ಮೇ 16 ರಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದೆಹಲಿಯ ಸುಖದೇವ್ ವಿಹಾರದಲ್ಲಿ ಹಲವಾರು ವಲಸೆ ಕಾರ್ಮಿಕರನ್ನು ಭೇಟಿಯಾದರು. ಇದನ್ನು ಮುಖ್ಯವಾಹಿನಿಯ ಮಾಧ್ಯಮಗಳು ಗಾಂಧಿಯವರು ಪಾದಚಾರಿ ಮಾರ್ಗದಲ್ಲಿ ಕುಳಿತು ವಲಸಿಗರೊಂದಿಗೆ ಮಾತನಾಡುವ ಚಿತ್ರದೊಂದಿಗೆ ವರದಿ ಮಾಡಿದ್ದವು.
ಸ್ವಲ್ಪ ಸಮಯದ ನಂತರ, ಫೇಸ್‌ಬುಕ್ ಮತ್ತು ವಾಟ್ಸಾಪ್‌ನಲ್ಲಿ ರಾಹುಲ್ ಪಕ್ಕ ಕುಳಿತಿದ್ದ ಮಹಿಳೆಯ ಎರಡು ಫೋಟೊಗಳನ್ನು ಹಾಕಿ ಇದು ರಾಹುಲ್ ಗಾಂಧಿಯ ನಾಟಕ. ನೋಡಿ ಆಕೆ ಕಾರಿನಲ್ಲಿ ಹೋಗುತ್ತಿದ್ದಾಳೆ, ಆಕೆ ವಲಸೆ ಕಾರ್ಮಿಕಳಲ್ಲ. ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಹೀಗೆಲ್ಲಾ ಮಾಡಿದ್ದಾರೆ ಎಂದು ಸುದ್ದಿ ಹರಡಲಾಯಿತು.
ಹಲವಾರು ಫೇಸ್‌ಬುಕ್ ಬಳಕೆದಾರರು ಹಿಂದಿಯಲ್ಲಿ ವ್ಯಂಗ್ಯ ಶೀರ್ಷಿಕೆಯೊಂದಿಗೆ ಆ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ “ಇಲ್ಲಿ ಕೂಡ ಹಗರಣ? ರಾಹುಲ್ ಬಾಬಾ ಸುಖದೇವ್ ವಿಹಾರ್‌ನಲ್ಲಿ ಬಡವರನ್ನು ಭೇಟಿ ಮಾಡಲು ಹೋದರು. ಅಂತಹ ಒಬ್ಬ ಬಡವರು ಕಾರಿನಲ್ಲಿ ಹಿಂತಿರುಗುತ್ತಿರುವುದು ಕಂಡುಬಂತು. ದೇವರು ಎಲ್ಲರನ್ನೂ ಅವಳಂತೆ ಬಡವನನ್ನಾಗಿ ಮಾಡಬೇಕು”. ಎಂಬ ಶೀರ್ಷಿಕೆ ನೀಡಲಾಗಿತ್ತು.

ಇದನ್ನು ಕಾರ್ಮಿಕ ಹಗರಣವೆಂದು ಕರೆಯಬಹುದು. ದೇಶವೇ ಕೊರೊನಾ ಭೀತಿಯಲ್ಲಿರುವಾಗ ಕಾರ್ಮಿಕರು ಸ್ಯಾನಿಟೈಸ್ ಆಗಿ ಕಾರಿನಲ್ಲಿ ಬರುತ್ತಾರೆ. ಸುಳ್ಳುಗಾರನ ಹೆಸರು ರಾಹುಲ್ ಗಾಂಧಿ ಎಂದೆಲ್ಲಾ ಹರಡಲಾಯಿತು.
ಫ್ಯಾಕ್ಟ್‌ಚೆಕ್
ರಾಹುಲ್ ಗಾಂಧಿಯ ಸಂವಾದದ ಚಿತ್ರಗಳನ್ನು ಪ್ರಿಯಾಂಕ ಗಾಂಧಿ ಸೇರಿದಂತೆ ಹಲವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ರಾಹುಲ್ ಪಕ್ಕದಲ್ಲಿ ಮಹಿಳೆಯೊಬ್ಬರು ಕುಳತಿದ್ದಾರೆ.
ये हमारे अपने लोग हैं। इनके साथ बैठकर बात करनी होगी। इनकी पीड़ा को साझा करना होगा।
ये राष्ट्रनिर्माता हैं। संकट के समय हम इनको अकेला नहीं छोड़ सकते।
शुक्रिया मेरे नेता राहुल गांधी जी pic.twitter.com/GYNUpoHbTS
— Priyanka Gandhi Vadra (@priyankagandhi) May 16, 2020
ನಂತರ ಸುದ್ದಿ ಸಂಸ್ಥೆ ಎಎನ್‌ಐ ಕೂಡ ಸಂವಾದದ ಕೆಲವು ಚಿತ್ರಗಳನ್ನು ಟ್ವೀಟ್ ಮಾಡಿದೆ. ಅದರಲ್ಲಿ “ಸುಖದೇವ್ ವಿಹಾರ್ ಫ್ಲೈಓವರ್ ಬಳಿ ನಡೆದುಕೊಂಡು ಸ್ವಂತ ರಾಜ್ಯಗಳಿಗೆ ಹೋಗುತ್ತಿದ್ದ ವಲಸೆ ಕಾರ್ಮಿಕರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದರು. ನಂತರ ಪಕ್ಷದ ಸ್ವಯಂಸೇವಕರು ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ತಲುಪಲು ವಾಹನಗಳ ವ್ಯವಸ್ಥೆ ಮಾಡಿದರು” ಎಂದು ಬರೆದಿದೆ. ಅದರಲ್ಲಿ ಕಾರ್ಮಿಕನೊಬ್ಬ ಹರಿಯಾಣದಿಂದ ಬರುತ್ತಿದ್ದೇನೆ. ಝಾನ್ಸಿಗೆ ಹೋಗಬೇಕಾಗಿದೆ ಎಂದು ಹೇಳುತ್ತಾನೆ.
Delhi: Congress leader Rahul Gandhi interacted with migrant labourers who were walking near Sukhdev Vihar flyover to return to their home states. Party volunteers later arranged vehicles to take them to their homes. A labourer, Monu says "Coming from Haryana,have to go to Jhansi" pic.twitter.com/SMbnejiZpK
— ANI (@ANI) May 16, 2020
ಎಎನ್‌ಐ ಟ್ವೀಟ್‌ನಲ್ಲಿ, ವೈರಲ್ ಪೋಸ್ಟ್‌ನಲ್ಲಿ ಕಾಣುವ ಅದೇ ಮಹಿಳೆ ಕಾರಿನೊಳಗೆ ಅದೇ ಪುರುಷನ ಪಕ್ಕದಲ್ಲಿ ಕಪ್ಪು ಮಾಸ್ಕ್ ಧರಿಸಿ ಕುಳಿತಿರುವುದನ್ನು ಕಾಣಬಹುದು.
ಅಂದರೆ ಸುಖದೇವ್ ವಿಹಾರ್ ಫ್ಲೈಓವರ್ ಬಳಿ ವಲಸೆ ಕಾರ್ಮಿಕರು ನಡೆದುಕೊಂಡು ಹೋಗುತ್ತಿರುವುದನ್ನು ಕಂಡುಕೊಂಡ ರಾಹುಲ್ ಗಾಂಧಿಯವರು ಸಂವಾದದ ನಂತರ ಈ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ ಎಂದು ಎಎನ್‌ಐ ಮತ್ತು ಇತರ ಮಾಧ್ಯಮಗಳು ವರದಿ ಮಾಡಿದ್ದವು.
ರಾಹುಲ್ ಗಾಂಧಿ ಮತ್ತು ಅವರ ಪಕ್ಷದ ಕಾರ್ಯಕರ್ತರು ವಲಸೆ ಕಾರ್ಮಿಕರಿಗೆ ತಮ್ಮ ಸ್ವಂತ ರಾಜ್ಯಗಳಿಗೆ ಹಿಂತಿರುಗಲು ವಾಹನಗಳನ್ನು ವ್ಯವಸ್ಥೆಗೊಳಿಸಿದ್ದಾರೆ ಎಂದು “ಇಂಡಿಯಾ ಟಿವಿ” ಮತ್ತು “ಆರ್ 9 ಟಿವಿ” ಸೇರಿದಂತೆ ಹಲವಾರು ಮಾಧ್ಯಮಗಳು ವರದಿ ಮಾಡಿವೆ.
ಮೇ 16 ರಂದು ಸಂವಾದ ನಡೆದ ಸ್ಥಳದಲ್ಲಿ ಹಾಜರಿದ್ದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅನಿಲ್ ಚೌಧರಿಯವರು “ಸಂವಾದದ ನಂತರ ಅವರಿಗೆ ಸಹಾಯ ಮಾಡುವುದಾಗಿ ರಾಹುಲ್ ಭರವಸೆ ನೀಡಿದ್ದರು. ಆದರೆ ಸ್ವಲ್ಪ ಸಮಯದಲ್ಲಿ ಪೊಲೀಸರು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದರು. ಆಗ ನಾವು ಪ್ರಶ್ನಿಸಿದ್ದಕ್ಕೆ, ಸಾಮಾಜಿಕ ಅಂತರದ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ನೀವು ಅವರ ಪ್ರಯಾಣಕ್ಕೆ ವ್ಯವಸ್ಥೆ ಮಾಡಬಹುದಾದರೆ ಅವರಿಗೆ ಯಾವುದೇ ತೊಂದರೆ ಇಲ್ಲ ಎಂದು ಪೊಲೀಸರು ತಿಳಿಸಿದರು. ಆಗ ರಾಹುಲ್ ಗಾಂಧಿಯವರು ವಾಹನ ವ್ಯವಸ್ಥೆ ಮಾಡಲು ಸೂಚಿಸಿದರು. ಆಗ ನಾವು ನಮ್ಮಗಳ ಕಾರಿನಲ್ಲಿಯೇ ಅವರನ್ನು ಅವರ ಊರುಗಳಿಗೆ ತಲುಪಿಸಿದೆವು” ಎಂದಿದ್ದಾರೆ.
ನಂತರ ಆಗ್ನೇಯ ದೆಹಲಿಯ ಡಿಸಿಪಿ ಆರ್.ಪಿ. ಮೀನಾ ಸಹ “ಈ ವಲಸಿಗರ ಗುಂಪು ಸುಖದೇವ್ ವಿಹಾರ್ ಬಳಿ ನಡೆಯುತ್ತಿರುವಾಗ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಬೆಂಗಾವಲು ಪಡೆ ತಲುಪಿತು. ರಾಹುಲ್ ಗಾಂಧಿ ಈ ಗುಂಪಿನೊಂದಿಗೆ ಮಾತನಾಡಿದರು, ಮತ್ತು ನಂತರ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದರು” ಎಂದಿದ್ದಾರೆ.
ಮೇಲಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿದಾಗ ರಾಹುಲ್ ಗಾಂಧಿ ವಲಸೆ ಕಾರ್ಮಿಕರೊಂದಿಗೆ ಸಂವಾದ ನಡೆಸಿದ್ದು ಪೂರ್ವನಿರ್ಧಾರಿತವಲ್ಲ, ನಾಟಕವಂತೂ ಅಲ್ಲವೇ ಅಲ್ಲ ಎಂದು ತಿಳಿದುರುತ್ತದೆ. ಅಲ್ಲದೇ ಅವರೆಲ್ಲರೂ ವಲಸೆ ಕಾರ್ಮಿಕರೆ ಆಗಿದ್ದು ಸಂವಾದದ ನಂತರ ಕಾಂಗ್ರೆಸ್ ಕಾರ್ಯಕರ್ತರು ವ್ಯವಸ್ಥೆ ಮಾಡಿದ ಕಾರಿನಲ್ಲಿ ಅವರು ತಮ್ಮ ಸ್ವಂತ ಊರುಗಳಿಗೆ ತಲುಪಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಟೊಮೊಟೊಗೂ ಬಂತು ಕೊರೊನಾಗಿಂತ ಡೆಡ್ಲಿ ವೈರಸ್: ನೀವು ನಂಬುತ್ತೀರಾ?


