ಕೇಂದ್ರದ ಮಾಜಿ ಸಚಿವ, ರೈತ ಹೋರಾಟಗಾರ ಬಾಬಾಗೌಡ ಪಾಟೀಲ (76) ಅವರು ಹೃದಯಾಘಾತದಿಂದ ಬೆಳಗಾವಿಯ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.
ಬೈಲಹೊಂಗಲ ತಾಲ್ಲೂಕಿನ ಚಿಕ್ಕಬಾಗೇವಾಡಿ ಗ್ರಾಮದವರಾದ ಅವರು ರೈತ ಹೋರಾಟದ ಮೂಲಕ ರಾಜಕೀಯ ಪ್ರವೇಶಿಸಿದರು. ತಮ್ಮ ರಾಜಕೀಯ ಹಾಗೂ ಸಾರ್ವಜನಿಕ ಜೀವನದುದ್ದಕ್ಕೂ ರೈತ ಪರ ದನಿಯಾಗಿಯೇ ಉಳಿದವರು.
ಬಿಜೆಪಿ ಪಕ್ಷದಿಂದಲೇ 1998ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ, ಅಟಲ್‌ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರೂ ಆಗಿದ್ದ ಪಾಟೀಲರು, ತಮ್ಮದೇ ಪಕ್ಷದ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಾಗ ತೀವ್ರವಾಗಿ ವಿರೋಧಿಸಿದರು.
ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳ ತೀವ್ರ ವಿರೋಧದ ನಿಲುವು ಹೊಂದಿದ್ದ ಪಾಟೀಲರು, ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ನಡೆದ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದರು.
ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದು ರೈತರಿಗೆ ಮರಣಶಾಸನವಾಗಿದೆ ಎಂದು ಹೇಳುತ್ತಾ ಕೇಂದ್ರ ಸರ್ಕಾರದ ವಿರುದ್ಧದ ರಾಜ್ಯದ ಹೋರಾಟದ ಮುಂಚೂಣಿಯಲ್ಲಿದ್ದರು.
ಶಿವಮೊಗ್ಗ, ಬೆಂಗಳೂರು, ಹಾವೇರಿಗಳಲ್ಲಿ ರೈತ ಮಹಾಪಂಚಾಯತ್‌ಗಳು ನಡೆದಾಗ, ಮಾರ್ಚ್ 31ರಂದು ಬೆಳಗಾವಿಯಲ್ಲಿ ಮಹಾಪಂಚಾಯತ್ ಆಯೋಜಿಸಿ ಕೇಂದ್ರದ ವಿರುದ್ಧ ಒಮ್ಮತ ರೂಪಿಸುವುದಕ್ಕೆ ಶ್ರಮಿಸಿದ್ದರು.
ಕೇಂದ್ರ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದ್ದ ಅವರು, ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟ ಕೇವಲ ಕೃಷಿಕರ ಹೋರಾಟವಲ್ಲ. ಈ ಕಾಯ್ದೆಗಳು ಇಡೀ ಸಾಮಾಜಿಕ ರಚನೆಯನ್ನೇ ಅಲುಗಾಡಿಸುತ್ತವೆ. ಹಾಗಾಗಿ ಎಲ್ಲರೂ ಇದನ್ನು ವಿರೋಧಿಸಬೇಕು ಎಂಬ ದೂರಗಾಮಿ ಮಾತುಗಳನ್ನಾಡಿದರು.
ಬಾಬಗೌಡ ಪಾಟೀಲರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ರೈತಪರ ಕಾಳಜಿ ಹೊಂದಿದ್ದ ನಾಯಕರನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ” ಎಂದು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ: ರೈತ ಚಳವಳಿಗೆ ಹೊಸ ಭರವಸೆ ನೀಡಿದ ಕರ್ನಾಟಕದ ರೈತ ಮಹಾಪಂಚಾಯತ್‌ಗಳು


