Homeಕರ್ನಾಟಕಎಳವಜೋಗರ ಗುಡಿಸಲಿಗೆ ಬೆಂಕಿ: ಅನಾಹುತದಿಂದ ಪಾರಾದ ಕುಟುಂಬವನ್ನು ಒಕ್ಕಲೆಬ್ಬಿಸುವ ಹುನ್ನಾರ - ಆರೋಪ

ಎಳವಜೋಗರ ಗುಡಿಸಲಿಗೆ ಬೆಂಕಿ: ಅನಾಹುತದಿಂದ ಪಾರಾದ ಕುಟುಂಬವನ್ನು ಒಕ್ಕಲೆಬ್ಬಿಸುವ ಹುನ್ನಾರ – ಆರೋಪ

ಎಳವ ಜೋಗರು ಮತ್ತು ಲಂಬಾಣಿಗಳು ವಾಸಿಸುವ ಪ್ರದೇಶದ ಸುತ್ತಲೂ ಶ್ರೀಮಂತರ ಮಹಲುಗಳಿವೆ. ಹಂದಿಗಳನ್ನು ಇಲ್ಲಿಯೇ ಸಾಗುವುದರಿಂದ ಶ್ರೀಮಂತರು ಈ ಬಡಕುಟುಂಬಗಳನ್ನು ಒಕ್ಕಲೆಬ್ಬಿಸಲು ಪಿತೂರಿ ನಡೆಸುತ್ತಲೇ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

- Advertisement -
- Advertisement -

ತುಮಕೂರು ನಗರದ ಬನಶಂಕರಿ ಎರಡನೇ ಹಂತದಲ್ಲಿ ಹಲವು ವರ್ಷಗಳಿಂದ ವಾಸವಾಗಿರುವ ಎಳವ ಜೋಗರ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ಕನಿಷ್ಠ ನಾಗರಿಕ ಸೌಲಭ್ಯಗಳೂ ಇಲ್ಲದ ಇಲ್ಲಿನ ಗುಡಿಸಲುಗಳಿಗೆ ಬೆಂಕಿ ಹಚ್ಚುವ ಪ್ರಕರಣಗಳು ನಡೆಯುತ್ತಲೇ ಇವೆ. ಕಿಡಿಗೇಡಿಗಳ ಇಂತಹ ಕ್ರಮಗಳಿಂದ ಎಳವ ಜೋಗರ ಕುಟುಂಬಗಳು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಜೀವನ ಸಾಗಿಸುವಂತಹ ಪರಿಸ್ಥಿತಿ ಇದೆ.

ಇಸ್ಮಾಯಿಲ್ ನಗರ ಸಮೀಪವೇ ಪೊದೆಯ ನಡುವೆ 40 ಕುಟುಂಬಗಳು ವಾಸಿಸುತ್ತಿವೆ. ಎಳವ ಜೋಗರು, ರಂಗೋಲಿ ಪುಡಿ ಮಾಡಿ ಮಾರುವ ಲಂಬಾಣಿಗಳ ಕುಟುಂಬಗಳು ಇಲ್ಲಿವೆ. ಬೆಳಕಿನ ಸೌಕರ್ಯ ಇಲ್ಲ. ಕುಡಿವ ನೀರಿನ ಸೌಲಭ್ಯ ಇಲ್ಲ. ಇಂತಹ ಸಂಕಷ್ಟದಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ಈ ಕುಟುಂಬಗಳ ಗುಡಿಸಲುಗಳಿಗೆ ಪದೇಪದೇ ಬೆಂಕಿ ಹಚ್ಚಿ ಅವರನ್ನು ಅಲ್ಲಿಂದ ಓಡಿಸುವ ತಂತ್ರಗಳು ನಡೆಯುತ್ತಲೇ ಬರುತ್ತಿವೆ.

ಆಗಸ್ಟ್ 11ರ ಮುಂಜಾನೆ ಸುಮಾರು 1.30 ರ ಸಮಯದಲ್ಲಿ ಗುರುಸ್ವಾಮಿ ಮತ್ತು ಗಂಗಮ್ಮ ಅವರಿಗೆ ಸೇರಿದ ಗುಡಿಸಲಿಗೆ ಬೆಂಕಿ ಹಚ್ಚಲಾಗಿದೆ. ಪರಿಣಾಮ ಗುಡಿಸಲಿನಲ್ಲಿ ಮಲಗಿದ್ದ ಎಂಟು ಮಂದಿ ನೂಲೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ತಂದೆತಾಯಿಗಳು ಸೇರಿ ಆರು ಮಂದಿ ಮಕ್ಕಳ ಬಟ್ಟೆಗಳು ಸುಟ್ಟು ಭಸ್ಮವಾಗಿವೆ. ದವಸ ಧಾನ್ಯಗಳು ಬೆಂಕಿಯಲ್ಲಿ ಬೂದಿಯಾಗಿವೆ. ಇದು ಅಲ್ಲಿನ ನಿವಾಸಿಗಳನ್ನು ಆತಂಕಗೊಳ್ಳುವಂತೆ ಮಾಡಿದೆ.

ಎಳವ ಜೋಗರು ಮತ್ತು ಲಂಬಾಣಿಗಳು ವಾಸಿಸುವ ಪ್ರದೇಶದ ಸುತ್ತಲೂ ಶ್ರೀಮಂತರ ಮಹಲುಗಳಿವೆ. ಹಂದಿಗಳನ್ನು ಇಲ್ಲಿಯೇ ಸಾಗುವುದರಿಂದ ಶ್ರೀಮಂತರು ಈ ಬಡಕುಟುಂಬಗಳನ್ನು ಒಕ್ಕಲೆಬ್ಬಿಸಲು ಪಿತೂರಿ ನಡೆಸುತ್ತಲೇ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಬೆಂಕಿ ಹಚ್ಚುವುದನ್ನು ಯಾರು ಮಾಡುತ್ತಿದ್ದಾರೆ ಎಂಬ ಮಾಹಿತಿ ಇದುವರೆಗೂ ಗೊತ್ತಾಗಿಲ್ಲ. ಈ ಕುಟುಂಬಗಳು ನೀಡುವ ದೂರನ್ನು ದಾಖಲಿಸಿಕೊಳ್ಳುವ ಪೊಲೀಸರು ಮತ್ತೆ ಅದರ ಬಗ್ಗೆ ಕ್ರಮ ವಹಿಸುವ ಗೋಜಿಗೇ ಹೋಗುತ್ತಿಲ್ಲ ಎಂದು ದೂರಲಾಗಿದೆ.

ನಾನು ಗೌರಿ.ಕಾಂ ಜೊತೆ ಸ್ಲಂ ಜನಾಂದೋಲನ ಸಂಚಾಲಕ ಎ. ನರಸಿಂಹಮೂರ್ತಿ ಮಾತನಾಡಿದರು. ಬೆಂಕಿ ಹಚ್ಚುವ ಪ್ರಕರಣಗಳಿಂದ ಎಳವ ಜೋಗರು ಮತ್ತು ಲಂಬಾಣಿ ಕುಟುಂಬಗಳು ಜೀವಭಯದಿಂದ ಬದುಕು ನಡೆಸುವಂತಾಗಿದೆ. ಇಲ್ಲಿ ವಾಸವಾಗಿರುವ ಕುಟುಂಬಗಳಿಗೆ ಪುನರ್ ವಸತಿಯನ್ನು ಕಲ್ಪಿಸುವ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ತುಮಕೂರು ಹೊರವಲಯದ ಅಣ್ಣೇನಹಳ್ಳಿ ಬಳಿ ಇವರ ವಾಸಕ್ಕೆ ಜಾಗ ಗುರಿತಿಸಿದರು. ಆದರೆ ಸ್ಥಳೀಯರಿಂದ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಅಲ್ಲಿಗೆ ಕೈಬಿಡಲಾಯಿತು.

ಅಜ್ಜಗೊಂಡನಹಳ್ಳಿಯ ಘನತ್ಯಾಜ್ಯ ವಿಲೇವಾರಿ ಘಟಕದ ಸಮೀಪ ಮತ್ತೆ ಸ್ಥಳ ಗುರುತಿಸಲಾಯಿತು. ಘಟಕದ ನಿರ್ವಹಣೆಯಿಲ್ಲದೆ ದುರ್ನಾತ ಬೀರುತ್ತಿರುವ ಕಾರಣದಿಂದ ಎಳವ ಜೋಗಿ ಕುಟುಂಬಗಳು ಅಲ್ಲಿಗೆ ಹೋಗಲು ನಿರಾಕರಿಸಿದವು. ಅವರಿಗೆ ಪುನರ್ ವಸತಿ ಕಲ್ಪಿಸಲು ಯಾರೂ ಜಾಗ ನೀಡಲು ಮುಂದೆ ಬರುತ್ತಿಲ್ಲ. ಇದು ದೊಡ್ಡ ಸಮಸ್ಯೆಯಾಗಿದೆ. ಪಾಲಿಕೆಯೂ ಸಮರ್ಪಕ ಜಾಗ ಗುರುತಿಸಿಲ್ಲ. ಕೂಡಲೇ ಅವರಿಗೆ ಪರ್ಯಾಯ ಜಾಗ ಗುರುತಿಸಿ ಪುನರ್ ವಸತಿ ಕಲ್ಪಿಸಬೇಕು. ಇಲ್ಲದಿದ್ದರೆ ಅವರ ಗೋಳು ತಪ್ಪಿದ್ದಲ್ಲ ಎಂದು ಹೇಳಿದರು.

ಗುಡಿಸಲಿಗೆ ಬೆಂಕಿ ಬಿದ್ದು ಬಟ್ಟೆಗಳು ಮತ್ತು ದವಸ ಧಾನ್ಯಗಳನ್ನು ಕಳೆದುಕೊಂಡಿರುವ ಗುರುಸ್ವಾಮಿ ಕುಟುಂಬ ಇದೀಗ ಜೀವನ ನಿರ್ವಹಣೆಗೆ ತೊಂದರೆಪಡುತ್ತಿದೆ. ಗುಡಿಸಲಿಗೆ ಹಾಕಿದ್ದ ಟಾರ್ಪಲ್ ಕೂಡ ಅರ್ಧ ಸುಟ್ಟು ಹೋಗಿದೆ. ಹಾಗಾಗಿ ಕೋವಿಡ್-19ರ ಸಮಯದಲ್ಲಿ ಸಮಸ್ಯೆ ಎದುರಿಸುತ್ತಿರುವ ಈ ಕುಟುಂಬಗಳ ನೆರವಿಗೆ ಜಿಲ್ಲಾಡಳಿತ ಮತ್ತು ಪಾಲಿಕೆ ಬರಬೇಕಾಗಿದೆ.

ನಗರದ ನಡುವೆಯೂ ಗುಡಿಸಲುಗಳಲ್ಲಿ ಬದುಕುತ್ತಿರುವ 40 ಕ್ಕೂ ಹೆಚ್ಚು ಕುಟುಂಬಗಳು ಮಳೆಗಾಲದಲ್ಲಿ ಇಡೀ ವಾಸಸ್ಥಳ ಜಲಾವೃತವಾಗುತ್ತದೆ. ಸುತ್ತಲೂ ಪೋದೆ ಇರುವುದರಿಂದ ಹಾವು, ಚೇಳು, ಸೊಳ್ಳೆಗಳು ಸೇರಿ ವಿಷಜಂತುಗಳ ಹಾವಳಿ ಇದೆ. ಇಂತಹ ಅಮಾನವೀಯ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಈ ಕುಟುಂಬಗಳಿಗೆ ಮಾನವೀಯ ನೆರವಿನ ಹಸ್ತ ನೀಡಬೇಕಾಗಿದೆ. ನಾಗರಿಕರೆಂದು ಕರೆಸಿಕೊಳ್ಳುವವರು ಬಡಕುಟುಂಬಗಳ ಸಂಕಷ್ಟಕ್ಕೆ ಮನ ಮಿಡಿಯಬೇಕಾಗಿದೆ.


ಓದಿ: ವಿಶ್ವ ನಿರಾಶ್ರಿತರ ದಿನ: ನಿರಾಶ್ರಿತರ ಪಾಡು ಹೇಳುವ ಕೆಲವು ಪದ್ಯಗಳು


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...