ದೆಹಲಿಯ ಗಡಿಗಳಲ್ಲಿ ಸೇರಿದಂತೆ ದೇಶಾದ್ಯಂತ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬೃಹತ್ ರೈತ ಹೋರಾಟ ನಡೆಯುತ್ತಿದೆ. ಈ ಬೆನ್ನಲ್ಲೆ ಆ ಕಾಯ್ದೆಗಳನ್ನು ಈಗಾಗಲೇ ಜಾರಿಗೊಳಿಸುತ್ತಿರುವ ಮಧ್ಯಪ್ರದೇಶ ಬಿಜೆಪಿ ಸರ್ಕಾರಕ್ಕೆ ಮುಖಭಂಗವಾಗುವ ಬೆಳವಣಿಗೆಯೊಂದು ನಡೆದಿದೆ. ಅಲ್ಲಿನ 250ಕ್ಕೂ ಹೆಚ್ಚು ರೈತರಿಂದ ವರ್ತಕರು 2600 ಕ್ವಿಂಟಾಲ್ ಬೆಳಗಳನ್ನು ಕೊಂಡು ಹಣ ನೀಡದೇ ಸುಮಾರು 5 ಕೋಟಿ ರೂ ವಂಚಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಸೆಪ್ಟಂಬರ್ ತಿಂಗಳಿನಲ್ಲಿ ವಿವಾದಾತ್ಮಕ ಕೃಷಿ ಕಾನೂನುಗಳ ಜಾರಿಯಾದಾಗಿನಿಂದ ರಾಜ್ಯ ಸರ್ಕಾರವು ಮಂಡಿಗಳ ಹೊರಗೆ ಹೋಲ್‌ಸೇಲ್‌ನಲ್ಲಿ ಬೆಳೆಗಳನ್ನು ಮಾರಾಟ ಮಾಡಲು ಅವಕಾಶ ನೀಡಿದೆ. ಆದರೆ ಈ ರೀತಿಯಾಗಿ ಮಂಡಿಯಿಂದ ಹೊರಗೆ ಮಾರಾಟ ಮಾಡಿದ್ದ ರೈತರಿಗೆ ವರ್ತಕರು ಹಣ ನೀಡದೇ ವಂಚಿಸಿದ್ದಾರೆ ಎಂದು ಹಲವು ರೈತರು ದಿವಾಸ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ಕುರಿತು ರೈತರು ತಮಗೆ ವಂಚನೆಯಾಗಿದೆ ಎಂದು ದೂರು ಸಲ್ಲಿಸಿದ್ದಾರೆ. ಅದರ ಪ್ರಕಾರ ರಾಜ್ಯದ ಮುಖ್ಯಮಂತ್ರಿ ಮತ್ತು ಕೃಷಿ ಸಚಿವರ ತವರು ಜಿಲ್ಲೆಗಳ ರೈತರಿಂದ ವರ್ತಕರು ಬೆಳೆಗಳನ್ನು ಖರೀದಿಸಿ ಚೆಕ್ ನೀಡಿದ್ದಾರೆ. ಆದರೆ ಆ ಚೆಕ್‌ಗಳೆಲ್ಲವೂ ಬೌನ್ಸ್ ಆಗಿವೆ. ದಿವಾಸ್‌ನ ಮಂಡಿಗಳಿಂದ ಅವರಿಗೆ ಅವಧಿ ಮೀರಿದ ಲೈಸೆನ್ಸ್ ನೀಡಿದ್ದಾರೆ ಎಂದು ಆರೋಪಿಸಿ ರೈತರು ಮಂಡಿಗೆ ಹೋಗಿ ವಿಚಾರಿಸಿದರೆ ಅಲ್ಲಿಂದ ಅವರು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.
In one of the biggest cases of farm fraud, farmers from MP Agriculture Minister @KamalPatelBJP & @ChouhanShivraj home districts Harda&Sehore, were allegedly cheated by traders #FarmersProtest allege they ran away with a farm crop worth more than Rs 5-6 crore #FarmersBill pic.twitter.com/zlY3fcv4g3
— Anurag Dwary (@Anurag_Dwary) December 30, 2020
ನಾವು ಮಾತುಕತೆಯಾದ ದರಕ್ಕೆ ನಮ್ಮ ಬೆಳೆಗಳನ್ನು ಮಾರಿದ್ದೇವೆ. ಶೆಹೋರ್, ಹರ್ಡಾ, ಹೋಶಾಂಗ್‌ಬಾದ್‌ನ ಹಲವು ರೈತರು ಸಹ ಮಾರಿದ್ದಾರೆ. ಆದರೆ ನಮ್ಮಿಂದ ಬೆಳೆ ಪಡೆದವರು ಹಣ ನೀಡದೆ ಪರಾರಿಯಾಗಿದ್ದಾರೆ. ಹಾಗಾಗಿ ಮುಖ್ಯಮಂತ್ರಿಗಳು ಕೂಡಲೇ ಆರೋಪಿಗಳನ್ನು ಬಂಧಿಸಿ, ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ನಮ್ಮ ಹಣ ನೀಡಬೇಕೆಂದು ರೈತರೊಬ್ಬರು ಒತ್ತಾಯಿಸಿದ್ದಾರೆ.
ಹಾರ್ಡಾ, ಗ್ವಾಲಿಯರ್, ಬಮೋರಿ ಸೇರಿದಂತೆ ಹಲವೆಡೆ ನೂರಾರು ರೈತರು ಇದೇ ರೀತಿಯ ದೂರುಗಳನ್ನು ಸಲ್ಲಿಸಿದ್ದಾರೆ.
“ಈಗ ಮೋಸ ಮಾಡಿರುವ ಹಲವು ಕಂಪನಿಗಳು ಈ ಹಿಂದೆ ಮಂಡಿಗಳಲ್ಲಿ ನಮ್ಮಿಂದ ಖರೀದಿಸುತ್ತಿದ್ದರು. ಆದರೆ ಅಲ್ಲಿ ನಮಗೆ ಪಾವತಿಯ ಗ್ಯಾರಂಟಿಯಿತ್ತು. ಆದರೆ ಹೊಸ ಮಾದರಿ ಮಂಡಿ ಕಾಯ್ದೆಗಳಿಂದ ಆ ಗ್ಯಾರಂಟಿ ಇಲ್ಲವಾಗಿದೆ” ಎಂದು ರೈತರು ದೂರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೃಷಿ ಸಚಿವ ಕಮಲ್ ಪಟೇಲ್ “ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತದೆ ಮತ್ತು ರೈತರಿಗೆ ಅವರ ಹಣವನ್ನು ಮರಳಿ ಕೊಡಿಸಲಾಗುತ್ತದೆ. ಇನ್ನು ಮುಂದೆ ರೈತರು ಕೇವಲ ನಗದು ವ್ಯವಹಾರದಲ್ಲಿ ಮಾತ್ರ ತಮ್ಮ ಬೆಳೆಗಳನ್ನು ಮಾರಬೇಕು. ಅದು ಕಷ್ಟವಾದರೂ ಸಾಧ್ಯ” ಎಂದಿದ್ದಾರೆ.
ಈ ಪ್ರಕರಣದಲ್ಲಿ ನ್ಯಾಯಾಲಯ ನಮ್ಮ ಪರವಿರುತ್ತದೆ ಎಂದು ಹೇಳಲು ಬರುವುದಿಲ್ಲ. ಸರ್ಕಾರ ರಚಿಸುವ ಸಮಿತಿಯು ನೀಡುವ ಪರಿಹಾರವನ್ನು ಸ್ವೀಕರಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಗಳಿಲ್ಲ ಎಂದು ರೈತರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಈ ಕೃಷಿ ಕಾಯ್ದೆಗಳಿಂದ ನಿಧಾನವಾಗಿ ಮಂಡಿಗಳು ನಶಿಸುವುದರಿಂದ ರೈತರು ವರ್ತಕರು ಕೇಳಿದ ಬೆಲೆಗೆ, ಅವರು ಕೊಡುವ ಚೆಕ್ ಅಥವಾ ಮತ್ತಿತರ ವಿಧಾನಗಳ ಮೂಲಕವೇ ಮಾರಬೇಕಾದ ಪರಿಸ್ಥಿತಿ ರೈತರಿಗೆ ಬರುತ್ತದೆ ಎಂಬುದನ್ನು ಈ ಮೇಲಿನ ಪ್ರಕರಣಗಳು ಸೂಚಿಸುತ್ತವೆ. ಏಕೆಂದರೆ ರೈತರ ಬಳಿ ಬೆಳೆಗಳನ್ನು ಹಲವು ದಿನ ಇಟ್ಟುಕೊಳ್ಳುವ ವ್ಯವಸ್ಥೆ ಇಲ್ಲ. ಇದು ದೊಡ್ಡ ದೊಡ್ಡ ಕಾರ್ಪೊರೇಟ್‌ಗಳಿಗಷ್ಟೇ ಲಾಭ ತಂದುಕೊಡುತ್ತದೆ ಎಂಬುದು ರೈತರ ಆರೋಪ.
ಇದನ್ನೂ ಓದಿ: ರೈತರ ಕೈಯಲ್ಲಿರುವ ರೊಟ್ಟಿಯನ್ನು ಕಿತ್ತುಕೊಳ್ಳಬೇಡಿ: ಭಾವನಾತ್ಮಕ ಟ್ವೀಟ್ ಮಾಡಿದ ರೈತ ಒಕ್ಕೂಟ


