ರಾಜ್ಯದ ಹಲವೆಡೆ ರಾತ್ರಿ ಹೊತ್ತು ಸಿಂಹಗಳು ಓಡಾಡಿರುವುದಾಗಿ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದೆರಡು ವಿಡಿಯೋಗಳು ವ್ಯಾಪಕವಾಗಿ ಹರಿದಾಡುತ್ತಿವೆ.
ನಮಗೆ ಸಾಮಾಜಿಕ ಜಾಲತಾಣಗಳ ಮೂಲಕ ಲಭ್ಯವಾಗಿರುವ ಎರಡು ವಿಡಿಯೋಗಳು ದಿನಕ್ಕೊಂದು ಊರಿನ ಹೆಸರಿನಲ್ಲಿ ವೈರಲ್ ಆಗುತ್ತಿದೆ.
ಮೊದಲ ವಿಡಿಯೋದಲ್ಲಿ ದೇವಸ್ಥಾನದ ದ್ವಾರವೊಂದರ ಬಳಿ ರಾತ್ರಿ ಹೊತ್ತು ಸಿಂಹ ಓಡಾಡಿರುವುದು ಇದೆ.
ಆಗಸ್ಟ್ 31, 2024ರಂದು ಎಕ್ಸ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿರುವ
wHatNext (@raghunmurthy07) ಎಂಬ ಬಳಕೆದಾರರು “ಬೆಂಗಳೂರು ರಾಜಾಜಿನಗರ ಮಧ್ಯರಾತ್ರಿ 1 ಘಂಟೆ” ಎಂದು ಬರೆದುಕೊಂಡಿದ್ದಾರೆ.

Sai Mohan ‘NTR'(@Sai_Mohan_999) ಎಂಬ ಮತ್ತೊಬ್ಬರು ಎಕ್ಸ್ ಬಳಕೆದಾರರು ಆಗಸ್ಟ್ 31ರಂದು ಅದೇ ವಿಡಿಯೋವನ್ನು ಹಂಚಿಕೊಂಡು “ಇಂದು ಕರ್ನಾಟಕದ ರಸ್ತೆಯಲ್ಲಿ ಭಯವಿಲ್ಲದೆ ಓಡಾಡಿದ ಸಿಂಹ” ಎಂದು ಬರೆದುಕೊಂಡಿದ್ದಾರೆ.

ಅದೇ ರೀತಿ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲೂ ರಾತ್ರಿ ಹೊತ್ತು ಪೆಟ್ರೋಲ್ ಬಂಕ್ ಒಂದರ ಬಳಿ ಸಿಂಹ ಓಡಾಡಿರುವುದು ಇದೆ.
ಈ ವಿಡಿಯೋ ವಾಟ್ಸಾಪ್, ಫೇಸ್‌ಬುಕ್ ಸೇರಿದಂತೆ ಎಲ್ಲೆಡೆ ಹರಿದಾಡುತ್ತಿದೆ. ಇತ್ತೀಚೆಗೆ ವಾಟ್ಸಾಪ್‌ನಲ್ಲಿ “ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಲ್‌ಕಟ್ಟೆಯ ಪೆಟ್ರೋಲ್ ಬಂಕ್‌ನಲ್ಲಿ ಸಿಂಹ ಓಡಾಡಿದೆ ಎಂಬ ಸಂದೇಶದೊಂದಿಗೆ ವಿಡಿಯೋ ವೈರಲ್ ಆಗಿತ್ತು. ಆ ಬಳಿಕ ಅದೇ ವಿಡಿಯೋ “ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಸಿಂಹ ಕಾಣಿಸಿಕೊಂಡಿದೆ” ಎಂದು ಹರಿದಾಡಿತ್ತು.
write News.in ಎಂಬ ಫೇಸ್‌ಬುಕ್ ಪೇಜ್‌ನಲ್ಲಿ “ನಾಡಿಗೆ ಬಂದ ಕಾಡಿನ ರಾಜ” ಎಂಬ ಶೀರ್ಷಿಕೆಯಲ್ಲಿ ಇತ್ತೀಚೆಗೆ ವಿಡಿಯೋ ಹಂಚಿಕೊಂಡು “ಇಷ್ಟು ದಿನ ಹುಲಿ ಚಿರತೆಗಳು ಬರುತ್ತಿದ್ದವು. ಈಗ ಸಿಂಹನೇ ಬರ್ತಿದೆ. ಕರ್ನಾಟಕನಾ? ಬೇರೆ ರಾಜ್ಯನಾ? ಎಲ್ಲಿ ಇದು” ಎಂದು ಬರೆಯಲಾಗಿತ್ತು.

ಅತ್ರಾಡಿ ಪೃಥ್ವಿರಾಜ್ ಹೆಗ್ಡೆ ಎಂಬವರು ಸೆಪ್ಟೆಂಬರ್ 10ರಂದು ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡು ” ನನ್ನ ಹುಟ್ಟೂರು ಆತ್ರಾಡಿಯಲ್ಲಿ ಸಿಂಹ ತಿರುಗಾಡುತ್ತಿದೆ ಅಂತ ಗುಜರಾತಿನ ಒಂದು Fake video ಇವತ್ತು ಸಿಕ್ಕಾಪಟ್ಟೆ ವೈರಲ್ ಆಗಿದೆ…ಬಹಳ ಮಂದಿ ನನಗೆ ಕರೆಯನ್ನೂ ಮಾಡಿ ವಿಚಾರಿಸಿದರು…ಅಲ್ಲಾ ಮಾರಾಯ್ರೆ ಅದು ಫೇಕ್ ಅಂತ ಅಷ್ಟೂ ಗೊತ್ತಾಗುದಿಲ್ವಾ?! ಆತ್ರಾಡಿಯಲ್ಲಿ ಸದ್ಯ ನಾನೊಬ್ಬನೇ ಸಿಂಹ ಇರುವುದು…ನಾನಿರುವಾಗ ಮತ್ತೊಂದು ಸಿಂಹ ಹೇಗೆ ಬರುವುದಕ್ಕೆ ಸಾಧ್ಯ?!!” ಎಂದು ಬರೆದುಕೊಂಡಿದ್ದರು. ಈ ಅತ್ರಾಡಿ ಉಡುಪಿ ಜಿಲ್ಲೆಯಲ್ಲಿದೆ.

ನಾವು ಗೂಗಲ್‌ನಲ್ಲಿ ವಿಡಿಯೋ ಕುರಿತು ಮಾಹಿತಿ ಹುಡುಕಿದಾಗ, ಎರಡನೇ ವಿಡಿಯೋ ಉತ್ತರ ಪ್ರದೇಶದ ಗಜ್ರೌಲಾ, ಜರ್ವಾಲ್, ಬಲರಾಂಪುರ ಮತ್ತು ಗುಜರಾತ್‌ನ ವಿವಿಧ ಊರುಗಳ ಹೆಸರಿನಲ್ಲಿ ವೈರಲ್ ಆಗಿರುವುದು ಗೊತ್ತಾಗಿದೆ.
ಅಸಲಿಗೆ ಎರಡು ವೈರಲ್ ವಿಡಿಯೋಗಳು ಎಲ್ಲಿಯದ್ದು ಎಂಬ ಮಾಹಿತಿ ಕೆಳಗಿದೆ.
ಫ್ಯಾಕ್ಟ್‌ಚೆಕ್ : ದೇವಸ್ಥಾನದ ದ್ವಾರದ ಮುಂದೆ ಸಿಂಹ ನಡೆದಾಡಿದ ವೈರಲ್ ವಿಡಿಯೋ ಗುಜರಾತ್‌ನ ಅಮ್ರೇಲಿ ಜಿಲ್ಲೆಯ ರಾಜೌಲಾದ ಲಕ್ಷ್ಮೀ ನಾರಾಯಣ ಮಂದಿರದ ಮುಂಭಾಗದ್ದು ಎಂದು ಗೊತ್ತಾಗಿದೆ.
ಈ ಬಗ್ಗೆ ಖಚಿತಪಡಿಸಿಕೊಳ್ಳಲು ಆ ದೇವಸ್ಥಾನದ ಬಗ್ಗೆ ನಾವು ಗೂಗಲ್ ಸರ್ಚ್ ಮಾಡಿದ್ದೇವೆ. ಈ ವೇಳೆ ವೈರಲ್ ವಿಡಿಯೋದಲ್ಲಿರುವ ದೇವಸ್ಥಾನದ ದ್ವಾರವನ್ನೇ ಲಕ್ಷ್ಮೀ ನಾರಾಯಣ ಮಂದಿರ ದ್ವಾರ ಎಂದು ಫೋಟೊ ಹಂಚಿಕೊಂಡಿರುವುದು ಕಂಡು ಬಂದಿದೆ. ಹಾಗಾಗಿ, ವೈರಲ್ ವಿಡಿಯೋ ಲಕ್ಷ್ಮೀ ನಾರಾಯಣ ಮಂದಿರದ ಮುಂಭಾಗದ್ದೇ ಎಂಬುವುದು ಖಚಿತವಾಗಿದೆ.

ಟಿವಿ9 ಗುಜರಾತ್ ಮಾರ್ಚ್ 9, 2024ರಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ವಿಡಿಯೋ ಕುರಿತು ಸುದ್ದಿ ಪ್ರಕಟಿಸಿತ್ತು. ಅದರಲ್ಲಿ ಅಮ್ರೇಲಿಯ ರಾಜೌಲಾದ ಲಕ್ಷ್ಮೀ ನಾರಾಯಣ ದೇವಸ್ಥಾನದ ಬಳಿ ಸಿಂಹ ಕಾಣಿಸಿಕೊಂಡಿದೆ ಎಂದು ಹೇಳಿತ್ತು.

ಇನ್ನು ನಾವು ಮೇಲೆ ಉಲ್ಲೇಖಿಸಿದ ಮತ್ತೊಂದು ವಿಡಿಯೋ ಕೂಡ ಕರ್ನಾಟಕದಲ್ಲ. ಅದೂ ಗುಜರಾತ್‌ನ ವಿಡಿಯೋ ಆಗಿದೆ.
ಈ ಕುರಿತು ಆಗಸ್ಟ್ 20, 2024ರಂದು ನ್ಯೂಸ್ 18 ಗುಜಾರಾತಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಸುದ್ದಿ ಪ್ರಕಟಿಸಿಲಾಗಿತ್ತು. ಸುದ್ದಿಯಲ್ಲಿ ಗುಜರಾತ್‌ನ ಅಮ್ರೇಲಿಯ ಧರಿ-ವಿಸಾವದರ್ ರಸ್ತೆಯ ಪೆಟ್ರೋಲ್ ಬಂಕ್‌ನಲ್ಲಿ ರಾತ್ರಿ ಹೊತ್ತು ಸಿಂಹ ಕಾಣಿಸಿಕೊಂಡಿದೆ. ಬಂಕ್‌ನ ಕ್ಯಾಮಾರದಲ್ಲಿ ಈ ದೃಶ್ಯ ಸೆರೆಯಾಗಿದೆ ಎಂದು ತಿಳಿಸಲಾಗಿದೆ.

ಒಟ್ಟಿನಲ್ಲಿ, ವೈರಲ್ ಆಗಿರುವ ಎರಡೂ ವಿಡಿಯೋಗಳು ಗುಜರಾತ್‌ನ ಅಮ್ರೇಲಿ ಜಿಲ್ಲೆಗೆ ಸಂಬಂಧಿಸಿದ್ದು, ಕರ್ನಾಟಕದ್ದಲ್ಲ ಎಂಬುವುದು ವಿವಿಧ ಮೂಲಗಳಿಂದ ನಮಗೆ ಲಭ್ಯವಾದ ಮಾಹಿತಿಯಲ್ಲಿ ಗೊತ್ತಾಗಿದೆ.
ಇದನ್ನೂ ಓದಿ : FACT CHECK : ಪ. ಬಂಗಾಳದಲ್ಲಿ ಮುಸ್ಲಿಂ ಯುವಕ ಹಿಂದೂ ಬಾಲಕಿಗೆ ಇರಿದಿದ್ದಾನೆ ಎಂಬುವುದು ಸುಳ್ಳು


