“ಜಗದೀಶ್ ಶೆಟ್ಟರ್ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಲಂಡನ್ ನಗರದ ಥೇಮ್ಸ್ ನದಿ ತಟದಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪನೆಗೆ ಅನುದಾನ ನೀಡಿದ್ದರು. ಆದರೆ, ಶೆಟ್ಟರ್ ಬಳಿಕ ಸಿಎಂ ಆದ ಸಿದ್ದರಾಮಯ್ಯ ಅವರು ಆ ಅನುದಾನವನ್ನು ಕಡಿತಗೊಳಿಸಿದ್ದರು. ಲಂಡನ್‌ನಲ್ಲಿ ಬಸವಣ್ಣ ಪ್ರತಿಮೆ ನಿರ್ಮಾಣದ ಉಸ್ತುವಾರಿ ತೆಗೆದುಕೊಂಡಿದ್ದ ಡಾ. ನೀರಜ್ ಪಾಟೀಲ್ ಹಲವು ಭಾರೀ ಆಹ್ವಾನಿಸಿದ್ದರೂ, ಸಿದ್ದರಾಮಯ್ಯ ಪ್ರತಿಮೆ ಉದ್ಘಾಟನೆಗೆ ಹೋಗಿರಲಿಲ್ಲ. ಕೊನೆಗೆ ನೀರಜ್ ಪಾಟೀಲ್ ಅವರು ಪ್ರಧಾನಿ ಮೋದಿಯಿಂದ ಪ್ರತಿಮೆ ಉದ್ಘಾಟಿಸಿದ್ದರು. ಇದೆಲ್ಲಾ ಆದ ಬಳಿಕ ಲಂಡನ್‌ಗೆ ತೆರಳಿದ್ದ ಸಿದ್ದರಾಮಯ್ಯ ಅವರು ಒಂದು ದಿನ ರಾತ್ರಿ ಹೊತ್ತು ಬಸನವಣ್ಣ ಪ್ರತಿಮೆ ಬಳಿ ತೆರಳಿ ಫೋಟೋ ತೆಗೆಸಿಕೊಂಡು ಪೋಸ್ ಕೊಟ್ಟಿದ್ದಾರೆ. ಸಿದ್ದರಾಮಯ್ಯನವರು ಬಸವಣ್ಣ ಮತ್ತು ಅವರ ಅನುಯಾಯಿಗಳ ವಿರೋಧಿ” ಎಂದು ಆರೋಪಿಸಿರುವ ವಿಡಿಯೋವೊಂದು ವೈರಲ್ ಆಗಿದೆ.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಇದು 2018ರ ವಿಷಯ ಎಂದು ಗೊತ್ತಾಗಿದೆ. 2018ರಲ್ಲಿ ಸಿದ್ದರಾಮಯ್ಯನವರು ಲಂಡನ್‌ಗೆ ತೆರಳಿದ್ದ ವೇಳೆ ವ ಬಸವಣ್ಣ ಪ್ರತಿಮೆ ಮುಂದೆ ನಿಂತು ಫೋಟೋಈ ತೆಗೆಸಿಕೊಂಡಿದ್ದರು. ಅದನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು “ಲಂಡನ್‌ನ ಜೇಮ್ಸ್ ಪಾರ್ಕ್‌ನಲ್ಲಿರುವ ಅಣ್ಣ ಬಸವಣ್ಣನವರ ಪುತ್ಥಳಿ ನೋಡಿ ಕಣ್ತುಂಬಿ ಬಂತು. ನಿಜವಾದ ವಿಶ್ವಗುರು ನಮ್ಮ ಬಸವಣ್ಣ” ಎಂದು ಬರೆದುಕೊಂಡಿದ್ದರು.

ಸಿದ್ದರಾಮಯ್ಯನವರು ಫೋಟೋ ತೆಗೆಸಿಕೊಂಡಿದ್ದ ಬಸವಣ್ಣ ಪ್ರತಿಮೆಯ ನಿರ್ಮಾಣದ ಉಸ್ತುವಾರಿಯನ್ನು ಕರ್ನಾಟಕದ ಕಲಬುರಗಿ ಮೂಲದ ಅಂದಿನ ಲಂಡನ್ ಮೇಯರ್ ಡಾ. ನೀರಜ್ ಪಾಟೀಲ್ ವಹಿಸಿದ್ದರು. ಟಿವಿ ವಾಹಿನಿಯೊಂದರ ಜೊತೆ ಮಾತನಾಡಿದ್ದ ಈ ನೀರಜ್ ಪಾಟೀಲ್, ಸಿದ್ದರಾಮಯ್ಯ ವಿರುದ್ದ ಹಲವು ಆರೋಪಗಳನ್ನು ಮಾಡಿದ್ದರು. ಆ ಆರೋಪಗಳನ್ನು ಆಧರಿಸಿ ವೈರಲ್ ವಿಡಿಯೋ ತಯಾರಿಸಲಾಗಿದೆ.
ಟಿವಿ ವಾಹಿನಿ ಜೊತೆ ಮಾತನಾಡಿದ್ದ ನೀರಜ್ ಪಾಟೀಲ್, “ಸಿದ್ದರಾಮಯ್ಯನವರು ಬಸವಣ್ಣ ಪ್ರತಿಮೆ ನಿರ್ಮಾಣಕ್ಕೆ ಜಗದೀಶ್ ಶೆಟ್ಟರ್ ನೀಡಿದ್ದ ಅನುದಾನವನ್ನು ಕಡಿತಗೊಳಿಸಿದ್ದರು. ಇದರಿಂದ ನಾವು ತುಂಬಾ ಕಷ್ಟಪಡುವಂತಾಯಿತು. ಅನುದಾನ ಕೋರಿ ನಾವು ಸಿದ್ದರಾಮಯ್ಯ ಅವರನ್ನು ಭೇಟಿಯಾದಾಗ, “ಲಂಡನ್‌ನಲ್ಲಿ ಯಾರಿಗೆ ಬಸವಣ್ಣ ಪ್ರತಿಮೆ? ಅಲ್ಲಿ ಯಾರಿಗೆ ಬಸವಣ್ಣ ಗೊತ್ತು?” ಎಂದು ಉಡಾಫೆಯಾಗಿ ಮಾತನಾಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಮೆ ಉದ್ಘಾಟನೆಗೆ ಬರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆ ಕಾರ್ಯಕ್ರಮಕ್ಕೆ ಬರಲು ನಿರಾಕರಿಸಿದ್ದರು” ಎಂದು ಆರೋಪಿಸಿದ್ದರು.

ಈ ಆರೋಪಗಳಿಗೆ ಸಿಎಂ ಸಿದ್ದರಾಮಯ್ಯ ಕೂಡ ತಿರುಗೇಟು ನೀಡಿದ್ದರು. “ನಾನು ಬಸವಣ್ಣನವರ ಪ್ರತಿಮೆ ಸ್ಥಾಪನೆಗೆ ಯಾವುದೇ ಅನುದಾನ ನೀಡಿಲ್ಲ ಮತ್ತು ಖಡಿತಗೊಳಿಸಿಲ್ಲ. ಪ್ರಧಾನಿ ಮೋದಿಯವರು ಪ್ರತಿಮೆ ಉದ್ಘಾಟನೆಗೆ ಬರುತ್ತಾರೆ ಎಂಬ ಕಾರಣಕ್ಕೆ ನಾನು ಹೋಗಿರಲಿಲ್ಲ ಎಂಬುವುದು ಸುಳ್ಳು. ಆ ಸಂದರ್ಭದಲ್ಲಿ ಬೇರೆ ಕಾರ್ಯಕ್ರಮಗಳು ನಿಗದಿಯಾಗಿದ್ದ ಕಾರಣ ನಾನು ಪ್ರತಿಮೆ ಉದ್ಘಾಟನೆಗೆ ಹೋಗಲಾಗಿಲ್ಲ. ಆ ಬಳಿಕ ಲಂಡನ್‌ಗೆ ಹೋಗಿದ್ದಾಗ ಬಸವಣ್ಣ ಪ್ರತಿಮೆ ಕಂಡು ಫೋಟೋ ತೆಗೆಸಿಕೊಂಡಿದ್ದೆ” ಎಂದಿದ್ದರು.

ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದಂತೆ ಡಾ. ನೀರಜ್ ಪಾಟೀಲ್ ಮಾಡಿರುವ ಆರೋಪಗಳು ಸುಳ್ಳು. ಅಲ್ಲದೆ, ನಾವು ಪರಿಶೀಲನೆ ನಡೆಸಿದಂತೆ ಸಿಎಂ ಸಿದ್ದರಾಮಯ್ಯ ಬಸವಣ್ಣ ಪ್ರತಿಮೆಗೆ ನೀಡಿದ್ದ ಅನುದಾನ ಕಡಿತಗೊಳಿಸಿದ್ದಾರೆ ಎಂದು ನೀರಜ್ ಪಾಟೀಲ್ ಹೊರತು ಇತರ ಯಾರೂ ಆರೋಪ ಮಾಡಿಲ್ಲ. 2018ರ ಬಳಿಕ ಬಂದ ಕಾಂಗ್ರೆಸ್- ಬಿಜೆಪಿ ಸರ್ಕಾರಗಳು ಕೂಡ ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನೀರಜ್ ಪಾಟೀಲ್ ಆರೋಪಕ್ಕೆ ಪೂರಕವಾದ ಯಾವುದೇ ಸಾಕ್ಷ್ಯಗಳು ಕೂಡ ದೊರೆತಿಲ್ಲ.
ಇದನ್ನೂ ಓದಿ : FACT CHECK : ಹತ್ಯೆಯಾದ ಉಗ್ರರ ಕುಟುಂಬಗಳಿಗೆ ಕಾಂಗ್ರೆಸ್ ಪರಿಹಾರ ನೀಡಲಿದೆ ಎಂಬ ಪೋಸ್ಟ್ ದಿಕ್ಕು ತಪ್ಪಿಸುವಂತಿದೆ


