ತಮಿಳುನಾಡಿನ ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ, ಆಹಾರದ ಮೇಲೆ ಉಗುಳುವುದು ಹಲಾಲ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ ಎಂದು ಮುಸ್ಲಿಮರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ಹೇಳುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪೋಸ್ಟ್ ಕಾರ್ಡ್ ಎಂಬ ಫೇಕ್ ಸುದ್ದಿಗಳನ್ನು ಪ್ರಸಾರ ಮಾಡುವ ಮತ್ತು ಅದಕ್ಕಾಗಿ ಬಂಧನವಾಗಿದ್ದ ಮಹೇಶ್ ವಿಕ್ರಮ್ ಹೆಗ್ಡೆ ಇದನ್ನು ಟ್ವೀಟ್ ಮಾಡಿದ್ದಾರೆ. ಅದು ನಿಜವೇ ಎಂಬುದನ್ನು ಪರಿಶೀಲಿಸೋಣ.
ಈ ಹಿಂದೆ ನವೆಂಬರ್ 2021 ರಲ್ಲಿ, ತಮಿಳುನಾಡಿನ ಇಂದು ಮಕ್ಕಳ್ ಕಚ್ಚಿ ಟ್ವೀಟ್ ಮೂಲಕ ಅದೇ ರೀತಿಯ ಹೇಳಿಕೆಯನ್ನು ಪೋಸ್ಟ್ ಮಾಡಿದ್ದರು. ಆ ನಂತರ, ಈ ಹೇಳಿಕೆ ವೈರಲ್ ಆಗುತ್ತಿದೆ.
ಈಕುರಿತು ಹುಡುಕಿದಾಗ, ಪ್ರಕರಣದ ವಿಚಾರಣೆ ನಡೆಯುತ್ತಿರುವುದು ತಮಿಳುನಾಡು ನ್ಯಾಯಾಲಯದಲ್ಲಿ ಅಲ್ಲ. ಬದಲಾಗಿ, ಕೇರಳ ಹೈಕೋರ್ಟ್‌ನಲ್ಲಿ ಎಂದು ಕಂಡುಬಂದಿದೆ. ಇದರಲ್ಲಿ ಶಬರಿಮಲೆ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ ಎಸ್‌ಜೆಆರ್ ಕುಮಾರ್ ಸಲ್ಲಿಸಿದ ಮನವಿಯಲ್ಲಿ ಅರ್ಜಿದಾರರು, ಶಬರಿಮಲೆ ದೇವಸ್ಥಾನವನ್ನು ನಿರ್ವಹಿಸುತ್ತಿರುವ ಟ್ರಾವಂಕೂರ್ ದೇವಸ್ವಂ ಮಂಡಳಿ (ಟಿಡಿಬಿ)ಯು ದೇವಸ್ಥಾನದಲ್ಲಿ ನೈವೇದ್ಯಂ ಮತ್ತು ಪ್ರಸಾದವನ್ನು ತಯಾರಿಸಲು ಹಲಾಲ್ ದೃಢಪಡಿಸಿರುವ ಹಾಳಾದ ಬೆಲ್ಲವನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.
ಹಲಾಲ್ಅನ್ನು ದೃಢಪಡಿಸುವ ಉತ್ಪನ್ನಗಳ ಬಳಕೆಯ ವಿರುದ್ಧ ಅರ್ಜಿದಾರರು ಮಾಡಿದ ಬಹು ಆರೋಪಗಳಲ್ಲಿ ಒಂದಾದ ‘ಮುಸ್ಲಿಂ ಸಮುದಾಯದ ಧಾರ್ಮಿಕ ವಿದ್ವಾಂಸರು ಆಹಾರ ಸಾಮಗ್ರಿಗಳ ತಯಾರಿಕೆಯಲ್ಲಿ ಹಲಾಲ್ ಅನ್ನು ಪ್ರಮಾಣೀಕರಿಸಲು ಲಾಲಾರಸವು(ಉಗುಳು) ಅವಶ್ಯಕ ಅಂಶವಾಗಿದೆ ಎಂದು ಸಾರ್ವಜನಿಕವಾಗಿ ಘೋಷಿಸುತ್ತಿದ್ದಾರೆ. ಧಾರ್ಮಿಕ ವಿದ್ವಾಂಸರು ಪವಿತ್ರ ಗ್ರಂಥಗಳಲ್ಲಿ ಮಾನ್ಯವಾದ ವ್ಯಾಖ್ಯಾನಗಳನ್ನು ಅರ್ಥೈಸುವ ಮೂಲಕ ಮೇಲಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅಂದರೆ ಕಲ್ಪಿತ ಆರೋಪವನ್ನು ಮಾಡಲಾಗಿದೆ. ಈ ಬಗ್ಗೆ ತಿರುವಾಂಕೂರು ದೇವಸ್ವಂ ಮಂಡಳಿ ಪ್ರತಿಕ್ರಿಯೆ ಸಲ್ಲಿಸಿದೆ. ಅವರ ಪ್ರತಿಕ್ರಿಯೆಯಲ್ಲಿ, ಕೋವಿಡ್-19 ಪ್ರೋಟೋಕಾಲ್‌ನಿಂದಾಗಿ 2019-20ನೇ ವರ್ಷಕ್ಕೆ ಹೆಚ್ಚಿನ ಪ್ರಮಾಣದ ಬೆಲ್ಲವು ಬಳಸದೆ ಉಳಿದಿದೆ. ಆದ್ದರಿಂದ ಮಂಡಳಿಯು ಈ ಉಳಿದ ಬೆಲ್ಲವನ್ನು M/s ಸದರ್ನ್ ಆಗ್ರೋ ಟೆಕ್ ಪ್ರೈವೇಟ್ ಲಿಮಿಟೆಡ್, ತ್ರಿಶೂರ್‌ಗೆ ನೀಡಿದೆ ಎಂದು ಮಂಡಳಿಯು ಹೇಳಿದೆ. ಆದರೆ 2020-21ನೇ ಸಾಲಿಗೆ ಬೆಲ್ಲ ಪೂರೈಕೆಯ ಗುತ್ತಿಗೆಯನ್ನು M/s S.P.Sugar and Agro Pvt. lmt, ಮಹಾರಾಷ್ಟ್ರಕ್ಕೆ ನೀಡಲಾಗಿದ್ದು, ಅವರು ಏಪ್ರಿಲ್ 2021 ರಿಂದ ಪೂರೈಕೆಯನ್ನು ಪ್ರಾರಂಭಿಸಿದ್ದಾರೆ. ಅಂದಿನಿಂದ ಆ ಬೆಲ್ಲವನ್ನು ಬಳಸಲಾಗುತ್ತಿದೆ.

ಹಲಾಲ್‌ನ ಪ್ರಶ್ನೆಗೆ, ‘ಬೆಲ್ಲದ ಪ್ಯಾಕೇಜಿಂಗ್‌ನಲ್ಲಿ ಇಂಗ್ಲಿಷ್‌ನಲ್ಲಿ “permissible” ಎಂದು ಅನುವಾದಿಸುವ ಅರೇಬಿಕ್ ಪದವಾದ ಹಲಾಲ್ ಎಂಬ ಪದವನ್ನು ಉಲ್ಲೇಖಿಸಲಾಗಿದೆ ಎಂದು TDB ವಿವರಿಸಿದೆ. ಈ ಸರಕುಗಳನ್ನು ಪಡೆದ ಕಂಪನಿಯು ಅರಬ್ ದೇಶಗಳಿಗೆ ಬೆಲ್ಲವನ್ನು ರಫ್ತು ಮಾಡಿದೆ. ಅಲ್ಲಿನ ನಿಯಮಗಳು ಇಸ್ಲಾಮಿಕ್ ನಿಯಮಗಳನ್ನು ಅನುಸರಿಸುವುದರಿಂದಾಗಿ, ಹಲಾಲ್ ಆಹಾರಗಳ ಮಾರಾಟವನ್ನು ಕಡ್ಡಾಯಗೊಳಿಸುತ್ತವೆ ಎಂದು ನ್ಯೂಸ್ 18 ವರದಿ ಮಾಡಿದೆ.

ಅರ್ಜಿದಾರರು ಹಲಾಲ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಕ್ಷಿ ಸಮೇತ ವಿವರಿಸಲು ವಿಫಲವಾದ ಹಿನ್ನೆಲೆಯಲ್ಲಿ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ‘ಹಲಾಲ್ ಉತ್ಪನ್ನಗಳ ಬಳಕೆಯನ್ನು ಪ್ರಶ್ನಿಸುವ ಅರ್ಜಿಯನ್ನು ಸಲ್ಲಿಸುವ ಮೊದಲು, ಎಂದು ಅಭಿಪ್ರಾಯಪಟ್ಟಿದೆ. ಸುಮ್ಮನೆ ನಿರಾಧಾರ ಆರೋಪ ಮಾಡುವುದು ಥರವಲ್ಲ ಎಂದು ತಾಕೀತು ಮಾಡಿದೆ.
ಹಲಾಲ್ ಪರಿಕಲ್ಪನೆಯು ಕೆಲವು ವಿಷಯಗಳನ್ನು ನಿಷೇಧಿಸಲಾಗಿದೆ ಎಂದು ಮಾತ್ರ ಹೇಳುತ್ತದೆ; ಉಳಿದಂತೆ ಎಲ್ಲಾ ಇತರ ವಿಷಯಗಳು ಹಲಾಲ್‌ಗೆ ಒಳಪಟ್ಟಿವೆ ಎಂದು ಸೂಚಿಸಲಾಗುತ್ತದೆ. ಈ ಪ್ರಮಾಣೀಕರಣವು (ಹಲಾಲ್) ಆ ನಿಷೇಧಿತ ವಸ್ತುಗಳನ್ನು ನಿರ್ದಿಷ್ಟ ಉತ್ಪನ್ನದಲ್ಲಿ ಸೇರಿಸಲಾಗಿಲ್ಲ ಎಂಬುದನ್ನು ಮಾತ್ರ ಖಾತ್ರಿಪಡಿಸುತ್ತವೆ. ಯುಕೆಯಂತಹ ಇತರ ದೇಶಗಳಲ್ಲಿ ಇದು ಜಾರಿಯಲ್ಲಿದೆ. ಅಲ್ಲದೆ, ಕೆಲವು ಸುಪ್ರೀಂ ಕೋರ್ಟ್ ತೀರ್ಪುಗಳು ಕೂಡ ಅದರ ಬಗ್ಗೆ ಉಲ್ಲೇಖಿಸಿವೆ.

ಇದಲ್ಲದೆ, ಪ್ರಕರಣದ ವಿಚಾರಣೆಯ ಪ್ರಕ್ರಿಯೆಯ ಅವಧಿಯಲ್ಲಿ, ವೈರಲ್ ಪೋಸ್ಟ್‌ನಲ್ಲಿ ಮಾಡಿದ ಹೇಳಿಕೆಗೆ ವಿರುದ್ಧವಾಗಿ ಯಾವುದೇ ಮುಸ್ಲಿಂ ಸಂಘಟನೆ ಅಥವಾ ಯಾವುದೇ ಮುಸ್ಲಿಂ ವ್ಯಕ್ತಿಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿಲ್ಲ ಎಂದು ನಮೂದಿಸುವುದು ಗಮನಾರ್ಹವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಆಹಾರದ ಮೇಲೆ ಉಗುಳುವುದು ಹಲಾಲ್‌ನ ಭಾಗವೆಂದು ಮುಸ್ಲಿಂ ಸಮುದಾಯವು ನ್ಯಾಯಾಲಯದಲ್ಲಿ ಒಪ್ಪಿಕೊಂಡಿಲ್ಲ.
ಇದನ್ನೂ ಓದಿ: ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಟ್ಯ್ರಾಪ್ ಮಾಡುತ್ತಿದ್ದಾರೆ ಎಂದು ತಪ್ಪಾಗಿ ವಿಡಿಯೊ ಶೇರ್ ಮಾಡಲಾಗುತ್ತಿದೆ


