“ಬಾಂಗ್ಲಾದೇಶದಲ್ಲಿ ಹಿಂದೂ ನಿರಾಶ್ರಿತರ ಶಿಬಿರದ ಮೇಲೆ ಮುಸ್ಲಿಮರು ಬಾಂಬ್ ಎಸೆದ ಪರಿಣಾಮ ನೂರಾರು ಹಿಂದೂ ಮಹಿಳೆಯರು ಮತ್ತು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ” ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.
ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಅನೇಕ ಮಹಿಳೆಯರು ರಸ್ತೆಯ ಮೇಲೆ ಬಿದ್ದಿದ್ದು, ಜನರು ಅವರನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಹಲವು ಮಹಿಳೆಯರು ನಿತ್ರಾಣರಾಗಿದ್ದು, ನಿಲ್ಲಲೂ ಸಾಧ್ಯವಾಗದ ಸ್ಥಿತಿಯಲ್ಲಿರುವುದು ವಿಡಿಯೋದಲ್ಲಿ ಇದೆ.
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ವಿಡಿಯೋ ಸ್ಕ್ರೀನ್ ಶಾಟ್ ಹಾಕಿ ಸರ್ಚ್ ಮಾಡಿದಾಗ ಜುಲೈ 7, 2024 ರಂದು ಸುಮನ್ ರಾಯ್ ಮೋನಿ ಎಂಬ ಬಳಕೆದಾರರು ತಮ್ಮ ಫೇಸ್‌ಬುಕ್ ಪುಟದಲ್ಲಿ ಅದೇ ವಿಡಿಯೋ ಪೋಸ್ಟ್ ಮಾಡಿರುವುದು ಕಂಡು ಬಂದಿದೆ.

ಫೇಸ್‌ಬುಕ್ ಪೋಸ್ಟ್‌ನಲ್ಲಿ “ಬೋಗ್ರಾ ಸೆಜ್‌ಗರಿಯಲ್ಲಿ ಸನಾತನ ಧಾರ್ಮಿಕ ರಥಯಾತ್ರೆ ನಡೆಯುತ್ತಿದ್ದಾಗ ವಿದ್ಯುತ್ ಅವಘಡ ಸಂಭವಿಸಿದೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಕನಿಷ್ಠ 25 ಮಂದಿ ಗಾಯಗೊಂಡಿದ್ದಾರೆ. ಜುಲೈ 7 ರಂದು ಸಂಜೆ 5:30 ರ ಸುಮಾರಿಗೆ ಸೆಜ್‌ಗರಿ ಅಮ್ತಾಲಿ ಮೋರ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ” ಎಂದು ತಿಳಿಸಲಾಗಿದೆ.

“ಸೆಜ್‌ಗರಿಯ ಇಸ್ಕಾನ್ ದೇವಸ್ಥಾನದಿಂದ ಹೊರಟ ರಥಕ್ಕೆ ಸ್ಟೀಲ್ ಟಾಪ್ ಅಳವಡಿಲಾಗಿತ್ತು. ಅದು ಹೈವೋಲ್ಟೇಜ್ ವಿದ್ಯುತ್ ತಂತಿಗೆ ತಗುಲಿ, ತಂತಿಗಳು ಉರಿಯಲಾರಂಭಿಸಿತು” ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾಗಿ ಪೋಸ್ಟ್‌ನಲ್ಲಿ ವಿವರಿಸಲಾಗಿದೆ.

ಇದೇ ಸುದ್ದಿಯನ್ನು bdnews24, Protho Malo, Dhaka Tribune, ಮತ್ತು The Daily Star ಎಂಬ ಅನೇಕ ವಿಶ್ವಾಸಾರ್ಹ ಮಾಧ್ಯಮಗಳು ವರದಿ ಮಾಡಿವೆ.
ಈ ಎಲ್ಲಾ ಆಧಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ರಥಯಾತ್ರೆ ವೇಳೆ ವಿದ್ಯುತ್ ಅವಘದಿಂದ ಸಂಭವಿಸಿದ ಸಂದರ್ಭದ್ದು, ಅಲ್ಲದೆ ಹಿಂದೂಗಳ ಮೇಲೆ ಮುಸ್ಲಿಮರು ದಾಳಿ ನಡೆಸಿರುವುದು ಅಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : FACT CHECK : ಬಾಂಗ್ಲಾದಲ್ಲಿ ಮುಸ್ಲಿಮರು ಹಿಂದೂ ಮಹಿಳೆಯನ್ನು ಅಪಹರಿಸಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


