ಭಾರತದ ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ (92) ಅವರು ಇಂದು (ಡಿ.26) ನಿಧನರಾದರು.
ವಯೋಸಹಜ ಕಾಯಿಲೆಯಿಂದ ಮನಮೋಹನ್ ಸಿಂಗ್ ಮರಣ ಹೊಂದಿದ್ದಾರೆ ಎಂದು ದೆಹಲಿಯ ಏಮ್ಸ್ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಅನಾರೋಗ್ಯಗಳಿಂದ ಬಳಲುತ್ತಿದ್ದ ಮನಮೋಹನ್ ಸಿಂಗ್ ಅವರು, ಇಂದು ತಮ್ಮ ಮನೆಯಲ್ಲಿ ಹಠಾತ್ ಪ್ರಜ್ಞೆ ಕಳೆದುಕೊಂಡಿದ್ದು, ತಕ್ಷಣ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಉಳಿಸಿಕೊಳ್ಳುವ ಪ್ರಯತ್ನ ವಿಫಲವಾಯಿತು ಎಂದು ವರದಿಗಳು ಹೇಳಿವೆ.
ಹೆಸರಾಂತ ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿ ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ದೇಶದ ಮಹತ್ವದ ಆರ್ಥಿಕ ಸುಧಾರಣೆಗಳ ರುವಾರಿಯಾಗಿದ್ದರು.
ಯಪಿಎ-1 ಮತ್ತು ಯುಪಿಎ-2 ಸರ್ಕಾರಗಳ ಮೂಲಕ ಒಂದು ದಶಕ ದೇಶದ ಚುಕ್ಕಾಣಿ ಹಿಡಿದಿದ್ದ ಮನಮೋಹನ್ ಸಿಂಗ್, ತಮ್ಮ ಅಧಿಕಾರವದಿಯಲ್ಲಿ ನರೇಗಾ, ಆರ್‌ಟಿಇ, ಆರ್‌ಟಿಐ, ಆಹಾರ ಭದ್ರತೆ ಕಾನೂನು ಸೇರಿದಂತೆ ಮಹತ್ವದ ಜನಪರ ಯೋಜನೆ ಮತ್ತು ಕಾನೂನುಗಳನ್ನು ದೇಶದ ಜನತೆಗೆ ನೀಡಿದ್ದರು.
ಈ ವರ್ಷದ ಆರಂಭದಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದ ಮನಮೋಹನ್ ಸಿಂಗ್ ಅವರು, 1998ರಿಂದ 2004 ರವರೆಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಾಗಿ ನಿಭಾಯಿಸಿದ್ದರು.
ಡಾ. ಸಿಂಗ್ ಅವರು ಮೇ 22, 2004 ರಂದು ಮೊದಲ ಬಾರಿಗೆ ಭಾರತ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು ಮತ್ತು 2009ರಲ್ಲಿ ಅದೇ ದಿನಾಂಕದಂದು ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡಿದ್ದರು.
ಸಿಂಗ್ ಅವರ ರಾಜಕೀಯ ಜೀವನವು 1991ರಲ್ಲಿ ಅವರು ರಾಜ್ಯಸಭೆಗೆ ಪ್ರವೇಶಿಸಿದಾಗ ಪ್ರಾರಂಭವಾಯಿತು. ಕೇವಲ ನಾಲ್ಕು ತಿಂಗಳ ನಂತರ, ಅವರು ಜೂನ್‌ನಲ್ಲಿ ಪಿವಿ ನರಸಿಂಹ ರಾವ್ ಸರ್ಕಾರದ ಅಡಿಯಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ನೇಮಕಗೊಂಡಿದ್ದರು. ಆ ಬಳಿಕ ಭಾರತದ ಆರ್ಥಿಕತೆಯಲ್ಲಿ ಬಹಳಷ್ಟು ಪರಿವರ್ತನೆಗಳನ್ನು ತಂದಿದ್ದರು. ಭಾರತವನ್ನು ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದತ್ತ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅಸಾಧಾರಣ ಶೈಕ್ಷಣಿಕ ಹಿನ್ನೆಲೆಯೊಂದಿಗೆ, ಸಿಂಗ್ ಬಿಎ ಮತ್ತು ಎಂಎ ಎರಡರಲ್ಲೂ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅಗ್ರಸ್ಥಾನ ಪಡೆದವರು. ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಹೆಚ್ಚಿನ ಅಧ್ಯಯನ ನಡೆಸಿದ ಸಿಂಗ್, ಮತ್ತೊಂದು ಹೆಸರಾಂತ ಜಾಗತಿಕ ಶಿಕ್ಷಣ ಕೇಂದ್ರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವಿ ಪಡೆದಿದ್ದರು.
ಇದನ್ನೂ ಓದಿ : ‘ಸ್ಥಳೀಯ ನಾಯಕತ್ವ ಬೆಳೆಸುವುದರ ಜೊತೆಗೆ ಯುವ ಜನರಿಗೆ ಅವಕಾಶ..’; ಬೆಳಗಾವಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಖರ್ಗೆ ಹೇಳಿಕೆ


