ಆಂಧ್ರ ಪ್ರದೇಶದ ಅನಕಪಲ್ಲಿ ಜಿಲ್ಲೆಯ ಎಲಮಂಚಿಲಿ ಬಳಿ ಟಾಟಾನಗರ-ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳಲ್ಲಿ ಸೋಮವಾರ (ಡಿ.29) ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅನಕಪಲ್ಲಿ ಪೊಲೀಸ್ ವರಿಷ್ಠಾಧಿಕಾರಿ ತುಹಿನ್ ಸಿನ್ಹಾ ಅವರು, ಘಟನೆಯ ಬಗ್ಗೆ ಬೆಳಗಿನ ಜಾವ 12.45ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಹೇಳಿದ್ದಾರೆ. ಬೆಂಕಿ ಕಾಣಿಸಿಕೊಂಡ ಸಮಯದಲ್ಲಿ ಒಂದು ಬೋಗಿಯಲ್ಲಿ 82 ಪ್ರಯಾಣಿಕರು ಮತ್ತು ಇನ್ನೊಂದು ಬೋಗಿಯಲ್ಲಿ 76 ಪ್ರಯಾಣಿಕರು ಇದ್ದರು. ದುರದೃಷ್ಟವಶಾತ್, ಬಿ1 ಎಸಿ ಬೋಗಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ವಿಜಯವಾಡ ನಿವಾಸಿ ಚಂದ್ರಶೇಖರ್ ಸುಂದರ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಮಧ್ಯರಾತ್ರಿಯ ಸುಮಾರಿಗೆ ಎಲಮಂಚಿಲಿ ರೈಲು ನಿಲ್ದಾಣದ ಬಳಿ ಬಿ1 ಎಸಿ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಬೇಗನೆ ಹರಡುತ್ತಿದ್ದಂತೆ, ಕೋಚ್‌ನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ, ಚಂದ್ರಶೇಖರ್ ಸುಂದರ್ ಕೋಚ್ ಒಳಗೆ ಸಿಲುಕಿಕೊಂಡಿದ್ದಾರೆ. ಸಕಾಲದಲ್ಲಿ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಅವರು ಸಾವನ್ನಪ್ಪಿದ್ಧಾರೆ.
ಎರಡು ಎಸಿ ಬೋಗಿಗಳಲ್ಲಿ 150ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ರೈಲ್ವೆ ಅಧಿಕಾರಿಗಳು ತಕ್ಷಣ ರೈಲನ್ನು ನಿಲ್ಲಿಸಿ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಣಕ್ಕೆ ತಂದಿದ್ದಾರೆ.
ಘಟನೆಯ ನಂತರ ಈ ಮಾರ್ಗದಲ್ಲಿ ರೈಲು ಸೇವೆಗಳು ಸ್ವಲ್ಪ ಸಮಯದವರೆಗೆ ವ್ಯತ್ಯಯಗೊಂಡಿತ್ತು. ರೈಲ್ವೆ ಅಧಿಕಾರಿಗಳು ತೊಂದರೆಗೊಳಗಾದ ಪ್ರಯಾಣಿಕರನ್ನು ಎರ್ನಾಕುಲಂಗೆ ಕರೆದೊಯ್ಯಲು ಬಸ್ಸುಗಳ ವ್ಯವಸ್ಥೆ ಮಾಡಿದ್ದಾರೆ.
ಬೆಂಕಿ ಅವಘಡದ ಕಾರಣ ತಿಳಿಯಲು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲಮಂಚಿಲಿ (YLM) ನಿಲ್ದಾಣದಲ್ಲಿ ನಿಲುಗಡೆ ಇರುವುದರಿಂದ ವಾಲ್ಟೇರ್ ವಿಭಾಗದ ಅಡಿಯಲ್ಲಿ ರೈಲು ಸೇವೆಗಳನ್ನು ನಿಯಂತ್ರಿಸಲಾಗುತ್ತಿದೆ ಎಂದು ವಾಲ್ಟೇರ್ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



Lhb coaches are very dirty and it is hell for general and middle class passenger due increase in ac coaches