ಯುವಕನೊಬ್ಬ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡು ರಸ್ತೆ ಮಧ್ಯೆ ಯುವತಿಯೊಬ್ಬರ ಕತ್ತು ಹಿಸುಕಲು ಪ್ರಯತ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋದಲ್ಲಿ, ದಾಳಿ ಮಾಡಿದವನಿಂದ ಯುವತಿಯನ್ನು ರಕ್ಷಿಸಲು ಹಲವಾರು ಜನರು ಮಧ್ಯಪ್ರವೇಶಿಸುತ್ತಿರುವುದನ್ನು ಕಾಣಬಹುದು.
ಈ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. “ತಾನು ಕರೆದಾಗ ಬರದ ಹಿಂದೂ ಯುವತಿಯನ್ನು ಮುಸ್ಲಿಂ ವ್ಯಕ್ತಿಯೊಬ್ಬ ಕೊಲ್ಲಲು ಯತ್ನಿಸಿದ್ದಾನೆ” ಎಂದು ಆರೋಪಿಸಲಾಗಿದೆ.
ಜನವರಿ 6ರಂದು ‘ಯತಿ ನರಸಿಂಗಾನಂದ ಸರಸ್ವತಿ’ ಎಂಬ ಎಕ್ಸ್ ಖಾತೆಯಲ್ಲಿ ವೈರಲ್ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಈ ಘಟನೆ ಉತ್ತರ ಪ್ರದೇಶದ ಅಮ್ರೋಹದಲ್ಲಿ ನಡೆದಿದೆ. ಜಿಹಾದಿಯೊಬ್ಬ ಹಿಂದೂ ಯುವತಿ ಮೇಲೆ ದಾಳಿ ನಡೆಸಲು ಯತ್ನಿಸಿದ್ದ. ಈ ವೇಳೆ ರಕ್ಷಣೆಗೆ ಬಂದ ಹಿಂದೂ ಯುವಕರು, ಆತನ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ” ಎಂದು ಬರೆದುಕೊಂಡಿದ್ದರು.

ಫೈಟರ್ 3.0 ಎಂಬ ಮತ್ತೊಬ್ಬರು ಎಕ್ಸ್ ಬಳಕೆದಾರರು ಕೂಡ ಅದೇ ಪ್ರತಿಪಾದನೆಯೊಂದಿಗೆ ಜನವರಿ 5ರಂದು ವೈರಲ್ ವಿಡಿಯೋ ಹಂಚಿಕೊಂಡಿದ್ದರು.

ನಮ್ರತಾ ಸಿಂಗ್ ಎಂಬ ಇನ್ನೊಬ್ಬರು ಎಕ್ಸ್ ಬಳಕೆದಾರರು ಜನವರಿ 6ರಂದು ವಿಡಿಯೋ ಹಂಚಿಕೊಂಡು ಮೇಲ್ಗಡೆ ಉಲ್ಲೇಖಿಸಿದ ಖಾತೆಗಳಲ್ಲಿ ಮಾಡಿದ್ದ ಪ್ರತಿಪಾದನೆಯನ್ನೇ ಮಾಡಿದ್ದರು.

ಫ್ಯಾಕ್ಟ್‌ಚೆಕ್
ವೈರಲ್ ವಿಡಿಯೋ ಕುರಿತು ಸತ್ಯಾಸತ್ಯತೆ ಪರಿಶೀಲಿಸಲು ನಾವು ಅದಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಹುಡುಕಿದ್ದೇವೆ. ಈ ವೇಳೆ ಜನವರಿ 6, 2025ರಂದು ಅಮರ್ ಉಜಾಲ ವೆಬ್‌ಸೈಟ್ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ.
ವರದಿಯ ಪ್ರಕಾರ, ಈ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಗಜ್ರೌಲಾದಲ್ಲಿ ಸಂಭವಿಸಿದೆ. ಹಾಡಹಗಲೇ ಯುವಕನೊಬ್ಬ ಮಫ್ಲರ್ ಹಾಕಿಕೊಂಡು ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಕತ್ತು ಹಿಸುಕಲು ಯತ್ನಿಸಿದ್ದಾನೆ. ಅದು ವಿಫಲವಾದಾಗ ಆತ ಸ್ಥಳದಿಂದ ಪರಾರಿಯಾಗಿ ಮೊರಾದಾಬಾದ್‌ನಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿ ಆಶ್ರಯ ಪಡೆದಿದ್ದ. ಪೊಲೀಸರು ಆತನನ್ನು ಪತ್ತೆಹಚ್ಚಿ, ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ಆತನನ್ನು ಜೈಲಿಗೆ ಕಳುಹಿಸಲಾಗಿದೆ. ಆರೋಪಿಯನ್ನು ಅಮ್ರೋಹಾ ಜಿಲ್ಲೆಯ ಹಳ್ಳಿಯೊಂದರ ನಿವಾಸಿ ರಾಹುಲ್ ಎಂದು ಗುರುತಿಸಲಾಗಿದೆ.

ಅಮ್ರೋಹಾ ಪೊಲೀಸರ ಎಕ್ಸ್ ಹ್ಯಾಂಡಲ್ ಅನ್ನೂ ನಾವು ಪರಿಶೀಲಿಸಿದ್ದೇವೆ. ಅದರಲ್ಲಿ ಪೊಲೀಸರು ಘಟನೆ ಕುರಿತು ಸ್ಪಷ್ಟೀಕರಣ ನೀಡಿರುವುದು ಕಂಡು ಬಂದಿದೆ.
“ಪ್ರಕರಣ ಸಂಬಂಧ ಆರೋಪಿಯನ್ನು ಈಗಾಗಲೇ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಒಂದೇ ಜಾತಿಯವರು ಮತ್ತು ಪರಸ್ಪರ ಪರಿಚಿತರು. ಹಾಗಾಗಿ, ದಯವಿಟ್ಟು ದಾರಿ ತಪ್ಪಿಸುವ ಸುದ್ದಿಗಳನ್ನು ಹರಡಬೇಡಿ” ಎಂದು ಪೊಲೀಸರು ತಿಳಿಸಿದ್ದಾರೆ.
महोदय, कृपया अवगत कराना है कि उपरोक्त प्रकरण में प्राप्त तहरीर के आधार पर अभियोग पंजीकृत है, अभियुक्त को गिरफ्तार कर जेल भेजा जा चुका है। दोनो पक्ष सजातीय हैं तथा पूर्व परिचित हैं। कृपया भ्रामक खबर न फेलाये।
— Amroha Police (@amrohapolice) January 7, 2025
ಮಾಧ್ಯಮ ವರದಿ ಮತ್ತು ಪೊಲೀಸರ ಸೃಷ್ಟೀಕರಣದಿಂದ ವೈರಲ್ ವಿಡಿಯೋ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಗಜ್ರೌಲಾದಲ್ಲಿ ನಡೆದ ಘಟನೆಯದ್ದು, ಅದರ ಹಿಂದೆ ಯಾವುದೇ ಕೋಮು ಆಯಾಮಗಳಿಲ್ಲ. ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳಲ್ಲಿ ಮಾಡಿರುವ ಪ್ರತಿಪಾದನೆ ಸುಳ್ಳು ಎಂದು ಗೊತ್ತಾಗಿದೆ.
FACT CHECK | ಶೀಘ್ರದಲ್ಲೇ ಆರ್‌ಬಿಐನಿಂದ 5 ಸಾವಿರ ರೂಪಾಯಿಯ ಹೊಸ ನೋಟು ಬಿಡುಗಡೆ?..ಈ ಸ್ಟೋರಿ ಓದಿ


