ಮುಂದಿನ ನವೆಂಬರ್ 5 ರಂದು ಅಮೆರಿಕ ಅಧ್ಯಕ್ಷರ ಆಯ್ಕೆಯ ಮಹತ್ವದ ಚುನಾವಣೆ ನಡೆಯಲಿದೆ. ಆಡಳಿತರೂಢ ಡೆಮಾಕ್ರಟಿಕ್ ಪಕ್ಷದಿಂದ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಅಭ್ಯರ್ಥಿಯಾಗಿದ್ದಾರೆ. ರಿಪಬ್ಲಿಕನ್ ಪಕ್ಷದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗಳಿದಿದ್ದಾರೆ. ಎರಡೂ ಕಡೆಯವರ ಚುನಾವಣಾ ಪ್ರಚಾರ, ವಾಗ್ವಾದಗಳು ಜೋರಾಗಿಯೇ ನಡೆಯುತ್ತಿದೆ.
ಈ ನಡುವೆ ಕಮಲಾ ಹ್ಯಾರಿಸ್ ಅವರ ಆಹ್ವಾನದ ಮೇರೆಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಮೆರಿಕಕ್ಕೆ ತೆರಳಿದ್ದಾರೆ ಎಂದು ಕೆಲ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿವೆ.
ಸೆಪ್ಟೆಂಬರ್ 9,2024ರಂದು “DK Shivakumar : ಸಿಎಂ ಕುರ್ಚಿ ಫೈಟ್ ಮಧ್ಯೆ ‘ಬಂಡೆ’ ಫಾರಿನ್ ಟೂರ್ ; ಡಿಕೆಶಿಗೂ ಮೊದಲೇ ಅಮೆರಿಕದಲ್ಲಿ ರಾಹುಲ್, ಕುತೂಹಲ ಮೂಡಿಸಿದ US ಟೂರ್” ಎಂಬ ಶೀರ್ಷಿಕೆಯಲ್ಲಿ ನ್ಯೂಸ್18 ಕನ್ನಡ ಸುದ್ದಿ ಪ್ರಕಟಿಸಿತ್ತು. ಅದರಲ್ಲಿ “ಕಮಲಾ ಹ್ಯಾರಿಸ್ ಪರವಾಗಿ ಪ್ರಚಾರ ಮಾಡಲು ಅನಿವಾಸಿ ಭಾರತೀಯರು, ಅಮೆರಿಕದಲ್ಲಿರುವ ಕನ್ನಡಿಗರ ಮತ ಸೆಳೆಯಲು ಡಿ.ಕೆ ಶಿವಕುಮಾರ್ ಅಮೆರಿಕಾಗೆ ತೆರಳಿದ್ದಾರೆ” ಎಂದು ಉಲ್ಲೇಖಿಸಿತ್ತು.

ಸೆಪ್ಟೆಂಬರ್ 8, 2024ರಂದು ರಿಪಬ್ಲಿಕ್ ಟಿವಿ ಇಂಗ್ಲಿಷ್‌ನ ವಿಡಿಯೋವೊಂದನ್ನು ಹಂಚಿಕೊಂಡಿದ್ದ ಬಲಪಂಥೀಯ ಎಕ್ಸ್ ಬಳಕೆದಾರ ರೌಶನ್ ಸಿನ್ಹಾ ಅಥವಾ ಮಿ.ಸಿನ್ಹಾ(@MrSinha_)”ಕಮಲಾ ಹ್ಯಾರಿಸ್ ಅವರು ಕರ್ನಾಟಕದ ಉಪ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರನ್ನು ಯುಎಸ್‌ಎಗೆ ಮತ್ತು ರಿಂಗ್-ಲೀಡರ್ ಒಬಾಮಾ ಅವರನ್ನು ಭೇಟಿ ಮಾಡಲು ಆಹ್ವಾನಿಸಿದ್ದಾರೆ. ಪಪ್ಪು ಈಗಾಗಲೇ ಅಮೆರಿಕಾದಲ್ಲಿದ್ದಾರೆ. ಬಾಂಗ್ಲಾದೇಶದ ನಿಯೋಜಿತ ಪ್ರಧಾನಿ ಎಂ.ಡಿ ಯೂನಸ್ ಕೂಡ ಒಬಾಮಾ ಶಾಲೆಯ ಉತ್ಪನ್ನ. ಇವರೆಲ್ಲ ಮೋದಿ ಸರ್ಕಾರವನ್ನು ಉರುಳಿಸಲು ಪ್ರಯತ್ನಗಳನ್ನು ವೇಗಗೊಳಿಸಿರುವಂತೆ ಕಾಣುತ್ತದೆ. ಭಾರತದಲ್ಲಿ ಕುಳಿತಿರುವ ಅವರ ಏಜೆಂಟ್‌ಗಳು ಕಳೆದ ಕೆಲವು ವಾರಗಳಲ್ಲಿ ಈಗಾಗಲೇ ಹಲವು ಮೋದಿ/ಭಾರತ ವಿರೋಧಿಗಳನ್ನು ಭೇಟಿಯಾಗಿದ್ದಾರೆ” ಎಂದು ಬರೆದುಕೊಂಡಿದ್ದರು.

ಸೆಪ್ಟೆಂಬರ್ 8,202ರಂದು ಪಬ್ಲಿಕ್ ಟಿವಿ ಕನ್ನಡ, ವಿಜಯ ಕರ್ನಾಟಕ ಸೇರಿದಂತೆ ಹಲವು ಸುದ್ದಿ ಸಂಸ್ಥೆಗಳು ಕಮಲಾ ಹ್ಯಾರಿಸ್ ಅವರು ಡಿ.ಕೆ ಶಿವಕುಮಾರ್‌ಗೆ ಅಮೆರಿಕಕ್ಕೆ ಆಹ್ವಾನ ನೀಡಿದ್ದಾರೆ ಎಂದು ಸುದ್ದಿ ಪ್ರಕಟಿಸಿತ್ತು.
ಹಾಗಾದರೆ, ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಕಮಲಾ ಹ್ಯಾರಿಸ್ ಅಮೆರಿಕಕ್ಕೆ ಕರೆಸಿಕೊಂಡಿರುವುದು ನಿಜಾನಾ? ರಾಹುಲ್ ಗಾಂಧಿ-ಡಿಕೆಶಿ ಒಟ್ಟಿಗೆ ಅಮೆರಿಕಕ್ಕೆ ಹೋದ್ರಾ? ಎಂದು ನೋಡೊಣ.
ಫ್ಯಾಕ್ಟ್‌ಚೆಕ್ : ಸುದ್ದಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ಸುದ್ದಿಗೆ ಸಂಬಂಧಪಟ್ಟಂತೆ ಸ್ವತಃ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ಸೆಪ್ಟೆಂಬರ್ 8, 2024ರಂದು ಎಕ್ಸ್ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.
“ನಾನು ಕೈಗೊಳ್ಳುತ್ತಿರುವ ಅಮೆರಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ನನ್ನ ಸ್ಪಷ್ಟನೆ ಇದು. ಈ ಪ್ರವಾಸವು ವೈಯಕ್ತಿಕವಾಗಿದ್ದು, ಯಾವುದೇ ರಾಜಕೀಯ ಉದ್ದೇಶವನ್ನು ಹೊಂದಿಲ್ಲ. ಅಥವಾ ನನಗೆ ಯಾವುದೇ ರಾಜಕೀಯ ಆಹ್ವಾನಗಳೂ ಬಂದಿಲ್ಲ. ಸಾರ್ವಜನಿಕರು ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೊಡದಂತೆ ವಿನಂತಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ನಾನು ಕೈಗೊಳ್ಳುತ್ತಿರುವ ಅಮೆರಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ನನ್ನ ಸ್ಪಷ್ಟನೆ ಇದು. ಈ ಪ್ರವಾಸವು ವೈಯಕ್ತಿಕವಾಗಿದ್ದು, ಯಾವುದೇ ರಾಜಕೀಯ ಉದ್ದೇಶವನ್ನು ಹೊಂದಿಲ್ಲ. ಅಥವಾ ನನಗೆ ಯಾವುದೇ ರಾಜಕೀಯ ಆಹ್ವಾನಗಳೂ ಬಂದಿಲ್ಲ.
ಸಾರ್ವಜನಿಕರು ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೊಡದಂತೆ ವಿನಂತಿಸುತ್ತೇನೆ.
— DK Shivakumar (@DKShivakumar) September 8, 2024
ಇದರ ಜೊತೆಗೆ ಕರ್ನಾಟಕ ಕಾಂಗ್ರೆಸ್ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದು, ಅದರಲ್ಲಿ “ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ವೈಯಕ್ತಿಕ ಕೆಲಸಗಳ ನಿಮಿತ್ತ ಅಮೆರಿಕಾದ ವಾಷಿಂಗ್ಟನ್ ನಗರಕ್ಕೆ ಪ್ರವಾಸ ಕೈಗೊಂಡಿದ್ದಾರೆಯೇ ಹೊರತು, ಯಾವುದೇ ರಾಜಕೀಯ ಕಾರಣಗಳಿಗಲ್ಲ. ಕೆಲ ಮಾಧ್ಯಮಗಳಲ್ಲಿ ಉಹಾಪೋಹದ ವರದಿಗಳು ಪ್ರಸಾರವಾಗುತ್ತಿದ್ದು, ಆ ವರದಿಗಳು ಸತ್ಯಕ್ಕೆ ದೂರವಾಗಿದೆ” ಎಂದು ಸ್ಪಷ್ಟಪಡಿಸಿತ್ತು.
ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ @DKShivakumar ಅವರು ವಯಕ್ತಿಕ ಕೆಲಸಗಳ ನಿಮಿತ್ತ ಅಮೇರಿಕಾದ ವಾಷಿಂಗ್ಟನ್ ನಗರಕ್ಕೆ ಪ್ರವಾಸ ಕೈಗೊಂಡಿದ್ದಾರೆಯೇ ಹೊರತು ಯಾವುದೇ ರಾಜಕೀಯ ಕಾರಣಗಳಿಗಲ್ಲ.
ಕೆಲ ಮಾಧ್ಯಮಗಳಲ್ಲಿ ಉಹಾಪೋಹದ ವರದಿಗಳು ಪ್ರಸಾರವಾಗುತ್ತಿದ್ದು, ಆ ವರದಿಗಳು ಸತ್ಯಕ್ಕೆ ದೂರವಾಗಿದೆ. pic.twitter.com/P7mNARkAuy
— Karnataka Congress (@INCKarnataka) September 8, 2024
ಸ್ವತಃ ಡಿ.ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷ ಡಿಕೆಶಿ ಅವರನ್ನು ಕಮಲಾ ಹ್ಯಾರಿಸ್ ಅವರು ಕರೆಸಿಕೊಂಡಿದ್ದಾರೆ ಎಂಬ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಆದ್ದರಿಂದ ಅವು ಸುಳ್ಳು ಎಂದು ಹೇಳಬಹುದು.
ಇದನ್ನೂ ಓದಿ : FACT CHECK : ಸರ್ದಾರ್ ಪಟೇಲರ ‘ಏಕತಾ ಪ್ರತಿಮೆ’ ಬಿರುಕು ಬಿಟ್ಟಿದೆಯಾ?


