‘ಮೂವರು ಮುಸ್ಲಿಮ್ ಯುವಕರನ್ನು ಬಲವಂತದ ಮತಾಂತರ ಪ್ರಕರಣದಲ್ಲಿ ಅನಗತ್ಯವಾಗಿ, ತಪ್ಪಾಗಿ ಸಿಕ್ಕಿಸಿಲಾಗಿದೆ’ ಎಂದು ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಪೊಲೀಸ್ ಉನ್ನಾತಾಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಪೊಲೀಸರ ಈ ಒಪ್ಪಿಗೆ ಏನನ್ನು ಸೂಚಿಸುತ್ತಿದೆ? ಮತಾಂತರ ವಿರೋಧಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆತಂಕಗಳಿಗೆ ಇದು ಪುಷ್ಟಿ ನೀಡುತ್ತಿದೆ.
ಮೂವರು ಮುಸ್ಲಿಮರು 24 ವರ್ಷದ ಯುವತಿಯನ್ನು ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದರು ಎಂಬ ದೂರು ಅಸತ್ಯವಾಗಿದೆ ಎಂದು ತನಿಖೆಯ ಬಳಿಕ ಪೊಲೀಸರೇ ಒಪ್ಪಿಕೊಂಡಿದ್ದಾರೆ.
ಏನಿದು ಪ್ರಕರಣ?
ಜನವರಿ 1 ರಂದು ಮೂವರು ಮುಸ್ಲಿಮರ ಮೇಲೆ ಬಲವಂತದ ಮತಾಂತರ ಪ್ರಕರಣದ ಕೇಸು ದಾಖಲಾಗಿತ್ತು. ‘ಸೆಪ್ಟೆಂಬರ್ 9, 2020ರಂದು ಮುಸ್ಲಿಮೇತರ ಯುವತಿ ಮನೆ ತೊರೆದು ಅಬ್ರಾರ್ ಖಾನ್ ಎಂಬ ಯುವಕನ ಜೊತೆ ದೆಹಲಿಗೆ ಹೋಗಿದ್ದಳು. ಫರೀದ್‌ಪುರ್ ಠಾಣೆಯಲ್ಲಿ ಅಪಹರಣದ ದೂರು ದಾಖಾಲಾಗಿತು. ಯುವತಿ ದೆಹಲಿಯ ತುಘಲಕ್‌ಬಾದ್‌ನಲ್ಲಿ ಅಬ್ರಾರ್ ಜೊತೆ 15 ದಿನ ಕಳೆದ ತನ್ನ ಮನೆಗೆ ವಾಪಸ್ಸಾದಳು. ನಂತರ ಆಕೆ ತನ್ನ ಸೋದರ ಮಾವನನ್ನು ವಿವಾಹವಾಗಿದ್ದಾಳೆ’ ಎಂದು ಬರೇಲಿಯ ಸೀನಿಯರ್ ಸುಪರಿಂಡೆಂಟ್ ಆಫ್ ಪೊಲೀಸ್ (ಎಸ್‌ಎಸ್‌ಪಿ) ರೋಹಿತ್ ಸಿಂಗ್ ಸಜ್ವಾನ್ ಪಿಟಿಐಗೆ ತಿಳಿಸಿದ್ದಾರೆ.
‘ದೂರಿನ ಪ್ರಕಾರ, 2019ರ ಡಿಸೆಂಬರ್ 1ರಂದು ಫರೀದ್‌ಪುರ್‌ನಲ್ಲಿರುವ ತನ್ನ ಮನೆಗೆ ಯುವತಿ ವಾಪಸ್ಸಾಗುವ ಸಂದರ್ಭದಲ್ಲಿ ಅಬ್ರಾರ್ ಖಾನ್ ಮತ್ತು ಆತನ ಸಂಬಂಧಿಗಳಾದ ಮೈಸುರ್, ಇರ್ಷಾರ್ ಮದುವೆಗಾಗಿ ಆಕೆಯನ್ನು ಇಸ್ಲಾಂಗೆ ಮತಾಂತರವಾಗಲು ಬಲವಂತ ಮಾಡಿದರು ಎಂದು ಆರೋಪಿಸಲಾಗಿದೆ. ಆದರೆ ಪೊಲೀಸರು ಕಂಡುಕೊಂಡ ಪ್ರಕಾರ, ಆ ಮೂವರೂ ಮುಸ್ಲಿಂ ಯುವಕರು ಅಂದು ಆ ಜಾಗದಲ್ಲಿ ಇರಲೇ ಇಲ್ಲ. ಪೊಲೀಸರು ಸಂಗ್ರಹಿಸಿದ ಪುರಾವೆಗಳ ಪ್ರಕಾರ, ಈ ಮೂವರ ವಿರುದ್ಧ ಯುವತಿ ಮತ್ತು ಆಕೆಯ ಸೋದರ ಮಾವ ನೀಡಿದ ದೂರು ತಪ್ಪಾಗಿದೆ. ಮತಾಂತರ ಕಾಯ್ದೆಯ ಪ್ರಾವಿಷನ್‌ಗಳ ಪ್ರಕಾರ ಈ ವಿಷಯವನ್ನು ವಜಾಗೊಳಿಸಲಾಗುವುದು’ ಎಂದು ಎಸ್‌ಎಸ್‌ಪಿ ರೋಹಿತ್ ಸಿಂಗ್ ಹೇಳಿದ್ದಾರೆ.
ನಮ್ಮ ತನಿಖೆಯ ಸಮಯದಲ್ಲಿ, ಘಟನೆ ನಡೆದಾಗ ಆ ದಿನ ಆರೋಪಿಗಳು ಆ ಸ್ಥಳದಲ್ಲಿ ಹಾಜರಿರಲಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಪೊಲೀಸರು ಸಂಗ್ರಹಿಸಿದ ಸಾಕ್ಷ್ಯಗಳ ಪ್ರಕಾರ, ಮೂವರು ಪುರುಷರ ವಿರುದ್ಧ ಮಹಿಳೆ ಮಾಡಿರುವ ಆರೋಪಗಳು ತಪ್ಪು.
ಆದರೆ, ಮಾವಂದಿರ ಮನೆಯಲ್ಲಿದ್ದ ಯುವತಿಗೆ ಅಬ್ರಾರ್ ಬೆದರಿಕೆಗಳನ್ನು ಹಾಕಿದ್ದ ಎಂಬ ಆರೋಪವನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
‘ಡಿಸೆಂಬರ್ 11 ರಂದು ಯುವತಿಯ ಸೋದರಮಾವ ಬರೇಲಿ ಜಿಲ್ಲೆಯ ಅವೊನ್ಲಾ ಎಂಬಲ್ಲಿ ಯುವತಿಯನ್ನು ಮದುವೆಯಾಗಿದ್ದಾನೆ. ಯುವತಿಯ ಸೋದಮಾವಂದಿರ ಮನೆಗೆ ಹೋದ ಅಬ್ರಾರ್, ಬೇಗನೆ ಫರೀದ್‌ಪುರಕ್ಕೆ ಬಾ, ಇಲ್ಲವಾದರೆ ತೊಂದರೆಯಾಗುತ್ತದೆ ಎಂದು ಯುವತಿಗೆ ಹೇಳಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಇದನ್ನು ಪರೀಕ್ಷಿಸುತ್ತಿದ್ದು, ಆರೋಪ ಸತ್ಯವಾಗಿದ್ದರೆ ಕಾನೂನು ಪ್ರಕಾ ಕ್ರಮ ಜರುಗಿಸುತ್ತೇವೆ’ ಎಂದು ಎಸ್‌ಎಸ್‌ಪಿ ರೋಹಿತ್ ಸಿಂಗ್ ಹೇಳಿದ್ದಾರೆ.
ನವಂಬರ್ 2020ರಲ್ಲಿ ಲವ್ ಜಿಹಾದ್ ‘ತಡೆಯಲು’ ಯೋಗಿ ಆದಿತ್ಯನಾಥ್ ಸರ್ಕಾರ ಜಾರಿಗೆ ತಂದ ಮತಾಂತರ ವಿರೋದಿ ಕಾಯ್ದೆ ಮುಸ್ಲಿಂರಲ್ಲಿ ಆತಂಕ ಮೂಡಿಸಿದೆ. ಮುಸ್ಲಿಂ ಪುರುಷರನ್ನು ಟಾರ್ಗೆಟ್ ಮಾಡಲು ಮತ್ತು ಅಂತರ್‌ಧರ್ಮೀಯ ಸಂಬಂಧಗಳನ್ನು ತಡೆಯಲೆಂದೇ ಈ ಕಾಯ್ದೆ ತರಲಾಗಿದೆ ಎಂಬ ಆತಂಕಗಳು ಮನೆ ಮಾಡಿವೆ.
ಮುಸ್ಲಿಂ ಪುರುಷರು ಆಮಿಷ-ಓಲೈಕೆಗಳ ಮೂಲಕ ಮತ್ತು ಮದುವೆಯ ಮೂಲಕ ಹಿಂದೂ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡುವ ಸಂಚು ನಡೆಸುತ್ತಿದ್ದಾರೆ ಎಂಬ ಸಂಘ ಪರಿವಾರದ ಅನಿಸಿಕೆಯನ್ನು ಕಾನೂನಾತ್ಮಕಗೊಳಿಸಲೆಂದೇ ಈ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಪ್ರಗತಿಪರರು ಹೇಳುತ್ತಿದ್ದಾರೆ. (ಸಂಘ ಪರಿವಾರದ ಈ ‘ಥಿಯರಿ’ಗೆ ಯಾವುದೇ ಆಧಾರವಿಲ್ಲದಿದ್ದರೂ ಕೇಂದ್ರ ಸರ್ಕಾರವೂ ಇದನ್ನು ಒಪ್ಪಿಕೊಂಡಿದೆ) ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳು ಮತಾಂತರ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದಿವೆ. ಇನ್ನು ಹಲವು ರಾಜ್ಯಗಳು ತರುವ ತಯಾರಿಯಲ್ಲಿವೆ.
ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕಾರ್ಯಕಾರಿಣಿ ಸಮಿತಿಯ ಸಭೆಯಲ್ಲಿ ಕರ್ನಾಟಕದಲ್ಲಿಯೂ ಈ ಕಾಯ್ದೆ ತರುವ ಕುರಿತು ಚರ್ಚೆ ನಡೆದಿದೆ.
ಇದನ್ನೂ ಓದಿ: ಸಾವಿರವಲ್ಲ, ಕೇವಲ ಒಂದು ಸುಳ್ಳು ಹೇಳಿ ಮದುವೆಯಾದಳು: ‘ಅವನು’ ಈಗ ಜೈಲಿನಲ್ಲಿ, ‘ಅವಳು’ ಪೋಷಕರ ಬಂಧನದಲ್ಲಿ!


