ಕುಂಭಮೇಳದಿಂದ ಹಿಂದಿರುಗುತ್ತಿದ್ದ ಜನರನ್ನು ಹೊತ್ತ ರೈಲಿನ ಮೇಲೆ ‘ಹಿಂದೂ ವಿರೋಧಿಗಳು’ ದೆಹಲಿಯಲ್ಲಿ ದಾಳಿ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಯುವಕರ ಗುಂಪೊಂದು ರೈಲಿನ ಕಿಟಕಿ ಗಾಜುಗಳನ್ನು ಒಡೆದು ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಫೆಬ್ರವರಿ 12ರಂದು ಆರ್‌ಎನ್‌ಎಸ್ ಎಂಬ ಫೇಸ್‌ಬುಕ್ ಖಾತೆಯಲ್ಲಿ ರೈಲಿನ ಕಿಟಕಿ ಗಾಜನ್ನು ಯುವಕರ ಗುಂಪು ಒಡೆದು ಹಾಕುತ್ತಿರುವ ವಿಡಿಯೋ ಹಂಚಿಕೊಂಡು “ಕುಂಭಮೇಳದಿಂದ ಹಿಂದಿರುಗುತ್ತಿದ್ದ ಹಿಂದೂಗಳೇ ತುಂಬಿದ್ದ ಸ್ವಾಂತಂತ್ರ್ಯ ಸೇನಾನಿ ಎಕ್ಸ್‌ಪ್ರೆಸ್ ರೈಲು ದೆಹಲಿಗೆ ಬಂದು ತಲುಪಿದಾಗ ಹಿಂದೂ ವಿರೋಧಿಗಳು ರೈಲಿನ ಗಾಜು ಒಡೆಯುತ್ತಿರುವ ದೃಶ್ಯ. ಯಾರಿರಬಹುದು ನೀವೆ ಊಹಿಸಿ. ಇದೇ ಮಾದರಿಯಲ್ಲಿ ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ ಕರಸೇವಕರಿದ್ದ ರೈಲಿನ ಬೋಗಿಗೆ ಬೆಂಕಿ ಹಂಚಿ ಜೀವಂತ ಸುಟ್ಟು ಹಾಕಿದ ಘಟನೆ ನೆನಪಿಸಿಕೊಳ್ಳಿ” ಎಂದು ಬರೆಯಲಾಗಿತ್ತು.

ಮೇಲಿನ ಪೋಸ್ಟ್‌ನಲ್ಲಿ ಅಯೋಧ್ಯೆ ಘಟನೆಯನ್ನು ಉಲ್ಲೇಖಿಸುವ ಮೂಲಕ ದೆಹಲಿಯಲ್ಲಿ ರೈಲಿನ ಮೇಲೆ ದಾಳಿ ನಡೆಸಿದವರು ಮುಸ್ಲಿಮರು ಎಂದು ಪರೋಕ್ಷವಾಗಿ ಆರೋಪಿಸಲಾಗಿದೆ.
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಕುಂಭಮೇಳದಿಂದ ಹಿಂದಿರುಗುತ್ತಿದ್ದ ಜನರಿದ್ದ ರೈಲಿನ ಮೇಲೆ ದೆಹಲಿಯಲ್ಲಿ ದಾಳಿ ನಡೆದಿದೆ ಎಂಬ ಹೇಳಿಕೆ ಸುಳ್ಳು ಎಂದು ಗೊತ್ತಾಗಿದೆ. ಅಸಲಿಗೆ ಈ ಘಟನೆ ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ತುಂಬಿದ್ದ ರೈಲನ್ನು ಏರಲು ಜನರು ಮುಂದಾದಾಗ ನಡೆದಿದೆ.
ಫೆಬ್ರವರಿ 11ರಂದು ‘ಆಧಾನ್ ಹಿಂದಿ‘ ಎಂಬ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ವಿಡಿಯೋ ವರದಿಯಲ್ಲಿ ಯುವಕರು ರೈಲಿನ ಕಿಟಕಿ ಗಾಜನ್ನು ಒಡೆದು ಹಾಕುತ್ತಿರುವ ದೃಶ್ಯಗಳು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದ ವೇಳೆ ಕಂಡು ಬಂದಿವೆ.
“ಬಿಹಾರದ ಜಯನಗರದಿಂದ ದೆಹಲಿಗೆ ತೆರಳುತ್ತಿದ್ದ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ರೈಲು ಬಿಹಾರದ ಮಧುಬನಿ ನಿಲ್ದಾಣಕ್ಕೆ ಬಂದಾಗ, ಪ್ರಯಾಗ್ ರಾಜ್ ಕುಂಭಮೇಳಕ್ಕೆ ಹೊರಟ್ಟಿದ್ದ ನೂರಾರು ಜನರು ಆ ರೈಲನ್ನು ಏರಲು ಮುಂದಾಗಿದ್ದಾರೆ. ಆದರೆ, ರೈಲು ಮಿತಿ ಮೀರಿ ತುಂಬಿದ್ದರಿಂದ ಅವರು ರೈಲು ಹತ್ತಲು ಸಾಧ್ಯವಾಗಿಲ್ಲ. ಈ ಕೋಪದಲ್ಲಿ ರೈಲಿನ ಕಿಟಕಿ ಗಾಜು ಒಡೆದು ರೈಲು ಹತ್ತಲು ಪ್ರಯತ್ನಿಸಿದ್ದಾರೆ” ಎಂದು ವಿಡಿಯೋ ವರದಿಯಲ್ಲಿ ಹೇಳಲಾಗಿದೆ.
ಫೆಬ್ರವರಿ 11ರಂದು ನ್ಯೂಸ್ 18 ರಾಜಸ್ಥಾನ ಪ್ರಕಟಿಸಿದ ವಿಡಿಯೋ ವರದಿಯಲ್ಲಿಯೂ ಯುವಕರು ರೈಲಿನ ಗಾಜು ಒಡೆದಿರುವ ದೃಶ್ಯಗಳು ಕಂಡು ಬಂದಿವೆ. ವರದಿಯ ಪ್ರಕಾರ, ಕುಂಭಮೇಳಕ್ಕೆ ಹೊರಟಿದ್ದ ಜನರು ರೈಲು ಹತ್ತಲು ಸಾಧ್ಯವಾಗದೆ ನಿರಾಶೆಗೊಂಡು ಬಿಹಾರದ ಮಧುಬನಿ ಮತ್ತು ಸಮಸ್ತಿಪುರ ರೈಲು ನಿಲ್ದಾಣಗಳಲ್ಲಿ ಸ್ವತಂತ್ರ ಸೇನಾನಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಗಾಜುಗಳನ್ನು ಧ್ವಂಸ ಮಾಡಿದ್ದಾರೆ. ಸುಮಾರು 12 ಎಸಿ ಬೋಗಿಗಳ ಕಿಟಕಿ ಗಾಜುಗಳನ್ನು ಆಕ್ರೋಶಿತರು ಒಡೆದು ಹಾಕಿದ್ದಾರೆ. ಇದರಿಂದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ದೃಢೀಕರಣಕ್ಕಾಗಿ, ನಾವು ಆಧಾನ್ ಹಿಂದಿ ಮತ್ತು ನ್ಯೂಸ್ 18 ರಾಜಸ್ಥಾನದ ವಿಡಿಯೋ ವರದಿಗಳೊಂದಿಗೆ ವೈರಲ್ ಕ್ಲಿಪ್ ಅನ್ನು ಕೂಡ ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ. ನಮ್ಮ ಪರಿಶೀಲನೆಯಲ್ಲಿ ರೈಲಿನ ಬೋಗಿಗಳ ಮೇಲೆ ಅದು ಜಯನಗರದಿಂದ ನವದೆಹಲಿಗೆ ಪ್ರಯಾಣಿಸುತ್ತಿದೆ ಎಂದು ಸೂಚಿಸುವ ಬೋರ್ಡ್ ಇರುವುದು ಕಂಡು ಬಂದಿದೆ.

ಘಟನೆಯ ಕುರಿತು ಇತರ ಮಾಧ್ಯಮ ವರದಿಗಳನ್ನು ನಾವು ಹುಡುಕಾಡಿದ್ದೇವೆ. ಈ ವೇಳೆ ಎನ್‌ಡಿವಿ ಪ್ರಕಟಿಸಿದ ವರದಿ ಲಭ್ಯವಾಗಿದೆ. ವರದಿಯ ಪ್ರಕಾರ, ಬಿಹಾರದ ಜಯನಗರದಿಂದ ಪ್ರಯಾಗರಾಜ್ ಮೂಲಕ ನವದೆಹಲಿಗೆ ತೆರಳುತ್ತಿದ್ದ ಸ್ವತಂತ್ರ ಸೇನಾನಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬಿಹಾರದ ಮಧುಬನಿ ನಿಲ್ದಾಣಕ್ಕೆ ತಲುಪಿದಾಗ ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳಕ್ಕೆ ತೆರಳಲು ಸಿದ್ದರಾಗಿದ್ದ ಪ್ರಯಾಣಿಕರ ದೊಡ್ಡ ಗುಂಪು ರೈಲು ಹತ್ತಲು ಮುಂದಾಗಿದೆ. ಆದರೆ, ರೈಲು ತುಂಬಿದ್ದರಿಂದ ಅವರಿಗೆ ಹತ್ತಲು ಸಾಧ್ಯವಾಗದೆ ಇದ್ದಾಗ ಆಕ್ರೋಶಗೊಂಡು ರೈಲಿನ ಮೇಲೆ ಕಲ್ಲು ಎಸೆದು, ಎಸಿ ವಿಭಾಗಗಳ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ.
ರೈಲಿನ ಹೊರಗೆ ಕಾಯುತ್ತಿದ್ದ ಮತ್ತು ಒಳಗೆ ಕುಳಿತಿದ್ದ ಹೆಚ್ಚಿನ ಪ್ರಯಾಣಿಕರು ಮಹಾ ಕುಂಭಮೇಳಕ್ಕಾಗಿ ಪ್ರಯಾಗ್‌ರಾಜ್‌ಗೆ ಪ್ರಯಾಣಿಸುತ್ತಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಫೆಬ್ರವರಿ 10ರ ರಾತ್ರಿ, ಮಹಾ ಕುಂಭಮೇಳಕ್ಕೆ ಹೋಗಲು ಮುಂದಾಗಿದ್ದ ಕೋಪಗೊಂಡ ಪ್ರಯಾಣಿಕರ ಗುಂಪೊಂದು ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ದಾಳಿ ನಡೆಸಿದೆ. ರೈಲು ಹತ್ತಲು ಸಾಧ್ಯವಾಗದ ಕಾರಣ ಹತಾಶೆಗೊಂಡು ಕಲ್ಲು ತೂರಿದ ಜನರು, ರೈಲಿನ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ ಎಂದು ದಿ ಹಿಂದೂ, ದಿ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆದ್ದರಿಂದ, ಕುಂಭಮೇಳದಿಂದ ಹಿಂತಿರುಗುತ್ತಿದ್ದ ಜನರಿದ್ದ ರೈಲಿನ ಮೇಲೆ ದೆಹಲಿಯಲ್ಲಿ ಹಿಂದೂ ವಿರೋಧಿಗಳು ದಾಳಿ ನಡೆಸಿದ್ದಾರೆ ಎಂಬ ಹೇಳಿಕೆ ಸುಳ್ಳು ಎಂಬುವುದು ಖಚಿತವಾಗಿದೆ.
FACT CHECK | ಕುಂಭಮೇಳದಲ್ಲಿ ಸಾಧುವಿನ ವೇಷ ಧರಿಸಿ ಬಂಧಿತನಾದ ಮುಸ್ಲಿಂ ಯುವಕ ಎಂದು ಪ್ರತಿಪಾದಿಸುವ ಈ ಚಿತ್ರ AI ರಚಿತ!


