ಕೊರೊನಾ ವೈರಸ್ ಹರಡುತ್ತಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಉದ್ದೇಶಪೂರ್ವಕವಾಗಿ ಹರಿಯಬಿಟ್ಟ ಇಬ್ಬರು ವ್ಯಕ್ತಿಗಳ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ನಡೆದಿದೆ.
ಮುಸ್ಲಿಂ ವ್ಯಕ್ತಿಗಳ ಫೋಟೊಗಳನ್ನು ಹರಿಯಬಿಟ್ಟು ಇವರು ಕೊರೊನಾ ಪೀಡಿತರಾಗಿದ್ದು, ನಮಗೆಲ್ಲಾ ಕೊರೊನಾ ಹರಡಲೆಂದೆ ಮಂಡ್ಯ ಜಿಲ್ಲೆಯಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಹಾಗಾಗಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂಬುದಾಗಿ ಹಲವು ವಾಟ್ಸಾಪ್ ಗುಂಪುಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ.
ರಮೇಶ ಮತ್ತು ಮಹೇಶ ಶೆಟ್ಟಿ ಎಂಬುವವರ ಮೇಲೆ ಕೋಮುದ್ವೇಷ ಹುಟ್ಟಿಸುವ ಹಾಗು ಜಿಲ್ಲಾಡಳಿತದ ಆದೇಶಗಳನ್ನು ಧಿಕ್ಕರಿಸಿದ ಆರೋಪದ ಮೇಲೆ ಐಪಿಸಿ ಕಲಂ 188, 501(B) 505(2)ರ ಅಡಿಯಲ್ಲಿ ಕೇಸು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಹುಡುಕಾಟ ನಡೆಯುತ್ತಿದೆ ಎಂದು ಸಿಪಿಐ ಮಹಾದೇವ ಪಂಚಮುಖಿ ತಿಳಿಸಿದ್ದಾರೆ.
ಮುಸ್ಲಿಂ ಸಮುದಾಯ ಕೊರೊನಾ ಹರಡುತ್ತಿದೆ ಎಂದು ಸುಳ್ಳು ಪೋಸ್ಟರ್‌ಗಳನ್ನು ದಲಿತ ಸೇನೆ ತಾಲ್ಲೂಕು ಸಮಿತಿ ಮತ್ತು ಪುರಸಭೆ ಚುನಾವಣೆ ಎಂಬ ವಾಟ್ಸಾಪ್ ಗುಂಪುಗಳಲ್ಲಿ ಅವರು ಹರಡಿದ್ದಾರೆ. ವ್ಯಕ್ತಿಯೊಬ್ಬರು ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದರಿಂದ ದೂರು ಸಾಧ್ಯವಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರೇ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಬಗ್ಗೆ ಸುಳ್ಳು ಸುದ್ದಿ ಹರಡಿದರೆ ಕ್ರಮ ಖಚಿತ ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದರೂ ಸಹ ಕಿಡಿಗೇಡಿಗಳು, ಧರ್ಮಾಂಧರು ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿಲ್ಲ ಎಂಬುದನ್ನು ಈ ಪ್ರಕರಣ ತೋರಿಸುತ್ತದೆ.
ಇದೇ ರೀತಿಯಲ್ಲಿ ಚಿತ್ರದುರ್ಗದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ.
ಇದನ್ನೂ ಓದಿ: ’ಗುಜರಾತ್ ಹತ್ಯಾಕಾಂಡ ಮರಕಳಿಸಬೇಕು’ ಪೋಸ್ಟ್ ಹಾಕಿದ ಹಿಂದೂ ಮಹಾಸಭಾ ಮುಖಂಡನ ಬಂಧನ


