ತಮ್ಮ ಮೇಲಿನ ದಾಳಿ ವಿರೋಧಿಸಿ ಬಾಂಗ್ಲಾದೇಶದ ಹಿಂದೂಗಳು ಬೀದಿಗಿಳಿದಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವಿಡಿಯೋದಲ್ಲಿ ಕೇಸರಿ ಬಣ್ಣದ ಟೀ ಶರ್ಟ್ ತೊಟ್ಟು ಸಾವಿರಾರು ಜನರು ಮೆರವಣಿಗೆ ನಡೆಸುತ್ತಿರುವುದನ್ನು ಕಾಣಬಹುದು. ಅಲ್ಲದೆ, ಮೆರವಣಿಗೆಯ ಮುಂಬದಿಯಲ್ಲಿ ವಾಹನವೊಂದು ಇದ್ದು, ಅದರಲ್ಲಿರುವ ವ್ಯಕ್ತಿ ಬಾಂಗ್ಲಾದೇಶದ ಧ್ವಜ ಹಿಡಿದಿರುವುದನ್ನು ನೋಡಬಹುದು.
ಅಗಸ್ತ್ಯ ಟೈಮ್ಸ್ ಎಂಬ ಫೇಸ್‌ಬುಕ್ ಖಾತೆಯಲ್ಲಿ ಆಗಸ್ಟ್ 11,2024ರಂದು ಈ ವಿಡಿಯೋ ಹಂಚಿಕೊಂಡು “#ಢಾಕಾದ ಬೀದಿಗಳಲ್ಲಿ ಕೇಸರಿ ಪ್ರವಾಹ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ವಿರೋಧಿಸಿ ಬಾಂಗ್ಲಾದೇಶದ ಹಿಂದೂಗಳು ಬೀದಿಗಿಳಿದಿದ್ದಾರೆ” ಎಂದು ಬರೆದುಕೊಳ್ಳಲಾಗಿದೆ.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ವಿಡಿಯೋ ಸ್ಕ್ರೀನ್ ಶಾಟ್ ಹಾಕಿ ಸರ್ಚ್ ಮಾಡಿದಾಗ ಬಾಂಗ್ಲಾದೇಶದ ಸಂಸದ ‘ಫಾಹಿಮ್ ಗುಲಂದಝ್ ಬಾಬೆಲ್‘ ಅವರ ಫೇಸ್‌ಬುಕ್ ಖಾತೆಯಲ್ಲಿ ಸೆಪ್ಟೆಂಬರ್ 1, 2023ರಂದು ವಿಡಿಯೋ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ.

ವಿಡಿಯೋ ಜೊತೆಗೆ ” ಬಾಂಗ್ಲಾದೇಶದ ಛಾತ್ರಾ ಲೀಗ್‌ನ ಗಫರ್‌ಗಾಂವ್ ಉಪ ಜಿಲ್ಲೆ ಮತ್ತು ಮುನ್ಸಿಪಲ್ ಘಟಕಗಳು ಜಂಟಿಯಾಗಿ ರಾಷ್ಟ್ರಪಿತ ಬಂಗಬಂಧು ಶೇಖ್ ಮಜೀಬುರಹ್ಮಾನ್ ಮತ್ತು ಬಂಗಮಾತಾ ಶೇಖ್ ಫಝೀಲತ್ತುನಿಶಾ ಮುಜೀಬ್ ಸ್ಮರಣಾರ್ಥ ರ್‍ಯಾಲಿ ಆಯೋಜಿಸಿತ್ತು ಎಂದು ಬರೆದುಕೊಂಡಿದ್ದರು.
ಪೋಸ್ಟ್ ಹಾಕಿರುವ ಫಾಹಿಮ್ ಗುಲಂದಝ್ ಬಾಬೆಲ್ ಅವರು ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷದ ಸಂಸದರಾಗಿದ್ದರು. ಬಾಂಗ್ಲಾದೇಶ ಛಾತ್ರಾ ಲೀಗ್ ಅವಾಮಿ ಲೀಗ್ ಪಕ್ಷದ ವಿದ್ಯಾರ್ಥಿ ಘಟಕವಾಗಿದೆ.
ಬಾಂಗ್ಲಾದೇಶದ ರಾಷ್ಟ್ರಪಿತ ಶೇಖ್ ಮಜೀಬುರಹ್ಮಾನ್ ಅವರು 4 ಜನವರಿ 1948ರಲ್ಲಿ ಛಾತ್ರಾ ಲೀಗ್ ಅನ್ನು ಸ್ಥಾಪಿಸಿದರು. 26 ಮಾರ್ಚ್ 1971ರಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯ ಹೊಂದುವವರೆಗೆ ಛಾತ್ರಾ ಲೀಗ್‌ನ ಹೆಸರು ‘ಈಸ್ಟ್ ಪಾಕಿಸ್ತಾನ್ ಸ್ಟೂಡೆಂಟ್ ಲೀಗ್’ ಎಂದಿತ್ತು. ಪ್ರಸ್ತುತ ಬಾಂಗ್ಲಾದೇಶ ಛಾತ್ರಾ ಲೀಗ್ ಎಂದಿದೆ.
ಒಟ್ಟಿನಲ್ಲಿ ಬಾಂಗ್ಲಾದೇಶದಲ್ಲಿ ಛಾತ್ರಾ ಲೀಗ್ ಕಾರ್ಯಕರ್ತರು ರಾಷ್ಟ್ರಪಿತ ಶೇಖ್ ಮಜೀಬುರಹ್ಮಾನ್ ಮತ್ತು ಅವರ ಪತ್ನಿಯ ಸ್ಮರಣಾರ್ಥ ಕೇಸರಿ ಟೀ ಶರ್ಟ್ ಧರಿಸಿ ನಡೆಸಿದ ರ್‍ಯಾಲಿಯ ವಿಡಿಯೋವನ್ನು ಬಾಂಗ್ಲಾದಲ್ಲಿ ಹಿಂದೂಗಳು ಬೀದಿಗಿಳಿದಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ : FACT CHECK : ‘ಭಾರತ್ ಮಾತಾ ಕಿ ಜೈ’ ಎಂದ ವೃದ್ದನಿಗೆ ಮುಸ್ಲಿಮರು ಥಳಿಸಿದ್ದಾರೆ ಎಂಬುವುದು ಸುಳ್ಳು


