ಆರ್ಎಸ್ಎಸ್ ಶತಮಾನೋತ್ಸವ ಪ್ರಯುಕ್ತ ನೆದರ್‌ಲ್ಯಾಂಡ್ ಸರ್ಕಾರ ಅಂಚೆ ಚೀಟಿ ಬಿಡುಗಡೆ ಮಾಡಿ ಗೌರವಿಸಿದೆ ಎಂದು ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗ್ತಿದೆ.
ಆರ್‌ಎಸ್‌ಎಸ್ ನಿಸ್ವಾರ್ಥ ಸೇವೆಯ 100ನೇ ವರ್ಷಾಚರಣೆ ಸ್ಮರಣಾರ್ಥ ನೆದರ್‌ಲ್ಯಾಂಡ್ ಅಂಚೆ ಚೀಟಿ ಬಿಡುಗಡೆ ಮಾಡಿದೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಎರಡು ಅಂಚೆ ಚೀಟಿಗಳ ಫೋಟೋಗಳು ಅದರಲ್ಲಿವೆ. ಬೇಕಾದವರು ಸಂಪರ್ಕಿಸಿ ಎಂದು ಈ-ಮೇಲ್ ವಿಳಾಸ ಕೊಡಲಾಗಿದೆ.
ಬಿಜೆಪಿ ರಾಷ್ಟ್ರೀಯ ಘಟಕದ ಅಧಿಕೃತ ‘ಎಕ್ಸ್’ ಹ್ಯಾಂಡಲ್‌ನಲ್ಲಿ (@BJP4India) ಅಕ್ಟೋಬರ್ 10 ರಂದು ಮೇಲೆ ತಿಳಿಸಿದ ಪೋಸ್ಟರ್ ಅನ್ನು ಹಂಚಿಕೊಳ್ಳಲಾಗಿತ್ತು. “ಆರ್‌ಎಸ್‌ಎಸ್‌ನ 100 ವರ್ಷಗಳನ್ನು ಗುರುತಿಸಲು ನೆದರ್‌ಲ್ಯಾಂಡ್ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದೆ” ಎಂದು ಪೋಸ್ಟರ್ ಜೊತೆ ಬರೆಯಲಾಗಿತ್ತು.
The Netherlands has released a commemorative stamp to mark 100 years of the Rashtriya Swayamsevak Sangh (RSS).
A significant gesture of international recognition for one of India’s most influential social organisations. #RSS100Years pic.twitter.com/PtTgbMzxiB
— BJP (@BJP4India) October 10, 2025
ಈ ಹಿಂದೆ ಹಲವಾರು ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಹಂಚಿಕೊಂಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಬಿಜೆಪಿ ಹ್ಯಾಂಡಲ್‌ನಲ್ಲಿ ಹಾಕಿದ್ದ ಅದೇ ಹೇಳಿಕೆಯೊಂದಿಗೆ ಅಕ್ಟೋಬರ್ 10ರಂದು ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ (@amitmalviya) ವೈರಲ್ ಪೋಸ್ಟರ್ ಹಂಚಿಕೊಂಡಿದ್ದರು.
The Netherlands has released a commemorative stamp to mark 100 years of the Rashtriya Swayamsevak Sangh (RSS). A significant gesture of international recognition for one of India’s most influential social organisations. pic.twitter.com/jnRnGePY3f
— Amit Malviya (@amitmalviya) October 10, 2025
ಅಕ್ಟೋಬರ್ 10ರಂದು ಟೈಮ್ಸ್ ನೌ ಸುದ್ದಿವಾಹಿನಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕುರಿತ ವಿಡಿಯೋ ವರದಿಯನ್ನು ಪ್ರಕಟಿಸಿತ್ತು. ಅದರಲ್ಲಿ “ನೆದರ್‌ಲ್ಯಾಂಡ್ ಆರ್‌ಎಸ್‌ಎಸ್‌ನ 100 ವರ್ಷಗಳನ್ನು ಗುರುತಿಸಲು ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ” ಎಂದು ಹೇಳಿತ್ತು.
ಪ್ರೀತಿ ಗಾಂಧಿ (@MrsGandhi, ಪ್ರಕಾಶ್ ಜಾವ್ಡೇಕರ್ (@PrakashJavdekar) ಮತ್ತು ರಮೇಶ್ ನಾಯ್ಡು ನಗೋತು (@RNagothu) ಮುಂತಾದ ಹಲವಾರು ಇತರ ಎಕ್ಸ್ ಬಳಕೆದಾರರು ಮತ್ತು ಬಿಜೆಪಿ ನಾಯಕರು ನೆದರ್‌ಲ್ಯಾಂಡ್ ಸರ್ಕಾರ ಆರ್‌ಎಸ್‌ಎಸ್‌ನ ಕೆಲಸವನ್ನು ಗುರುತಿಸಿ ಅಂಚೆ ಚೀಟಿ ಬಿಡುಗಡೆ ಮಾಡಿದೆ ಎಂದು ಹೇಳಿಕೊಳ್ಳುವ ವೈರಲ್ ಗ್ರಾಫಿಕ್ ಅನ್ನು ಹಂಚಿಕೊಂಡಿದ್ದರು.

ಫ್ಯಾಕ್ಟ್‌ಚೆಕ್ : ಬಿಜೆಪಿ ಮತ್ತು ಅದರ ನಾಯಕರು ಹಂಚಿಕೊಂಡಿರುವ ಪೋಸ್ಟರ್‌ನ ಸತ್ಯಾಸತ್ಯತೆಯನ್ನು ನಾವು ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ಆರ್‌ಎಸ್‌ಎಸ್‌ನ ಶತಮಾನೋತ್ಸವ ಪ್ರಯುಕ್ತ ನೆದರ್‌ಲ್ಯಾಂಡ್ ಸರ್ಕಾರ ಅಧಿಕೃತವಾಗಿ ಯಾವುದೇ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿಲ್ಲ ಎಂದು ಗೊತ್ತಾಗಿದೆ.
ಈ ಬಗ್ಗೆ ತಿಳಿಯಲು ನಾವು ಮೊದಲು ಈ ಕುರಿತ ಮುಖ್ಯವಾಹಿನಿ ಮಾಧ್ಯಮ ಸುದ್ದಿಗಳನ್ನು ಹುಡುಕಾಡಿದ್ದೇವೆ. ಈ ವೇಳೆ ಯಾವುದೇ ಅಧಿಕೃತ ವರದಿಗಳು ನಮಗೆ ಲಭ್ಯವಾಗಿಲ್ಲ.
ಬಿಜೆಪಿ ನಾಯಕರು ಹಂಚಿಕೊಂಡಿರುವ ಪೋಸ್ಟರ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದರಲ್ಲಿ “Stichting Hindu Swayamsevak Sangh” ಎಂಬ ಬ್ಯಾಂಕ್ ಖಾತೆಯ ಹೆಸರು ಉಲ್ಲೇಖಿಸಿರುದು ನಮ್ಮ ಗಮನಕ್ಕೆ ಬಂದಿದೆ. ಹಿಂದೂ ಸ್ವಯಂಸೇವಕ ಸಂಘ (HSS) ಆರ್‌ಎಸ್‌ಎಸ್‌ನ ಅಂತಾರಾಷ್ಟ್ರೀಯ ವಿಭಾಗವಾಗಿದ್ದು, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (ಯುಎಸ್‌ಎ) ಯುನೈಟೆಡ್ ಕಿಂಗ್‌ಡಮ್ (ಯುಕೆ) ನೆದರ್‌ಲ್ಯಾಂಡ್ಸ್ ಮುಂತಾದ ಹಲವಾರು ದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ.
‘Stichting’ಎಂಬ ಪದವು ಡಚ್ ಭಾಷೆಯಲ್ಲಿ ‘ಸ್ಥಾಪನೆ/ಪ್ರತಿಷ್ಠಾನ’ ಎಂಬ ಅರ್ಥವನ್ನು ನೀಡುತ್ತದೆ. ಈಗಾಗಲೇ ಹೇಳಿದಂತೆ ಪೋಸ್ಟರ್‌ನಲ್ಲಿ ಬಾಕ್ಸ್ ಒಳಗಡೆ ಅಂಚೆ ಚೀಟಿಯನ್ನು ಹೇಗೆ ಆರ್ಡರ್ ಮಾಡುವುದು ಮತ್ತು ಶಿಪ್ಪಿಂಗ್ ಶುಲ್ಕದ ವಿವರಗಳನ್ನು [email protected] ಎಂಬ ಈ-ಮೇಲ್ ಐಡಿಯೊಂದಿಗೆ ನೀಡಲಾಗಿದೆ.

ನಮ್ಮ ಪರಿಶೀಲನೆಯಲ್ಲಿ ಕಂಡು ಬಂದ ಮಾಹಿತಿಯನ್ನು ಆಧರಿಸಿ, ಸಂಬಂಧಿತ ಕೀವರ್ಡ್‌ಗಳ ಮೂಲಕ ಹೆಚ್ಚಿನ ಮಾಹಿತಿ ಹುಡುಕಿದಾಗ ಆರ್‌ಎಸ್‌ಎಸ್‌ನ ಮುಖವಾಣಿ ವಾರಪತ್ರಿಕೆ ‘ಆರ್ಗನೈಸರ್’ನ ವರದಿ ಲಭ್ಯವಾಗಿದೆ. ‘ಆರ್‌ಎಸ್‌ಎಸ್ 100ನೇ ವರ್ಷದಲ್ಲಿ: ಹಿಂದೂ ಸ್ವಯಂಸೇವಕ ಸಂಘ ನೆದರ್‌ಲ್ಯಾಂಡ್ ಸಂಘದ ಶತಮಾನೋತ್ಸವವನ್ನು ಗೌರವಿಸಲು ವಿಶೇಷ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ” ಎಂದು ವರದಿಗೆ ಶೀರ್ಷಿಕೆ ಕೊಡಲಾಗಿತ್ತು ಮತ್ತು ವೈರಲ್ ಪೋಸ್ಟರ್‌ನಲ್ಲಿರುವ ಎರಡು ಅಂಚೆ ಚೀಟಿಗಳು ವರದಿಯಲ್ಲಿ ಇತ್ತು.
“ಈ ಸ್ಮರಣೀಯ ಮೈಲಿಗಲ್ಲನ್ನು ಗೌರವಿಸಲು, ಹಿಂದೂ ಸ್ವಯಂಸೇವಕ ಸಂಘ ನೆದರ್‌ಲ್ಯಾಂಡ್ (HSS NL) ವಿಶ್ವ ಅಂಚೆ ದಿನದಂದು ಹೆಮ್ಮೆಯಿಂದ ವಿಶೇಷ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ- ಇದು ವಿಶ್ವದ ಸಾರ್ವತ್ರಿಕ ಧರ್ಮದ ನೂರು ವರ್ಷಗಳ ಏಕತೆ, ಶಿಸ್ತು ಮತ್ತು ಭಕ್ತಿಯ ಸಂಕೇತವಾಗಿದೆ” ಎಂದು ವರದಿ ಉಲ್ಲೇಖಿಸಿತ್ತು.

ಹೆಚ್ಚುವರಿಯಾಗಿ, ‘PostNl’ಎಂಬ ನೆದರ್‌ಲ್ಯಾಂಡ್ಸ್ ಅಂಚೆ ಸೇವೆಯು ಯಾವುದೇ ಚಿತ್ರವನ್ನು ಅಪ್‌ಲೋಡ್ ಮಾಡುವ ಮೂಲಕ ವೈಯಕ್ತಿಕ ಅಂಚೆ ಚೀಟಿಗಳನ್ನು ರಚಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ನಾವು ಕಂಡುಕೊಂಡಿದ್ದೇವೆ.

ಆದ್ದರಿಂದ, ಆರ್‌ಎಸ್‌ಎಸ್‌ನ ಶತಮಾನೋತ್ಸವ ಗೌರವಿಸಲು ನೆದರ್‌ಲ್ಯಾಂಡ್ ಸರ್ಕಾರ ಅಧಿಕೃತವಾಗಿ ಯಾವುದೇ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿಲ್ಲ. ಬದಲಾಗಿ, ‘ಹಿಂದೂ ಸ್ವಯಂಸೇವಕ ಸಂಘ ನೆದರ್‌ಲ್ಯಾಂಡ್’ ಸಾರ್ವಜನಿಕರಿಗೆ ಇರುವ ಅವಕಾಶವನ್ನು ಬಳಸಿಕೊಂಡು ಸ್ವತಃ ಆರ್‌ಎಸ್‌ಎಸ್ ಅಂಚೆ ಚೀಟಿಯನ್ನು ರಚಿಸಿದೆ ಮತ್ತು ಅದನ್ನು ಮಾರಾಟ ಮಾಡುತ್ತಿದೆ ಎಂಬುದು ನಮ್ಮ ಪರಿಶೀಲನೆಯಲ್ಲಿ ಸ್ಪಷ್ಟವಾಗಿದೆ.
ವಸಾಹತುಶಾಹಿಗಿಂತ ‘ರಾಜಕೀಯ ಇಸ್ಲಾಂ’ ಸನಾತನಕ್ಕೆ ದೊಡ್ಡ ಹೊಡೆತ ನೀಡಿದೆ: ಯೋಗಿ ಆದಿತ್ಯನಾಥ್


