ಕೊರೊನಾ ವೈರಸ್ ಬಗ್ಗೆ ಸುಳ್ಳು ಸುದ್ದಿ ಹರಡಿದ್ದಾರೆಂದು ಉದ್ಯಮಿ ಬಾಬಾ ರಾಮದೇವ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಸೆಲ್ಲಿನ ರಾಷ್ಟ್ರೀಯ ಕನ್ವೀನರ್ ಹಿತೇಂದ್ರ ಪಿಥಾಡಿಯಾ ಅವರು ಬಾಬಾ ರಾಮದೇವ್ ವಿರುದ್ಧ ಕೇಸು ದಾಖಲಿಸಿದ್ದಾರೆ.
ಕೊರೊನಾ ವೈರಸಿನ ವಿರುದ್ದದ ಹೋರಾಟವನ್ನು ತಪ್ಪುದಾರಿಗೆಳೆಯುವ ಮತ್ತು ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಆಜ್ ತಕ್ ಸುದ್ದಿವಾಹಿನಿ ಮತ್ತು ರಾಮದೇವ್ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ರಾಮದೇವ್ ಅವರನ್ನು ಮಾಧ್ಯಮಗಳಿಂದ ದೂರವಿಡಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದಾರೆ.
ಏಪ್ರಿಲ್ 25 ರಂದು ಆಜ್ ತಕ್ ಸುದ್ದಿ ಮಾಧ್ಯಮದ “#Covid19 ಗೆ ಏನು ಪರಿಹಾರ” ಎಂಬ ಕಾರ್ಯಕ್ರಮದಲ್ಲಿ ರಾಮದೇವ್ ಅವರು ಮೂಗಿನ ಮೂಲಕ ಸಾಸಿವೆ ಎಣ್ಣೆಯನ್ನು ಸುರಿದರೆ ಕೊರೊನಾ ವೈರಸ್ ಸಾಯುತ್ತದೆ ಎಂದು ಸಲಹೆ ನೀಡಿದ್ದರು.
ಅಲ್ಲದೆ ಉಸಿರಾಟವನ್ನು ಒಂದು ನಿಮಿಷ ಹಿಡಿದಿಟ್ಟುಕೊಳ್ಳುವುದರಿಂದ ಒಬ್ಬರಿಗೆ ಕೊರೊನಾ ವೈರಸ್ ಇದೆಯೋ ಇಲ್ಲವೋ ಎಂಬುದನ್ನು ಸಾಬೀತು ಪಡಿಸುತ್ತದೆ ಎಂದು ಅವರು ಹೇಳಿದ್ದರು. ಹೀಗೆ ಉಸಿರನ್ನು ಹಿಡಿದಿಡಲು ಸಾಧ್ಯವಾದರೆ ವೈರಸ್ ಇಲ್ಲ ಎಂದರ್ಥ, ಪ್ರಾಣಾಯಾಮ ಮಾಡುವುದರಿಂದ ವೈರಸ್ ವಿರುದ್ಧ ಹೋರಾಡಲು ಸಹಾಯವಾಗುತ್ತದೆ ಎಂದು ಸಲಹೆ ನೀಡಿದ್ದರು.
ಇದಕ್ಕೆ ವಿರುದ್ದ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಸೆಲ್ಲಿನ ರಾಷ್ಟ್ರೀಯ ಕನ್ವೀನರ್ ಹಿತೇಂದ್ರ ಪಿಥಾಡಿಯಾ ಅವರು ರಾಮದೇವ್ ಬಾಬಾ ವಿರುದ್ಧ ಅರ್ಜಿ ಸಲ್ಲಿಸಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 52 ಮತ್ತು 54 ರ ಅಡಿಯಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 401 (1) (ಬಿ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 ರ ಅಡಿಯಲ್ಲಿ ರಾಮದೇವ್ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ವಿನಂತಿಸಿದ್ದರು.

ವೆಜಲ್‌ಪುರದ ನಿವಾಸಿಯಾದ ಹಿತೇಂದ್ರ ಪಿಥಾಡಿಯಾ ಅರ್ಜಿಯಲ್ಲಿ, ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋದ ಫ್ಯಾಕ್ಟ್ ಚೆಕ್, ಸಾಸಿವೆ ಎಣ್ಣೆಯನ್ನು ಬಳಸುವ ಪ್ರಿಸ್ಕ್ರಿಪ್ಷನ್ ಅನ್ನು ಆಧಾರರಹಿತ ಎಂದು ವಿವರಿಸಲಾಗಿದೆ ಎಂದು ಹೇಳಿದ್ದಾರೆ. ಉಸಿರಾಟವನ್ನು ಹಿಡಿದಿಟ್ಟುಕೊಳ್ಳುವುದರಿಂದ ಕೊರೊನಾ ಲಕ್ಷಣಗಳು ಇದೆಯೇ ಎಂದು ಕಂಡುಹಿಡಿಯಲು ಆಗುವುದಿಲ್ಲ. ಈ ಫ್ಯಾಕ್ಟ್ ಚೆಕ್ ಏಪ್ರಿಲ್ 1 ರಂದು ಮಾಡಲಾಗಿದ್ದು, ರಾಮದೇವ್ ಇನ್ನೂ ಸಾರ್ವಜನಿಕರನ್ನು ಗೊಂದಲಕ್ಕೀಡುಮಾಡುವ ಮೂಲಕ ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳುತ್ತಲೇ ಇದ್ದಾರೆ ಎಂದು ಹೇಳಲಾಗಿದೆ.
ವೈರಸ್‌ಗೆ ಪರಿಹಾರ ಕಂಡುಕೊಳ್ಳಲು ತಜ್ಞರು, ಸಂಶೋಧಕರು ಮತ್ತು ವೈರಾಲಜಿಸ್ಟ್‌ಗಳು ಕೆಲಸ ಮಾಡುತ್ತಿದ್ದಾರೆ ಎಂಬ ಅಂಶದ ಬಗ್ಗೆ ಅವರು ಗಮನ ಸೆಳೆದಿದ್ದಾರೆ. ಆಜ್ ತಕ್ ಮತ್ತು ರಾಮದೇವ್ ಈ ವಿಷಯದ ಬಗ್ಗೆ ಯಾವುದೇ ಸಂಶೋಧನೆ ನಡೆಸಿಲ್ಲ ಮತ್ತು ವೈರಸ್‌ಗೆ ಪರಿಹಾರವನ್ನು ಕಂಡುಹಿಡಿಯುವ ಕೆಲಸವನ್ನೂ ಮಾಡುತ್ತಿಲ್ಲ.
ಇದಕ್ಕಾಗಿ ಸುಳ್ಳು ಹಬ್ಬಿಸುತ್ತಿರುವ ಆಜ್ತಕ್ ಮತ್ತು ಬಾಬಾ ರಾಮದೇವ್ ಇಬ್ಬರ ವಿರುದ್ಧವೂ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಕೇಳಿದ್ದಾರೆ. ದಾರಿತಪ್ಪಿಸುವ ಮತ್ತು ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಆಜ್ ತಕ್ ಸಾರ್ವಜನಿಕ ಕ್ಷಮೆಯಾಚಿಸಬೇಕು ಹಾಗೂ ಬಾಬಾ ರಾಮದೇವ್ ಅವರನ್ನು ಸುಳ್ಳು ಪ್ರಚಾರ ಮಾಡದಂತೆ ಮಾಧ್ಯಮಗಳಿಂದ ದೂರವಿಡಬೇಕು ಎಂದು ಕೇಳಿಕೊಳ್ಳಲಾಗಿದೆ.
ಓದಿ: ಮೂಗಿನೊಳಕ್ಕೆ ಸಾಸಿವೆ ಎಣ್ಣೆ ಹಾಕಿದರೆ ಕೊರೊನಾ ವೈರಸ್ ಸಾಯುತ್ತದೆ: ರಾಮ್ ದೇವ್
ವಿಡಿಯೋ ನೋಡಿ: ಕರ್ನಾಟಕ ಸರ್ಕಾರ ತೆಗೆದುಕೊಂಡ ಮೂರು ಆಘಾತಕಾರಿ, ಕರ್ನಾಟಕ ವಿರೋಧಿ ತೀರ್ಮಾನಗಳು.(Facebook Live)


