Homeದಿಟನಾಗರಫ್ಯಾಕ್ಟ್‌ಚೆಕ್‌: ರಾಯಚೂರಿನಲ್ಲಿ ಮಸೀದಿ ಕೆಡವಿದಾಗ ದೇವಾಲಯ ಪತ್ತೆಯಾಯಿತೆ?

ಫ್ಯಾಕ್ಟ್‌ಚೆಕ್‌: ರಾಯಚೂರಿನಲ್ಲಿ ಮಸೀದಿ ಕೆಡವಿದಾಗ ದೇವಾಲಯ ಪತ್ತೆಯಾಯಿತೆ?

- Advertisement -
- Advertisement -

ರಾಯಚೂರಿನಲ್ಲಿ ಮಸೀದಿಯನ್ನು ಕೆಡವಿದಾಗ ದೇವಾಲಯ ಪತ್ತೆಯಾಗಿದೆ ಎಂದು ಫೋಟೋವೊಂದು ವೈರಲ್‌ ಆಗಿದೆ. ಅನೇಕರು ಇದೇ ಅಭಿಪ್ರಾಯದೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ.

“ಭಾರತದಲ್ಲಿನ ನೀವು ಹಳೆಯ ಮಸೀದಿಗಳನ್ನು ಕೆಡವಿದರೆ ಒಳಗೆ ನೀವು ಐತಿಹಾಸಿಕ, ಪುರಾಣಪ್ರಸಿದ್ಧ ದೇವಾಲಯಗಳನ್ನು ಕಾಣಬಹುದು. ಈ ಮೊಘಲ್‌ ಭಯೋತ್ಪಾದಕರು ಖಾಲಿ ಜಾಗದಲ್ಲಿ ಮಸೀದಿಗಳನ್ನು ಕಟ್ಟಿಲ್ಲ. ನಮ್ಮ ಪವಿತ್ರ ದೇವಾಲಯಗಳನ್ನು ಕೆಡವಿ ಅದರ ಮೇಲೆ ಮಸೀದಿ ನಿರ್ಮಿಸಿದ್ದಾರೆ” ಎಂದು ಮತೀಯ ಗಲಭೆ ಸೃಷ್ಟಿಸಲು ಯತ್ನಿಸಲಾಗಿದೆ.

ರಾಯಚೂರಿನಲ್ಲಿ ದೇವಾಲಯ ಪತ್ತೆಯಾಗಿರುವ ಸತ್ಯಸತ್ಯತೆಯನ್ನು ಪರಿಶೀಲಿಸುವಂತೆ ಆಲ್ಟ್‌ ನ್ಯೂಸ್‌‌ ವಾಟ್ಸ್‌ಆಪ್‌ ಸಹಾಯವಾಣಿಯಲ್ಲಿ (91 76000 11160) ಓದುಗರು ಕೇಳಿಕೊಂಡಿದ್ದು, ನಿಜಾಂಶವನ್ನು ಆಲ್ಟ್‌ನ್ಯೂಸ್ ನೀಡಿದೆ.

ನಿಜವೇನು?

ಈ ಚಿತ್ರವು ಕಲಾವಿದನಿಂದ ಸೃಷ್ಟಿಯಾದ ಒಂದು ಕಲಾಕೃತಿಯಾಗಿರುವುದು ವಾಸ್ತವವಾಗಿದೆ. ಚಿತ್ರದ ಕೆಳಗೆ ‘chandra colourist’ ಎಂಬ ಲೋಗೋ ಇದೆ. chandra colourist ಹೆಸರಿನ ಖಾತೆಯಲ್ಲಿ ಮೇ 8, 2016ರಲ್ಲಿ ಇದೇ ರೀತಿಯ ಫೋಟೋವನ್ನು ಪೋಸ್ಟ್‌ ಮಾಡಲಾಗಿದೆ. ‘ಇದು ಎಲ್ಲಿಯ ಫೋಟೋ’ ಎಂದು ಬಂದಿರುವ ಕಮೆಂಟ್‌ಗೆ ‘ಇದು ನನ್ನ ಡಿಜಿಟಲ್‌ ಕಲಾಕೃತಿ’ ಎಂದು ಕಲಾವಿದ ಪ್ರತಿಕ್ರಿಯೆ ನೀಡಿರುವುದನ್ನು ಕಾಣಬಹುದು.

ಮತ್ತಷ್ಟು ಹುಡುಕಾಡಿದಾಗ ಫೋಟೋಗ್ರಾಫರ್‌ Meiqianbao ಅವರು ಕ್ಲಿಕ್ಕಿಸಿರುವ ಫೋಟೋವೊಂದು ಗೂಗಲ್‌ನಲ್ಲಿ ಸಿಕ್ಕಿದ್ದು, ಅದು ಚಂದ್ರು ಅವರ ಕಲಾಕೃತಿಗೆ ಪ್ರೇರಣೆಯಾಗಿರುವ ಫೋಟೋವಾಗಿರಬಹುದು. ಎರಡು ಚಿತ್ರಗಳನ್ನು ಎಚ್ಚರಿಕೆಯಿಂದ ಗಮನಿಸಿದರೆ ಎರಡೂ ಫೋಟೋಗಳಲ್ಲಿನ ಹೋಲಿಕೆಯನ್ನು ಗುರುತಿಸಬಹುದು ಎಂದು ಆಲ್ಟ್‌ ನ್ಯೂಸ್‌ ಹೇಳಿದೆ.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌: 2014 ರ ಬೀದಿ ನಾಟಕದ ದೃಶ್ಯ ‘ತಾಲಿಬಾನ್ ಮಹಿಳೆಯನ್ನು ಮಾರುತ್ತಿದೆ’ ಎಂದು ವೈರಲ್‌!

ಅಮೆರಿಕ ಮೂಲದ ಫೋಟೋ ಶೇಖರಣಾ ಏಜೆನ್ಸಿಯಾದ ‘ಶಟ್ಟರ್‌ಸ್ಟಾಕ್‌’ ಪ್ರಕಾರ, ಚೀನಾದ ಹೆನಾನ್‌‌ನ ಲುವೊಯಾಂಗ್ನಲ್ಲಿರುವ ಲಾಂಗ್‌ಮೆನ್ ಗ್ರೊಟ್ಟೋಸ್ -ಫೆಂಗ್‌ಕ್ಸಿಯಾಂಗ್ ದೇವಾಲಯದ ಕಲ್ಲಿನ ಬುದ್ಧ ವಿಗ್ರಹ ಇದಾಗಿದೆ.

ಆದರೆ ಈ ಫೋಟೋ ರಾಯಚೂರಿನಲ್ಲಿ ಮಸೀದಿಯನ್ನು ದ್ವಂಸ ಮಾಡಿದಾಗ ಸಿಕ್ಕ ದೇವಾಲಯದ ಫೋಟೋವೆಂದು ಹಬ್ಬಿಸಲಾಗುತ್ತಿದೆ.  “ಇದು ನಮ್ಮನ್ನು ಮತ್ತೊಂದು ಪ್ರಶ್ನೆಗೆ ಹಚ್ಚಿತು- ರಾಯಚೂರಿನಲ್ಲಿ ಮಸೀದಿಯನ್ನು ಕೆಡವಿದಾಗ ದೇವಾಲಯ ಪತ್ತೆಯಾಯಿತೇ” ಎಂದು ಪರಿಶೀಲನೆ ಮುಂದುವರಿಸಿರುವ ಆಲ್ಟ್‌ ನ್ಯೂಸ್‌ನವರು, ಫೇಕ್‌ ನ್ಯೂಸ್‌ ಕಾರ್ಖಾನೆಗಳನ್ನು ಶೋಧಿಸಿದ್ದಾರೆ.

2016ರಿಂದಲೂ ಇದೇ ಡಿಜಿಟಲ್‌ ಕಲೆಯನ್ನು ಹಂಚಿಕೊಂಡಿರುವುದು ತಿಳಿದುಬಂದಿದೆ. ಉಮಾ ಗಾರ್ಗಿ ಎಂಬವವರು ಮೂರು ವರ್ಷದ ಹಿಂದೆಯೇ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದೇ ರೀತಿಯಲ್ಲಿ ಅನೇಕರು ಟ್ವೀಟ್‌ ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ರಮಣಿ ಪರಶುರಾಮನ್‌ ಅವರು ಮೊದಲು ಹಂಚಿಕೊಂಡಿದ್ದಾರೆ.

2016ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬಹುತೇಕ ಒಂದೇ ರೀತಿಯ ಪಠ್ಯವನ್ನು ಹೊಂದಿರುವ ವಿಭಿನ್ನ ಚಿತ್ರಗಳನ್ನು ನಾವು ಕಂಡುಕೊಂಡಿದ್ದೇವೆ ಎಂದು ಆಲ್ಟ್‌ ನ್ಯೂಸ್ ಹೇಳಿದೆ.

ಫೇಕ್‌ನ್ಯೂಸ್‌ ವೆಬ್‌ಸೈಟ್ ಆಗಿರುವ ‘ಪೋಸ್ಟ್‌ಕಾರ್ಡ್‌’ ಸಂಸ್ಥಾಪಕ ಮಹೇಶ್‌ ವಿಕ್ರಮ್‌ ಹೆಗ್ಡೆ ಹಾಗೂ ಕೆ.ಪಿ.ಗಣೇಶ್‌ (ಪ್ರಧಾನಿ ಮೋದಿಯವರು ಟ್ವಿಟ್ಟರ್‌‌ನಲ್ಲಿ ಅನುಸರಿಸುತ್ತಿರುವವರು), ರಸ್ತೆ ಅಗಲೀಕರಣಕ್ಕಾಗಿ ಮಸೀದಿ ದ್ವಂಸ ಮಾಡಿದಾಗ ರಾಯಚೂರಿನಲ್ಲಿ ದೇವಾಲಯ ಪತ್ತೆಯಾಗಿದೆ ಎಂದು  ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕಾಂಗ್ರೆಸ್‌ಮುಕ್ತ್‌ಭಾರತ್‌ ಟ್ವಿಟರ್‌‌ ಖಾತೆಯಲ್ಲಿ ಇದೇ ಒಕ್ಕಣೆಯೊಂದಿಗೆ ಏಪ್ರಿಲ್‌ 11, 2016ರಂದು ಫೋಟೋವನ್ನು ಟ್ವೀಟ್‌ ಮಾಡಲಾಗಿದೆ.  ಇದು 150ಕ್ಕೂ ಹೆಚ್ಚು ಬಾರಿ ರೀ ಟ್ವೀಟ್ ಆಗಿದೆ. ‘Struggle for Hindu Existence’ ಎಂಬ ವೆಬ್‌ಸೈಟ್‌ನಲ್ಲಿ ಲೇಖನವನ್ನೂ ಇದೇ ಅಭಿಪ್ರಾಯ ಮೂಡುವಂತೆ ಬರೆಯಲಾಗಿದೆ.

2016ರಲ್ಲಿ ರಸ್ತೆ ಅಗಲೀಕರಣ ಮಾಡಲು ಆದೇಶಿಸಿದ್ದ ಹಿಂದಿನ ಜಿಲ್ಲಾಧಿಕಾರಿಯನ್ನು ಆಲ್ಟ್‌ ನ್ಯೂಸ್ ಸಂಪರ್ಕಿಸಿದ್ದು ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

“ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿರುವ ಮಾಹಿತಿಯು ಸುಳ್ಳಾಗಿದೆ. ತೆರವು ಕಾರ್ಯಾಚರಣೆಯಲ್ಲಿ ಕೆಲವು ಸಾಂಪ್ರದಾಯಿಕ ಕಟ್ಟಡಗಳೂ ಇದ್ದವು. ಅತ್ಯಂತ ಹಳೆಯ ಮಾದರಿಯಲ್ಲಿದ್ದ ಎಕ್‌ಮಿನಾರ್‌ ಅನ್ನು ತೆರೆವುಗೊಳಿಸಲಾಯಿತು. ಅಂತಹ ಹಳೆಯ ರಚನೆಗಳು ವಿವಿಧ ಕೆತ್ತನೆಗಳನ್ನು ಹೊಂದಿವೆ. ಕೇವಲ ಒಂದು ಕಂಬದಿಂದಾಗಿ ಇದು ಹಿಂದೆ ದೇವಾಲಯವಾಗಿದೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಕೆಲವು ಗುಂಪುಗಳು ಈ ರೀತಿ ಬಿಂಬಿಸಲು ಯತ್ನಿಸಿದವು. ಪ್ರತಿಕ್ರಿಯೆಗಳು ಬಂದಾಗ ಅವರು ತಮ್ಮ ಪ್ರತಿಪಾದನೆಯನ್ನು ನಿಲ್ಲಿಸಿದರು” ಎಂದು ಆಲ್ಟ್‌ ನ್ಯೂಸ್‌ಗೆ ಅಂದಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.


ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌: ಇದು ಅಯೋಧ್ಯೆ ರೈಲು ನಿಲ್ದಾಣವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...