ಗಾಝಾ ಮೇಲೆ ವಿಧಿಸಲಾಗಿದ್ದ ದಿಗ್ಬಂಧನವನ್ನು ಮುರಿಯಲು ಪ್ರಯತ್ನಿಸಿದ ಫ್ಲೋಟಿಲ್ಲಾ ಹಡಗುಗಳನ್ನು ತಡೆದ ನಂತರ, ಅವುಗಳಲ್ಲಿದ್ದ ಜಗತ್ತಿನ ವಿವಿಧ ಭಾಗಗಳ ಹಲವು ಹೋರಾಟಗಾರರನ್ನು ಇಸ್ರೇಲ್ ಸೇನೆ ಬಂಧಿಸಿದೆ.
ಈ ಬಂಧಿತರ ಮೇಲೆ ಇಸ್ರೇಲಿ ಪೊಲೀಸರು ಮತ್ತು ಜೈಲು ಅಧಿಕಾರಿಗಳು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ನಡೆಸಿದ್ದಾರೆ ಎಂದು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ ಆರೋಪಿಸಿದೆ. ಆಪಾದಿತ ದೌರ್ಜನ್ಯ ಅಂತಾರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆ ಎಂದಿರುವ ಒಕ್ಕೂಟ, ಈ ಕುರಿತು ಸ್ವತಂತ್ರ ಅಂತಾರಾಷ್ಟ್ರೀಯ ತನಿಖೆಗೆ ಒತ್ತಾಯಿಸಿದೆ.
ಗಾಝಾ ಬಳಿಯ ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ ಫ್ಲೋಟಿಲ್ಲಾ ಹಡುಗಗಳನ್ನು ಇಸ್ರೇಲ್ ತಡೆದು ನಿಲ್ಲಿಸಿದ ಬಳಿಕ, ಅದರಲ್ಲಿದ್ದ ಪತ್ರಕರ್ತರು ಮತ್ತು ಹೋರಾಟಗಾರರನ್ನು ಬಂಧಿಸಲಾಗಿದೆ. ಬಂಧಿತರ ಮೇಲೆ ಭೀಕರ ದೌರ್ಜನ್ಯ ನಡೆಸಲಾಗಿದೆ ಎಂದು ಒಕ್ಕೂಟ ಪ್ರಕಟನೆಯಲ್ಲಿ ತಿಳಿಸಿದೆ.
ಫ್ಲೋಟಿಲ್ಲಾ ತಂಡದ ಭಾಗವಾಗಿದ್ದ ‘ಕಾನ್ಸೈನ್ಸ್’ ಎಂಬ ಹಡಗಿನಲ್ಲಿದ್ದ ಜರ್ಮನ್ ಪತ್ರಕರ್ತೆ ಅನ್ನಾ ಲೀಡ್ಟ್ಕೆ ಡಿಸೆಂಬರ್ 21ರಂದು ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಇಸ್ರೇಲಿ ಕಸ್ಟಡಿಯಲ್ಲಿದ್ದಾಗ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿಕೊಂಡಿದ್ದು, ಆ ಬಳಿಕ ದೌರ್ಜನ್ಯದ ವಿಷಯ ಬೆಳಕಿಗೆ ಬಂದಿದೆ.
“ತನ್ನನ್ನು ಬಂಧಿಸಿದ ಬಳಿಕ ಇಸ್ರೇಲಿ ಸೈನಿಕರು ಬಲವಂತವಾಗಿ ವಿವಸ್ತ್ರಗೊಳಿಸಿ ಶೋಧ ನಡೆಸಲು ಮುಂದಾದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಅತ್ಯಾಚಾರವೆಸಗಿದ್ದಾರೆ” ಎಂದು ಲೀಡ್ಟ್ಕೆ ಹೇಳಿದ್ದಾರೆ. ಈ ವಿಷಯ ಬಹಿರಂಗಪಡಿಸಿದಾಗಿನಿಂದ ಆಕೆಗೆ ನಾವು ಬೆಂಬಲವಾಗಿ ನಿಂತಿದ್ದೇವೆ ಎಂದು ಫ್ಲೋಟಿಲ್ಲಾ ಒಕ್ಕೂಟ ತಿಳಿಸಿದೆ.
ಇಟಾಲಿಯನ್ ಪತ್ರಕರ್ತ ವಿನ್ಸೆಂಜೊ ಫುಲೋನ್ ಮತ್ತು ಆಸ್ಟ್ರೇಲಿಯಾದ ಹೋರಾಟಗಾರ ಸೂರ್ಯ ಮೆಕ್‌ವೆನ್ ಕೂಡ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆಂದು ವರದಿ ಮಾಡಿದ್ದಾರೆ ಎಂದು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ ಹೇಳಿದೆ. ಈ ರೀತಿಯ ಹೆಚ್ಚುವರಿ ಮಾಹಿತಿಗಳು ಹೊರಬರುವ ನಿರೀಕ್ಷೆಯಿದೆ ಎಂದಿದೆ.
ದೌರ್ಜನ್ಯಕ್ಕೊಳಗಾದವರು, ಆ ವಿಷಯವನ್ನು ಹಂಚಿಕೊಳ್ಳುವಂತೆ ನಾವು ಒತ್ತಡೆ ಹೇರುವುದಿಲ್ಲ. ಅದು ಅವರ ಸ್ವಇಚ್ಚೆಗೆ ಬಿಟ್ಟಿದ್ದು. ಮಾಹಿತಿಯನ್ನು ಹಂಚಿಕೊಳ್ಳಬೇಕೆ, ಬೇಡವೇ ಎಂಬುವುದು ಅವರೇ ನಿರ್ಧರಿಸುತ್ತಾ ಎಂದು ಒಕ್ಕೂಟ ಹೇಳಿದೆ.
ಇಸ್ರೇಲ್‌ನ ಕೃತ್ಯಗಳು ಮಾನವ ಘನತೆ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಮಾನವೀಯ ಕಾನೂನಿನ ಗಂಭೀರ ಉಲ್ಲಂಘನೆಯಾಗಿವೆ. ಈ ಕುರಿತು ಸ್ವತಂತ್ರ ಮತ್ತು ಅಂತಾರಾಷ್ಟ್ರೀಯ ತನಿಖೆ ನಡೆಯಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಫ್ಲೋಟಿಲ್ಲಾ ತಂಡದ ಸದಸ್ಯರ ಮೇಲೆ ನಡೆಸಿದ ದೌರ್ಜನ್ಯ, ಇಸ್ರೇಲ್ ಪ್ಯಾಲೆಸ್ತೀನ್ ಬಂಧಿತರ ಮೇಲೆ ನಡೆಸುತ್ತಿರುವ ದೌರ್ಜನ್ಯಕ್ಕೆ ಉದಾಹರಣೆಯಾಗಿದೆ. ಇಸ್ರೇಲಿ ಬಂಧನ ಕೇಂದ್ರಗಳಲ್ಲಿ ಪ್ಯಾಲೆಸ್ತೀನಿಯರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ, ಅವರ ಘನೆತೆಯನ್ನು ಕುಗ್ಗಿಸುವ, ಮಾನವೀಯತೆಗೆ ವಿರುದ್ದವಾದ ಹಿಂಸೆಗಳು ನಡೆಯುತ್ತಿರುವ ಬಗ್ಗೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ವರದಿ ಮಾಡಿವೆ ಎಂದು ಒಕ್ಕೂಟ ಹೇಳಿದೆ.
ಗಾಝಾದಲ್ಲಿ ಇಸ್ರೇಲ್ ಆಕ್ರಮಣ ಪ್ರಾರಂಭಿಸಿದಾಗಿನಿಂದ ಪ್ಯಾಲೆಸ್ತೀನ್ ಬಂಧಿತರ ವಿರುದ್ಧ ವ್ಯವಸ್ಥಿತವಾಗಿ ಲೈಂಗಿಕ ಹಿಂಸೆಯನ್ನು ಬಳಸಲಾಗುತ್ತಿದೆ ಎಂದು ಪ್ಯಾಲೆಸ್ತೀನಿಯನ್ ಮಾನವ ಹಕ್ಕುಗಳ ಕೇಂದ್ರದ ಇತ್ತೀಚಿನ ವರದಿಗಳು ಆರೋಪಿಸಿವೆ. ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸೇರಿದಂತೆ ವಿಶ್ವಸಂಸ್ಥೆಯ ಸಂಸ್ಥೆಗಳು ಮತ್ತು ಹಕ್ಕುಗಳ ಗುಂಪುಗಳು ಇಸ್ರೇಲಿ ಬಂಧನ ಕೇಂದ್ರಗಳಲ್ಲಿ ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸಾಚಾರದ ಬಗ್ಗೆ ಈ ಹಿಂದೆ ವರದಿ ಮಾಡಿವೆ. ಕೆಲವು ದುರುಪಯೋಗಗಳನ್ನು ಸಂಭಾವ್ಯ ಯುದ್ಧ ಅಪರಾಧಗಳೆಂದು ವಿವರಿಸಿವೆ.
ವ್ಯವಸ್ಥಿತ ದುರುಪಯೋಗದ ಆರೋಪಗಳನ್ನು ಇಸ್ರೇಲ್ ಪದೇ ಪದೇ ತಿರಸ್ಕರಿಸಿದೆ ಮತ್ತು ಅದರ ಭದ್ರತಾ ಪಡೆಗಳು ಕಾನೂನಿನ ಆಳ್ವಿಕೆಯಡಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳುತ್ತದೆ. ದುರುಪಯೋಗದ ಆರೋಪಗಳನ್ನು ತನಿಖೆ ಮಾಡಲಾಗುತ್ತದೆ ಎಂದು ಇಸ್ರೇಲಿ ಅಧಿಕಾರಿಗಳು ಹೇಳಿದ್ದಾರೆ, ಆದರೂ ಮಾನವ ಹಕ್ಕುಗಳ ಗುಂಪುಗಳು ಆ ತನಿಖೆಗಳನ್ನು ನಿಷ್ಪರಿಣಾಮಕಾರಿ ಎಂದು ಟೀಕಿಸಿವೆ.
ಇಸ್ರೇಲ್‌ನ ಸಂಸ್ಥೆಗಳು, ಅಲ್ಲಿನ ಅಧಿಕಾರಿಗಳು ಮತ್ತು ಸಾಮಾನ್ಯ ಜನರು ಪ್ಯಾಲೆಸ್ತೀನಿಯರು ಮತ್ತು ಅವರನ್ನು ಬೆಂಬಲಿಸುವವರ ಮೇಲೆ ನಡೆಸುವ ದೌರ್ಜನ್ಯಗಳಿಗೆ ಯಾವುದೇ ಶಿಕ್ಷೆಯನ್ನು ವಿಧಿಸುತ್ತಿಲ್ಲ. ಅವರ ವಿರುದ್ದ ಕ್ರಮವೇ ಕೈಗೊಳ್ಳುತ್ತಿಲ್ಲ. ಹಾಗಾಗಿ, ಇಸ್ರೇಲ್‌ನ ನ್ಯಾಯಾಲಯಗಳು ಸೇರಿದಂತೆ ಯಾವುದೇ ಸಂಸ್ಥೆಗಳ ಮೇಲೆ ನಮಗೆ ನಂಬಿಕೆಯಿಲ್ಲ. ಹಾಗಾಗಿ, ಈ ದೌರ್ಜನ್ಯ ಪ್ರಕರಣಗಳನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಅಥವಾ ವಿಶ್ವಸಂಸ್ಥೆಯ ಅಧೀನಲ್ಲಿ ತನಿಖೆಯಾಗಬೇಕು ಎಂದು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ ಒತ್ತಾಯಿಸಿದೆ.
ಇಸ್ರೇಲ್‌ನ ಬಂಧನ ಕೇಂದ್ರಗಳಿಗೆ ಪ್ರವೇಶಿ ವಸ್ತುಸ್ಥಿತಿ ಅರಿಯಲು ಅವಕಾಶ ನೀಡುವಂತೆ ವಿಶ್ವಸಂಸ್ಥೆ ಮತ್ತು ಅದರ ಸದಸ್ಯ ರಾಷ್ಟ್ರಗಳು ಒತ್ತಾಯಿಸಬೇಕು. ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಪ್ರತಿನಿಧಿಗಳು ಇಸ್ರೇಲ್ ಬಂಧನ ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಬೇಕು. ಲೈಂಗಿಕ ಮತ್ತು ಚಿತ್ರಹಿಂಸೆಯ ಆರೋಪಗಳ ಕುರಿತು ತನಿಖೆಯಾಗಬೇಕು. ವಿಶೇಷವಾಗಿ ಪ್ಯಾಲೆಸ್ತೀನಿಯರ ಮೇಲಿನ ದೌರ್ಜನ್ಯದ ಕುರಿತು ತನಿಖೆ ನಡೆಸಬೇಕು ಎಂದು ಒಕ್ಕೂಟ ಮನವಿ ಮಾಡಿದೆ.
ನ್ಯೂಯಾರ್ಕ್ ಜೈಲಿನಲ್ಲಿ ಮಡುರೊ ; ವೆನಿಜುವೆಲಾವನ್ನು ಅಮೆರಿಕ ಆಳಲಿದೆ ಎಂದ ಟ್ರಂಪ್


