ನೀಟ್ ಪ್ರಶ್ನೆ ಪತ್ರಿಕೆ ಸೋರಿಯ ಫಲಾನುಭವಿಗಳು ಎಂದು ಪತ್ರಿಕೆಯಲ್ಲಿ ಜಾಹೀರಾತಿನ ರೂಪದಲ್ಲಿ ಪ್ರಕಟಗೊಂಡ ವಿದ್ಯಾರ್ಥಿಗಳ ಫೋಟೋವನ್ನು ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದಾರೆ.
Bharathiya Citizen(@LawAcademics) ಎಂಬ ಎಕ್ಸ್ ಬಳಕೆದಾರರು ಪತ್ರಿಕೆಯ ಜಾಹೀರಾತಿನ ಫೋಟೋ ಹಂಚಿಕೊಂಡಿದ್ದು, “ಫೋಟೋದಲ್ಲಿರುವುದು ನೀಟ್ ಪ್ರವೇಶ ಪ್ರಶ್ನೆ ಪತ್ರಿಕೆ ಸೋರಿಕೆ ಫಲಾನುಭವಿಗಳು. ಇವರು ಯಾವ ಧರ್ಮದವರು ಎಂದು ಸುಮ್ನೆ ನೋಡಿ. ಎಲ್ಲರೂ ಮುಸ್ಲಿಮರು” ಎಂದು ಬರೆದುಕೊಂಡಿದ್ದಾರೆ.

ಸದಾ ಕೋಮು ದ್ವೇಷದ ಮತ್ತು ಸುಳ್ಳು ಸುದ್ದಿಗಳನ್ನು ಹರಡುವುದರಲ್ಲಿ ಕುಖ್ಯಾತಿ ಪಡೆದಿರುವ ಸುದರ್ಶನ್ ನ್ಯೂಸ್‌ನ ಮುಖ್ಯ ಸಂಪಾದಕ ಸುರೇಶ್ ಚವ್ಹಾಂಕೆ (@sureshchavhanke)ಕೂಡ ಪತ್ರಿಕೆಯ ಜಾಹೀರಾತಿನ ಫೋಟೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು” ಪ್ರಶ್ನೆ ಪತ್ರಿಕೆ ಸೋರಿಕೆಯ ಫಲಾನುಭವಿಗಳು/ಟಾಪರ್‌ಗಳ ಪಟ್ಟಿಯಲ್ಲಿರುವ ಫೋಟೋಗಳನ್ನು ನೋಡಿ. ನೀವು ಇದನ್ನು ಪರೀಕ್ಷಾ ಜಿಹಾದ್ ಎಂದೂ ಕರೆಯಬಹುದು” ಎಂದು ಬರೆದುಕೊಂಡಿದ್ದಾರೆ.

ತನ್ನನ್ನು ತಾನು ಇಂಜಿನಿಯರ್, ವಕೀಲ ಹಾಗೂ ಪತ್ರಕರ್ತ ಎಂದು ಹೇಳಿಕೊಂಡಿರುವ ಎಕ್ಸ್ ಪ್ರೀಮಿಯಂ ಬಳಕೆದಾರ ANUPAM MISHRA(@scribe9104)ಮೇಲೆ ಇಬ್ಬರು ಮಾಡಿದಂತೆ ಆರೋಪಿಸಿ ಪತ್ರಿಕೆಯ ಜಾಹೀರಾತಿನ ಫೋಟೋ ಹಂಚಿಕೊಂಡಿದ್ದಾರೆ. ಈ ಪೋಸ್ಟ್ 2.67 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು 4,900 ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.

ಇನ್ನೂ ಅನೇಕರು ಇದೇ ರೀತಿಯ ಆರೋಪಗಳನ್ನು ಮಾಡಿ ಪತ್ರಿಕೆಯ ಫೋಟೋ ಹಂಚಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪತ್ರಿಕಾ ಜಾಹೀರಾತಿನ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಅದು ನೀಟ್ ಟಾಪರ್‌ಗಳಿಗೆ ಅಭಿನಂದನೆ ಕೋರಿ ಕೇರಳದ ಕೋಚಿಂಗ್ ಸೆಂಟರ್ ಒಂದು ನೀಡಿರುವ ಜಾಹೀರಾತಿನ ಫೋಟೋ ಎಂದು ತಿಳಿದು ಬಂದಿದೆ.
ಜಾಹೀರಾತಿನಲ್ಲಿ ಹೆಚ್ಚಾಗಿ ಮುಸ್ಲಿಂ ವಿದ್ಯಾರ್ಥಿಗಳ ಫೋಟೋ, ಹೆಸರು ಇರುವುದರಿಂದ ಬಲಪಂಥೀಯ ಸಾಮಾಜಿಕ ಜಾಲತಾಣ ಬಳಕೆದಾರರು, “ನೀಟ್ ಪ್ರಶ್ನೆ ಪತ್ರಿಕೆಯ ಫಲಾನುಭವಿಗಳು ಇವರೇ” ಎಂಬ ರೀತಿಯಲ್ಲಿ ಕೋಮು ದ್ವೇಷದ, ಸುಳ್ಳು ಸಂದೇಶಗಳನ್ನು ಹಂಚಿಕೊಂಡಿದ್ದಾರೆ.
@LawAcademics ಹಾಕಿರುವ ಪೋಸ್ಟ್ ಅನ್ನು ಕೇರಳ ಪೊಲೀಸರಿಗೆ ಟ್ಯಾಗ್ ಮಾಡಿರುವ زماں(@Delhiite) ಎಂಬ ಬಳಕೆದಾರ” ಕೇರಳ ಪೊಲೀಸರೇ ನೋಡಿ, ಈ ಬಳಕೆದಾರ ನಿಮ್ಮ ರಾಜ್ಯವನ್ನು ಅವಮಾನಿಸುತ್ತಿದ್ದಾರೆ ಎಂದಿದ್ದಾರೆ.
“ಇದು ಕೇರಳದ ಕೋಟಕ್ಕಲ್‌ನ ಯೂನಿವರ್ಸಲ್ ಇನ್‌ಸ್ಟಿಟ್ಯೂಟ್ ನೀಡಿರುವ ಪತ್ರಿಕಾ ಜಾಹೀರಾತಾಗಿದೆ. ಪ್ರತಿ ವರ್ಷವೂ ಈ ಸಂಸ್ಥೆಯಿಂದ ವಿದ್ಯಾರ್ಥಿಗಳು ನೀಟ್ ಮತ್ತು ಜೆಇಇಯಲ್ಲಿ ಆಯ್ಕೆಯಾಗುತ್ತಿದ್ದಾರೆ. ನೀವು ಮೋದಿಯನ್ನು ಆಯ್ಕೆ ಮಾಡಿದ್ದೀರಿ, ಅವರು ಅಧ್ಯಯನವನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ಮತ್ಸರ ಯಾಕೆ?” ಎಂದು ಪ್ರಶ್ನಿಸಿದ್ದಾರೆ.
ಯೂನಿವರ್ಸಲ್ ಇನ್‌ಸ್ಟಿಟ್ಯೂಟ್‌ಗೂ ಟ್ಯಾಗ್ ಮಾಡಿ “ನೋಡಿ ನಿಮ್ಮ ಸಂಸ್ಥೆಯನ್ನು ಅವಮಾನಿಸುತ್ತಿದ್ದಾರೆ. ಎಫ್‌ಐಆರ್ ದಾಖಲಿಸಿ” ಎಂದು ಕೋರಿದ್ದಾರೆ.

ನಾವು ಪತ್ರಿಕಾ ಜಾಹೀರಾತಿನ ಮೂಲ ಪ್ರತಿ ಹುಡುಕಿದಾಗ ಮಾತೃಭೂಮಿ ಪತ್ರಿಕೆಯ ತಿರುವನಂತಪುರ ಆವೃತ್ತಿಯಲ್ಲಿ ಜಾಹೀರಾತು ಪ್ರಕಟಿಸಿರುವುದು ಕಂಡು ಬಂದಿದೆ. ಅದರ ಕೆಳಭಾಗದಲ್ಲಿ ‘ಯೂನಿವರ್ಸಲ್ ಇನ್‌ಸ್ಟಿಟ್ಯೂಟ್ ಕೋಟಕಲ್’ ಎಂಬ ಉಲ್ಲೇಖವನ್ನು ನೋಡಬಹುದು. ಮೇಲ್ಭಾಗದಲ್ಲಿ, “ಕೊಟ್ಟಕಲ್ ಯೂನಿವರ್ಸಲ್ ಇನ್ಸ್ಟಿಟ್ಯೂಟ್ ರಜತ ಮಹೋತ್ಸವದ ಸಂದರ್ಭದಲ್ಲಿ ಕೇರಳದಲ್ಲಿ ಹೊಸ ಅಲೆ ಸೃಷ್ಟಿಸಿದೆ” ಎಂದು ಹೇಳಲಾಗಿದೆ.

‘ಯೂನಿವರ್ಸಲ್ ಇನ್‌ಸ್ಟಿಟ್ಯೂಟ್’ ನ ವೆಬ್‌ಸೈಟ್‌ನಲ್ಲೂ ನಾವು ಆ ಜಾಹೀರಾತನ್ನು ನೋಡಬಹುದು.

ಮಾತೃಭೂಮಿ ಪತ್ರಿಕೆಯ ಈ ಪೇಪರ್‌ನಲ್ಲೂ ಜಾಹೀರಾತು ಇದೆ. ಅದರ ಲಿಂಕ್ ಇಲ್ಲಿದೆ.
“ಯೂನಿರ್ವಸಲ್ ಇನ್‌ಸ್ಟಿಟ್ಯೂಟ್‌ನ ಶೈಕ್ಷಣಿಕ ನಿರ್ದೇಶಕ ಅಬ್ದುಲ್ ಹಮೀದ್ ಅವರನ್ನು ನಾವು ಸಂಪರ್ಕಕಿಸಿದ್ದೇವೆ. ಈ ವೇಳೆ ಕೋಚಿಂಗ್ ಸೆಂಟರ್‌ನಿಂದ ನೀಟ್-2024 ಟಾಪರ್‌ಗಳ ಬಗ್ಗೆ ಪತ್ರಿಕಾ ಜಾಹೀರಾತು ನೀಡಿರುವುದನ್ನು ಅವರು ಖಚಿತಪಡಿಸಿದ್ದಾರೆ. ಜಾಹೀರಾತಿನಲ್ಲಿ ಬಹುಪಾಲು ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಇರಲು ಕಾರಣ “ಈ ಸಂಸ್ಥೆಯು ಮುಸ್ಲಿಂ ಬಾಹುಳ್ಯದ ಮಲಬಾರ್ ಪ್ರದೇಶದಲ್ಲಿದೆ ಎಂದು ಅವರು ಹೇಳಿದ್ದಾರೆ. ಇತರ ಸಮುದಾಯಗಳ ವಿದ್ಯಾರ್ಥಿಗಳೂ ಕೂಟ ಟಾಪರ್‌ಗಳ ಪಟ್ಟಿಯಲ್ಲಿ ಇರುವುದನ್ನು ಅವರು ಎತ್ತಿ ತೋರಿಸಿದ್ದಾರೆ” ಎಂದು ಆಲ್ಟ್ ನ್ಯೂಸ್ ತಿಳಿಸಿದೆ.
ಪತ್ರಿಕೆಯ ಜಾಹೀರಾತಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕೇರಳ ಪೊಲೀಸರಿಗೆ ದೂರು ನೀಡಿರುವುದಾಗಿ ಹಮೀದ್ ಹೇಳಿದ್ದಾರೆ ಎಂದಿದೆ.
ಒಟ್ಟಿನಲ್ಲಿ ಕೇರಳದ ಕೋಟಕ್ಕಲ್‌ನ ಯೂನಿವರ್ಸಲ್ ಇನ್‌ಸ್ಟಿಟ್ಯೂಟ್ ಈ ವರ್ಷದ ನೀಟ್ ಟಾಪರ್‌ಗಳಿಗೆ ಅಭಿನಂದನೆ ಸಲ್ಲಿಸಿ ಮಾತೃಭೂಮಿ ಪತ್ರಿಕೆಯಲ್ಲಿ ಜಾಹೀರಾತು ನೀಡಿತ್ತು. ಅದರಲ್ಲಿ ಹೆಚ್ಚಿನವರು ಮುಸ್ಲಿಂ ವಿದ್ಯಾರ್ಥಿಗಳು ಇರುವುದನ್ನು ಗಮನಿಸಿದ ಕೋಮುವಾದಿಗಳು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಅದರಿಂದಲೇ ಇಷ್ಟು ಮಂದಿ ಟಾಪರ್‌ಗಳಾಗಿದ್ದಾರೆ ಎಂದು ಶಿಕ್ಷಣದ ವಿಷಯದಲ್ಲಿ ದ್ವೇಷ ಹರಡಿದ್ದಾರೆ.
ಇದನ್ನೂ ಓದಿ : FACT CHECK : ಸಂಸತ್ ಅಧಿವೇಶನದ ವೇಳೆ ಟಿಎಂಸಿ ಸಂಸದರು ನಿದ್ದೆ ಮಾಡಿದ್ದರು ಎಂಬುವುದು ಸುಳ್ಳು


