ಭಾರತದ ಪ್ರಥಮ ಉಪ ಪ್ರಧಾನಿ ಹಾಗೂ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ‘ಏಕತಾ ಪ್ರತಿಮೆ'(Statue of Unity)ಯನ್ನು ಗುಜರಾತ್‌ನ ಕೇವಡಿಯಾ ಬಳಿ ಸ್ಥಾಪಿಸಲಾಗಿದೆ.
ಸುಮಾರು 562 ರಾಜ ಪ್ರಭುತ್ವಗಳಲ್ಲಿ ಹಂಚಿಹೋಗಿದ್ದ ಭಾರತವನ್ನು ಸ್ವಾತಂತ್ರ್ಯದ ಬಳಿಕ ಒಂದೇ ಒಕ್ಕೂಟದಡಿ ತಂದ ಕೀರ್ತಿ ಸರ್ದಾರ್ ಪಟೇಲರಿಗೆ ಸಲ್ಲುತ್ತದೆ. ಅಂತಹ ಪಟೇಲರ 143ನೇ ಜನ್ಮ ದಿನವಾದ ಅಕ್ಟೋಬರ್ 31, 2018ರಂದು ಪ್ರಧಾನಿ ನರೇಂದ್ರ ಮೋದಿಯವರು ‘ಏಕತಾ ಪ್ರತಿಮೆ’ಯನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಇದೀಗ ಏಕತಾ ಪ್ರತಿಮೆ ಬಿರುಕು ಬಿಟ್ಟಿರುವಂತೆ ಕಾಣುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘RaGaForIndia'(@RaGa4India) ಎಂಬ ಎಕ್ಸ್ ಖಾತೆಯಲ್ಲಿ ಇತ್ತೀಚೆಗೆ ವೈರಲ್ ಪೋಟೋ ಹಂಚಿಕೊಂಡು “ಇದು ಯಾವ ಸಂದರ್ಭದಲ್ಲಿ ಬೇಕಾದರೂ ಕುಸಿಯಬಹುದು. ಬಿರುಕು ಬಿಡಲು ಶುರುವಾಗಿದೆ” ಎಂದು ಹಿಂದಿಯಲ್ಲಿ ಭಾಷೆಯಲ್ಲಿ ಬರೆದುಕೊಳ್ಳಲಾಗಿತ್ತು. ಪ್ರಸ್ತುತ ಆ ಪೋಸ್ಟ್ ಡಿಲಿಟ್ ಮಾಡಲಾಗಿದೆ.

ಫ್ಯಾಕ್ಟ್‌ಚೆಕ್ : ವೈರಲ್ ಫೋಟೋ ಕುರಿತು ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಅದು, 2018ರಲ್ಲಿ ಏಕತಾ ಪ್ರತಿಮೆ ಉದ್ಘಾಟನೆಗೂ ವಾರದ ಮುನ್ನ ತೆಗೆದ ಹಳೆಯ ಫೋಟೋ ಎಂದು ಗೊತ್ತಾಗಿದೆ.
ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ನಾವು ವೈರಲ್ ಫೋಟೋ ಹಾಕಿ ಸರ್ಚ್ ಮಾಡಿದಾಗ ಲಾಸ್ ಏಂಜಲ್ಸ್ ಟೈಮ್ಸ್ ಮತ್ತು ದಿ ವಾಶಿಂಗ್ಟನ್ ಪೋಸ್ಟ್ ಸುದ್ದಿ ಸಂಸ್ಥೆಗಳು ಆ ಫೋಟೋ ಬಳಸಿಕೊಂಡು 2018ರಲ್ಲಿ ಸುದ್ದಿ ಪ್ರಕಟಿಸಿರುವುದು ಕಂಡು ಬಂದಿದೆ. ಎರಡೂ ಸುದ್ದಿ ವೆಬ್‌ಸೈಟ್‌ಗಳು ಆ ಫೋಟೋ 2018ರಲ್ಲಿ ಪ್ರತಿಮೆ ಉದ್ಘಾಟನಗೂ ವಾರದ ಮುನ್ನ ತೆಗೆದಿರುವಂತದ್ದು ಎಂದಿದೆ.


ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆ ಅಧೀನದಲ್ಲಿ ಕಾರ್ಯಾಚರಿಸುವ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ (ಪಿಐಬಿ) ಸೆಪ್ಟೆಂಬರ್ 9, 2024ರಂದು ಎಕ್ಸ್ ಪೋಸ್ಟ್ ಮೂಲಕ ವೈರಲ್ ಫೋಟೋ 2018ರಲ್ಲಿ ಪ್ರತಿಮೆ ನಿರ್ಮಾಣದ ವೇಳೆ ತೆಗೆದಿರುವಂತದ್ದು ಎಂದು ಖಚಿತಪಡಿಸಿದೆ.

ಒಟ್ಟಿನಲ್ಲಿ, ಸರ್ದಾರ್ ಪಟೇಲರ ಏಕತಾ ಪ್ರತಿಮೆ ಬಿರುಕು ಬಿಟ್ಟಿದೆ ಎಂದು ವೈರಲ್ ಆಗುತ್ತಿರುವ ಫೋಟೋ ಈಗಿನದ್ದಲ್ಲ, ಅದು 2018ರಲ್ಲಿ ಪ್ರತಿಮೆ ಉದ್ಘಾಟನೆಗೂ ಮುನ್ನ ತೆಗೆದಿರುವಂತದ್ದು ಎಂಬುವುದನ್ನು ಅಧಿಕೃತ ಮೂಲಗಳು ಖಚಿತಪಡಿಸಿವೆ.
ಇದನ್ನೂ ಓದಿ : FACT CHECK : ಪತ್ರಕರ್ತರ ಪ್ರಶ್ನೆಗೆ ಹೆದರಿ ಅಖಿಲೇಶ್ ಯಾದವ್ ಕಾಂಪೌಂಡ್ ಹಾರಿ ಓಡಿ ಹೋದ್ರಾ?


