ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಅವರನ್ನು ಹೊಗಳಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ರೈತರು ನಮ್ಮ ಅನ್ನದಾತರು. ಅವರು ಈ ದೇಶದ ಬೆನ್ನೆಲುಬು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜನಾಥ್ ಸಿಂಗ್ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ, ಪ್ರತಿಭಟನೆ ಮಾಡುತ್ತಿರುವ ರೈತರನ್ನು ಖಲಿಸ್ತಾನಿಗಳು-ನಕ್ಸಲರು ಎಂದು ಬಿಂಬಿಸುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
“ರೈತರ ಬಗ್ಗೆ ನಮಗೆ ಗೌರವವಿದೆ. ಆದರೆ ಅವರನ್ನು ಹೀಗೆ ಬಿಂಬಿಸುತ್ತಿರುವುದು ಸರಿಯಲ್ಲ. ದೇಶವು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವಾಗ ರೈತರು ದೇಶವನ್ನು ಸಂಕಷ್ಟದಿಂದ ಪಾರುಮಾಡಿದ್ದಾರೆ. ಇಂತಹ ಅನೇಕ ಸಂದರ್ಭಗಳಲ್ಲಿ ರೈತರು ದೇಶವನ್ನು ಪೊರೆದಿದ್ದಾರೆ. ಇಂತಹವರ ಮೇಲೆ ಸುಳ್ಳು ಆರೋಪಗಳನ್ನು ಮಾಡಬಾರದು” ಎಂದು ಹೇಳಿದರು.
ಇದನ್ನೂ ಓದಿ: ಪಂಜಾಬ್: 1500 ಕ್ಕೂ ಹೆಚ್ಚು ಜಿಯೋ ಟವರ್‌ಗಳಿಗೆ ಹಾನಿ ಮಾಡಿದ ರೈತ ಹೋರಾಟಗಾರರು
“ರೈತ ಚಳವಳಿಯಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ನೋವಾಗಿದೆ. ರೈತರ ಬೇಡಿಕೆಗಳ ಬಗ್ಗೆ ಉದಾಸೀನ ತೋರುವ ಪ್ರಶ್ನೆಯೇ ಇಲ್ಲ. ಆದರೆ ರೈತರು ಸರ್ಕಾರದೊಟ್ಟಿಗೆ ತಾರ್ಕಿಕ ಚರ್ಚೆ ಮಾಡಬೇಕು. 2 ವರ್ಷಗಳ ಕಾಲ ಕಾನೂನನ್ನು ಜಾರಿಗೊಳಿಸೋಣ. ತೊಂದರೆ ಕಂಡಬಂದರೆ ಅದನ್ನು ಪರಿಷ್ಕೃತಗೊಳಿಸೋಣ” ಎಂದು ಹೇಳಿದರು.
“ಆದಾಗ್ಯೂ ಪ್ರತಿಭಟನಾ ನಿರತ ರೈತರು ಪ್ರಧಾನಿ ಮೋದಿ ವಿರುದ್ಧ ಮಾನಹಾನಿಕರ ಪದಗಳನ್ನು ಬಳಸಬಾರದು. ಪ್ರಧಾನಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದು ನನಗೆ ವೈಯಕ್ತಿಕವಾಗಿ ನೋವು ತಂದಿದೆ. ಪ್ರಧಾನಿ ಹುದ್ದೆ ಒಂದು ಸಂಸ್ಥೆಯಾಗಿದ್ದು, ಇದು ಇಡೀ ದೇಶವನ್ನು ಪ್ರತಿನಿಧಿಸುವಂಥದ್ದು” ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ತೀವ್ರಗೊಳ್ಳುತ್ತಿರುವ ರೈತರ ಆಕ್ರೋಶ: ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು
ಕಳೆದ ಒಂದು ತಿಂಗಳಿನಿಂದ ಲಕ್ಷಾಂತರ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜೊತೆ ಆರು ಸುತ್ತಿನ ಮಾತುಕತೆಗಳು ನಡೆದಿದ್ದು, ಅವುಗಳೆಲ್ಲವೂ ವಿಫಲವಾಗಿವೆ.
ಈ ನಡುವೆಯೇ ರೈತರ ಪ್ರತಿಭಟನೆಯನ್ನು ದಿಕ್ಕುತಪ್ಪಿಸಲು ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಬಲಪಂಥೀಯ ಮಾಧ್ಯಮಗಳು ಹಾಗೂ ಬಿಜೆಪಿ ಐಟಿ ಸೆಲ್‌ಗಳು ಪ್ರಯತ್ನಿಸುತ್ತಿವೆ. ಇದರ ಭಾಗವಾಗಿ ರೈತರನ್ನು ನಕ್ಸಲರು, ಖಲೀಸ್ತಾನಿಗಳು, ಭಯೋತ್ಪಾದಕರು, ನಕಲಿ ರೈತರು ಎಂದು ಮುಂತಾದ ಅಸಾಂವಿಧಾನಿಕ ಪದಗಳನ್ನು ಪ್ರಯೋಗಿಸಿ ಜನರಲ್ಲಿ ನಕಾರಾತ್ಮಕ ಭಾವನೆಯನ್ನು ಹರಡುತ್ತಿದೆ. ಆದರೆ ಇದಾವುದಕ್ಕೂ ಅಂಜದ ರೈತರು ತಮ್ಮ ದಿಟ್ಟ ಹೋರಾಟವನ್ನು ಮುಂದುವರೆಸಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸಲು ‘7–8 ಲಕ್ಷ ರೈತರನ್ನು’ ಸೇರಿಸಲಾಗಿದೆ – ಅಣ್ಣಾಮಲೈ


