ಜಾರಿ ನಿರ್ದೇಶನಾಲಯದ (ಇಡಿ) ಮಾಜಿ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅವರನ್ನು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ (ಇಎಸಿ-ಪಿಎಂ) ಪೂರ್ಣ ಸಮಯದ ಸದಸ್ಯರನ್ನಾಗಿ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿ ಮಾರ್ಚ್ 25ರ ಮಂಗಳವಾರ ತಡರಾತ್ರಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಇಎಸಿ-ಪಿಎಂ ಎಂಬುದು ಸರ್ಕಾರಕ್ಕೆ, ವಿಶೇಷವಾಗಿ ಪ್ರಧಾನ ಮಂತ್ರಿಗೆ ಆರ್ಥಿಕ ಮತ್ತು ಸಂಬಂಧಿತ ವಿಷಯಗಳ ಕುರಿತು ಸಲಹೆ ನೀಡಲು ಸ್ಥಾಪಿಸಲಾದ ಸ್ವತಂತ್ರ ಸಂಸ್ಥೆಯಾಗಿದೆ.
ಸಂಜಯ್ ಕುಮಾರ್ ಮಿಶ್ರಾ ಯಾರು?
ಉತ್ತರ ಪ್ರದೇಶ ಮೂಲದ, 1984 ರ ಬ್ಯಾಚ್‌ನ ನಿವೃತ್ತ ಐಆರ್‌ಎಸ್ (ಆದಾಯ ತೆರಿಗೆ) ಅಧಿಕಾರಿ ಸಂಜಯ್ ಕುಮಾರ್ ಮಿಶ್ರಾ ಆರ್ಥಿಕ ತಜ್ಞ ಎಂದು ಗುರುತಿಸಿಕೊಂಡಿದ್ದು, ತನ್ನ ಅಧಿಕಾರವಧಿಯಲ್ಲಿ ಹಲವಾರು ಉನ್ನತ ಪ್ರಕರಣಗಳನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಿದ್ದಾರೆ.
ಮಿಶ್ರಾ ಅವರನ್ನು ನವೆಂಬರ್ 19, 2018ರಂದು ಎರಡು ವರ್ಷಗಳ ಅವಧಿಗೆ ಇಡಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಈ ನೇಮಕಾತಿಗೆ ಮೊದಲು, ಮಿಶ್ರಾ ಅವರು ದೆಹಲಿಯಲ್ಲಿ ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತರಾಗಿದ್ದರು.
ನವೆಂಬರ್ 13, 2020ರಂದು ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ, ಮಿಶ್ರಾ ಅವರ ನೇಮಕಾತಿ ಪತ್ರವನ್ನು ಪೂರ್ವಾನ್ವಯವಾಗಿ ಮಾರ್ಪಡಿಸಿ, ಅವರ ಅವಧಿಯನ್ನು ಮೂರು ವರ್ಷಗಳಿಗೆ ವಿಸ್ತರಿಸಿತ್ತು.
ನವೆಂಬರ್ 17, 2021ರಂದು, ಕೇಂದ್ರ ಸರ್ಕಾರ ಮಿಶ್ರಾ ಅವರ ಅಧಿಕಾರಾವಧಿಯನ್ನು ನವೆಂಬರ್ 18, 2022ರವರೆಗೆ ಒಂದು ವರ್ಷದವರೆಗೆ ವಿಸ್ತರಿಸಿತ್ತು. ನಂತರ, ಮತ್ತೆ ನವೆಂಬರ್ 18, 2023 ರವರೆಗೆ ಒಂದು ವರ್ಷದವರೆಗೆ ವಿಸ್ತರಿಸಿತ್ತು.
ಜುಲೈ 2023ರಲ್ಲಿ, ‘ರಾಷ್ಟ್ರೀಯ ಹಿತಾಸಕ್ತಿ’ಯ ದೃಷ್ಟಿಯಿಂದ, ಇಡಿ ಮುಖ್ಯಸ್ಥರಾಗಿ ಮಿಶ್ರಾ ಅವರ ಅಧಿಕಾರಾವಧಿಯನ್ನು ಸೆಪ್ಟೆಂಬರ್ 15, 2024 ರವರೆಗೆ ವಿಸ್ತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ವಿಸ್ತರಣೆಯನ್ನು ಕೋರಿ ಸಲ್ಲಿಸಲಾದ ಯಾವುದೇ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.
ಹೈ ಪ್ರೊಫೈಲ್ ಪ್ರಕರಣಗಳು
ಮಿಶ್ರಾ ನೇತೃತ್ವದಲ್ಲಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ವಿರುದ್ಧ ಚುನಾವಣಾ ಆಯೋಗ ತನಿಖೆ ಆರಂಭಿಸಿತ್ತು. ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.
ತನ್ನ ಅಧಿಕಾರಾವಧಿಯಲ್ಲಿ, ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿಯಂತಹ ಪರಾರಿಯಾದ ಅಪರಾಧಿಗಳನ್ನು ಭಾರತಕ್ಕೆ ಹಸ್ತಾಂತರಿಸಲು ಜಾರಿ ನಿರ್ದೇಶನಾಲಯ ಅನುಮೋದನೆ ಪಡೆದಿತ್ತು.
ಮಿಶ್ರಾ ನೇತೃತ್ವದಲ್ಲಿ ಯೆಸ್ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಣಾ ಕಪೂರ್ ಮತ್ತು ಐಸಿಐಸಿಐ ಬ್ಯಾಂಕ್‌ನ ಮಾಜಿ ಎಂಡಿ-ಸಿಇಒ ಚಂದಾ ಕೊಚ್ಚರ್ ಅವರ ಪತಿ ದೀಪಕ್ ಕೊಚ್ಚರ್ ಅವರಂತಹ ಹಣ ವರ್ಗಾವಣೆ ಆರೋಪ ಹೊತ್ತಿರುವ ವ್ಯಕ್ತಿಗಳನ್ನು ಇಡಿ ಬಂಧಿಸಿದೆ.
ಕುನಾಲ್ ಕಮ್ರಾ ಸ್ಟುಡಿಯೋ ಧ್ವಂಸ ಪ್ರಕರಣ: ಸಂಬಂಧಿಸಿದಂತೆ 12 ಶಿವಸೇನಾ ಕಾರ್ಯಕರ್ತರಿಗೆ ಜಾಮೀನು


