ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯಿದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ 51 ನೇ ದಿನಕ್ಕೆ ಕಾಲಿಟ್ಟಿದೆ. ಇದುವರೆಗೂ ತಾನು ಒಂದಿಂಚೂ ಹಿಂದೆ ಸರಿಯುತಿಲ್ಲ ಎಂದು ಹೇಳುತ್ತಿದ್ದ ಕೇಂದ್ರ ಸರ್ಕಾರ ಮಂಡಿಯೂರತೊಡಗಿದೆ. ಅದರ ಜೊತೆ-ಜೊತೆಗೆ ಹೋರಾಟವನ್ನು ಒಡೆಯುವ ಎಲ್ಲಾ ಪ್ರಯತ್ನಗಳನ್ನೂ ಚಾಲ್ತಿಯಲ್ಲಿಟ್ಟಿದೆ.
ಇದುವರೆಗೂ ರೈತರೊಂದಿಗೆ ಎಂಟು ಸುತ್ತಿನ ಮಾತುಕತೆಗಳು ನಡೆದಿದ್ದು, ಎಲ್ಲವೂ ವಿಫಲವಾಗಿದೆ. ರೈತರು ತಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಎಂಟನೇ ಮಾತುಕತೆ ವಿಫಲಗೊಂಡ ಪರಿಣಾಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ರೈತರು ತೀರ್ಮಾನಿಸಿದ್ದು, ಜನವರಿ 26 ರ ಗಣರಾಜ್ಯೋತ್ಸವದಂದು ದೆಹಲಿಗೆ ಟ್ರಾಕ್ಟರ್ ರ್‍ಯಾಲಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ಒಂಬತ್ತನೆ ಸುತ್ತಿನ ಮಾತುಕತೆಗೆ ಶುಕ್ರವಾರ(ಇಂದು) ರೈತರನ್ನು ಆಹ್ವಾನಿಸಿದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ 10 ಪ್ರಮುಖ ಅಂಶಗಳು ಇಲ್ಲಿವೆ:
1. ಒಂಬತ್ತನೇ ಸುತ್ತಿನ ಮಾತುಕತೆಗೆ ಸಂಬಂಧಿಸಿದಂತೆ, ರೈತರು ಹೊಸ ಕಾನೂನುಗಳನ್ನು ರದ್ದುಗೊಳಿಸುವ ವಿಧಾನಗಳ ಮೇಲೆ ಮಾತ್ರ ಚರ್ಚೆಗಳನ್ನು ಕೇಂದ್ರೀಕರಿಸುವುದಾಗಿ ಹೇಳಿದ್ದಾರೆ.
2. ಆದರೆ, ತಮ್ಮ ಜೀವನೋಪಾಯಕ್ಕೆ ಧಕ್ಕೆ ತರುತ್ತದೆ ಎಂದು ರೈತರು ಹೇಳುತ್ತಿರುವ ಕಾನೂನುಗಳನ್ನು ಹಿಂದಕ್ಕೆ ಪಡೆಯಲು ಕೇಂದ್ರ ಸರ್ಕಾರ ಇದುವರೆಗೂ ನಿರಾಕರಿಸುತ್ತಲೇ ಬಂದಿದೆ.
ಇದನ್ನೂ ಓದಿ: ರೈತ ಹೋರಾಟದ ಹಾಡು ’ಕಿಸಾನ್ ಆಂಥೆಮ್’ ವೀಕ್ಷಿಸಿದ 2 ಕೋಟಿ ಜನ: ಗೀತೆ ರಚನೆಕಾರನ ಬಂಧನ!
3. ಇಂದಿನ ಸಭೆಯಲ್ಲೂ ಸರ್ಕಾರವು ಕಾನೂನನ್ನು ರದ್ದುಗೊಳಿಸುವ ತೀರ್ಮಾನಕ್ಕೆ ಬರುವುದಿಲ್ಲ ಎನ್ನಲಾಗಿದ್ದು, ಅದರ ಬದಲಾಗಿ ಕಾನೂನುಗಳಲ್ಲಿ ನಿರ್ದಿಷ್ಟವಾದ ಆಕ್ಷೇಪಣೆಗಳಿದ್ದರೆ ತಿಳಿಸಬೇಕು ಎಂದು ಒತ್ತಾಯಿಸಲಿದೆ ಎನ್ನಲಾಗಿದೆ.
4. ಮೂರು ಕೃಷಿ ಕಾನೂನುಗಳನ್ನು ಪರಿಶೀಲಿಸಲು ಜನವರಿ 12 ರಂದು ಸುಪ್ರೀಂ ಕೋರ್ಟ್ ಪ್ರಸ್ತಾಪಿಸಿರುವ ಸಮಿತಿಯು ನಡೆಸುವ ಸಮಾಲೋಚನೆಯಲ್ಲಿ ಭಾಗವಹಿಸದಿರಲು ಪ್ರತಿಭಟನಾ ನಿರತ ಕೃಷಿ ಸಂಘಗಳು ನಿರ್ಧರಿಸಿವೆ.
5. ಸುಪ್ರೀಂಕೋರ್ಟ್ ಮುಂದಿನ ಆದೇಶದವರೆಗೂ ಕೃಷಿ ಕಾನೂನನ್ನು ಅಮಾನತ್ತು ಮಾಡಿದೆ. ಇದನ್ನು ರೈತರು ಸ್ವಾಗತಿಸಿದ್ದರಾದರೂ, ತಮ್ಮ ಬೇಡಿಕೆ ಕೃಷಿ ಕಾನೂನನ್ನು ರದ್ದು ಪಡಿಸುವುದಾಗಿದೆ ಎಂದು ಅವರು ಮತ್ತೇ ಘೋಷಿಸಿದ್ದಾರೆ.
6. ಕಾನೂನಿನ ಬಗ್ಗೆ ಚರ್ಚಿಸಲು ಸುಪ್ರೀಂಕೋರ್ಟ್ ನೇಮಿಸಿರುವ ಸಮಿತಿಯ ಸದಸ್ಯರು ಈಗಾಗಲೇ ಕಾನೂನನ್ನು ಸಾರ್ವಜನಿಕವಾಗಿ ಶ್ಲಾಘಿಸಿರುವುದರಿಂದ, ನ್ಯಾಯಾಲಯ ನೇಮಿಸಿದ ಸಮಿತಿಯು “ಸರ್ಕಾರದ ಪರ” ಎಂದು ಕೃಷಿ ಸಂಘಗಳು ಆರೋಪಿಸಿವೆ.
7. ವಿವಾದಾತ್ಮಕ ಕಾನೂನುಗಳು ಕೃಷಿ ವ್ಯಾಪಾರದಲ್ಲಿನ ನಿರ್ಬಂಧಗಳನ್ನು ತೆಗೆದುಹಾಕುತ್ತವೆ, 1955 ರ ಅಗತ್ಯ ಸರಕುಗಳ ಕಾಯ್ದೆಯಡಿ ದಾಸ್ತಾನು ಸಂಗ್ರಹಿಸುವಿಕೆಯ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುತ್ತವೆ ಮತ್ತು ಲಿಖಿತ ಒಪ್ಪಂದಗಳ ಆಧಾರದ ಮೇಲೆ ಗುತ್ತಿಗೆ ಕೃಷಿ ಪ್ರಾರಂಭವಾಗುತ್ತದೆ.
8. ಈ ಹೊಸ ಕಾನೂನುಗಳು ದೊಡ್ಡ ಕಂಪನಿಗಳಿಗೆ ಲಾಭಕರವಾಗಲಿದೆ. ಸಣ್ಣ ಹಿಡುವಳಿದಾರರು ನಾಶವಾಗುತ್ತಾರೆ ಎಂದು ರೈತರು ಹೇಳುತ್ತಾರೆ.
9. ಕೃಷಿ ಸಂಘಗಳು ತಮಗೆ ಕಾನೂನು ಪರಿಹಾರ ಬೇಕಿಲ್ಲ, ತಾವು ಸರ್ಕಾರದೊಂದಿಗೆ ಮಾತ್ರ ಮಾತನಾಡುತ್ತೇವೆ ಎಂದು ಘೋಷಿಸುವ ಮೂಲಕ ಸುಪ್ರೀಂ ಕೋರ್ಟ್‌ನ ಹಸ್ತಕ್ಷೇಪದಿಂದ ತಪ್ಪಿಸಿಕೊಂಡಿದ್ದಾರೆ.
10. ಎಂಟನೇ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಜನವರಿ 26 ರಂದು ತಾವು ಕಿಸಾನ್-ಜವಾನ್ ರ್‍ಯಾಲಿಯನ್ನು ನಡೆಸಿಯೆ ತೀರುತ್ತೇವೆ ಎಂದು ರೈತರು ಘೋಷಿಸಿದ್ದಾರೆ.
ಇದನ್ನೂ ಓದಿ: ಹೋರಾಟವನ್ನು ಬೆಚ್ಚಗಿರಿಸುತ್ತಿರುವ ‘ಟ್ರ್ಯಾಲಿ’ ಎಂಬ ರೈತರ ಬದುಕಿನ ಬಂಡಿ!


