ನೂ ಕೆಲವು ಪ್ರಸಂಗಗಳಲ್ಲಿ ವಂಶದ ಹೆಗ್ಗಳಿಕೆಯ ಇಕ್ಕಟ್ಟುಗಳು ಬಂದಾಗ ಅಲ್ಲಿನ ಮಹಿಳೆಯರ ಕೈಗೆ ಅಧಿಕಾರವು ದಕ್ಕಬಹುದು.

ಆದರೆ ನಮ್ಮ ರಾಣಿಯರ ಚರಿತ್ರೆಯನ್ನು ಗಮನಿಸಿದರೆ ಅವರು ವಂಶದ ಪುರುಷನೊಬ್ಬನು
ಇಲ್ಲ ಎಂಬ ಆ ಸದ್ಯದ ಸಂದರ್ಭದಲ್ಲಿ ಪುರುಷ ಅಧಿಕಾರದ ಸ್ಥಾನವನ್ನು ಕಾಯುವ ಸೇವೆಯಲ್ಲಿ ತೊಡಗಿರುತ್ತಾರೆ ಎಂಬುದು ಕಾಣುತ್ತದೆ. ವಂಶದ ಗಂಡು ಕುಡಿಯು ಇನ್ನೂ ಚಿಕ್ಕದು ಎಂಬ ಕಾರಣವಾದರೆ ಆ ಮಗುವು ವಯಸ್ಕನಾಗುವವರೆಗೆ ಕಾಯಬೇಕು. ಒಂದು ವೇಳೆ ಗಂಡು ಕುಡಿಯೇ ಇಲ್ಲ ಎಂದಾಗ ದತ್ತು ಪಡೆದಾದರೂ ಸರಿ ಅಲ್ಲಿ ಗಂಡು ಅಧಿಕಾರಕ್ಕೆ ಅವಕಾಶವನ್ನು ಕಲ್ಪಿಸಬೇಕು. ಈ ಮಧ್ಯಂತರದಲ್ಲಿ ಹೆಣ್ಣು ಕಾವಲು ಕಾಯುವ ಹೊಣೆಯನ್ನು ನಿರ್ವಹಿಸುತ್ತಾಳೆ ಅಷ್ಟೇ. ಆದರೆ ಹಿರಿಯರು ಕಿರಿಯರ ಮೇಲೆ ಅಧಿಕಾರವನ್ನು ಹೊಂದುತ್ತಾರೆ ಎಂಬ ನಿಯಮವು ಪುರುಷರ ವಿಚಾರದಲ್ಲಿ ಕಟ್ಟುನಿಟ್ಟಿನದೇನಲ್ಲ. ಪೈಪೋಟಿಗೆ ಇಳಿದು ಕಿರಿಯ ಪುರುಷನು ಹಿರಿಯನ ಮೇಲೆ ದಾಳಿಯನ್ನು ನಡೆಸಿ ಅಧಿಕಾರವನ್ನು ಕಿತ್ತುಕೊಳ್ಳಬಹುದು. ಪಿತೃಪ್ರಧಾನತೆಯು ಕೆಲಸ ಮಾಡುವ ವೈವಿಧ್ಯಗಳನ್ನು ಗ್ರಹಿಸುವುದು ಸುಲಭವಲ್ಲ. ಜಗತ್ತಿನೆಲ್ಲೆಡೆಯೂ ಪಿತೃಪ್ರಧಾನತೆಯು ನೆಲೆಸಿದೆ ಎಂದಾಗಲೂ ಆ ವ್ಯವಸ್ಥೆಯ ಕಾರ್ಯತಂತ್ರಗಳು ಸಮಾನವಾಗಿ ಅನ್ವಯವಾಗುತ್ತವೆ ಎಂದೇನಲ್ಲ. ದೇಶಗಳು ಹಲವಾರು ಇರಬಹುದು. ಆದರೆ ಒಂದೊಂದು ಪ್ರಾಂತ್ಯದ ಸಂದರ್ಭಗಳು ಒಂದೊಂದು ಬಗೆಯವೇ ಆಗಿರುತ್ತವೆ.

ಹೊರ ಲಕ್ಷಣಗಳನ್ನಷ್ಟೇ ಹಿಡಿದು ಮಹಿಳೆಯರು ಪಿತೃಪ್ರಧಾನತೆಯ ಹಿಡಿತಗಳಿಂದ ಪಾರಾಗುತ್ತಿದ್ದಾರೆ, ಅಥವಾ ಅದರಲ್ಲೇ ಸಿಲುಕಿಕೊಂಡು ನರಳುತ್ತಿದ್ದಾರೆ ಎಂಬ ತೀರ್ಮಾನಗಳಿಗೆ ಬರುವುದು ತಪ್ಪಾಗುತ್ತದೆ. ಏನೇನೋ ಪರಿವರ್ತನೆಗಳು ಸಂಭವಿಸಿಬಿಟ್ಟಿವೆ ಎಂದಾಗಲೀ, ಪಿತೃಪ್ರಧಾನತೆಯು ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿದೆ ಎಂದಾಗಲೀ ಭ್ರಮಿಸುವ ಅಗತ್ಯವೇ ಇಲ್ಲ. ನಮ್ಮ ಎಷ್ಟೋ ಬೌದ್ಧಿಕ ಚರ್ಚೆಗಳಲ್ಲಿ ಇಂದಿನ ಮಹಿಳೆಯರು ಬಿಡುಗಡೆಗೊಂಡಿದ್ದಾರೆ ಎಂಬ ತೀರ್ಮಾನಗಳನ್ನು ನಾವು ಮಾಡಿಬಿಡುತ್ತೇವೆ. ಕೆಲವು ವ್ಯಕ್ತಿ ಪ್ರಕರಣಗಳನ್ನು ಎತ್ತಿ ತೋರಿಸುತ್ತಾ ಇಡೀ ಸಮುದಾಯಕ್ಕೇ ಅನ್ವಯಿಸಿ ಮಾತನಾಡುತ್ತೇವೆ ಎಂಬುದೇ ಇಲ್ಲಿನ ಮುಖ್ಯ ಸಮಸ್ಯೆ. ಪಶ್ಚಿಮ ದೇಶಗಳು, ಪೂರ್ವದ ದೇಶಗಳು ಎಂಬ ವ್ಯಾಪ್ತಿಗೆ ಕೂಡಾ ಇದನ್ನು ವಿಸ್ತರಿಸಿಬಿಡುವ ಆತುರವನ್ನೂ ತೋರುತ್ತೇವೆ. ಇಲ್ಲೆಲ್ಲಾ ಕಾಣುವುದು ಕೇವಲ ಕೆಲವು ಹೊರಗಿನ ಸುಧಾರಣೆಗಳು ಮಾತ್ರವೇ ಎಂಬ ಅರಿವು ಕೂಡಾ ಇಲ್ಲಿ ಮರೆಯಾಗಿ ಹೋಗುತ್ತದೆ.

(ಇದನ್ನು ಪ್ರಕಟಗೊಳ್ಳಲಿರುವ, ಎಚ್ ಎಸ್ ಶ್ರೀಮತಿ ಅನುವಾದಿಸಿರುವ ಕೇಟ್ ಮಿಲ್ಲೆಟ್ ಅವರ ’ಸೆಕ್ಷುವಲ್ ಪಾಲಿಟಿಕ್ಸ್’ನ ಅಧ್ಯಾಯವೊಂದರಿಂದ ಆಯ್ದುಕೊಳ್ಳಲಾಗಿದೆ)

ಕೇಟ್ ಮಿಲ್ಲೆಟ್ (1934-2017)
ಅಮೆರಿಕದ ಸ್ತ್ರೀವಾದಿ ಚಿಂತಕಿ, ಬರಹಗಾರ್ತಿ ಮತ್ತು ಹೋರಾಟಗಾರ್ತಿ. ’ಸೆಕ್ಷುಯಲ್ ಪಾಲಿಟಿಕ್ಸ್’, ’ದ ಪ್ರಾಸ್ಟಿಟ್ಯೂಷನ್ ಪೇಪರ್ಸ್’, ’ಫ್ಲೈಯಿಂಗ್’ ಅವರ ಪುಸ್ತಕಗಳಲ್ಲಿ ಕೆಲವು.

ಎಚ್ ಎಸ್ ಶ್ರೀಮತಿ
ಕನ್ನಡದ ಸ್ತ್ರೀವಾದಿ ಚಿಂತಕಿ ಮತ್ತು ಲೇಖಕಿ. ಮಹಾಶ್ವೇತಾ ದೇವಿಯವರ ಬೆಟ್ಟಿ ಫ್ರೀಡನ್ ಅವರ ’ದ ಫೆಮಿನಿಸ್ಟ್ ಮಿಸ್ಟಿಕ್’, ಬೆಲ್ ಹುಕ್ಸ್ ಅವರ ’ಎಲ್ಲರಿಗಾಗಿ ಸ್ತ್ರೀವಾದ’ ಸೇರಿದಂತೆ ಹಲವು ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಲವು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿರುವ ಶ್ರೀಮತಿ ಅವರು ’ಸ್ತ್ರೀವಾದ’, ’ಸ್ತ್ರೀವಾದ : ಪಾರಿಭಾಷಿಕ ಪದಕೋಶ’, ’ಗೌರಿ ದುಃಖ’ ಸೇರಿದಂತೆ ಇನ್ನು ಹಲವಾರು ಪುಸ್ತಕಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ.


ಇದನ್ನೂ ಓದಿ: ದೌರ್ಜನ್ಯವನ್ನು ಕೊನೆಗಾಣಿಸಲು ಸ್ತ್ರೀವಾದೀ ಚಳುವಳಿ “ಸ್ತ್ರೀವಾದ: ಅಂಚಿನಿಂದ ಕೇಂದ್ರದೆಡೆಗೆ” ಪುಸ್ತಕದ ಅಧ್ಯಾಯವೊಂದರ ಆಯ್ದ ಭಾಗ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...