ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ.
ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್ ಖಾನ್ ಬಿಡುಗಡೆಗೊಂಡವರು. ಜನವರಿ 5ರಂದು ಐವರು ಬಂಧಿತರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಅಗತ್ಯ ಜಾಮೀನು ಷರತ್ತುಗಳನ್ನು ಪೂರೈಸಿದ ನಂತರ ನಾಲ್ವರು ಬಿಡುಗಡೆಗೊಂಡಿದ್ದಾರೆ.
ಅಡಿಷನಲ್ ಸೆಷನ್ಸ್ ಜಡ್ಜ್ ಸಮೀರ್ ಬಜ್ಪಾಯಿ ಅವರು, ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಂ ಖಾನ್ ಅವರು ಸಲ್ಲಿಸಿದ್ದ ಪ್ರತಿ ವ್ಯಕ್ತಿಗೆ 2 ಲಕ್ಷ ರೂಪಾಯಿ ಮೊತ್ತದ ಜಾಮೀನು ಬಾಂಡ್ ಮತ್ತು ಅದೇ ಮೊತ್ತದ (2 ಲಕ್ಷ ರೂಪಾಯಿ) ಎರಡು ಸ್ಥಳೀಯ ಜಾಮೀನುದಾರರನ್ನು ಸ್ವೀಕರಿಸಿದ್ದಾರೆ. ನಂತರ ನಾಲ್ವರ ಬಿಡುಗಡೆ ಆದೇಶವನ್ನು ಹೊರಡಿಸಿದ್ದಾರೆ ಎಂದು ವರದಿಯಾಗಿದೆ.
ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದ ಇನೊಬ್ಬ ಬಂಧಿತ ಶಾದಾಬ್ ಅಹ್ಮದ್, ಜಾಮೀನು ಬಾಂಡ್‌ಗಳನ್ನು ಸಲ್ಲಿಸಲು ಬುಧವಾರ ನ್ಯಾಯಾಲಯದ ಮುಂದೆ ಹಾಜರಾಗಿಲ್ಲ. ಹಾಗಾಗಿ, ಅವರು ಬಿಡುಗಡೆಗೊಂಡಿಲ್ಲ ಎಂದು ವರದಿಗಳು ಹೇಳಿವೆ.
ಬುಧವಾರ ರಾತ್ರಿ ತಿಹಾರ್ ಜೈಲಿನಿಂದ ಗುಲ್ಫಿಶಾ ಫಾತಿಮಾ, ಶಿಫಾ ಉರ್ ರೆಹಮಾನ್ ಮತ್ತು ಮೀರಾನ್ ಹೈದರ್ ಬಿಡುಗಡೆಗೊಂಡರೆ, ಮೊಹಮ್ಮದ್ ಸಲೀಮ್ ಖಾನ್ ಮಂಡೋಲಿ ಜೈಲಿನಿಂದ ಹೊರಬಂದಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಪ್ರಕರಣದ ಇನ್ನಿಬ್ಬರು ಪ್ರಮುಖ ಬಂಧಿತರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದೆ.
ಎಲ್ಲರೂ, ಕಳೆದ 6 ವರ್ಷಗಳಿಂದ ಜೈಲಿನಲ್ಲಿದ್ದರು. ಜಾಮೀನು ದೊರೆತವರು ಹೊರಬಂದರೆ, ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಇನ್ನೂ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ. ಗಮನಾರ್ಹ ಸಂಗತಿಯೆಂದರೆ, ಇವರಲ್ಲಿ ಯಾರೂ ಕೂಡ ಅಪರಾಧಿಗಳು ಎಂದು ಇನ್ನೂ ಸಾಭೀತಾಗಿಲ್ಲ.
ಐವರಿಗೆ ಜಾಮೀನು ದೊರೆತ ಹಿನ್ನೆಲೆ, ಪ್ರಕರಣ 11ನೇ ಆರೋಪಿಯಾಗಿರುವ ಸಲೀಂ ಮಲಿಕ್ ದೆಹಲಿಯ ಕಾರ್ಕರ್ಡೂಮಾ ಕೋರ್ಟ್‌ನಲ್ಲಿ ಹೊಸ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ. ಈಗಾಗಲೇ ಜಾಮೀನು ಕೊಟ್ಟ ಒಬ್ಬರ ಮೇಲಿರುವಂತೆಯೇ (ಬಹುಶಃ ಮೊಹಮ್ಮದ್ ಸಲೀಂ ಖಾನ್ ಅಥವಾ ಇತರರಂತೆ)ನನ್ನ ಮೇಲೆಯೂ ಆರೋಪಗಳಿವೆ. ಹಾಗಾಗಿ, ಸಮಾನತೆಯ ಆಧಾರದ ಮೇಲೆ ಜಾಮೀನು ನೀಡಬೇಕೆಂದು ಕೋರಿದ್ದಾರೆ. ಅಂದರೆ, ಅವರಿಗೆ ಕೊಟ್ಟ ಮೇಲೆ ನನಗೂ ಕೊಡಿ, ನಮ್ಮಿಬ್ಬರ ಮೇಲಿರುವ ಆರೋಪಗಳು ಒಂದೇ ರೀತಿ ಇವೆ ಎಂದು ಮನವಿ ಮಾಡಿದ್ದಾರೆ.


