ಕೇರಳದ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ಸಂಜೆ ತಿರುವನಂತಪುರಂನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಮಧ್ಯಪ್ರದೇಶ ಮತ್ತು ಬಿಹಾರ ಸರ್ಕಾರಗಳು ಕೂಡ ಜನರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಈ ಮೊದಲು ಘೋಷಿಸಿವೆ.
ಬುಧವಾರ ಮುಂಜಾನೆ ಪ್ರಧಾನಿಗೆ ಪತ್ರ ಬರೆದಿದ್ದ ಪಿಣರಾಯಿ ವಿಜಯನ್, ‘ಲಸಿಕೆಗಳು ಸಾರ್ವಜನಿಕರ ಸ್ವತ್ತು. ಅವನ್ನು ಉಚಿತವಾಗಿ ಒದಗಿಸಿ’ ಎಂದು ಆಗ್ರಹಿಸಿದ್ದರು. ಸಂಜೆವೆರೆಗೆ ಪ್ರಧಾನಿ ಅಥವಾ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ, ಕೇರಳ ಸರ್ಕಾರವೇ ಉಚಿತ ಲಸಿಕೆ ನೀಡುವ ನಿರ್ಧಾರ ಮಾಡಿತು.
“ಇದು (ಕೋವಿಡ್ ಲಸಿಕೆ) ಒಂದು ಪ್ರಮುಖ ವಿಷಯವಾಗಿದೆ. ಇದು ಬಹುಸಂಖ್ಯಾತ ಜನರು ಈಗ ಯೋಚಿಸುತ್ತಿರುವ ಒಂದು ವಿಷಯವಾಗಿದ್ದು ಇದರಲ್ಲಿ ಯಾವುದೇ ಸಂದೇಹವಿಲ್ಲ, ಕೇರಳದ ಜನರಿಗೆ ಲಸಿಕೆ ಲಭ್ಯತೆಯ ವ್ಯಾಪ್ತಿಯು ಒಂದು ವಿಷಯವಾಗಿದೆ. ಅದನ್ನು ಪರಿಶೀಲನೆ ಮಾಡಬೇಕಾಗಿದೆ. ಆದರೆ ಲಭ್ಯವಿರುವ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಅದಕ್ಕಾಗಿ ಯಾರಿಂದಲೂ ಹಣವನ್ನು ತೆಗೆದುಕೊಳ್ಳುವ ಉದ್ದೇಶವನ್ನು ಸರ್ಕಾರ ಹೊಂದಿಲ್ಲ. ಉಚಿತ ವಿತರಣೆಗೆ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ “ಎಂದು ವಿಜಯನ್ ಸುದ್ದಿಗಾರರಿಗೆ ತಿಳಿಸಿದರು.
“ಸತ್ಯವೆಂದರೆ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಇದು ಸಮಾಧಾನಕರ ಸಂಗತಿಯಾಗಿದೆ. ಈಗಾಗಲೇ ಎರಡು ಹಂತ ಮುಗಿಸಿರುವ ಸ್ಥಳೀಯ ಸಂಸ್ಥೆಯ ಚುನಾವಣೆಗಳು ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತವೆಯೇ ಎಂದು ನೋಡಬೇಕಾಗಿದೆ. ಮುಂದಿನ ದಿನಗಳಲ್ಲಿ ಮಾತ್ರ ಇದು ತಿಳಿಯುತ್ತದೆ” ಎಂದು ವಿಜಯನ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ವಿಶ್ವದ ಅತಿ ದೊಡ್ಡ ಲಸಿಕೆ ತಯಾರಕರಾದ ಸೀರಮ್ ಇನ್‌ಸ್ಟಿಟ್ಯೂಟ್ ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಶಾಟ್ ಅನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುತ್ತಿದೆ ಮತ್ತು ಸಂಗ್ರಹಿಸುತ್ತಿದೆ. ಇತರ ಭಾರತೀಯ ಬಯೋಟೆಕ್ ಕಂಪನಿಗಳಾದ ಭಾರತ್ ಬಯೋಟೆಕ್ ಮತ್ತು ಝೈಡಸ್ ಕ್ಯಾಡಿಲಾ ತಮ್ಮದೇ ಆದ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿವೆ.
ಕೇರಳದಲ್ಲಿ ಇಂದು 5,949 ಹೊಸ ಕರೋನವೈರಸ್ ಪ್ರಕರಣಗಳು ಮತ್ತು 32 ಸಾವುಗಳು ವರದಿಯಾಗಿವೆ. ಕೇರಳದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಈಗ 6.64 ಲಕ್ಷ ದಾಟಿದ್ದು, ಇದುವರೆಗೆ 2,600 ಸಾವುಗಳು ಸಂಭವಿಸಿವೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ಲಸಿಕೆಯ ಬೆಲೆ ಘೋಷಿಸಿದ ಸೀರಮ್-ಕೇಂದ್ರಕ್ಕಿಂತ ರಾಜ್ಯಕ್ಕೆ ಹೆಚ್ಚು ಬೆಲೆ ನಿಗದಿ; ಕಾಂಗ್ರೆಸ್ ಆರೋಪ


