ಕೊನೆಗೂ ಪ್ರಧಾನಿ ಮೋದಿ ಸಾಂಕ್ರಾಮಿಕದ ರೋಗವನ್ನು ಎದುರಿಸುವಲ್ಲಿನ ಸಮಸ್ಯೆಗಳ ಕುರಿತು ಮೌನ ಮುರಿದಿದ್ದಾರೆ. ದೇಶ ಮತ್ತು ವಿದೇಶಗಳಲ್ಲಿ ಖಂಡನೆಯನ್ನು ‘ಗಳಿಸಿದ’ ಆಮ್ಲಜನಕ, ಔಷಧಗಳು, ಲಸಿಕೆಗಳು ಮತ್ತು ಆಸ್ಪತ್ರೆಯ ಹಾಸಿಗೆಗಳ ಕೊರತೆಯನ್ನು ಅವರು ನೇರವಾಗಿ ಉಲ್ಲೇಖಿಸಲಿಲ್ಲ. ಆದರೆ ಪರೋಕ್ಷವಾಗಿ ತಮ್ಮ ಸರ್ಕಾರದ ವೈಫಲ್ಯವನ್ನು ಮೊದಲ ಬಾರಿ ಬಾಹ್ಯವಾಗಿ ಒಪ್ಪಿಕೊಂಡಂತೆ ಕಾಣುತ್ತದೆ.
ಹಲವಾರು ಪ್ರಮುಖ ಬಿಜೆಪಿ ಬೆಂಬಲಿಗರು ಮತ್ತು ಬಲಪಂಥೀಯ ಕಾಲಾಳುಗಳು ಕೂಡ ಸರ್ಕಾರದ ಸಾಂಕ್ರಾಮಿಕ ನಿರ್ವಹಣೆಯ ವೈಫಲ್ಯ ಖಂಡಿಸಿದ ನಂತರ, ಕೋವಿಡ್‌ಗೆ ಪ್ರೀತಿಪಾತ್ರರನ್ನು ಕಳೆದುಕೊಂಡ ನಾಗರಿಕರ “ನೋವು” ಹಂಚಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪಿಎಂ ಕಿಸಾನ್ ಯೋಜನೆಯ ಆನ್‌ಲೈನ್ ಕಾರ್ಯಕ್ರಮದಲ್ಲಿ ಪ್ರತ್ಯಕ್ಷರಾದರು ಎಂದು ಟೆಲಿಗ್ರಾಫ್ ಇಂಡಿಯಾ ವರದಿ ಮಾಡಿದೆ.
ಆದರೂ, ಮೋದಿಯವರು ಆಮ್ಲಜನಕ, ಔಷಧಗಳು, ಲಸಿಕೆಗಳು ಮತ್ತು ಆಸ್ಪತ್ರೆಯ ಹಾಸಿಗೆಗಳ ಕೊರತೆಯನ್ನು ನೇರವಾಗಿ ಪ್ರಸ್ತಾಪಿಸಲಿಲ್ಲ. ಬದಲಿಗೆ ಸಾಮಾನ್ಯ ಭರವಸೆಗಳನ್ನು ನೀಡಿದರು. ಜನರು “ಧೈರ್ಯ”ವನ್ನು ಕಳೆದುಕೊಳ್ಳಬಾರದು ಎಂದರು.
ಸಾಂಕ್ರಾಮಿಕ ರೋಗದ ಬಗ್ಗೆ ಅವರ ಉಲ್ಲೇಖಗಳು ಈ ಆನ್‌ಲೈನ್ ಕಾರ್ಯಕ್ರಮದ ಕೊನೆಯಲ್ಲಿ ಬಂದವು, ಬಡ ಮತ್ತು ಸಣ್ಣ ರೈತರಿಗೆ ವಾರ್ಷಿಕ 6,000 ರೂ.ಗಳ ಸಹಾಯವನ್ನು ಒಳಗೊಂಡ ಎರಡು ವರ್ಷದ ಹಿಂದಿನ ಯೋಜನೆಯನ್ನು ಜಾಹೀರಾತು ಮಾಡಲು ಈ ಕಾರ್ಯಕ್ರಮ ನಡೆಯಿತು. ಹೆಚ್ಚಾಗಿ ಮೊದಲೇ ‘ಆಯ್ಕೆ ಮಾಡಿದ’ ಸಾವಯವ ಕೃಷಿಕರು ಇದರ ವೀಕ್ಷಕ-ಪ್ರೇಕ್ಷಕರಾಗಿದ್ದರು. ಎಲ್ಲರೂ ಹರ್ಷಚಿತ್ತದಿಂದ ಮಾತನಾಡಿದರು!
ಉತ್ತರಪ್ರದೇಶದ ಉನ್ನಾವೋದ ರೈತರೊಬ್ಬರ ಜೊತೆ ಮಾತನಾಡಿದ ಪ್ರಧಾನಿ, ಸಾವಯವ ಕೃಷಿಯು “ಗಂಗಾ ಮಾ” ಅನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಶವಸಂಸ್ಕಾರ ಮಾಡಲೂ ಅಸಾಧ್ಯವಾದ ಸ್ಥಿತಿಯಲ್ಲಿ ಶವಗಳನ್ನು ಹೇಗೆ ನದಿಗೆ ಎಸೆಯಲಾಗುತ್ತಿದೆ ಮತ್ತು ಗಂಗಾ ದಡದಲ್ಲಿ 175 ಶವಗಳನ್ನು ಹೇಗೆ ಹೂಳಲಾಗಿದೆ ಎಂಬ ವಿಷಯವನ್ನು ನಿರ್ಲಕ್ಷಿಸಿ ಅವರು ಮಾತನಾಡಿದರು.
ಅಂತಿಮದಲ್ಲಿ, ಗಂಭೀರ ಅಭಿವ್ಯಕ್ತಿಯೊಂದಿಗೆ, ಪ್ರಧಾನಮಂತ್ರಿ ಜನರ “ನೋವಿನ” ಜೊತೆಗೆ ಅನುಭೂತಿ ಹೊಂದಲು ಪ್ರಯತ್ನಿಸಿದರು. “ಈ ಶತ್ರು ಕೊರೋನಾ ವೈರಸ್ ಕಾರಣಕ್ಕೆ ನಮಗೆ ಹತ್ತಿರವಿರುವ ಅನೇಕ ಜನರನ್ನು ನಾವು ಕಳೆದುಕೊಂಡಿದ್ದೇವೆ. ದೇಶದ ಜನರು ಅನುಭವಿಸಿದ ನೋವನ್ನು ಸಮಾನವಾಗಿ ಭಾವಿಸುತ್ತೇನೆ. ದೇಶದ ಪ್ರಧಾನ್ ಸೇವಕನಾಗಿ, ನಾನು ನಿಮ್ಮ ಪ್ರತಿಯೊಂದು ಭಾವನೆಯನ್ನು ಹಂಚಿಕೊಳ್ಳುತ್ತೇನೆ” ಎಂದು ಮೋದಿ ಹೇಳಿದರು.
ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರ ಮತ್ತು ಪಕ್ಷದ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇದರ ನೇರ ಪ್ರಸಾರ ಮಾಡಲಾಗುತ್ತು. ಒಂದು ಗಂಟೆಯ ಕಾರ್ಯಕ್ರಮದ ಅಂತ್ಯದಲ್ಲಿ ಅವರು ಸಾಂಕ್ರಾಮಿಕದ ಬಗ್ಗೆ ಮಾತನಾಡಿದರು, ಜನರ ನೋವು ಗೊತ್ತಿದೆ ಎಂದರು ಮತ್ತು ‘ಧೈರ್ಯ’ವಾಗಿರಿ ಎಂದು ಸಲಹೆ ನೀಡಿದರು! ಸಾಂಕ್ರಾಮಿಕ ನಿರ್ವಹಣೆಯ ಕುರಿತಂತೆ ಯಾವ ಭರವಸೆದಾಯಕ ಕಾರ್ಯಕ್ರಮಗಳನ್ನು ಘೋಷಿಸದ ಪ್ರಧಾನಿ, ‘ಧೈರ್ಯ’ದಿಂದ ಇರಬೇಕು ಎಂಬ ಪುಕ್ಕಟೆ ಸಲಹೆ ಕೊಟ್ಟರು. ತಟ್ಟೆ ಬಡಿಯಿರಿ, ಗಂಟೆ ಬಾರಿಸಿ ಎಂದು ಹೇಳಿದ್ದವರು ಇವರೇ ಅಲ್ಲವೇ? ಎಂಬ ಪ್ರಶ್ನೆ ಹೇಳುವಂತೆ ಮಾಡಿದರು.
ಸರ್ಕಾರ ಮತ್ತು ಸಶಸ್ತ್ರ ಪಡೆಗಳು ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಿವೆ ಎಂದರು.
ಸಂಕಷ್ಟದ ಸಮಯದಲ್ಲಿ ಒಬ್ಬ ಪ್ರಧಾನಿ ಜನರಿಗೆ ನೆರವು ನೀಡದೇ ‘ಧೈರ್ಯ’ ಇರಲಿ ಎಂದು ಹೇಳುತ್ತಾರೆ: ‘ಭಾರತವು ಧೈರ್ಯವನ್ನು ಕಳೆದುಕೊಳ್ಳುವ ದೇಶವಲ್ಲ. ಭಾರತವಾಗಲಿ ಅಥವಾ ಯಾವುದೇ ಭಾರತೀಯರಾಗಲಿ ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ. ನಾವು ಹೋರಾಡಿ ಗೆಲ್ಲುತ್ತೇವೆ’ ಎಂದು ಅವರು ಘೋಷಿಸಿದರು.
ಈ ನಡುವೆ ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಸಾವುಗಳು ಹೆಚ್ಚುತ್ತಿವೆ. ಲಸಿಕೆಯ ಅಲಭ್ಯತೆಯ ಕಾರಣಕ್ಕೆ ಲಸಿಕಾ ಕೇಂದ್ರಗಳು ಬಾಗಿಲು ಬಂದ್ ಮಾಡುವ ಸ್ಥಿತಿಯಲ್ಲಿವೆ ಎಂಬ ದೈನಂದಿನ ವರದಿಗಳ ಮಧ್ಯೆ ಮೋದಿಯವರು ತಮ್ಮ ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ಅನ್ನು ಮುಂದುವರೆಸಿದ್ದಕ್ಕಾಗಿ ವಿದೇಶಿ ಪತ್ರಿಕೆಗಳಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದಾರೆ.
ತಜ್ಞರು ಸೂಚಿಸಿದ, ಎಚ್ಚರಿಸಿದ ಎರಡನೇ ಅಲೆಯನ್ನು ಎದುರಿಸಲು ತಯಾರಿ ಮಾಡುವ ಬದಲು ಸಾಂಕ್ರಾಮಿಕ ರೋಗದ ವಿರುದ್ಧ “ವಿಜಯ” ವನ್ನು ಅಕಾಲಿಕವಾಗಿ ಆಚರಿಸಿದ್ದ ಅವರ ಸರ್ಕಾರವು ಬೃಹತ್ ಚುನಾವಣಾ ರ‍್ಯಾಲಿಗಳನ್ನು ನಡೆಸಿತು. ಖುದ್ದು ಪ್ರಧಾನಿ ರ‍್ಯಾಲಿಗಳಲ್ಲಿನ ಜನಸ್ತೋಮ ಕಂಡು ಸಂಭ್ರಮಪಟ್ಟರು. ಹರಿದ್ವಾರದಲ್ಲಿನ ಕುಂಭಮೇಳಕ್ಕೆ ಅವಕಾಶ ನೀಡಲಾಗಿತು. ಈ ರ‍್ಯಾಲಿಗಳು, ಕುಂಭಮೇಳ ಪರಿಸ್ಥಿಯನ್ನು ಇನ್ನಷ್ಟು ದುರಂತಕ್ಕೆ ಒಯ್ಯಿತು ಎನ್ನಲಾಗುತ್ತಿದೆ. ತಜ್ಞರೂ ಕೂಡ ಈ ತರಹವೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೋದಿಯವರು ನಾಗರಿಕರಿಗೆ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದರೆ, ಕಳೆದ ನಾಲ್ಕು ದಿನಗಳಲ್ಲಿ 75 ಕೋವಿಡ್ ರೋಗಿಗಳು ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ, ಕಾರಣವೇನು? ಆಮ್ಲಜನಕದ ಪೂರೈಕೆಯಲ್ಲಿನ “ಲಾಜಿಸ್ಟಿಕ್ ಸಮಸ್ಯೆಗಳು”! ಸಾಗಾಣಿಕಾ ಸಮಸ್ಯೆಗಳು…..
ಜನರು ತೀವ್ರ ಸಂಕಷ್ಟದಲ್ಲಿದ್ದಾಗ ಮೋದಿ ಮೌನವಾಗಿದ್ದರು. ಬಲಪಂಥೀಯ ಒಲವಿನ ವ್ಯವಸ್ಥೆಯ ಕೆಲವು ಸದಸ್ಯರು ತಮ್ಮ ಕೋವಿಡ್ ಸೋಂಕಿತರಿಗೆ ಹತ್ತಿರವಾಗಲು ಸಹಾಯ ಮಾಡುವಲ್ಲಿ ಆಡಳಿತ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ ನಂತರ ಮತ್ತು ಬಿಜೆಪಿ ಪರವಾದ ಅಭಿಪ್ರಾಯ ತಯಾರಕರು ಸರ್ಕಾರದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ ನಂತರ ಶುಕ್ರವಾರದಂದು ಮೋದಿ ಮೌನ ಮುರಿದಿದ್ದಾರೆ.
ಆದರೆ? ಅವರು ಜನರಿಗೆ ‘ಧೈರ್ಯ’ವಾಗಿರಲು ಹೇಳುವ ಮೂಲಕ ಸುಮ್ಮನಾಗಿದ್ದಾರೆ!
ಮೋದಿಯವರ ಸಮರ್ಥಕ, ಮೋದಿ ಸರ್ಕಾರದ ಪ್ರಸಿದ್ಧ ಬೆಂಬಲಿಗ, ಶಿಮ್ಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ ಸಂಸ್ಥೆಯ ನಿರ್ದೇಶಕ ಮಕರಂದ್ ಆರ್. ಪರಂಜಪೆ, “ಮೋದಿಯವರ ಇಮೇಜ್‌ಗೆ ಖಂಡಿತ ಹೊಡೆತ ಬಿದ್ದಿದೆ, ಹಿನ್ನಡೆಯಾಗಿದೆ. ಆದ್ದರಿಂದ, ಈಗ ಆತ್ಮಾವಲೋಕನ ಮಾಡುವ ಸಮಯ ಬಂದಿದೆ, ತಿದ್ದಿಕೊಳ್ಳಬೇಕಾದ ಜರೂರು ಬಂದಿದೆ’ ಎಂದು ಬರೆದಿದ್ದಾರೆ.
ಕೋವಿಡ್ ಬಿಕ್ಕಟ್ಟು ಮೋದಿಯವರನ್ನು ತಳಕ್ಕೆ ತಳ್ಳಿದೆ ಎಂದು ಬ್ರಿಟನ್‌ನ ಫೈನಾನ್ಷಿಯಲ್ ಟೈಮ್ಸ್ ಬರೆದಿತ್ತು. ವರದಿಯನ್ನು ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿ, ಪ್ರಧಾನಮಂತ್ರಿ ಹೆಚ್ಚು “ಮಾನವೀಯತೆ ಮತ್ತು ನಮ್ರತೆ”ಯನ್ನು ತೋರಿಸಬೇಕು ಎಂದು ಪರಾಂಜಪೆ ತಿಳಿಸಿದ್ದಾರೆ.
“ವಿಶೇಷವಾಗಿ ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ, ಒಬ್ಬ ನಾಯಕನು ಪ್ರತ್ಯೇಕವಾಗಿ, ಅಸಾಧಾರಣವಾಗಿ ಅಥವಾ ಯಾರ ಸಲಹೆಯನ್ನೂ ಕೇಳದವನಾಗಿ ಕಾಣಿಸಿಕೊಂಡರೆ ಅದು ದೇಶಕ್ಕೆ ಏನೇನೂ ಸಹಾಯ ಮಾಡುವುದಿಲ್ಲ” ಎಂದು ಅವರು ಬರೆದಿದ್ದಾರೆ.
ಮೋದಿ ಅಭಿಮಾನಿ, ಬಾಲಿವುಡ್ ನಟ ಅನುಪಮ್ ಖೇರ್ ಕೂಡ ಸರ್ಕಾರವನ್ನು ಕುಟುಕಿದ್ದಾರೆ.
“ಎಲ್ಲೋ ಅವರು ಜಾರಿದ್ದಾರೆ. ಕೇವಲ ಇಮೇಜ್ ಬಿಲ್ಡಿಂಗ್ ಮಾಡಿಕೊಳ್ಳುವುದಕ್ಕಿಂತ ಜೀವನಕ್ಕೆ ಇನ್ನೂ ಹೆಚ್ಚಿನದಿದೆ ಎಂದು ಅವರು ಅರ್ಥಮಾಡಿಕೊಳ್ಳುವ ಸಮಯ ಇದು” ಎಂದು ಖೇರ್ ಇತ್ತೀಚೆಗೆ ಹೇಳಿದರು. ಜನರು ಕೋಪಗೊಂಡು ಈ ಸ್ಥಿತಿಗೆ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ಟ್ವೀಟ್ ಮಾಡಿದ್ದರು.
ಮೋದಿಯವರು ತಮ್ಮ ಏಪ್ರಿಲ್ 25 ರ ಮನ್ ಕಿ ಬಾತ್ ಸಮಯದಲ್ಲಿ ಕೊನೆಯ ಬಾರಿಗೆ ಕೋವಿಡ್ ಕುರಿತು ಮಾತನಾಡಿದ್ದರು, ಆರೋಗ್ಯ ಕಾರ್ಯಕರ್ತರೊಂದಿಗೆ ಸಂಭಾಷಣೆಯಲ್ಲಿ ಭಾಗವಹಿಸಿದರು, ಅವರು ಪರಿಸ್ಥಿತಿಯನ್ನು ಸರ್ಕಾರ ನಿಭಾಯಿಸುವ ಬಗ್ಗೆ ಆಶಾವಾದಿ ಚಿತ್ರವನ್ನು ಚಿತ್ರಿಸಿದರು. ಅವರು ಈ ಮೊದಲು ಏಪ್ರಿಲ್ 20 ರಂದು ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿದ್ದರು, ಮುಖ್ಯವಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಬೇಡ ಎಂದಿದ್ದರು.
ನಂತರದಲ್ಲಿ ಅವರು ಹೆಚ್ಚಾಗಿ ಮೌನವಾಗಿದ್ದರು. ಆದರೆ, ಅವರದೇ ಸಂಘ ಪರಿವಾರದಿಂದ ಟೀಕೆಗಳು ಕೇಳಿ ಬಂದ ನಂತರ ಶುಕ್ರವಾರದ ವರ್ಚುವಲ್ ಕಾರ್ಯಕ್ರಮದಲ್ಲಿ, ತೋರಿಕೆಗೆ ಸಾಂಕ್ರಾಮಿಕದ ಬಗ್ಗೆ ಮಾತನಾಡಿದರು.
ವಿವಿಧ ರಾಜ್ಯಗಳ ರೈತರೊಂದಿಗೆ ಒಂದು ತಾಸಿನವರೆಗೂ ಮಾತನಾಡಿದ ಅವರು, ಅಂತ್ಯದಲ್ಲಿ ಸಾಂಕ್ರಾಮಿಕದ ವಿಷಯ ಎತ್ತಿ, ‘ಧೈರ್ಯ’ವಾಗಿರಬೇಕು ಎಂಬ ಸಲಹೆ ನೀಡಿದರು. ಆದರೆ ಹಾಸಿಗೆ, ಆಮ್ಲಜನಕ ಕೊರತೆ, ಹೆಚ್ಚುತ್ತಿರುವ ಕೋವಿಡ್ ಸಾವುಗಳ ಬಗ್ಗೆ ಅವರು ಮಾತನಾಡಲೇ ಇಲ್ಲ!
ಜಟ್ಟಿ ನೆಲಕ್ಕೆ ಬಿದ್ದಿದ್ದಾನೆ. ಆದರೆ, ‘ಮೀಸೆ ಮಣ್ಣಾಗಿಲ್ಲ’ ಎಂದು ಜಟ್ಟಿಯ ಆಸ್ಥಾನಿಕ ಮಾಧ್ಯಮಗಳು ಮತ್ತು ಜಾಲತಾಣದ ಭಕ್ತರು ಬಡಕೊಳ್ಳುತ್ತಲೇ ಇದ್ದಾರೆ.
- ಪಿ.ಕೆ. ಮಲ್ಲನಗೌಡರ್
(ಆಧಾರ: ದಿ ಟೆಲಿಗ್ರಾಫ್ ಇಂಡಿಯಾ)
ಇದನ್ನೂ ಓದಿ: ಮೋದಿ ಮೀನ್ಸ್ ಬ್ಯುಸಿನೆಸ್” ನಿಂದ “ಇಂಡಿಯ ಇನ್ ಕ್ರೈಸಿಸ್” ತನಕ ಹೊರಗೆ ಸಿಂಗಾರ? ಒಳಗೆ ಗೋಳಿಸೊಪ್ಪು


