ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್, ದಲಿತ ಸಂಘಟನೆಯ ಮರಿಯಪ್ಪ, ದುಡಿಯುವ ಜನರ ಪರ ವೇದಿಕೆಯ ಮುಖಂಡ ಇಸಾಕ್ ಮತ್ತು ಇತರರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಹೆಡ್ ಕಾನ್‌ಸ್ಟೇಬಲ್ ಶಂಕರ್ ನಾಯ್ಕ್ ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.
2025 ಡಿಸೆಂಬರ್ 20ರಂದು ಕೋಗಿಲು ಬಡಾವಣೆಯ ಸರ್ವೆ ನಂ. 99ರಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಮನೆಗಳು ತೆರವು ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸ್ಥಳದಲ್ಲಿ ಬಂದೋಬಸ್ತ್ ಕೆಲಸಕ್ಕೆ ನಮ್ಮನ್ನು ನೇಮಿಸಲಾಗಿತ್ತು. ಅಂದು ಬೆಳಿಗ್ಗೆ 11.30ರ ಸುಮಾರಿಗೆ ಏಕಾಏಕಿ ಸ್ಥಳಕ್ಕೆ ಬಂದಿದ್ದ ನಾಲ್ವರು, ಸ್ಥಳದಲ್ಲಿದ್ದವರನ್ನು ಶಾಲಾ ಆವರಣಕ್ಕೆ ಕರೆದೊಯ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿಗಳು ಅನುಮತಿ ಪಡೆಯದೆ ಸುಮಾರು 200 ಜನರನ್ನು ಸರ್ಕಾರಿ ಶಾಲೆಯ ಆವರಣದಲ್ಲಿ ಸೇರಿಸಿಕೊಂಡು ಮೈಕ್ ಮೂಲಕ ತೆರವು ಕಾರ್ಯಾಚರಣೆ ವಿರುದ್ದ ದಿಕ್ಕಾರ ಕೂಗಿದ್ದಾರೆ. ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ನಾವು ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗುವ ಬಗ್ಗೆ ಮತ್ತು ಹೈಕೋರ್ಟ್ ಆದೇಶದ ಬಗ್ಗೆ ತಿಳಿಸಿದರೂ ಕೇಳದೆ, ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂದು ಹೇಳಲಾಗಿದೆ.
ಇತರ ನಾಲ್ವರ ವಿರುದ್ದ ಎಫ್‌ಐಆರ್
ಇನ್ನೊಂದೆಡೆ ಹಣ ಪಡೆದು ಕೋಗಿಲು ಬಡಾವಣೆಯಲ್ಲಿ ಅನಧಿಕೃತವಾಗಿ ಮನೆ ನಿರ್ಮಾಣಕ್ಕೆ ಸಹಕರಿಸಿದ್ದಾರೆಂಬ ಆರೋಪದಡಿ ನಾಲ್ವರ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿಜಯ್, ವಸೀಂ ಉಲ್ಲಾ ಬೇಗ್, ಮುನಿ ಆಂಜಿನಪ್ಪ, ರಾಬಿನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಂಜಿನಿಯರ್ ನೀಡಿದ ದೂರು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.


