ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಗೂ ಮೊದಲು ಇದ್ದ ಕಾಶ್ಮೀರದ ಪರಿಸ್ಥಿತಿಗೂ ಮತ್ತು ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ನಂತರ ಕಾಶ್ಮೀರದ ಪರಿಸ್ಥಿತಿಗೂ ಎಷ್ಟೊಂದು ವ್ಯತ್ಯಾಸ ಇದೆ ನೋಡಿ ಎಂಬ ಹೇಳಿಕೆಯೊಂದಿಗೆ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಸ್ವಾತಂತ್ಯ್ರ ಬಂದಾಗಿನಿಂದ ಕಾಶ್ಮೀರ ಕುರಿತು ಪ್ರಮುಖ ರಾಜಕೀಯ ಪಕ್ಷಗಳ ನಿಲುವುಗಳು ಮತ್ತು ಸಮಸ್ಯೆಗಳನ್ನು ನೋಡುವ ರೀತಿಯಿಂದಾಗಿ ಕಾಶ್ಮೀರ ಎಂಬ ಕಣಿವೆ ರಾಜ್ಯ ಇಂದಿಗೂ ಉರಿವ ಕೆಂಡದಂತೆ ಭಾಸವಾಗುತ್ತಿದೆ. ಇದರ ನಡುವೆ ಕಾಶ್ಮೀರದಲ್ಲಿ ಹಿಂದೂ ಪಂಡಿತರನ್ನು ಹಿಂಸಾತ್ಮಕವಾಗಿ ನಡೆಸಿಕೊಳ್ಳಲಾಗಿದೆ, ಹತ್ಯೆ ಮಾಡಲಾಗಿದೆ ಎಂದು ಕತೆಯನ್ನ ಹೇಳುವ ‘ದ ಕಾಶ್ಮೀರ್ ಫೈಲ್ಸ್’ ಎಂಬ ಬಿಜೆಪಿ ಪರವಾಗಿ ಪ್ರೊಪಗಾಂಡ ಸೃಷ್ಟಿಸುವ ಸಿನಿಮಾ ಬಿಡುಗಡೆ ಆಗಿದ್ದು ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ತಾಲಿಬಾನ್‌ಗೆ ಥ್ಯಾಂಕ್ಸ್ ಹೇಳಿದ ಈ ಟ್ವಿಟರ್ ಅಕೌಂಟ್ ದಿಟ್ಟ ವಿದ್ಯಾರ್ಥಿನಿ ಮುಸ್ಕಾನ್ ಅವರದ್ದಲ್ಲ
ವೈರಲ್ ಪೋಸ್ಟ್‌ನಲ್ಲಿ ಇರುವ ವಿಡಿಯೊದಲ್ಲಿ ಸೇನೆಯ ವಾಹನಗಳಿಗೆ ತಡೆಯೊಡ್ಡಿ, ಕಲ್ಲು ಮತ್ತು ದೊಣ್ಣೆಗಳಿಂದ ಹೊಡೆದು ಸೇನಾವಾಹನವನ್ನು ಹಿಮ್ಮೆಟ್ಟಿಸುವ ಕ್ಲಿಪ್‌ಗಳು ಮತ್ತೊಂದು ಕಡೆ ಸೇನಾ ವಾಹನದ ಮುಂಭಾಗಕ್ಕೆ ವ್ಯಕ್ತಿಯೊಬ್ಬನನ್ನು ಕಟ್ಟಿ ಮೆರವಣಿಗೆ ಮಾಡುತ್ತಿರುವ ದೃಶ್ಯಗಳನ್ನು ವೈರಲ್ ವೀಡಿಯೋದಲ್ಲಿ ಕಾಣಬಹುದು. ಹಾಗಿದ್ದರೆ ಈ ವೈರಲ್ ವಿಡಿಯೊದಲ್ಲಿ ಕಾಣುತ್ತಿರುವ ಘಟನೆಗಳು ಯಾವ ಸಂದರ್ಭಗಳಲ್ಲಿ ನಡೆದಿದೆ ಎಂದು ತಿಳಿದುಕೊಳ್ಳುವ ಮೂಲಕ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್
ವೀಡಿಯೊದ ಸ್ಕ್ರೀನ್‌ಶಾಟ್‌ಗಳ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯ ಮೊದಲು ಎಂದು ಹೇಳಿಕೊಳ್ಳುವ ದೃಶ್ಯಗಳು ಸಹ 2019 ರಲ್ಲಿ ಸೆರೆಯಾದ ದೃಶ್ಯಗಳಾಗಿವೆ.
31 ಮೇ 2019 ರಂದು ಶ್ರೀನಗರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಮುಸುಕುಧಾರಿಗಳು ಜಮ್ಮು ಕಾಶ್ಮೀರದ ಪೊಲೀಸ್ ವಾಹನಕ್ಕೆ ಕಲ್ಲು ತೂರಾಟ ಮಾಡಿ ವಾಹನವನ್ನು ತಡೆಯುತ್ತಿರುವ ದೃಶ್ಯಗಳು ಎಂಬ ಮಾಹಿತಿ ಲಭ್ಯವಾಗಿದೆ. ಈ ದೃಶ್ಯಗಳನ್ನು ಸೆರೆ ಹಿಡಿದ ವ್ಯಕ್ತಿಯು ಅಸೋಸಿಯೇಟೆಡ್ ಪ್ರೆಸ್‌ನಲ್ಲಿ ಕೆಲಸ ಮಾಡಿದ ದಾರ್ ಯಾಸಿನ್ ಎಂದು ತಿಳಿದು ಬಂದಿದೆ. ವಾಹನದ ಬಾನೆಟ್ ಮೇಲೆ ಹಾರಿದ ವ್ಯಕ್ತಿಯ ಚಿತ್ರವನ್ನು ಸರೆ ಹಿಡಿದ ಕಾರಣಕ್ಕೆ ವಿಶೇಷ ಫೋಟೋಗ್ರಫಿ ಎಂದು ಗುರುತಿಸಿ ಅವರಿಗೆ 2020 ರಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ನೀಡಲಾಗಿತ್ತು.
ಶ್ರೀನಗರದಲ್ಲಿ ಈ ಘಟನೆ ಸಂಭವಿಸುವ ಕೆಲವು ದಿನಗಳ ಮೊದಲು, ಬಿಜೆಪಿ ಸರ್ಕಾರವು ಪೂರ್ಣ ಬಹುಮತದೊಂದಿಗೆ ಎರಡನೆ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತ್ತು. ಈ ಸಮಯದಲ್ಲಿ (2019) ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆಯಲ್ಲಿತ್ತು ಎಂಬುದು ಗಮನಾರ್ಹವಾಗಿದೆ.
A masked Kashmiri protester jumps on the hood of an armored vehicle of Indian police as he throws stones at it during a protest in Srinagar, May 31, 2019. pic.twitter.com/69KZ16XqtC
— The Associated Press (@AP) May 5, 2020
ಮೇ 31, 2019 ರಂದು ಶ್ರೀನಗರದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮುಸುಕುಧಾರಿ ಕಾಶ್ಮೀರಿ ಪ್ರತಿಭಟನಾಕಾರನು ಭಾರತೀಯ ಪೋಲೀಸರ ಶಸ್ತ್ರಸಜ್ಜಿತ ವಾಹನದ ಮೇಲೆ ಕಲ್ಲುಗಳನ್ನು ಎಸೆಯುತ್ತಿದ್ದಾಗ ಅದರ ಮೇಲೆ ಹಾರಿದ್ದಾನೆ. ಈ ದೃಶ್ಯವನ್ನು ದಾರ್ ಯಾಸಿನ್ ಸೆರೆ ಹಿಡಿದಿದ್ದರು.
ವ್ಯಕ್ತಿಯೊಬ್ಬನನ್ನು ವಾಹನಕ್ಕೆ ಕಟ್ಟಿಹಾಕಿರುವ ದೃಶ್ಯವು 2017 ರದ್ದು. ಸುದ್ದಿ ವರದಿಗಳ ಪ್ರಕಾರ, ಜಮ್ಮು ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಜೀಪಿನ ಮುಂಭಾಗಕ್ಕೆ ಕಾಶ್ಮೀರಿ ವ್ಯಕ್ತಿಯೊಬ್ಬನನ್ನು ಕಟ್ಟಲಾಗಿತ್ತು. ಭಾರತೀಯ ಸೇನೆಯ ಅಧಿಕಾರಿಯೊಬ್ಬರು ಕಲ್ಲು ಎಸೆಯುವವರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ವ್ಯಕ್ತಿಯನ್ನು ತಮ್ಮ ವಾಹನದ ಮುಂಭಾಗಕ್ಕೆ ಕಟ್ಟುವ ಮೂಲಕ ಕಲ್ಲು ತೂರಾಟ ಮಾಡುತ್ತಿದ್ದ ಪ್ರತಿಭಟನಕಾರರಿಂದ ರಕ್ಷಣೆ ಪಡೆಯುವ ಸಲುವಾಗಿ ‘ಮಾನವ ಗುರಾಣಿ’ಯಾಗಿ ಬಳಸಿಕೊಂಡಿದ್ದರು.
ಈ ಘಟನೆಯು ಏಪ್ರಿಲ್ 2017 ರಲ್ಲಿ ನಡೆದು ವಿಡಿಯೊ ವೈರಲ್ ಆಗಿ ಸಾಕಷ್ಟು ವಿವಾದವನ್ನು ಹುಟ್ಟುಹಾಕಿತ್ತು. 2017 ರ ಸಮಯದಲ್ಲಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಬಿಜೆಪಿ-ಪಿಡಿಪಿ ಸಮ್ಮಿಶ್ರ ಸರ್ಕಾರದ ಆಳ್ವಿಕೆಯಲ್ಲಿತ್ತು.

ಮಿಲಿಟರಿ ಸಮವಸ್ತ್ರದಲ್ಲಿರುವ ಸಿಬ್ಬಂದಿ ಮೂವರನ್ನು ವಿಚಾರಣೆ ನಡೆಸುತ್ತಿರುವ ದೃಶ್ಯಗಳನ್ನು ಕನಿಷ್ಠ 2017 ರಿಂದ ಇಂಟರ್ನೆಟ್‌ನಲ್ಲಿ ಹಂಚಿಕೊಳ್ಳಲಾಗಿದೆ (ಇಲ್ಲಿ ಮತ್ತು ಇಲ್ಲಿ ಅದನ್ನು ನೋಡಬಹುದು).
ಒಟ್ಟಾರೆಯಾಗಿ ಹೇಳುವುದಾದರೆ, ಈ ವಿಡಿಯೋದಲ್ಲಿರುವ ಘಟನೆಗಳು ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ನಡೆದಿವೆ. ಹಾಗಾಗಿ ವೈರಲ್ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯು ಸುಳ್ಳಾಗಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಲಂಗರ್‌ನ ಈ ಚಿತ್ರ ಯುದ್ದ ಪೀಡಿತ ಉಕ್ರೇನ್ ದೇಶದ್ದಲ್ಲ


