“ನವ ಭಾರತ ವೇಗವಾಗಿ ಮುನ್ನೆಡೆಯುತ್ತಿದೆ. 2014ರಲ್ಲಿ ಭಾರತದಲ್ಲಿ ಇದ್ದದ್ದು ಕೇವಲ 300 ಸ್ಟಾರ್ಟ್ ಅಪ್‌ಗಳು, ಈಗ 1 ಲಕ್ಷಕ್ಕೂ ಅಧಿಕ ಸ್ಟಾರ್ಟ್ ಅಪ್‌ಗಳು ಭಾರತದಲ್ಲಿವೆ. ಅದಕ್ಕೆ ದೇಶದಲ್ಲಿ ಮೋದಿಜಿ ಇದ್ದರೆ ಎಲ್ಲವೂ ಸಾಧ್ಯ” ಎಂದು ಪೋಸ್ಟ್ ಕಾರ್ಟ್ ಕನ್ನಡ ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡಿದೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಕೂಡ, “2014ರಲ್ಲಿ ದೇಶದಲ್ಲಿ ಕೇವಲ 350 ಸ್ಟಾರ್ಟ್ ಅಪ್‌ಗಳಿದ್ದವು. ಮೋದಿ ಪ್ರಧಾನಿಯಾದ ನಂತರ 300 ಪಟ್ಟು ಬೆಳವಣಿಗೆಯಾಗಿದೆ” ಎಂದಿದ್ದರು. ಈ ಕುರಿತು ಎಕಾನಾಮಿಕ್ಸ್ ಟೈಮ್ಸ್ 28, ಏಪ್ರಿಲ್ 2024ರಂದು ವರದಿ ಮಾಡಿತ್ತು.

“ಮೋದಿ ಪ್ರಧಾನಿಯಾಗುವ ಮುನ್ನ ದೇಶದಲ್ಲಿ ಕೇವಲ 300 ಸ್ಟಾರ್ಟ್ ಅಪ್‌ಗಳಿದ್ದವು. ಈಗ ಒಂದು ಲಕ್ಷಕ್ಕೂ ಅಧಿಕ ಆಗಿವೆ” ಎಂದು ಯೂಟ್ಯೂಬರ್ ಗೌರವ್ ಚೌಧರಿ ಹೇಳಿದ್ದರು. ಈ ಕುರಿತು ಮೇ 20, 2024ರಂದು ಎಎನ್‌ಐ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದೆ.

ಫ್ಯಾಕ್ಟ್‌ಚೆಕ್ : 2014ಕ್ಕಿಂತ ಮುನ್ನ ದೇಶದಲ್ಲಿ ಕೇವಲ 300 ಸ್ಟಾರ್ಟ್ ಅಪ್‌ಗಳಿದ್ದದ್ದು ನಿಜವೇ? ಎಂದು ನಾವು ಗೂಗಲ್‌ನಲ್ಲಿ ಮಾಹಿತಿ ಹುಡುಕಿದಾಗ ಸ್ಟ್ಯಾಟಿಸ್ಟ ಅಂಕಿ ಅಂಶಗಳ ಎಂಬ ವೆಬ್‌ಸೈಟ್‌ನಲ್ಲಿ ಭಾರತದ ಸ್ಟಾರ್ಟ್ ಅಪ್‌ಗಳ ಕುರಿತು ಮಾಹಿತಿ ಲಭ್ಯವಾಗಿದೆ. ಸ್ಟ್ಯಾಟಿಸ್ಟ ಹೇಳಿದಂತೆ 2012ನೇ ವರ್ಷದಲ್ಲಿ ಭಾರತದಲ್ಲಿ 5,000 ಸ್ಟಾರ್ಟ್ ಅಪ್‌ಗಳು ನೋಂದಾಯಿಸಿಕೊಂಡಿದ್ದವು. 2013ರಲ್ಲಿ ಈ ಸಂಖ್ಯೆ ಕುಸಿದು 3,000 ಹೊಸ ಸ್ಟಾರ್ಟ್ ಅಪ್‌ಗಳು ನೋಂದಣಿ ಮಾಡಿಕೊಂಡಿತ್ತು. 2014ರಲ್ಲಿ 4,500 ಮತ್ತು 2015ರಲ್ಲಿ ಬರೋಬ್ಬರಿ 8,000 ಹೊಸ ಸ್ಟಾರ್ಟ್ ಅಪ್‌ಗಳು ಭಾರತದಲ್ಲಿ ಪ್ರಾರಂಭಗೊಂಡಿವೆ.

ಈ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ 2014ರಲ್ಲಿ ಅಥವಾ ಅದಕ್ಕಿಂತ ಮುನ್ನ ದೇಶದಲ್ಲಿ ಕೇವಲ 300 ಸ್ಟಾರ್ಟ್ ಅಪ್‌ಗಳಿದ್ದವು ಎಂಬ ಹೇಳಿಕೆ ಸುಳ್ಳು.
ಸ್ಟ್ಯಾಟಿಸ್ಟದ ಅಂಕಿ ಅಂಶಗಳ ಪ್ರಕಾರ, 2019ರ ಬಳಿಕ ದೇಶದಲ್ಲಿ ಹೊಸ ಸ್ಟಾರ್ಟ್ ಅಪ್‌ಗಳ ನೋಂದಣಿ ಸಂಪೂರ್ಣ ಕುಸಿದಿದೆ. 2019ರಲ್ಲಿ 3,500, 2020ರಲ್ಲಿ 1,250, 2021ರಲ್ಲಿ 1,436, 2022ರಲ್ಲಿ 652 ಮತ್ತು 2023ರಲ್ಲಿ ಕೇವಲ 489 ಸ್ಟಾರ್ಟ್ ಅಪ್‌ಗಳು ನೋಂದಣಿ ಮಾಡಿಕೊಂಡಿವೆ.

ಸ್ಟ್ಯಾಟಿಸ್ಟದ ಅಂಕಿ ಅಂಶಗಳು ನಂಬಲು ಅರ್ಹವಾಗಿದೆ. ಏಕೆಂದರೆ, ಈ ವೆಬ್‌ಸೈಟ್‌ನ ಅಂಕಿ ಅಂಶಗಳನ್ನು ಪ್ರಮುಖ ಕಂಪನಿಗಳಾದ ಗೂಗಲ್, ಅಡೋಬ್, ಪಿ&ಜಿ ಸ್ಯಾಮ್‌ಸಂಗ್ ಕೂಡ ಪರಿಗಣಿಸುತ್ತವೆ.
ಸದ್ಯ ಭಾರತದಲ್ಲಿ 1,12,718 ಸ್ಟಾರ್ಟ್ ಅಪ್‌ಗಳಿವೆ ಎಂದು ಇನ್ವೆಸ್ಟ್ ಇಂಡಿಯಾ ವರದಿ ಮಾಡಿದೆ. ಆದರೆ ಅವುಗಳಲ್ಲಿ ಶೇ.95ಗಿಂತಲೂ ಹೆಚ್ಚಿನ ಸ್ಟಾರ್ಟ್ ಅಪ್‌ಗಳು ವಿಫಲವಾಗಿವೆ ಎಂದು ತಜ್ಞರ ಹೇಳಿಕೆಯನ್ನು ಆಧರಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, ನಮಗೆ 2014ರ ಬಳಿಕ, ಅಂದರೆ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಿಲ್ ಇಂಡಿಯಾದಂತಹ ಯೋಜನೆಗಳನ್ನು ಬಳಸಿಕೊಂಡು ಅನೇಕ ಸ್ಟಾರ್ಟ್ ಅಪ್‌ಗಳು ಪ್ರಾರಂಭಗೊಂಡಿರುವುವುದು ನಿಜ. ಆದರೆ, ಇದೇ ರೀತಿ 2014ಕ್ಕಿಂತ ಮುನ್ನ ಕಾಂಗ್ರೆಸ್ ಸರ್ಕಾರದ ಅಧಿಕಾರವದಿಯಲ್ಲೂ ಅನೇಕ ಸ್ಟಾರ್ಟ್ ಅಪ್‌ಗಳು ನೋಂದಣಿ ಮಾಡಿಕೊಂಡಿವೆ. 2014ರಲ್ಲಿ ದೇಶದಲ್ಲಿ ಕೇವಲ 300 ಸ್ಟಾರ್ಟ್ ಅಪ್‌ಗಳು ಮಾತ್ರ ಇತ್ತು ಎಂಬ ಹೇಳಿಕೆ ಸುಳ್ಳು.
ಇದನ್ನೂ ಓದಿ : FACT CHECK : ರಾಹುಲ್ ಗಾಂಧಿ ಪ್ರದರ್ಶಿಸಿದ್ದು ‘ಚೀನಾ ಸಂವಿಧಾನದ’ ಪ್ರತಿಯಲ್ಲ


