Homeಅಂಕಣಗಳುಫೆಬ್ರವರಿ 28: ರಾಷ್ಟ್ರೀಯ ವಿಜ್ಞಾನ ದಿನ ವಿಶೇಷ; 1928: ಒಂದು ಹೊಸ ವಿಕಿರಣ...

ಫೆಬ್ರವರಿ 28: ರಾಷ್ಟ್ರೀಯ ವಿಜ್ಞಾನ ದಿನ ವಿಶೇಷ; 1928: ಒಂದು ಹೊಸ ವಿಕಿರಣ…

- Advertisement -
- Advertisement -

 

I propose this evening to speak to you on a new kind of radiation or light-emission from atoms and molecules…

ಅಲ್ಲಿಯೇ ಟೇಬಲ್ ಮೇಲೆ ಇದ್ದ ಒಂದು ಬಾಟಲ್ ತೋರಿಸಿ, ಈ ಬಾಟಲ್‌ನಲ್ಲಿ ನೀರಿದೆ ಮತ್ತು ತುಂಬ ಕಡಿಮೆ ಪ್ರಮಾಣದ ಪ್ಲೋರೋಸಿನ್ ಅನ್ನು ಕರಗಿಸಲಾಗಿದೆ. ಈಗ ಈ ಬಾಟಲ್‌ಅನ್ನು ಕಂದೀಲಿನ (ಲಾಟೀನು/ಲಾಂದ್ರ) ಬೆಳಕಿನ ರೇಖೆಯಲ್ಲಿಟ್ಟರೆ, ಈ ಬಾಟಲಿನ ನೀರು ಹಸಿರು ಬಣ್ಣದಲ್ಲಿ ಹೊಳೆಯುತ್ತದೆ. ಅಲ್ಲದೆ, ಬಾಟಲ್ ಮತ್ತು ಕಂದೀಲಿನ ನಡುವೆ ವಿವಿಧ ರೀತಿಯ ಬಣ್ಣದ ಶೋಧಕಗಳನ್ನು ಇರಿಸಿದರೂ ಸಹ ಬಾಟಲ್‌ನ ನೀರು ಹಸಿರು ಬಣ್ಣದಲ್ಲಿಯೇ ಇರುತ್ತದೆ…

ಹೀಗೆ ವಿವಿಧ ರೀತಿಯ ದ್ವಿತೀಯ ವಿಕಿರಣಗಳ (Secondary Radiation) ಅಸ್ತಿತ್ವದ ಬಗ್ಗೆ ಹಲವು ಪ್ರಯೋಗಗಳನ್ನು ತೋರಿಸುತ್ತಾ ಉಪನ್ಯಾಸವನ್ನು ನೀಡತೊಡಗಿದರು.

ಇದು 1928 ಮಾರ್ಚ್ 16ರಂದು ಬೆಂಗಳೂರಿನಲ್ಲಿ ನಡೆದ ಸೌತ್ ಇಂಡಿಯನ್ ಸೈನ್ಸ್ ಅಸೋಸಿಯೇಷನ್ ಸಮ್ಮೇಳನದ ಉದ್ಘಾಟನಾ ಉಪನ್ಯಾಸದ ತುಣುಕು. ಅಂದಿಗೆ ಸೆಂಟ್ರಲ್ ಕಾಲೇಜಾಗಿದ್ದ ಈಗಿನ ಬೆಂಗಳೂರು ಸಿಟಿ ವಿಶ್ವವಿದ್ಯಾನಿಲಯದಲ್ಲಿನ ರಾಮನ್ ಹಾಲ್ ಎಂದೇ ಕರೆಸಿಕೊಳ್ಳುವ ಕೊಠಡಿಯಲ್ಲಿ ಅಂದು ಸರ್ ಸಿ.ವಿ. ರಾಮನ್ ಈ ಉಪನ್ಯಾಸ ನೀಡಿದ್ದರು. 1928ರ ಫೆಬ್ರವರಿ 28ರಂದು ಕಲ್ಕತ್ತಾದ ಇಂಡಿಯನ್ ಅಸೊಸಿಯೇಷನ್ ಫಾರ್ ದಿ ಕಲ್ಟಿವೇಶನ್ ಆಫ್ ಸೈನ್ಸ್ ಕೇಂದ್ರದಲ್ಲಿ ಕೈಗೊಂಡಿದ್ದ ಪ್ರಯೋಗದಲ್ಲಿ ಫಲಿತಾಂಶ ಕಂಡುಕೊಂಡಿದ್ದ ರಾಮನ್ ಮೊದಲನೇ ಬಾರಿಗೆ ತಾವೇ ಉಪನ್ಯಾಸ ನೀಡಿ, ಪ್ರಯೋಗದ ರೂಪುರೇಷು ಮತ್ತದರ ಫಲಿತಾಂಶವನ್ನು ಜಗತ್ತಿಗೆ ಪರಿಚಯಿಸಿದ್ದು ಬೆಂಗಳೂರಿನಲ್ಲೇ… (ಪ್ರಯೋಗದ ಪ್ರಕಟಣೆಗಳನ್ನು ಹೊರತುಪಡಿಸಿ).

ಸರ್ ಸಿ.ವಿ. ರಾಮನ್ ತಿರುಚನಾಪಲ್ಲಿಯ ತಿರುವನೈಕ್ಕಾವಲ್‌ನಲ್ಲಿ 1888ರ ನವೆಂಬರ್ 07ರಂದು ಜನಿಸಿದರು. ತಾಯಿ ಪಾರ್ವತಿ ಅಮ್ಮಾಲ್, ತಂದೆ ಚಂದ್ರಶೇಖರ್ ಐಯ್ಯರ್. ಇವರಿಗೆ ಐವರು ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳು. ರಾಮನ್ ಎರಡನೆಯವರು. ರಾಮನ್‌ರವರ ತಂದೆ ಶಾಲಾ ಶಿಕ್ಷಕರಾಗಿದ್ದು ಭೌತ ವಿಜ್ಞಾನ, ಗಣಿತ ಮತ್ತು ತತ್ವ ವಿಜ್ಞಾನ ಹಾಗೂ ಸಂಗೀತದಲ್ಲಿ ಬಹಳ ಆಸಕ್ತಿ ಹೊಂದಿದ್ದರು. 1892ರಲ್ಲಿ ಇವರಿಗೆ ವಿಶಾಖಪಟ್ಟಣಕ್ಕೆ ವರ್ಗಾವಣೆ ಆದಕಾರಣ, ರಾಮನ್‌ರವರ ಪ್ರಾಥಮಿಕ ವಿದ್ಯಾಭ್ಯಾಸ ವಿಶಾಖಪಟ್ಟಣದಲ್ಲಿಯೇ ನಡೆಯಿತು. ರಾಮನ್ ತಮ್ಮ 11ನೇ ವಯಸ್ಸಿನಲ್ಲಿಯೇ ಮೆಟ್ರಿಕ್ಯುಲೇಷನ್ ಪಾಸ್ ಮಾಡಿ, ಈಗಿನ ಪಿ.ಯು.ಸಿ. ಪರೀಕ್ಷೆಗೆ ಸಮನಾಗಿದ್ದ ಎಫ್.ಎ. ಪರೀಕ್ಷೆಯಲ್ಲಿ ಅಂದಿನ ಆಂಧ್ರ ಪ್ರದೇಶ ರಾಜ್ಯಕ್ಕೆ ಪ್ರಥಮರಾಗಿ ತೇರ್ಗಡೆ ಹೊಂದಿದ್ದರು.

ತದನಂತರ ರಾಮನ್‌ರ ಕುಟುಂಬ ಮದ್ರಾಸ್‌ಗೆ (ಈಗಿನ ಚೆನ್ನೈ) ವರ್ಗಾವಣೆಗೊಂಡಾಗ, ರಾಮನ್ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನ ಮತ್ತು ಇಂಗ್ಲಿಷ್‌ನಲ್ಲಿ ಬಿ.ಎ. ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದರು. ಆ ಸಮಯಕ್ಕಾಗಲೇ ರಾಮನ್ ವಿಜ್ಞಾನದ ಹಲವು ವಿಷಯಗಳ ಬಗ್ಗೆ ಚಿಂತಿಸಿ ವಿಚಾರ ಮಾಡುತ್ತಿದ್ದರು. ಅಲ್ಲದೆ, 1906ರಲ್ಲಿಯೇ ತಮ್ಮ ಮೊದಲನೇ ವಿಜ್ಞಾನ ಲೇಖನವನ್ನು ಬ್ರಿಟಿಷ್ ಜರ್ನಲ್ ಆದ ಫಿಲಾಸಫಿಕಲ್ ಮ್ಯಾಗ್ಸೈನ್‌ನಲ್ಲಿ ಪ್ರಕಟಿಸಿದರು. ತದನಂತರ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯನ್ನೂ ಪಡೆದು, ತಮ್ಮ ಎರಡನೇ ವಿಜ್ಞಾನ ಸಂಶೋಧನಾ ಲೇಖನವನ್ನು ದ್ರವಗಳ ಮೇಲ್ಮೈ ಎಳೆತದ (Surface Tension) ವಿಷಯದ ಮೇಲೆ ಪ್ರಕಟಿಸಿದರು. ಇದಾದನಂತರ, ರಾಮನ್ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಪಾಸ್ ಮಾಡಿ ಹಣಾಕಾಸು ಇಲಾಖೆಯಲ್ಲಿ ಕೆಲಸವನ್ನು ಪಡೆದರು. ಇದರ ಮಧ್ಯೆ, ತಮ್ಮ 13ನೇ ವಯಸ್ಸಿನಲ್ಲಿಯೇ ವೀಣೆಯಲ್ಲಿ ತ್ಯಾಗರಾಜರ ಕೀರ್ತನೆಗಳನ್ನು ನುಡಿಸುತ್ತಿದ್ದ ’ಲೋಕಸುಂದರಿ’ ಎಂಬ ಹುಡುಗಿಗೆ ಮನಸ್ಸೊಪ್ಪಿಸಿ, ರಾಮನ್ ಮದುವೆಯಾಗಿದ್ದರು.

ಸಿ.ವಿ ರಾಮನ್ (1888-1970) ಮತ್ತು ರಾಮನ್ ಪ್ರಯೋಗ

ಸಿವಿಲ್ ಸರ್ವಿಸ್ ಪರೀಕ್ಷೆಯಿಂದ ಕೆಲಸ ಪಡೆದಿದ್ದ ರಾಮನ್, 1907ರಲ್ಲಿ ಕೊಲ್ಕತ್ತಾಗೆ ತೆರಳಿ ಹಣಕಾಸು ಇಲಾಖೆಯಲ್ಲಿ ಸಹಾಯಕ ಮಹಾಲೇಖಪಾಲರಾಗಿ ಕೆಲಸ ನಿರ್ವಹಿಸಲು ಪ್ರಾರಂಭಿಸಿದರು. ಪ್ರತಿ ದಿನ ಕಛೇರಿಗೆ ತೆರಳಬೇಕಾದರೆ, ಕಾಣಸಿಗುತ್ತಿದ್ದ ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಷನ್ ಆಫ್ ಸೈನ್ಸ್(IACS) ಸಂಸ್ಥೆಯನ್ನು ಕಂಡು, ತಾವು ಅಧ್ಯಯನ ನಡೆಸಬೇಕು ಎಂದುಕೊಂಡಿದ್ದ ವಿಜ್ಞಾನ ವಿಷಯಗಳ ಮೇಲೆ ಅಲ್ಲಿನ ಪ್ರಯೋಗಾಲಯದಲ್ಲಿ ಪ್ರಯೋಗಗಳನ್ನು ಮಾಡಬೇಕು ಎಂದು ಯೋಚಿಸಿದ್ದರು. ಕೊನೆಗೂ ಅನುಮತಿಯನ್ನು ಪಡೆದು ಕಚೆರಿಯನ್ನು ಹೊರತುಪಡಿಸಿದ ಇತರ ಸಮಯಗಳಲ್ಲಿ ತಮ್ಮ ಪ್ರಯೋಗಗಳನ್ನು IACS ಸಂಸ್ಥೆಯಲ್ಲಿ ಕೈಗೊಂಡರು. ಅಲ್ಲದೆ ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಆಹ್ವಾನದ ಮೇರೆಗೆ, ತಮ್ಮ ಹಣಕಾಸು ಇಲಾಖೆಯ ಸಹಾಯಕ ಮಹಾಲೇಖಪಾಲರ ವೃತ್ತಿಯನ್ನು ಬಿಟ್ಟು, ಹೆಸರಾಂತ ಪಲಿಟ್ ಪ್ರೊಫೆಸರ್ ಆಫ್ ಪಿಸಿಕ್ಸ್ ಆಗಿ ಕೊಲ್ಕತ್ತಾ ವಿಶ್ವವಿದ್ಯಾನಿಲಯಕ್ಕೆ ಸೇರಿದರು.

ರಾಮನ್ ಭೌತವಿಜ್ಞಾನ ಪ್ರೊಫೆಸರ್ ಆಗಿ ಹಾಗು IACS ಸಂಸ್ಥೆಯ ಗೌರವ ಕಾರ್ಯದರ್ಶಿಗಳೂ ಆಗಿ ತಮ್ಮ ಅಧೀನದಲ್ಲಿದ್ದ ಎರಡು ಪ್ರಯೋಗಾಲಯಗಳನ್ನು ನಿರ್ವಹಿಸುತ್ತಾ ಅನೇಕ ಪ್ರಯೋಗಗಳನ್ನು ನಡೆಸುತ್ತಿದ್ದರು. ರಾಮನ್ ತಾವು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿಯೇ IACS ಸಂಸ್ಥೆಯಲ್ಲಿ ನಿರ್ವಹಿಸಿದ ಪ್ರಯೋಗಗಳ ಪಲಿತಾಂಶಗಳನ್ನು ವಿಜ್ಞಾನ ಪ್ರಪಂಚಕ್ಕೆ ತಿಳಿಸಲು ಪ್ರೊಸೀಡಿಂಗ್ಸ್ ಆಫ್ IACS ಎಂಬ ಜರ್ನಲ್‌ಅನ್ನು ಪ್ರಾರಂಭಿಸಿದರು. ಇದೇ ಜರ್ನಲ್ ಮುಂದೆ ’ಜರ್ನಲ್ ಆಫ್ ಫಿಸಿಕ್ಸ್’ ಎಂದೇ ಪ್ರಖ್ಯಾತವಾಗಿ ಇಂದಿಗೂ ಚಾಲ್ತಿಯಲ್ಲಿದೆ. 1930ರಲ್ಲಿ ರಾಮನ್‌ರವರಿಗೆ ನೊಬೆಲ್ ಪ್ರಶಸ್ತಿ ಬರಲು ’ಜರ್ನಲ್ ಆಫ್ ಫಿಸಿಕ್ಸ್’ ಪ್ರಮುಖ ಪಾತ್ರವಹಿಸಿತ್ತು. ಬಹುಷಃ ಈ ಜರ್ನಲ್‌ನಲ್ಲಿ ರಾಮನ್ ತಮ್ಮ ಪ್ರಯೋಗದ ಫಲಿತಾಂಶವನ್ನು ಪ್ರಕಟಿಸದೆ ಹೋಗಿದ್ದರೆ ನೊಬೆಲ್ ಪ್ರಶಸ್ತಿ ಪುರಸ್ಕೃತರಾಗುವುದರಿಂದ ವಂಚಿತರಾಗುತ್ತಿದ್ದರೇನೋ ಎಂಬ ಚರ್ಚೆಗಳೂ ಇವೆ.

20ನೇ ಶತಮಾನದ ಪ್ರಾರಂಭದ ಮೂರು ದಶಕಗಳು ವಿಜ್ಞಾನ ಇತಿಹಾಸದಲ್ಲಿಯೇ, ಅದರಲ್ಲೂ ಪ್ರಮುಖವಾಗಿ ಭೌತವಿಜ್ಞಾನದಲ್ಲಿ ಹಲವು ಬದಲಾವಣೆಗಳಾದ ಹಾಗೂ ವಿಜ್ಞಾನದ ಸಿದ್ಧ ಮಾದರಿಗಳನ್ನು ಒಡೆದು ಹಾಕಿದ ದಶಕಗಳಾಗಿದ್ದವು. ರಾಮನ್‌ರ ಸಮಕಾಲೀನರಾದ ಲಾರ್ಡ್ ರೇಲಿನ್, ನೀಲ್ಸ್ ಬೋರ್, ರುಧರ್ ಪೋರ್ಡ್, ಐನ್‌ಸ್ಟೈನ್, ಐರ್‍ವಿನ್ ಶ್ರೋಡಿಂಜರ್, ಮ್ಯಾಕ್ಸ್ ಬಾರ್ನ್‌ನಂತಹ ಹಲವು ದಿಗ್ಗಜ ವಿಜ್ಞಾನಿಗಳು ಹೊಸ ಹೊಸ ವಿಚಾರಗಳನ್ನು ಮಂಡಿಸುತ್ತಾ ಅವುಗಳನ್ನು ಪ್ರಯೋಗಕ್ಕೆ ಒಳಪಡಿಸುತ್ತಿದ್ದ ಕಾಲ. ’ಬೆಳಕ’ನ್ನು ’ಕಣ ಸ್ವಭಾವ’ದಿಂದ (particle nature) ಅರ್ಥ ಮಾಡಿಕೊಳ್ಳುವುದೋ ಅಥವಾ ’ತರಂಗ ಸ್ವಭಾವ’ದಿಂದ (wave nature) ಅರ್ಥ ಮಾಡಿಕೊಳ್ಳುವುದೋ ಎಂದು ಚರ್ಚಿಸುತ್ತಿದ್ದ, ಚಿಂತಿಸುತ್ತಿದ್ದ ಕಾಲವದು. ಅಣುಗಳ ಚಲನೆ, ಬೆಳಕಿನ ಸ್ವಭಾವ ವಿವರಿಸಲು ಹೊಸದೊಂದು ವಿಭಾಗವಾದ ಕ್ವಾಂಟಮ್ ಮೆಕಾನಿಕ್ಸ್, ವಿಶೇಷ ಮತ್ತು ಸಾಪೇಕ್ಷ ಸಿದ್ಧಾಂತಗಳು ಹುಟ್ಟುಕೊಳ್ಳುತ್ತಿದ್ದ ಕಾಲವೂ ಹೌದು.

ಹೀಗೆ ಅಣು, ಪರಮಾಣು ಮತ್ತು ಬೆಳಕಿನ ಹಲವು ಮಜಲುಗಳನ್ನು ಚರ್ಚಿಸುವ ಕಾಲದಲ್ಲೇ, ಅದಾಗಲೇ ಭೌತ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದ ಲಾರ್ಡ್ ರೇಲಿನ್, ಸಮುದ್ರ ನೀಲಿ ಬಣ್ಣದಲ್ಲಿ ಕಾಣುವುದಕ್ಕೂ ಮತ್ತು ಅದರ ನೀರಿಗೂ ಯಾವುದೇ ಸಂಬಂಧವಿಲ್ಲ, ಸಮುದ್ರ ಆಕಾಶದ ಬಣ್ಣವನ್ನು ಪ್ರತಿಫಲನೆ ಮಾಡುವುದರಿಂದ ನೀಲಿ ಬಣ್ಣದಿಂದ ಕಾಣುತ್ತದೆ ಎಂದು ಪ್ರತಿಪಾದಿಸಿದ್ದರು. 1920ರಲ್ಲಿ ರಾಮನ್ ರೇಲಿನ್‌ನ ಈ ಪ್ರತಿಪಾದನೆಯನ್ನು ಅಲಗಳೆದು, ಸಮುದ್ರದ ನೀಲಿ ಬಣ್ಣ ಮತ್ತು ನೀರಿಗಿರುವ ಸಂಬಂಧವನ್ನು ಎಳೆಎಳೆಯಾಗಿ ಬಿಡಿಸಿ, ಬೆಳಕಿನ ಕಿರಣಗಳು ನೀರಿನ ಅಣುಗಳಿಂದ ವಿವರ್ತನೆಗೊಳ್ಳುವುದರಿಂದ (Diffraction of Light) ಸಮುದ್ರದ ನೀರು ನೀಲಿ ಬಣ್ಣದಲ್ಲಿ ಕಾಣುತ್ತದೆ ಎಂದು ವಿವರಿಸಿ, ಪ್ರಯೋಗ ಮಾಡಿ ತೋರಿಸಿದರು. ಹೀಗೆ ಬೆಳಕಿನ ವಿವರ್ತನೆ, ಚದುರುವಿಕೆ (Scattering) ಮತ್ತು ಫ್ಲೋರೋಸಿಸ್ (Fluorescence) ಬಗ್ಗೆ ಹಲವು ಪ್ರಯೋಗಗಳನ್ನು ರಾಮನ್ ನಡೆಸುತ್ತಿದ್ದರು. ಈ ಪ್ರಯೋಗಗಳಲ್ಲಿ ಬೆಳಕಿನ ಪ್ರಾಥಮಿಕ ವಿಕಿರಣಗಳು ಮತ್ತು ದ್ವಿತೀಯ ವಿಕಿರಣಗಳ ಮೇಲೆ ಹೆಚ್ಚು ಗಹನವಾಗಿ ಅಧ್ಯಯನ ಕೈಗೊಂಡಿದ್ದರು. 1921ರ ದಶಕದಲ್ಲಿ ಈ ವಿಷಯಗಳ ಬಗ್ಗೆ ಪ್ರಪಂಚದಾದ್ಯಂತ ಅನೇಕ ಪ್ರಯೋಗಾಲಯಗಳಲ್ಲಿ ಇತರೆ ವಿಜ್ಞಾನಿಗಳೂ ಸಹ ಅಧ್ಯಯನ ನಡೆಸುತ್ತಿದ್ದರು.

ರಾಮನ್ 1922ರಿಂದ ಸತತವಾಗಿ ಏಳು ವರ್ಷಗಳ ಕಾಲ ಈ ವಿಷಯಗಳ ಮೇಲೆ ಅನೇಕ ಸಂಶೋಧನೆಗಳನ್ನು IACSಯಲ್ಲಿ ನಡೆಸಿದರು. ಈ ಸಂಸ್ಥೆಯಲ್ಲಿ ರಾಮನ್‌ರ ಸಹೋದ್ಯೋಗಿ ಸಂಶೋಧಕರ ಪಟ್ಟಿ ಬಹಳ ದೊಡ್ಡದಿದೆ. ರಾಮಕೃಷ್ಣ ರಾವ್, ವೆಂಕಟೇಶ್ವರನ್, ರಾಮಚಂದ್ರ ರಾವ್, ರಾಮನಾಥನ್, ಶ್ರೀವಾತ್ಸವ, ಕಾಮೇಶ್ವರ್ ರಾವ್, ರಾಮದಾಸ್, ಸೊಗನಿ ಮತ್ತು ಕೆ.ಎಸ್. ಕೃಷ್ಣನ್. ಇವರುಗಳು 1922-27ರಲ್ಲಿ ಬೆಳಕಿನ ಚದರುವಿಕೆ ಮತ್ತು ಫ್ಲೋರೋಸಿಸ್ ವಿಷಯಗಳಲ್ಲಿನ ದ್ವಿತೀಯ ವಿಕಿರಣಗಳ ಬಗ್ಗೆ ಹಲವು ಅಧ್ಯಯನಗಳನ್ನು ಕೈಗೊಂಡಿದ್ದರು. ನೊಬೆಲ್ ಪ್ರಶಸ್ತಿ ಪಡೆದ ದಿನ ತಮ್ಮ ನೊಬೆಲ್ ಉಪನ್ಯಾಸದಲ್ಲಿ ರಾಮನ್ ಇವರೆಲ್ಲರ ಹೆಸರುಗಳನ್ನು ಮತ್ತು ಅವರು ನಡೆಸಿದ ಪ್ರಯೋಗಗಳನ್ನೆಲ್ಲವನ್ನು ವಿವರವಾಗಿ ಉಲ್ಲೇಖಿಸುತ್ತಾರೆ.

ಸರ್ ಸಿ.ವಿ ರಾಮನ್‌ಗೆ ನೊಬೆಲ್ ಪಾರಿತೋಷಕ ಒದಗಿಸಿದ ಪ್ರಯೋಗ ರಾಮನ್ ಮತ್ತು ರಾಮನ್ ಅವರ ಶಿಷ್ಯ ಕೆ.ಎಸ್ ಕೃಷ್ಣನ್ ಒಟ್ಟಾಗಿ ನಡೆಸಿದ ಬೆಳಕಿನ ಚದರುವಿಕೆಗೆ ಸಂಬಂಧಿಸಿದ ಅಧ್ಯಯನ. ಈ ಪ್ರಯೋಗದ ಸಂಕ್ಷಿಪ್ತ ವಿವರ ಇಲ್ಲಿದೆ: ಒಂದು ನಿರ್ದಿಷ್ಠ ತರಂಗಾಂತರದ (Wavelength) ಬೆಳಕು ಧೂಳು-ಮುಕ್ತ ರಾಸಾಯನಿಕ ಸಂಯುಕ್ತದ ಮುಖಾಂತರ ಹಾದು ಚದರುವಿಕೆಯಾಗಿ (Scattering) ಹೊರಬರುವಾಗ, ಆ ಬೆಳಕಿನ ತರಂಗಾಂತರ ಮೂಲ ಬೆಳಕಿನ ತರಂಗಾಂತರಕ್ಕಿಂತಲೂ ಬೇರೆಯಾಗಿರುತ್ತದೆ. ಈ ಬೇರೆಯಾಗಿರುವ ಬೆಳಕಿನ ಕಿರಣಗಳನ್ನು ದ್ವಿತೀಯ ವಿಕಿರಣ ಎಂದು ಕರೆಯಲಾಗುತ್ತೆ. ಅಂದಿಗೆ ಅರ್ಥವಾಗಿದ್ದ ದ್ವಿತೀಯ ವಿಕರಣಗಳು ಉತ್ಪತ್ತಿಯಾಗುವ ಪ್ರಕ್ರಿಯೆಗಳಲ್ಲಿ ಯಾವ ಪ್ರಕ್ರಿಯೆಯೂ ರಾಮನ್‌ಗೆ ಕಂಡಿದ್ದ ದ್ವಿತೀಯ ವಿಕಿರಣವನ್ನು ವಿವರಿಸಲು ಸಾಧ್ಯವಾಗಲಿಲ್ಲ.

ಇದಕ್ಕಾಗಿಯೇ ರಾಮನ್ ಈ ಪ್ರಯೋಗದ ಮೇಲೆ ಬರೆದ ಮೊದಲ ಲೇಖನ ಮತ್ತು ಉಪನ್ಯಾಸದ ಒಕ್ಕಣೆಯನ್ನು ’ಒಂದು ಹೊಸ ವಿಕಿರಣ’ (A New Radiation) ಎಂದೇ ಕರೆದರು. ರಾಮನ್ ತಮ್ಮ ಪ್ರಯೋಗದಲ್ಲಿ ಉತ್ಪತ್ತಿಯಾಗಿದ್ದ ಹೊಸ ವಿಕಿರಣವನ್ನು ಧೂಳು-ಮುಕ್ತ ರಾಸಾಯನಿಕ ಸಂಯುಕ್ತದ ಒಳಗಡೆಯೇ ಸೃಷ್ಠಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟು, 80 ವಿವಿಧ ರಾಸಾಯನಿಕ ಸಂಯುಕ್ತಗಳಲ್ಲಿ ಇದರ ಅನ್ವೇಷಣೆ ನೆಡೆಸಿ ಸಾಬೀತುಪಡಿಸಿದರು. ಈ ಪ್ರಯೋಗ ನಡೆದದ್ದು ಫೆಬ್ರವರಿ 28, 1928! ನಂತರದ ದಿನದಲ್ಲಿಯೇ ಈ ಪ್ರಯೋಗದ ಬಗ್ಗೆ ಒಂದು ಲೇಖನವನ್ನು IACSನ ಜರ್ನಲ್ ಆಫ್ ಫಿಸಿಕ್ಸ್‌ನಲ್ಲಿ ರಾಮನ್ ಪ್ರಕಟಿಸುತ್ತಾರೆ. ಈ ಪ್ರಕಟಣೆಯನ್ನು ಪ್ರಪಂಚದಾದ್ಯಂತ ಪ್ರಚಾರ ಮಾಡಲಾಗುತ್ತದೆ. ರಾಮನ್ ಕೂಡ ಇತರ ದೇಶದಲ್ಲಿನ ತನ್ನ ಸಹ ವಿಜ್ಞಾನಿಗಳಿಗೂ ಕಳುಹಿಸುತ್ತಾರೆ.

ಇದೇ ಸಮಯದಲ್ಲಿ ರಷ್ಯಾದ ವಿಜ್ಞಾನಿಗಳಾದ ಲ್ಯಾಂಡ್ಸ್‌ಬರ್ಗ್ ಮತ್ತು ಮೆಂಡಲ್ ಸ್ಟ್ಯಾಮ್ ಸಹ ಇಂತಹದೇ ಪ್ರಯೋಗ ನಡೆಸಿ, ಬೆಳಕಿನ ಚದರುವಿಕೆಯಲ್ಲಿನ ಹೊಸ ದ್ವಿತೀಯ ವಿಕಿರಣಗಳ ಬಗ್ಗೆ ಅಧ್ಯಯನ ನಡೆಸಿ ಯಶಸ್ಸು ಕಂಡಿರುತ್ತಾರೆ. ಈ ಪ್ರಯೋಗ ಅಂದಿನ ಕಾಲಕ್ಕೆ ಬಹಳ ಪ್ರಮುಖವಾದ ಪ್ರಯೋಗ ಮತ್ತು ವಿಜ್ಞಾನದ ಒಂದು ಮೈಲುಗಲ್ಲು. ಏಕೆಂದರೆ, ಈ ಪ್ರಯೋಗದಿಂದ ಬರುವ ಹೊಸ ವಿಕಿರಣದ ರೋಹಿತವನ್ನು (Spectrum) ಅಧ್ಯಯನ ಮಾಡಿದರೆ, ಪ್ರಯೋಗಕ್ಕೆ ಬಳಸಿದ ರಾಸಾಯನಿಕ ಸಂಯುಕ್ತದ ಅಣುಗಳ ರಚನೆಯನ್ನು ಯಾವುದೇ ಕಷ್ಟವಿಲ್ಲದೆ ಸುಲಭವಾಗಿ ವಿವರಿಸಬಹುದಾಗಿದೆ. ಅಂದಿನವರೆಗೂ ಇಂತಹ ರಾಸಾಯನಿಕ ಸಂಯುಕ್ತವನ್ನು ಅಧ್ಯಯನ ನಡೆಸುವ ಮಾರ್ಗವೇ ಇರಲಿಲ್ಲ. ಹಾಗಾಗಿ, ಈ ಪ್ರಯೋಗವು ಭೌತ ವಿಜ್ಞಾನದಲ್ಲಿ ಕ್ರಾಂತಿಯನ್ನೇ ಉಂಟುಮಾಡಿತು. ಇಂದಿಗೂ ಕೂಡ ಈ ಪ್ರಯೋಗ, ಅಂದರೆ ರಾಮನ್ ಪರಿಣಾಮ ತುಂಬಾ ಪ್ರಮುಖವಾದದ್ದು.

ಮಂಗಳನ ಗ್ರಹದ ಮೇಲೆ ಈಚೆಗೆ ಇಳಿದಿರುವ ಪರ್ಸಿವರೆನ್ಸ್ ರೋವರ್ ಕೂಡ ಮಂಗಳನ ಮಣ್ಣುಗಳನ್ನು ಪರೀಕ್ಷೆ ಮಾಡಲು ರಾಮನ್ ರೋಹಿತನ್ನೇ ಅವಲಂಬಿಸಿದೆ. ಈ ಕ್ರಾಂತಿಕಾರಿ ಪ್ರಯೋಗಕ್ಕಾಗಿ 1929 ಮತ್ತು 1930ರಲ್ಲಿ ಹಲವು ವಿಜ್ಞಾನಿಗಳು ರಾಮನ್ ಮತ್ತು ರಷ್ಯಾದ ವಿಜ್ಞಾನಿಗಳಾದ ಲ್ಯಾಂಡ್ಸ್ ಬರ್ಗ್ ಮತ್ತು ಮೆಂಡಲ್ ಸ್ಟ್ಯಾಮ್‌ರವರನ್ನು ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದರು. ಅದರಲ್ಲೂ 1930ರಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ವಿಜ್ಞಾನಿಗಳು ರಾಮನ್ ಹೆಸರನ್ನು ನಾಮನಿರ್ದೇಶನಮಾಡಿದ್ದು, ಆ ವರ್ಷ ಸಿ. ವಿ.ರಾಮನ್ ಒಬ್ಬರಿಗೇ ಭೌತವಿಜ್ಞಾನ ವಿಷಯದ ನೊಬೆಲ್ ಪ್ರಶಸ್ತಿ ದೊರಕುತ್ತದೆ.

ಈ ಹೊಸ ವಿಕಿರಣದ ಅನ್ವೇಷಣೆಯನ್ನು ರಷ್ಯ ವಿಜ್ಞಾನಿಗಳಿಗಿಂತಲೂ ರಾಮನ್ ಭಾರತದ ಜರ್ನಲ್ ಆಫ್ ಫಿಸಿಕ್ಸ್‌ನಲ್ಲಿ ಮೊದಲು ಪ್ರಕಟಿಸಿರುತ್ತಾರೆ. ಇದಾದನಂತರ ರಾಮನ್ ನೇಚರ್ ಜರ್ನಲ್‌ನಲ್ಲಿ ಪ್ರಕಟಿಸಿರುತ್ತಾರೆ. ಆ ಸಮಯಕ್ಕೆ ರಷ್ಯಾ ವಿಜ್ಞಾನಿಗಳೂ ಸಂಶೋಧನೆಯನ್ನು ಪ್ರಕಟಿಸಿರುತ್ತಾರೆ. ನೊಬೆಲ್ ಸಮಿತಿಯು 1930ರ ಭೌತವಿಜ್ಞಾನ ಪ್ರಶಸ್ತಿ ನೀಡುವ ವಿವರಗಳಲ್ಲಿ IACSನಲ್ಲಿ ಪ್ರಕಟವಾದ ರಾಮನ್ ಲೇಖನವನ್ನು ಸಹ ಪಟ್ಟಿ ಮಾಡಿ, ಇದು ಈ ಪ್ರಯೋಗದ ಮೊದಲ ಪ್ರಕಟಣೆ ಎಂದೇ ಪರಿಗಣಿಸಿರುತ್ತದೆ. ಹೀಗೆ ರಾಮನ್ ತಾವೇ ಪ್ರಾರಂಭಿಸಿದ್ದ IACSನ ಜರ್ನಲ್ ಆಫ್ ಫಿಸಿಕ್ಸ್‌ನ ಜರ್ನಲ್‌ಅನ್ನು ಸಂಸ್ಥೆಯ ಪ್ರಯೋಗಗಳ ಫಲಿತಾಂಶಗಳನ್ನು ತಕ್ಷಣಕ್ಕೆ ಪ್ರಕಟಿಸಲು ಮತ್ತು ಎಲ್ಲರಿಗೂ ತಿಳಿಸಲು ಸೂಕ್ತವಾಗಿ ಬಳಸಿಕೊಂಡಿದ್ದರು. ಇಂದಿಗೂ ಜರ್ನಲ್ ಆಫ್ ಫಿಸಿಕ್ಸ್ ಭಾರತದ ಪ್ರಸಿದ್ಧ ಭೌತವಿಜ್ಞಾನ ಜರ್ನಲ್ ಆಗಿದೆ.

ಹೀಗಿದ್ದರೂ, ಭಾರತಕ್ಕೆ ನೊಬೆಲ್ ಪ್ರಶಸ್ತಿ ತಂದುಕೊಟ್ಟ ಪ್ರಯೋಗವನ್ನು ರಾಮನ್ ಒಬ್ಬರೆ ಕೈಗೊಂಡಿರಲಿಲ್ಲ. ಈ ಅಧ್ಯಯನದಲ್ಲಿ ಅನೇಕ ಪ್ರಯೋಗಗಳನ್ನು ಸಿ.ವಿ ರಾಮನ್ ಮತ್ತು ಕೆ.ಎಸ್ ಕೃಷ್ಣನ್ ಇಬ್ಬರೂ ನಡೆಸಿದ್ದರು. ಈ ಬಗ್ಗೆ ಪ್ರಕಟವಾದ ಮೊದಲ ವೈಜ್ಞಾನಿಕ ಲೇಖನದಲ್ಲಿ ರಾಮನ್‌ರ ಜೊತೆ ಕೃಷ್ಣನ್ ಕೂಡ ಎರಡನೇ ಸಂಶೋಧಕ ಲೇಖಕರಾಗಿದ್ದರು. ತದನಂತರ ಪ್ರಕಟವಾದ ಎರಡನೇ ಪತ್ರಿಕೆಯಾದ  A change of wavelength in light scatteringನಲ್ಲಿ ರಾಮನ್ ಒಬ್ಬರೇ ಲೇಖಕರಾಗಿರುತ್ತಾರೆ. ಇದಕ್ಕೆ ಕಾರಣ ಇಂದಿಗೂ ತಿಳಿದಿಲ್ಲ. ಆದರೂ, ರಾಮನ್ ತಮ್ಮ ಎಲ್ಲಾ ಉಪನ್ಯಾಸಗಳಲ್ಲೂ ಮತ್ತು ಲೇಖನಗಳಲ್ಲೂ ಕೆ.ಎಸ್. ಕೃಷ್ಣನ್‌ರವರ ಕೊಡುಗೆಯನ್ನು ಸ್ಮರಿಸುತ್ತಲೇ ಇದ್ದಿದ್ದನ್ನು ಕಾಣಬಹುದು. ಒಂದು ಸಂದರ್ಭದಲ್ಲಿ, ರಾಮನ್ ಸಹ ಈ ಸಂಶೋಧನೆಯನ್ನು ’ರಾಮನ್-ಕೃಷ್ಣನ್ ಪರಿಣಾಮ’ ಎಂದೇ ಹೆಸರಿಸಬೇಕು ಎಂದಿದ್ದರಂತೆ.

ಆದರೂ ಇಂದಿಗೂ ಈ ಪ್ರಯೋಗ ರಾಮನ್ ಪರಿಣಾಮ ಎಂದೇ ಪ್ರಸಿದ್ಧಿಯಾಗಿದೆ. ರಾಮನ್ ಪರಿಣಾಮದ ಅನ್ವೇಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಕೃಷ್ಣನ್ ಕೂಡ ತಮ್ಮ ಡೈರಿಯಲ್ಲಿ ಈ ಪ್ರಯೋಗದ ನಿರ್ಣಾಯಕ ಘಟ್ಟದಲ್ಲಿ ಹೊಸ ವಿಕಿರಣದ ಫಲಿತಾಂಶವನ್ನು ಸೂಕ್ತವಾಗಿ ವಿಶ್ಲೇಷಿಸಿದ್ದು ಪ್ರೊ.ರಾಮನ್‌ರವರೇ, ನಮಗಾರಿಗೂ ಅಂತಹ ಯೋಚನೆ ಹೊಳೆದಿರಲೇ ಇಲ್ಲಾ ಎಂದು ಬರೆದುಕೊಳ್ಳುತ್ತಾರೆ. ಹಲವು ವರ್ಷಗಳ ನಂತರ ರಾಮನ್, ಕೃಷ್ಣನ್‌ರವರನ್ನು ಫೆಲೋ ಆಫ್ ರಾಯಲ್ ಸೊಸೈಟಿ ಆಫ್ ಲಂಡನ್‌ಗೆ ನಾಮನಿರ್ದೇಶನ ಮಾಡುತ್ತಾರೆ. ಆ ನಾಮನಿರ್ದೇಶನದ ಪತ್ರದಲ್ಲಿ ಕೆ.ಎಸ್ ಕೃಷ್ಣನ್ ಅವರು ರಾಮನ್ ಪರಿಣಾಮದ ಸಹ ಅನ್ವೇಷಕ ಎಂದೇ ಬರೆಯುತ್ತಾರೆ! ಅಲ್ಲದೆ, ಭಾರತದ ವಿಜ್ಞಾನ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಕೆ.ಎಸ್ ಕೃಷ್ಣನ್ (1958ರಲ್ಲಿ).

ಏನೇ ಇರಲಿ, ಈ ಪ್ರಯೋಗಕ್ಕೆ 1930ರಲ್ಲಿ ಸರ್ ಸಿ.ವಿ ರಾಮನ್‌ಗೆ ಸಂದ ನೊಬೆಲ್ ಭಾರತದ ವಿಜ್ಞಾನ ಕ್ಷೇತ್ರಕ್ಕೆ ಸಂದ ಮೊದಲ ನೊಬೆಲ್ ಪಾರಿತೋಷಕ. ಆಗತಾನೆ ಮೊಳಕೆಯಲ್ಲಿದ್ದ ಕ್ವಾಂಟಮ್ ಮೆಕಾನಿಕ್ಸ್ ವಿಷಯವನ್ನು ಒಪ್ಪುವ-ತಿರಸ್ಕರಿಸುವ ಚಿಂತನೆಗಳಿಗೆ, ರಾಮನ್ ಪರಿಣಾಮದ ಪ್ರಯೋಗ ಕ್ವಾಂಟಮ್ ಮೆಕಾನಿಕ್ಸ್ ವಿಷಯವನ್ನು ಪುರಸ್ಕರಿಸಿ, ಮೊದಲ ಪುರಾವೆ ಕೊಟ್ಟಿತು. ತದನಂತರ ಕ್ವಾಂಟಮ್ ಮೆಕಾನಿಕ್ಸ್ ಬೆಳೆದ ರೀತಿಯೇ ಅದ್ಭುತ!

ಭಾರತದ ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಲು ಸಿ.ವಿ ರಾಮನ್ ಮತ್ತು ಕೆ.ಎಸ್ ಕೃಷ್ಣನ್ ಪ್ರಯೋಗ ನಡೆಸಿದ ದಿನವಾದ ಫೆಬ್ರವರಿ 28ನ್ನು ಭಾರತ ಸರ್ಕಾರವು 1986ರಿಂದಲೂ ರಾಷ್ಟ್ರೀಯ ವಿಜ್ಞಾನ ದಿನ ಎಂದು ಆಚರಿಸುತ್ತಿದೆ. ಪ್ರತಿ ವರ್ಷ ಒಂದು ಥೀಮ್‌ನೊಳಗೆ ರಾಷ್ಟ್ರೀಯ ವಿಜ್ಞಾನ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದ್ದು, ಈ ವರ್ಷದ ಥೀಮ್, Future of Science, Technology and Innovation: Impacts of Education, Skill and Work ಆಗಿದೆ.

ವಿಶ್ವ ಕೀರ್ತಿ ಎಸ್.

ವಿಶ್ವ ಕೀರ್ತಿ ಎಸ್
ವಿಜ್ಞಾನ ಮತ್ತು ಖಗೋಳ ವಿಜ್ಞಾನದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: 1856ರಲ್ಲೇ ಸಮಾನತೆಯ ಪ್ರಶ್ನೆ ಎತ್ತಿದ್ದ ಧಾರವಾಡದ ಎರ್‍ಲೂ ಬಿನ್ ನಾರಾಯಣ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಕೊಲೆಗೆ ರಾಜಕೀಯ ಬಣ್ಣ ಬಳಿದ ಅಣ್ಣಾಮಲೈ: ಪ್ರಕರಣ ದಾಖಲು

0
ಮಹಿಳೆಯೋರ್ವರ ಸಾವಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮಾಹಿತಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಪಕ್ಕಿರಿಮಣಿಯಂ...