ರಾತ್ರಿ ಹೊತ್ತು ರಸ್ತೆಯಲ್ಲಿ ಕುಳಿತಿರುವ ಹುಲಿಯೊಂದರ ತಲೆ ಸವರುವ ವ್ಯಕ್ತಿ, ತನ್ನ ಕೈಯ್ಯಲ್ಲಿದ್ದ ಮದ್ಯದ ಬಾಟಲಿಯಿಂದ ಹುಲಿಗೆ ಮದ್ಯ ಕುಡಿಸಲು ಯತ್ನಿಸಿದ 6 ಸೆಕೆಂಡುಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಇದು ಮಧ್ಯಪ್ರದೇಶದಲ್ಲಿ ನಡೆದ ಘಟನೆ ಎಂದು ಈ ವಿಡಿಯೋ ಕುರಿತು ಕೆಲ ಮುಖ್ಯ ವಾಹಿನಿ ಮಾಧ್ಯಮಗಳು ಕೂಡ ಸುದ್ದಿ ಮಾಡಿವೆ. ಅನೇಕ ಪ್ರಮುಖ ವ್ಯಕ್ತಿಗಳೇ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಲು ಸಿಸಿಟಿವಿ ಕ್ಯಾಮಾರದಲ್ಲಿ ರೆಕಾರ್ಡ್ ಆದ ದೃಶ್ಯದಂತಿದೆ.

“ರಾಜು ಎಂಬ 52 ವರ್ಷದ ವ್ಯಕ್ತಿ ತಡರಾತ್ರಿ ಮದ್ಯಪಾನ ಮಾಡಿ, ಇಸ್ಪೀಟ್ ಆಡಿದ ಬಳಿಕ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಹರಡಿಕೊಂಡಿರುವ ಪೆಂಚ್ ಹುಲಿ ಅಭಯಾರಣ್ಯದಿಂದ ಅಲೆದಾಡುತ್ತಾ ಬಂದ ಹುಲಿ ರಸ್ತೆ ಮಧ್ಯೆ ಕುಳಿತಿತ್ತು. ಅದನ್ನು ದೊಡ್ಡ ಬೆಕ್ಕು ಎಂದುಕೊಂಡ ರಾಜು ತಲೆ ಸವರಿ ಮದ್ಯ ಕುಡಿಸಿದ್ದಾರೆ. ಕೊನೆಗೆ ಅರಣ್ಯ ಅಧಿಕಾರಿಗಳು ಹುಲಿಯನ್ನು ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಹುಲಿಗೆ ಮದ್ಯ ಕುಡಿಸಿದ ರಾಜು ಸ್ಥಳೀಯ ಮಟ್ಟದಲ್ಲಿ ಹೀರೋ ಆಗಿದ್ದಾರೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡ ಕೆಲವರು ಬರೆದುಕೊಂಡಿದ್ದಾರೆ.
@808constituent ಎಂಬ ಎಕ್ಸ್ ಬಳಕೆದಾರ ಅಕ್ಟೋಬರ್ 23, 2025ರಂದು ವೈರಲ್ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದರು. ಈ ವರದಿ ಬರೆಯುವ ಹೊತ್ತಿಗೆ ಆ ಪೋಸ್ಟ್ 68 ಸಾವಿರ ವೀಕ್ಷಣೆಗಳನ್ನು ಪಡೆದಿತ್ತು. ಅವರು ಪೋಸ್ಟ್ ಮಾಡಿರುವ ವಿಡಿಯೋ ಈಗಲೂ ಎಕ್ಸ್‌ನಲ್ಲಿ ಇದೆ. ಎಕ್ಸ್ ಇದುವರೆಗೆ ವಿಡಿಯೋ ಬಗ್ಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.
On October 4, 2025, in Pench, India, a surreal moment was captured on CCTV. The photo shows Raju Patel, a 52-year-old laborer, patting a tiger he mistook for a "big cat" after a late-night card game. Tipsy from homemade liquor, Raju stumbled onto a street where a sub-adult Bengal… pic.twitter.com/FXbZsGeawy
— Constituent 🇺🇸🌺🐦🕊️ 🕉️ (@808constituent) October 23, 2025
ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ಒಳಗೊಂಡ ಸುದ್ದಿ ಪೋರ್ಟಲ್ ‘ಗ್ರೇಟರ್ ಆಂಧ್ರ ನ್ಯೂಸ್’ ಕೂಡ ಅಕ್ಟೋಬರ್ 29ರಂದು ವೈರಲ್ ವಿಡಿಯೋವನ್ನು ಹಂಚಿಕೊಂಡಿತ್ತು. ಇದೂ ಕೂಡ ಮಧ್ಯಪ್ರದೇಶದ ಪೆಂಚ್ ರಾಷ್ಟ್ರೀಯ ಉದ್ಯಾನವನದ ಸಿಸಿಟಿವಿ ದೃಶ್ಯ ಎಂದು ಹೇಳಿತ್ತು.

‘ರಿದ್ಧಿ ರಣಥಂಬೋರ್ ಸಫಾರಿ‘ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ವೈರಲ್ ಕ್ಲಿಪ್ ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್‌ಚೆಕ್ : ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿರುವುದರಿಂದ ನಾವು ಇದರ ಸತ್ಯಾಸತ್ಯತೆ ತಿಳಿಯಲು ಮುಂದಾದೆವು. ಮೊದಲು ನಾವು ಈ ವಿಡಿಯೋ ಕುರಿತು ಯಾವುದಾದರು ಮಾಧ್ಯಮಗಳಲ್ಲಿ ಸುದ್ದಿ ಆಗಿದೆಯೇ ಎಂದು ಪರಿಶೀಲಿಸಿದೆವು.
ಈ ವೇಳೆ ಕೆಲ ಕನ್ನಡ ಮಾಧ್ಯಮಗಳ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಪೋಸ್ಟ್ ಮಾಡಿರುವುದು ಕಂಡು ಬಂದಿದೆ. ಇತರ ಭಾಷೆಗಳ ಮಾಧ್ಯಮಗಳ ಪೇಜ್‌ಗಳಲ್ಲೂ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಆದರೂ, ನಮಗೆ ಆ ಮಾಧ್ಯಮಗಳ ಸುದ್ದಿಯ ನಿಖರತೆಯ ಬಗ್ಗೆ ಅನುಮಾನ ಮೂಡಿತು. ಹಾಗಾಗಿ, ವಿಡಿಯೋದ ಸತ್ಯಾಸತ್ಯತೆ ಕುರಿತು ಹೆಚ್ಚಿನ ಮಾಹಿತಿ ಹುಡುಕಾಡಿದೆವು.
ಈ ವೇಳೆ ಆಲ್ಟ್ ನ್ಯೂಸ್, ಫ್ಯಾಕ್ಟ್‌ಲೀ ಸೇರಿದಂತೆ ಅನೇಕ ಫ್ಯಾಕ್ಟ್ ಚೆಕ್ ಸುದ್ದಿ ಸಂಸ್ಥೆಗಳು ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್ ಮಾಡಿರುವುದು ಕಂಡು ಬಂದಿದೆ.
ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹಲವಾರು ದೃಶ್ಯ ವ್ಯತ್ಯಾಸಗಳು ಕಂಡು ಬರುತ್ತವೆ. ಇದು ವಿಡಿಯೋವನ್ನು ಕೃತಕವಾಗಿ ರಚಿಸಿರುವುದನ್ನು ಸೂಚಿಸುತ್ತದೆ. ಉದಾಹರಣೆಗೆ : ಮನುಷ್ಯ ಹುಲಿಯನ್ನು ಮುದ್ದಿಸುತ್ತಿದ್ದಂತೆ, ಮದ್ಯದ ಬಾಟಲಿಯ ಕುತ್ತಿಗೆಯ ಗಾತ್ರ ಕಡಿಮೆಯಾಗುತ್ತದೆ ಮತ್ತು ನಂತರ ಅದರ ಮೂಲ ಗಾತ್ರಕ್ಕೆ ಮರಳುತ್ತದೆ. ಇದಲ್ಲದೆ, ಹಿಂದುಗಡೆ ಮನೆಯ ವರಾಂಡಾದಲ್ಲಿ ಕುಳಿತಿರುವ ಇಬ್ಬರು ವ್ಯಕ್ತಿಗಳ ಚಲನೆಯು ವಿರೂಪಗೊಂಡಂತೆ ಕಾಣುತ್ತದೆ. ಇದು ಕೃತಕವಾಗಿ ರಚಿಸಲಾದ ಕ್ಲಿಪ್‌ಗಳ ಮತ್ತೊಂದು ವಿಶಿಷ್ಟ ಲಕ್ಷಣವಾಗಿದೆ ಎಂದು ಅಲ್ಟ್ ನ್ಯೂಸ್ ಹೇಳಿದೆ.


ವೈರಲ್ ವಿಡಿಯೋ ಕುರಿತು ಮಾಹಿತಿ ಪಡೆಯಲು ನಾವು ಪೆಂಚ್ ಹುಲಿ ಸಂರಕ್ಷಿತ ಅಭಯಾರಣ್ಯದ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ನಮ್ಮ ಸಂಪರ್ಕಕ್ಕೆ ಅವರು ಸಿಕ್ಕಿಲ್ಲ. ಆದರೆ, ಅಕ್ಟೋಬರ್ 29ರಂದು ‘ದಿ ಸೂತ್ರ್’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ವರದಿಯಲ್ಲಿ, “ಮೀಸಲು ಅರಣ್ಯ ಪ್ರದೇಶದ ಉಪ ನಿರ್ದೇಶಕ ರಜನೀಶ್ ಸಿಂಗ್ ಅವರು ವೈರಲ್ ವಿಡಿಯೋ ಪೆಂಚ್ ಅಭಯಾರಣ್ಯದ ಪ್ರದೇಶದ್ದು ಎಂಬುವುದನ್ನು ತಳ್ಳಿ ಹಾಕಿದ್ದನ್ನು ಉಲ್ಲೇಖಿಸಲಾಗಿದೆ ಎಂದು ಆಲ್ಟ್ ನ್ಯೂಸ್ ಹೇಳಿದೆ.

ನಮಗೆ ಲಭ್ಯವಾದ ಮಾಹಿತಿ, ವಿಡಿಯೋದಲ್ಲಿ ಕಾಣುವ ಕೆಲ ಸೂಕ್ಷ ವ್ಯತ್ಯಾಸಗಳಿಂದ ವೈರಲ್ ವಿಡಿಯೋ ಕೃತಕ ಬುದ್ದಿಮತ್ತೆ (ಎಐ) ಮೂಲಕ ಸೃಷ್ಟಿಸಿದ್ದು ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇನೆ. ಅಲ್ಲದೆ, ಅಕ್ಟೋಬರ್ 4ರಂದು ಪೆಂಚ್ ಅರಣ್ಯದಿಂದ ಹುಲಿ ತಪ್ಪಿಸಿಕೊಂಡ ಬಗ್ಗೆ ಎಲ್ಲೂ ಅಧಿಕೃತ ವರದಿಯಾಗಿಲ್ಲ ಎಂದು ಅಲ್ಟ್ ನ್ಯೂಸ್ ಹೇಳಿದೆ.
ವೈರಲ್ ವಿಡಿಯೋ ನಕಲಿ ಎಂದು ಪೆಂಚ್ ಟೈಗರ್ ರಿಸರ್ವ್ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂಬ ಭಾಸ್ಕರ್ ಇಂಗ್ಲಿಷ್ ವರದಿ ನಮಗೆ ಲಭ್ಯವಾಗಿದೆ ಎಂದು ಫ್ಯಾಕ್ಟ್‌ಚೆಕ್ ಸುದ್ದಿ ವೆಬ್‌ಸೈಟ್ ಫ್ಯಾಕ್ಟ್‌ಲೀ ಹೇಳಿದೆ.

ನಾವು ಪೆಂಚ್ ಹುಲಿ ಸಂರಕ್ಷಿತ ಪ್ರದೇಶದ ಉಪ ನಿರ್ದೇಶಕ ರಜನೀಶ್ ಕುಮಾರ್ ಸಿಂಗ್ ಅವರನ್ನು ಸಂಪರ್ಕಿಸಿದಾಗ, ಅವರು ವೈರಲ್ ವಿಡಿಯೋ ನಕಲಿ ಎಂದು ದೃಢಪಡಿಸಿದ್ದಾರೆ. ಇತ್ತೀಚೆಗೆ ಹುಲಿಗೆ ಸಂಬಂಧಿಸಿದ ಯಾವುದೇ ಘಟನೆಗಳು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಫ್ಯಾಕ್ಟ್‌ಲೀ ತಿಳಿಸಿದೆ.
ಎಐ ವಿಷಯಗಳ ಪತ್ತೆ ಸಾಧನ ‘ಹೈವ್ ಮಾಡರೇಶನ್’ ಮೂಲಕ ನಾವು ವಿಡಿಯೋವನ್ನು ಪರಿಶೀಲಿಸಿದ್ದೇವೆ. ಅದು ವೈರಲ್ ವಿಡಿಯೋ ಶೇಕಡ 99ರಷ್ಟು ಎಐ ರಚಿತ ಎಂದು ಹೇಳಿದೆ. ವಿಡಿಯೋ ಕೃತವಾಗಿ ರಚಿತವಾಗಿದ್ದು ಎಂಬುವುದನ್ನು ಬಲವಾಗಿ ಹೇಳಿದೆ ಎಂದು ಫ್ಯಾಕ್ಟ್‌ಲೀ ತಿಳಿಸಿದೆ. ಹಾಗಾಗಿ, ವೈರಲ್ ವಿಡಿಯೋ ಎಐ ರಚಿತ ಎಂದಿದೆ.


