ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಝರುದ್ದೀನ್ ತನ್ನ ಪತ್ನಿ ಮಗನೊಂದಿಗೆ ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮ ಸ್ವೀಕರಿಸಿದ್ದಾರೆ ಎಂಬ ಸಂದೇಶವೊಂದು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘दिल्ली के दिल में ( @deepakprotocol) ಎಂಬ ಎಕ್ಸ್ ಬಳಕೆದಾರ ಜುಲೈ 4, 2024ರಂದು ಫೋಟೋವೊಂದನ್ನು ಹಂಚಿಕೊಂಡಿದ್ದು, “ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಝರುದ್ದೀನ್ ಕಾಶಿಯಲ್ಲಿ ಪತ್ನಿ ಮತ್ತು ಮಗನೊಂದಿಗೆ ಮುಸ್ಲಿಂ ಧರ್ಮವನ್ನು ತೊರೆದು ಸನಾತನಿಯಾದರು” ಎಂದು ಬರೆದುಕೊಂಡಿದ್ದಾರೆ.

Sunil sahu(@BJP4SunilSahu) ಎಂಬ ಮತ್ತೊಬ್ಬ ಎಕ್ಸ್ ಬಳಕೆದಾರ ಜುಲೈ 2, 2024ರಂದು ಮಾಜಿ ಕ್ರಿಕೆಟಿಗ ಅಝುರುದ್ದೀನ್ ಅವರ ಫೋಟೋ ಹಂಚಿಕೊಂಡು ” ಶ್ರೇಷ್ಠ ಕ್ರಿಕೆಟಿಗ ಅಝರುದ್ದೀನ್ ಅವರನ್ನು ಈಗ ಡಬ್ಲ್ಯೂ ಸಿಂಗ್ ಎಂದು ಕರೆಯಲಾಗುತ್ತದೆ. ಅವರ ಮಗನನ್ನು ರಾಜ್ ಸಿಂಗ್ ಮತ್ತು ಪತ್ನಿಯನ್ನು ಗುಡಿಯಾ ಸಿಂಗ್ ಎಂದು ಕರೆಯಲಾಗುತ್ತದೆ. ಮಾಜಿ ನಾಯಕ ಹಾಗೂ ಕ್ರಿಕೆಟಿಗ ಅಝರುದ್ದೀನ್ ಇಸ್ಲಾಂ ಧರ್ಮವನ್ನು ತೊರೆದು ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ವಾಟ್ಸಾಪ್‌ನಲ್ಲಿಯೂ ಅಝರುದ್ದೀನ್ ಫೋಟೋದೊಂದಿಗೆ ಇದೇ ರೀತಿಯ ಸಂದೇಶ ಹರಿದಾಡುತ್ತಿದೆ.


ಫ್ಯಾಕ್ಟ್‌ಚೆಕ್ : ವೈರಲ್ ಸುದ್ದಿಯ ಕುರಿತು ನಾವು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ. ಈ ವೇಳೆ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಚಂದೌಲಿ ನಿವಾಸಿ ಮೊಹಮ್ಮದ್ ಅಝರುದ್ದೀನ್ ಎಂಬವರು ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮ ಸ್ವೀಕರಿಸಿದ್ದು, ಅದನ್ನು ತಪ್ಪಾಗಿ ಕ್ರಿಕೆಟಿಗ ಅಝರುದ್ದೀನ್ ಹಿಂದೂ ಧರ್ಮ ಸ್ವೀಕರಿಸಿದ್ದಾರೆ ಎಂದು ಹಂಚಿಕೊಂಡಿರುವುದು ಗೊತ್ತಾಗಿದೆ.
ಈ ಕುರಿತು ಜುಲೈ 2, 2024ರಂದು ಅಮರ್ ಉಜಾಲಾ ಸುದ್ದಿ ಸಂಸ್ಥೆ ವಿಡಿಯೋ ಸಹಿತ ಸುದ್ದಿ ಪ್ರಕಟಿಸಿದೆ. ಸುದ್ದಿಯಲ್ಲಿ “ಚಂದೌಲಿಯ ಸದರ್ ಕೊತ್ವಾಲಿ ಪ್ರದೇಶದ ಬಿಚಿಯಾ ಗ್ರಾಮದ ನಿವಾಸಿ ಮೊಹಮ್ಮದ್ ಅಝರುದ್ದೀನ್ ಹಿಂದೂ ಧರ್ಮ ಸ್ವೀಕರಿಸಿದ್ದು, ಅವರ ಹೆಸರನ್ನು ಡಬ್ಲ್ಯೂ ಸಿಂಗ್ ಎಂದು ಬದಲಾಯಿಸಿದ್ದಾರೆ. ಅಝರುದ್ದೀನ್ ಜೊತೆ ಅವರ ಪತ್ನಿ ಮತ್ತು ಪುತ್ರ ಕೂಡ ಹಿಂದೂ ಧರ್ಮ ಸ್ವೀಕರಿಸಿದ್ದಾರೆ. ಅವರು ರಾಮಚರಿತ ಮಾನಸ ಮತ್ತು ಗೀತೆ ಪೂಜೆ ಪುನಸ್ಕಾರವನ್ನು ಕೂಡ ಪ್ರಾರಂಭಿಸಿದ್ದಾರೆ ಎಂದು ತಿಳಿಸಲಾಗಿದೆ.

ಅಮರ್ ಉಜಾಲದ ಸುದ್ದಿಯಲ್ಲಿರುವ ವಿಡಿಯೋ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಫೋಟೋ ಒಂದೇ ಎಂಬುವುದನ್ನು ನಾವಿಲ್ಲಿ ಗಮನಿಸಬಹುದು.

ಒಟ್ಟಿನಲ್ಲಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಝುರುದ್ದೀನ್ ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮ ಸ್ವೀಕರಿಸಿದ್ದಾರೆ ಎಂಬುವುದು ಸುಳ್ಳು ಸುದ್ದಿಯಾಗಿದೆ. ವೈರಲ್ ಆಗಿರುವುದು ಉತ್ತರ ಪ್ರದೇಶದ ಚಂದೌಲಿಯ ಜಿಲ್ಲೆಯ ನಿವಾಸಿ ಅಝರುದ್ದೀನ್ ಎಂಬವರದ್ದಾಗಿದೆ. ಮಾಜಿ ಕ್ರಿಕೆಟಿಗ ಅಝರುದ್ದೀನ್ ಹೈದರಾಬಾದ್‌ನಲ್ಲಿ ನೆಲೆಸಿದ್ದು, ಕಾಂಗ್ರೆಸ್ ನಾಯಕರೂ ಆಗಿದ್ದಾರೆ.
ಇದನ್ನೂ ಓದಿ : FACT CHECK : ಎಡಿಟೆಡ್ ವಿಡಿಯೋ ಮೂಲಕ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಸುಳ್ಳು ಸುದ್ದಿ ಹರಡಿದ ಟಿವಿ ವಿಕ್ರಮ


