ಯುವಕನೋರ್ವ ಯುವತಿಯನ್ನು ಲೈಂಗಿಕವಾಗಿ ಪೀಡಿಸುತ್ತಿರುವುದು ಮತ್ತು ಇನ್ನೋರ್ವ ಯುವತಿ ಆಕೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋ ಹಂಚಿಕೊಂಡಿರುವ ಅನೇಕರು, ಸಂಘರ್ಷ ಪೀಡಿತ ಮಣಿಪುರದಲ್ಲಿ ಹಿಂದೂ ಯುವಕ ಕುಕಿ ಸಮುದಾಯದ ಕ್ರೈಸ್ತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬರೆದುಕೊಂಡಿದ್ದಾರೆ.
Stephanie (@lveyutoo111) ಎಂಬ ಬಳಕೆದಾರರೊಬ್ಬರು ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡು “#ManipurVoilenceinIndia ಹಿಂದೂ ಯುವಕ ಪೊದೆಗಳ ನಡುವೆ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿನಿಯೋರ್ವಳನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಯುವತಿ ಕುಕಿ ಎಂಬ ಕ್ರೈಸ್ತ ಅಲ್ಪಸಂಖ್ಯಾತ ಸಮುದಾಯದವಳು. ಇವೆಲ್ಲವೂ ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ಆದರೆ, ಇಂತಹ ಅತ್ಯಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿದೆ” ಎಂದು ಬರೆದುಕೊಂಡಿದ್ದಾರೆ.

‘ದಿವ್ಯಾ ಕುಮಾರಿ’ ಎಂಬ ಮತ್ತೊಂದು ಎಕ್ಸ್ ಖಾತೆಯಲ್ಲೂ ಅದೇ ರೀತಿಯ ಪ್ರತಿಪಾದನೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್ : ವಿಡಿಯೋ ಕುರಿತು ನಾವು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ. ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ವಿಡಿಯೋ ಸ್ಕ್ರೀನ್ ಶಾಟ್ ಹಾಕಿ ಸರ್ಚ್ ಮಾಡಿದಾಗ 27,2017ರಂದು ಎನ್‌ಡಿವಿ ವಿಡಿಯೋ ಕುರಿತು ವರದಿ ಪ್ರಕಟಿಸಿದ್ದು ಕಂಡು ಬಂದಿದೆ.
ವರದಿಯಲ್ಲಿ “19ರ ಹರೆಯದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಆಕೆಯ ಪ್ರಿಯಕರ ಹಲ್ಲೆ ನಡೆಸಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಬಳಿಕ ಅದನ್ನು ಇಬ್ಬರು ಸ್ನೇಹಿತರ ಜೊತೆ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಅದು ಅವರ ಸ್ನೇಹಿತರ ನಡುವೆ ಹರಿದಾಡಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ” ಎಂದು ಹೇಳಲಾಗಿದೆ.

ಸೆಪ್ಟೆಂಬರ್ 26, 2017ರಂದು ನ್ಯೂಸ್18 ಕೂಡ ವಿಡಿಯೋ ಕುರಿತು ವರದಿ ಪ್ರಕಟಿಸಿತ್ತು “ವರದಿಯಲ್ಲಿ ಯುವತಿಗೆ ಕಿರುಕುಳ ನೀಡಿ, ಅದನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ಮೂವರು ಯುವಕರನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶಂ ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ”.

“ಯುವತಿಯ ಪ್ರಿಯಕರ ಬಿ.ಸಾಯಿ (19) ತನ್ನ ಸ್ನೇಹಿತ ಕಾರ್ತಿಕ್ (22) ಜೊತೆ ಸೇರಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸಾಯಿ ಯುವತಿಗೆ ಕಿರುಕುಳ ನೀಡುವಾಗ ಕಾರ್ತಿಕ್ ಅದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾನೆ. ಇನ್ನೋರ್ವ ಸ್ನೇಹಿತ ಪವನ್ (21) ದುಷ್ಕೃತ್ಯ ನಡೆಯುವಾಗ ಸ್ಥಳದಲ್ಲಿ ಇದ್ದ” ಎಂದು ವರದಿ ಹೇಳಿದೆ.
ಒಟ್ಟಿನಲ್ಲಿ 2017ರಲ್ಲಿ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದ ಲೈಂಗಿಕ ಕಿರುಕುಳದ ವಿಡಿಯೋವೊಂದನ್ನು ಮಣಿಪುರದ ವಿಡಿಯೋ ಎಂದು ಕೋಮು ಆಯಾಮದಲ್ಲಿ ಹಂಚಿಕೊಳ್ಳಲಾಗುತ್ತಿರುವುದು ನಮ್ಮ ಪರಿಶೀಲನೆಯಲ್ಲಿ ಗೊತ್ತಾಗಿದೆ.
ಇದನ್ನೂ ಓದಿ : FACT CHECK : ಕಮಲಾ ಹ್ಯಾರಿಸ್ ಭೇಟಿಯಾಗಲು ಡಿಕೆಶಿ ಅಮೆರಿಕಗೆ ಹೋದ್ರಾ?


