ಒಂದು ತಿಂಗಳಿನಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಮನವೊಲಿಸಲು ಸುಪ್ರೀಂ ಕೋರ್ಟ್ ಶನಿವಾರ ಪಂಜಾಬ್ ಸರ್ಕಾರಕ್ಕೆ ಡಿಸೆಂಬರ್ 31 ರವರೆಗೆ ಕಾಲಾವಕಾಶ ನೀಡಿದೆ. ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ರಜಾಕಾಲದ ಪೀಠವು ಪರಿಸ್ಥಿತಿ ಉಲ್ಬಣಗೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಮತ್ತು ದಲ್ಲೆವಾಲ್‌ಗೆ ವೈದ್ಯಕೀಯ ನೆರವು ನೀಡಲು ಕೋರ್ಟ್ ನೀಡಿದ್ದ ಈ ಹಿಂದಿನ ನಿರ್ದೇಶನಗಳನ್ನು ಅನುಸರಿಸದಿದ್ದಕ್ಕಾಗಿ ಪಂಜಾಬ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಉಪವಾಸ ನಿರತ ರೈತ ನಾಯಕ
ಈ ವೇಳೆ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದ ಪಂಜಾಬ್ ಸರ್ಕಾರ, ದಲ್ಲೆವಾಲ್ ಅವರನ್ನು ಸುತ್ತುವರಿದು ಅವರನ್ನು ಆಸ್ಪತ್ರೆಗೆ ಕರೆದೊಯ್ಯದಂತೆ ತಡೆದು ಪ್ರತಿಭಟನಾಕಾರು ಭಾರಿ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದೆ. ಅಷ್ಟೆ ಅಲ್ಲದೆ, ತಜ್ಞರ ತಂಡವು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ದಲ್ಲೆವಾಲ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಮನವೊಲಿಸಲು ಪ್ರಯತ್ನಿಸಿದೆ ಎಂದು ಪಂಜಾಬ್ ಸರ್ಕಾರವನ್ನು ಪ್ರತಿನಿಧಿಸುವ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಸುಪ್ರೀಂಕೋರ್ಟ್‌ನ ಪೀಠಕ್ಕೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಅವರು (ದಲ್ಲೆವಾಲ್) ಡ್ರಿಪ್ಸ್ ಸೇರಿದಂತೆ ಯಾವುದೇ ರೀತಿಯ ವೈದ್ಯಕೀಯ ಸಹಾಯವನ್ನು ನಿರಾಕರಿಸಿದ್ದಾರೆ. ಇದು ಚಳುವಳಿಯ ಕಾರಣವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಪ್ರತಿಪಾದಿಸುತ್ತಿದ್ದಾರೆ” ಎಂದು ಅವರು ತಿಳಿಸಿದರು. ಅಡ್ವೊಕೇಟ್ ಜನರಲ್ ಅವರ ಈ ಉತ್ತರಕ್ಕೆ ಕೆರಳಿದ ಕೋರ್ಟ್, ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಪಂಜಾಬ್ ಸರ್ಕಾರವು ಸಾಕಷ್ಟು ಪ್ರಯತ್ನ ಮಾಡಿಲ್ಲ ಎಂದು ದೂಷಿಸಿತು. ಉಪವಾಸ ನಿರತ ರೈತ ನಾಯಕ
ಅಷ್ಟೆ ಅಲ್ಲದೆ, ಮತ್ತು ದಲ್ಲೆವಾಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಬಿಡದ ರೈತ ಮುಖಂಡರು ಆತ್ಮಹತ್ಯೆಗೆ ಪ್ರಚೋದನೆಯ ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಕೋರ್ಟ್ ಹೇಳಿದೆ.
ಪರಿಸ್ಥಿತಿಯನ್ನು ಖಾತರಿಪಡಿಸಿದರೆ ಕೇಂದ್ರದಿಂದ ಯಾವುದೇ ರೀತಿಯ ಲಾಜಿಸ್ಟಿಕ್ಸ್ ಬೆಂಬಲವನ್ನು ಪಡೆಯಲು ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಜೊತೆಗೆ, ದಲ್ಲೆವಾಲ್ ಅನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ನಿರ್ದೇಶನವನ್ನು ರಾಜ್ಯ ಸರ್ಕಾರವು ಅನುಸರಿಸಲಿದೆ ಎಂದು ಆಶಿಸುವುದಾಗಿ ಹೇಳಿದೆ.
ದಲ್ಲೆವಾಲ್ ಅವರು ಕೆಲವು ರೀತಿಯ “ಗುಂಪು ಒತ್ತಡ”ದಲ್ಲಿದ್ದಾರೆ ಮತ್ತು ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿಸದ ರೈತ ಮುಖಂಡರು ಅವರ ಹಿತೈಷಿಗಳಾಗಿ ಕಾಣುತ್ತಿಲ್ಲ ಎಂದು ಪೀಠ ಹೇಳಿದೆ. ಈ ರೈತರು ಅವರ ಜೀವದ ಬಗ್ಗೆ ಕಾಳಜಿ ಹೊಂದಿದ್ದಾರೆಯೇ ಅಥವಾ ಬೇರೆ ಏನನ್ನಾದರೂ ಬಯಸುತ್ತಿದ್ದಾರೆಯೆ? ಎಂದು ಕೇಳಿರುವ ಕೋರ್ಟ್, ಈ ಬಗ್ಗೆ ನಾವು ಹೆಚ್ಚು ಹೇಳಲು ಬಯಸುವುದಿಲ್ಲ, ಆದರೆ ಪಂಜಾಬ್ ಸರ್ಕಾರವು ನಮ್ಮ ನಿರ್ದೇಶನಗಳನ್ನು ಅನುಸರಿಸುತ್ತದೆ ಎಂದು ಭಾವಿಸುತ್ತೇವೆ ಎಂದು ಹೇಳಿದೆ.
ಶುಕ್ರವಾರ, ದಲ್ಲೆವಾಲ್ ಅವರ ಸ್ಥಿತಿಯ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತು ಮತ್ತು ಅವರಿಗೆ ವೈದ್ಯಕೀಯ ನೆರವು ನೀಡುವುದನ್ನು ಖಚಿತಪಡಿಸಿಕೊಳ್ಳಲು ಪಂಜಾಬ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅಲ್ಲದೆ, ದಲ್ಲೆವಾಲ್‌ಗೆ ವೈದ್ಯಕೀಯ ನೆರವು ನೀಡುವಂತೆ ನಿರ್ದೇಶಿಸಿದ ಆದೇಶವನ್ನು ಪಾಲಿಸದಿದ್ದಕ್ಕಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯ ಮೇಲೆ ಪಂಜಾಬ್ ಸರ್ಕಾರಕ್ಕೆ ನೋಟಿಸ್ ನೀಡಿತ್ತು.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನಾತ್ಮಕ ಖಾತರಿ ಸೇರಿದಂತೆ ರೈತರ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ದಲ್ಲೆವಾಲ್ ಅವರು ನವೆಂಬರ್ 26 ರಿಂದ ಖಾನೌರಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅಣ್ಣಾ ವಿವಿ ಅತ್ಯಾಚಾರ ಪ್ರಕರಣ : ಮಹಿಳಾ ಅಧಿಕಾರಿಗಳ ಎಸ್‌ಐಟಿ ರಚಿಸಿದ ಮದ್ರಾಸ್ ಹೈಕೋರ್ಟ್, ₹25 ಲಕ್ಷ ಪರಿಹಾರ ನೀಡಲು ಸೂಚನೆ


