ದೆಹಲಿಯ ರೋಹಿಣಿ ನ್ಯಾಯಾಲಯ ಸಂಕೀರ್ಣದಲ್ಲಿ ಇಂದು ವಕೀಲರ ವೇಷದಲ್ಲಿದ್ದ ಗ್ಯಾಂಗ್‌ಸ್ಟರ್‌ಗಳ ಗುಂಪು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಗುಂಡಿನ ಕಾಳಗ ನಡೆದಿದೆ. ಈ ಮುಖಾಮುಖಿಯಲ್ಲಿ ಕುಖ್ಯಾತ ಗ್ಯಾಂಗ್‌ಸ್ಟರ್ ಜಿತೆಂದರ್ ಗೋಗಿ ಸೇರಿ ಮೂವರು ಕೊಲೆಯಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ರೋಹಿಣಿ ಕೋರ್ಟ್ ನಂ. 207 ರ ಗಗನ್ ದೀಪ್ ಸಿಂಗ್ ಎಎಸ್‌ಜೆ NDPS ಕೋರ್ಟ್ ಆವರಣದಲ್ಲಿ ಫೈರಿಂಗ್ ನಡೆದಿದ್ದು, ಸುಮಾರು 40 ಸುತ್ತಿನ ಗುಂಡು ಹಾರಿಸಲಾಗಿದೆ ಎನ್ನಲಾಗಿದೆ. ವಕೀಲರು ಸಹ ಗಾಯಗೊಂಡಿದ್ದಾರೆ.
ಹಲವು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ತಿಹಾರ್ ಜೈಲಿನಲ್ಲಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್ ಜಿತೆಂದರ್ ಗೋಗಿಯನ್ನು ಇಂದು ವಿಚಾರಣೆಗೆಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಈ ಘಟನೆ ಜರುಗಿದೆ. ಗೋಗಿಯ ವಿರೋಧ ಬಣವಾದ ತಿಲ್ಲು ಗ್ಯಾಂಗ್‌ನ ಇಬ್ಬರು ವಕೀಲರು ವೇಷದಲ್ಲಿ ಕೋರ್ಟ್ ಪ್ರವೇಶಿಸಿ ಗೋಗಿ ಮೇಲೆ ಗುಂಡಿಕ್ಕಿದ್ದಾರೆ. ಗೋಗಿ ಸ್ಥಳದಲ್ಲೇ ಮೃತಪಟ್ಟ ವೇಳೆ ಅಲ್ಲಿನ ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡು ಗುಂಡು ಹಾರಿಸಿದ್ದಾರೆ. ತಿಲ್ಲು ಗ್ಯಾಂಗ್‌ನ ಇಬ್ಬರು ಸಹ ಕೊಲೆಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಎನ್‌ಡಿಟಿವಿ ವರದಿ ಮಾಡಿದೆ.
4 died in Delhi’s Rohini court. pic.twitter.com/55ac8JyAj3
— Sandeep Singh (@PunYaab) September 24, 2021
ಕೋರ್ಟ್ ಆವರಣದಲ್ಲಿಯೇ ಗುಂಡಿನ ಕಾಳಗ ನಡೆದ ಹಲವು ವಿಡಿಯೋಗಳು ಲಭ್ಯವಾಗಿದ್ದು ಎಲ್ಲೆಡೆ ವೈರಲ್ ಆಗಿದೆ. ಅದರಲ್ಲಿ ಹಲವು ಸುತ್ತಿನಲ್ಲಿ ಗುಂಡು ಹಾರಿಸುವ ಶಬ್ದಗಳು ಕೇಳಲಿದ್ದು ಭದ್ರತಾ ಸಿಬ್ಬಂದಿ ಗುಂಡು ಹಾರಿಸುವುದನ್ನು ನೋಡಬಹುದಾಗಿದೆ.
ಜಿತೆಂದರ್ ಗೋಗಿಯ ವಿರೋಧಿ ಬಣದ ಇಬ್ಬರು ಗುಂಡು ಹಾರಿಸಿದ್ದಾರೆ. ಪೊಲೀಸರು ಮರುದಾಳಿ ನಡೆಸಿ ಆ ಇಬ್ಬರನ್ನು ಹತ್ಯೆ ಮಾಡಿದ್ದಾರೆ. ಗೋಗಿಯೊಂದಿಗೆ ಮೂವರು ಹತರಾಗಿದ್ದಾರೆ. ಪೊಲೀಸರು ಬೇಗ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನ ತಿಳಿಸಿದ್ದಾರೆ.
ಇದನ್ನೂ ಓದಿ: ಮನೆ ತೆರವು ವಿರೋಧಿಸಿ ಪ್ರತಿಭಟಿಸಿದ ವ್ಯಕ್ತಿಗೆ ಶೂಟ್ ಮಾಡಿ, ಅಮಾನವೀಯವಾಗಿ ಥಳಿಸಿದ ಅಸ್ಸಾಂ ಪೊಲೀಸ್


