ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂಬ ತಮ್ಮ ಬೇಡಿಕೆ ಈಡೇರದಿದ್ದರೆ ಜನವರಿ 26ರ ಗಣರಾಜ್ಯೋತ್ಸವದಂದು ರಾಜಧಾನಿಯಲ್ಲಿ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ ನಡೆಸುವುದಾಗಿ ರೈತ ಸಂಘಟನೆಗಳು ಘೋಷಿಸಿದ ಬೆನ್ನಲ್ಲೇ ಹರಿಯಾಣದ ರೈತ ಮಹಿಳೆಯರು ಈಗ ನೂರಾರು ಟ್ರ್ಯಾಕ್ಟರ್ ಚಲಾಯಿಸಿಕೊಂಡು ದೆಹಲಿಯತ್ತ ದಾಪುಗಾಲಿಡುತ್ತಿದ್ದಾರೆ.
ಹರಿಯಾಣದ ಹಲವು ಕಡೆ ರೈತ ಮಹಿಳೆಯರಿಗೆ ಟ್ರ್ಯಾಕ್ಟರ್ ಚಲಾಯಿಸುವ ತರಬೇತಿಯನ್ನು ನೀಡಲಾಗುತ್ತಿದ್ದು, ಸೋಮವಾರ ಜಿಂದ್ ಜಿಲ್ಲೆಯ ಖತ್ಕರ್ ಎಂಬಲ್ಲಿ ಇಂತಹ ಒಂದು ಕಾರ್ಯಾಗಾರ ನಡೆದಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಎರಡನೆ ತಿಂಗಳಿಗೆ ಹೆಜ್ಜೆ ಇಟ್ಟಿರುವ ದೆಹಲಿ ಗಡಿಗಳಲ್ಲಿನ ರೈತ ಪ್ರತಿಭಟನೆಯಲ್ಲಿ ಅಪಾರ ಸಂಖ್ಯೆಯಲ್ಲಿ ರೈತ ಮಹಿಳೆಯರು ಭಾಗವಹಿಸಿದ್ದಾರೆ. ಜನವರಿ 26ರಂದು ರಾಜಧಾನಿಯಲ್ಲಿ ನಡೆಯುವ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಮಹಿಳೆಯರು ಟ್ರ್ಯಾಕ್ಟರ್ ನಡೆಸುವ ಮೂಲಕ ಹರಿಯಾಣದ ಪುರುಷ ಪ್ರಧಾನ ಸಮಾಜದಲ್ಲಿ ಹೊಸ ಬದಲಾವಣೆಯನ್ನು ಸೂಚಿಸಲಿದ್ದಾರೆ.
‘ತಖ್ತರ್‌ನ ಟೋಲ್ ಪ್ಲಾಜಾ ಬಳಿಯ ಹೆದ್ದಾರಿಯಲ್ಲಿ ನಮ್ಮ ಜಿಲ್ಲೆಯ ನೂರಕ್ಕೂ ಹೆಚ್ಚು ಮಹಿಳೆಯರು ಟ್ರ್ಯಾಕ್ಟರ್ ಚಲಾಯಿಸುವುದನ್ನು ಕಲಿಯುತ್ತಿದ್ದೇವೆ. ರೈತ ಪ್ರತಿಭಟನೆಯ ರ‍್ಯಾಲಿಯಲ್ಲಿ ನಾವು ಟ್ರ್ಯಾಕ್ಟರ್ ಚಲಾಯಿಸಿ ನಮ್ಮ ಪ್ರತಿರೋಧ ದಾಖಲಿಸಲಿದ್ದೇವೆ’ ಎನ್ನುತ್ತಾರೆ ಸಫಾ ಖೇರಿ ಗ್ರಾಮದ ಸಿಕ್ಕಿಂ ನೈನ್ ಎಂಬ ಮಹಿಳೆ.
‘ಪ್ರತಿಭಟನೆಯಲ್ಲಿ ಈಗ ಮಹಿಳಾ ಶಕ್ತಿಯೂ ಸೇರಿಕೊಂಡಿದೆ. ನಾವು ಹಿಂದಕ್ಕೆ ಹೆಜ್ಜೆ ಇಡುವುದಿಲ್ಲ. ನಮ್ಮನ್ನು ಹಗುರವಾಗಿ ಪರಿಗಣಿಸಬೇಡಿ. ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮ. ಈಗ ನಾವು ಪ್ರತಿಭಟನೆ ಮಾಡದೇ ಹೋದರೆ ನಮ್ಮ ಮುಂದಿನ ತಲೆಮಾರಿಗೆ ಏನಂತ ಉತ್ತರಿಸಲು ಸಾಧ್ಯ’ ಎಂದು ಅವರು ಹೇಳಿದ್ದಾರೆ.
ಖತ್ಕರ್ ಗ್ರಾಮದ ಸರಜಾ ರಾಜಪಾಲಾ ಎನ್ನುವ 35 ವರ್ಷದ ಮಹಿಳೆ, “ನಾನು ರೈತರ ಮಗಳು. ಇಲ್ಲಿವರೆಗೆ ಸರ್ಕಾರಗಳು ರೈತರ ಮೇಲೆ ಸಾಕಷ್ಟು ದೌರ್ಜನ್ಯ ನಡೆಸಿವೆ. ಇನ್ನು ಮುಂದೆ ನಾವು ಇದನ್ನು ಸಹಿಸೆವು. ಎದೆ ಸೆಟೆಸಿ ಹೋರಾಡುವೆವು” ಎಂದಿದ್ದಾರೆ.
‘ಖತ್ಕರ್, ಸಫಾ ಖೇರಿ, ಬರ್ಸೊಲಾ, ಪೌಕ್ರಿ ಖೇರಿ ಮುಂತಾದ ಗ್ರಾಮಗಳ ರೈತ ಮಹಿಳೆಯರು ಟ್ರ್ಯಾಕ್ಟರ್ ಚಲಾಯಿಸುವುದನ್ನು ಕಲಿಯಲು ಬರುತ್ತಿದ್ದಾರೆ’ ಎಂದು ರೈತ ವಿಜೇಂದರ್ ಸಂಧು ಹೇಳಿದ್ದಾರೆ.
ಮಹಿಳೆಯರು ಈ ಕ್ರಮಕ್ಕೆ ಮುಂದಾಗಿರುವುದು ಹೋರಾಟದಲ್ಲಿ ಒಂದು ದೊಡ್ಡ ನೆಗೆತವಾಗಿದೆ, ಇದು ಅನಿವಾರ್ಯವೂ ಆಗಿದೆ ಎಂದು ಹಿರಿಯ ರೈತ ಸತ್ಬೀರ್ ಪೆಹ್ಲವಾಲಾ ತಿಳಿಸಿದ್ದಾರೆ. ‘ನಮ್ಮ ಮಕ್ಕಳು ಅಂತಾರಾಷ್ಟ್ರೀಯ ಗಡಿಗಳಲ್ಲಿ ಪ್ರತಿಭಟಿಸುತ್ತಿದ್ದಾರೆ, ನಮ್ಮ ಜನರು ದೇಶದ ರಾಜಧಾನಿಗೆ ಘೇರಾವ್ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ.
ಖಾಪ್ ಮುಖ್ಯಸ್ಥ ಅಜಾದ್ ಸಿಂಗ್ ಕೂಡ ಮಹಿಳೆಯರ ಹೋರಾಟ ಬೆಂಬಲಿಸಿದ್ದು, ಗಣರಾಜ್ಯೋತ್ಸವದಂದು ನಡೆಯುವ ಸೈನಿಕರ ಪರೇಡ್‌ನಂತೆಯೇ ನಮ್ಮ ಪರೇಡ್ ಕೂಡ ನಡೆಯಲಿದೆ ಎಂದಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ ಅಪ್‌ಡೇಟ್ಸ್: 7ನೇ ಸುತ್ತಿನ ಮಾತುಕತೆ ವಿಫಲ – ಹೋರಾಟದ ಮುಂದೇನು ದಾರಿ?


