ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲಿ, ಅಖಿಲೇಶ್ ಅವರು ಕಾಂಪೌಂಡ್ ಅಥವಾ ಗೇಟ್‌ನ್ನು ಜಿಗಿದು ಹೋಗುವುದು, ಹಲವಾರು ಟಿವಿ ಚಾನೆಲ್‌ಗಳ ಕ್ಯಾಮರಾಗಳು ಮತ್ತು ಪತ್ರಕರ್ತರು ಆ ದೃಶ್ಯವನ್ನು ಸೆರೆ ಹಿಡಿಯುವುದು ಇದೆ. ‘ಪತ್ರಕರ್ತರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಅಖಿಲೇಶ್ ಯಾದವ್ ಓಡಿ ಹೋಗಿದ್ದಾರೆ’ ಎಂಬ ಶೀರ್ಷಿಕೆಯಿಂದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ.
“ಪತ್ರಕರ್ತರು ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ಅಖಿಲೇಶ್ ಯಾದವ್ ಓಡಿಹೋದರು” ಎಂಬ ಶೀರ್ಷಿಕೆಯೊಂದಿಗೆ ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ (@sadhvi?_Prachi)ಅವರು 18 ಸೆಕೆಂಡುಗಳ ಕ್ಲಿಪ್ ಅನ್ನು ಸೆಪ್ಟೆಂಬರ್ 4ರಂದು ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಬಳಿಕ ಸಾಧ್ವಿ ಅವರು ಅವರು ಪೋಸ್ಟ್ ಡಿಲಿಟ್ ಮಾಡಿದ್ದಾರೆ. ಆದರೆ, ಅಷ್ಟರಲ್ಲಿ ಅದು 2.3 ಲಕ್ಷ ವೀಕ್ಷಣೆ ಪಡೆದಿತ್ತು ಮತ್ತು 2 ಸಾವಿರ ಮಂದಿ ಶೇರ್ ಮಾಡಿದ್ದರು.

ಸದಾ ಕೋಮು ದ್ವೇಷದ ಸುದ್ದಿಗಳನ್ನು ಹಂಚಿಕೊಳ್ಳುವ ಸುನಂದಾ ರಾಯ್ (@SaffronSunanda)ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡು “ಪತ್ರಕರ್ತರು ಮೊಯೀದ್ ಖಾನ್ ಮತ್ತು ನವಾಬ್ ಯಾದವ್ ಅವರ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಕ್ಕೆ, ಅಖಿಲೇಶ್ ಯಾದವ್ ಮಾಧ್ಯಮಗಳಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಈ ಮನುಷ್ಯ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ಬಯಸುತ್ತಿದ್ದಾರೆ” ಎಂದು ಬರೆದುಕೊಂಡಿದ್ದರು. ಬಳಿಕ ಅವರು ಪೋಸ್ಟ್ ಡಿಲಿಟ್ ಮಾಡಿದ್ದರು. ಅಷ್ಟರಲ್ಲಿ ಅದು, 21,000 ವೀಕ್ಷಣೆಗಳನ್ನು ಪಡೆದಿತ್ತು.

ಇನ್ನೂ ಹಲವಾರು ಬಲಪಂಥೀಯ ಎಕ್ಸ್ ಹ್ಯಾಂಡಲ್‌ಗಳಲ್ಲಿ ವಿಡಿಯೋ ಪೋಸ್ಟ್ ಮಾಡಿ “ಅಖಿಲೇಶ್ ಯಾದವ್ ಪತ್ರಕರ್ತರಿಗೆ ಹೆದರಿ ಓಡಿ ಹೋಗಿದ್ದಾರೆ” ಎಂದು ಬರೆಯಲಾಗಿತ್ತು.
ಫ್ಯಾಕ್ಟ್‌ಚೆಕ್ : ಅಖಿಲೇಶ್ ಯಾದವ್ ಅವರ ವೈರಲ್ ಪೋಟೋ ಕುರಿತು ನಾವು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ. ಈ ವೇಳೆ ಅಕ್ಟೋಬರ್ 17, 2023ರಂದು ಸಮಾಜವಾದಿ ಪಕ್ಷ (ಎಸ್‌ಪಿ)ಯ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ವೈರಲ್ ವಿಡಿಯೋದಲ್ಲಿರುವ ಅಖಿಲೇಶ್ ಯಾದವ್ ಕಾಂಪೌಂಡ್ ಹಾರುವ ಫೋಟೋ ಪೋಸ್ಟ್ ಮಾಡಿರುವುದು ಕಂಡು ಬಂದಿದೆ.
ಫೋಟೋ ಕುರಿತು ವಿವರಣೆ ನೀಡಿರುವ ಸಮಾಜವಾದಿ ಪಕ್ಷ “ಜಯಪ್ರಕಾಶ್ ನಾರಾಯಣ ಅವರ ಜನ್ಮ ದಿನದ ಪ್ರಯುಕ್ತ ಅಕ್ಟೋಬರ್ 11, 2023ರಂದು ಲಕ್ನೋದ ಜಯಪ್ರಕಾಶ್ ನಾರಾಯಣ್ ಇಂಟರ್‌ನ್ಯಾಷನಲ್ ಸೆಂಟರ್ (ಜೆಪಿಎನ್ಐಸಿ) ನಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಸರ್ಕಾರ ಜೆಪಿಎನ್ಐಸಿ ಗೇಟ್‌ಗೆ ಬೀಗ ಹಾಕಿ ಒಳಗೆ ಪ್ರವೇಶಿಸದಂತೆ ತಡೆದಿತ್ತು. ಈ ವೇಳೆ ಅಖಿಲೇಶ್ ಯಾದವ್ ಅವರು ಗೇಟ್ ಹಾರಿ ಒಳನುಗ್ಗಿ ಜಯಪ್ರಕಾಶ್ ನಾರಾಯಣ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ” ಎಂದು ತಿಳಿಸಿದೆ.
अखिलेश यादव लोकनायक के रास्ते पर
-राजेन्द्र चौधरी
लोकनायक जयप्रकाश नारायण जी की जयंती पर जेपीएनआईसी की वर्तमान सरकार द्वारा की जा रही दुर्दशा से समाजवादी पार्टी के राष्ट्रीय अध्यक्ष एवं पूर्व मुख्यमंत्री… pic.twitter.com/3AWQyBBzKB— Samajwadi Party (@samajwadiparty) October 17, 2023
ಅಕ್ಟೋಬರ್ 11, 2023ರಂದು ಇಂಡಿಯನ್ ಎಕ್ಸ್‌ಪ್ರೆಸ್ ಈ ಕುರಿತು ವರದಿ ಪ್ರಕಟಿಸಿತ್ತು, ಅದರಲ್ಲೂ “ಜೆಪಿಎನ್ಐಸಿ ಪ್ರವೇಶಿಸಲು ಅಖಿಲೇಶ್ ಯಾದವ್ ಅವರಿಗೆ ಅವಕಾಶ ನಿರಕರಿಸಿದ್ದಕ್ಕೆ, ಅವರು ಕಾಂಪೌಂಡ್ ಹಾರಿ ಜೆಪಿ ಅವರಿಗೆ ಗೌರವಾರ್ಪಣೆ ಮಾಡಿ ಬಂದಿದ್ದಾರೆ” ಎಂದು ತಿಳಿಸಲಾಗಿತ್ತು.

ಅಕ್ಟೋಬರ್ 11, 2023ರಂದು ದಿ ಎಕನಾಮಿಕ್ಸ್ ಟೈಮ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡ ವಿಡಿಯೋ ಹಂಚಿಕೊಂಡು “ಜಯಪ್ರಕಾಶ್ ನಾರಾಯಣ ಅವರಿಗೆ ಗೌರವ ಸಲ್ಲಿಸಲು ಅಖಿಲೇಶ್ ಯಾದವ್ ಅವರು ಜೆಪಿಎನ್‌ಐಸಿಯ ಕಾಂಪೌಂಡ್ ಹಾರಿದರು” ಎಂದು ಶೀರ್ಷಿಕೆ ಕೊಡಲಾಗಿತ್ತು.

ಒಟ್ಟಿನಲ್ಲಿ “ಜಯಪ್ರಕಾಶ್ ನಾರಾಯಣ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಅವಕಾಶ ನಿರಾಕರಿಸಿ ಜೆಪಿಎನ್‌ಐಸಿ ಗೇಟ್‌ಗೆ ಸರ್ಕಾರ ಬೀಗ ಹಾಕಿದ್ದಕ್ಕೆ ಅಖಿಲೇಶ್ ಯಾದವ್ ಗೇಟ್ ಹಾರಿ ಒಳ ಹೋಗಿದ್ದರು. ಆ ವಿಡಿಯೋ ಮತ್ತು ಫೋಟೋ ಹಂಚಿಕೊಂಡು “ಅಖಿಲೇಶ್ ಪತ್ರಕರ್ತರ ಪ್ರಶ್ನೆಗಳಿಗೆ ಹೆದರಿ ಓಡಿ ಹೋಗಿದ್ದಾರೆ” ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ.
ಇದನ್ನೂ ಓದಿ : FACT CHECK : ಕಲಬುರಗಿಯ ಹಳೆಯ ವಿಡಿಯೋಗೆ ಕೋಮು ಬಣ್ಣ ಬಳಿದು ಹಂಚಿಕೊಳ್ಳುತ್ತಿರುವ ಬಲಪಂಥೀಯರು


