Homeಅಂಕಣಗಳುಸ್ತ್ರೀಮತಿ- 3: `ಮಾತನಾಡಲು ಸ್ವಾತಂತ್ರ್ಯ ಇರಬೇಕು, ಮಾತು ಕೇಳಿಸುವಂತಾಗಲು ಅಧಿಕಾರವಿರಬೇಕು’

ಸ್ತ್ರೀಮತಿ- 3: `ಮಾತನಾಡಲು ಸ್ವಾತಂತ್ರ್ಯ ಇರಬೇಕು, ಮಾತು ಕೇಳಿಸುವಂತಾಗಲು ಅಧಿಕಾರವಿರಬೇಕು’

- Advertisement -
- Advertisement -

ಕೆಲವು ಘಟನೆಗಳು ತಮಗೇ ಅರಿವಿಲ್ಲದೆಯೇ ಭವಿಷ್ಯದ ಮಹತ್ತರ ವಿದ್ಯಮಾನಗಳಿಗೆ ನಾಂದಿ ಹಾಡಿರುತ್ತವೆ. ಅಂದು ರಾಜಸಭೆಯಲ್ಲಿ ನಡೆಯಿತೆನ್ನಲಾದ ದ್ರೌಪದಿಯ ವಸ್ತ್ರಾಪಹರಣವಿರಬಹುದು ಅಥವಾ ಮುಂದೆ ಚರ್ಚಿಸಲಿರುವ ಮೊನ್ನೆ ಶಾಸನಸಭೆಯಲ್ಲಿ ಚುನಾಯಿತ ಮಹಿಳೆಯೊಬ್ಬರು ಎದುರಿಸಿದ ಅವಮಾನಕರ ಪ್ರಕರಣವಿರಬಹುದು. ಆದರೆ ಇಲ್ಲಿ ನೆರವಿಗಾಗಿ ಆ ಮಹಿಳೆ ಯಾವ ಕೃಷ್ಣನಿಗೂ ಮೊರೆಯಿಡಲಿಲ್ಲ ಎಂಬುದೇ ಮಹತ್ವದ ಸಂಗತಿ.

ಅಮೆರಿಕಾದ ಅಲೆಕ್ಸಾಂಡ್ರಿಯ ಒಕಾಸಿಯೋ ಕೋರ್ಟೆಝ್ ಡೆಮಾಕ್ರಟಿಕ್‍ ಪಕ್ಷದ ಅತ್ಯಂತ ಕಿರಿಯ ವಯಸ್ಸಿನ ಪ್ರತಿನಿಧಿಯಾಗಿ ಆಯ್ಕೆಯಾದವರು. ರಿಪಬ್ಲಿಕನ್ ಪಕ್ಷದ ಪ್ರತಿನಿಧಿ ಟೆಡ್‍ ಯೋಹೋ ಎಂಬ ವ್ಯಕ್ತಿ,  `F***ing b**ch’ ಎಂದು ಆಕೆಯ ವಿರುದ್ಧ ಅಶ್ಲೀಲ ಪದಪ್ರಯೋಗ ಮಾಡಿ ನಿಂದಿಸಿದ್ದಾನೆ. ನಂತರ ಕ್ಷಮಾಪಣೆ ಕೇಳಬೇಕೆಂದು ಅಲೆಕ್ಸಾಂಡ್ರಿಯ ಆಗ್ರಹಿಸಿದಾಗ ತಾನು ಹೇಳಬಾರದಂತಹದೇನನ್ನು ಹೇಳಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಅಲ್ಲಿದ್ದ ಪತ್ರಕರ್ತರ ಕಿವಿಗೂ ಆ ಮಾತುಗಳು ಬಿದ್ದಿವೆ ಎಂಬುದು ಬೆಳಕಿಗೆ ಬಂದಾಗ ಕ್ಷಮೆಯನ್ನೇನು ಕೇಳದೆ ಕಾಟಾಚಾರಕ್ಕೆ ಕ್ಷಮಾಪಣೆಯ ಪ್ರಹಸನ ನಡೆಸಿದ್ದಾರೆ. ಆ ಸಂದರ್ಭದಲ್ಲಿಯೇ ಅಲೆಕ್ಸಾಂಡ್ರಿಯ ಇಡೀ ಜಗತ್ತೇ ತಿರುಗಿ ನೋಡುವಂತೆ ಟೆಡ್‍ ನನ್ನು, ಪುರುಷರ ವರ್ತನೆಯನ್ನು, ಅದನ್ನು ಪೋಷಿಸುವ ಅವನ ಅಧಿಕಾರ ಮತ್ತು ಸಂಸ್ಕೃತಿಯನ್ನು ತರಾಟೆಗೆ ತೆಗೆದುಕೊಂಡಿದ್ದು.

ನಮ್ಮ ನೀತಿನಿರೂಪಕರು ಅಸಾಂವಿಧಾನಿಕ ಭಾಷೆಯ ವಕ್ತಾರರಾಗಿಬಿಟ್ಟಿದ್ದಾರೆಯೇ?  ಬಹಳ ಎಚ್ಚರಿಕೆಯಿಂದ ತಮ್ಮ ವ್ಯಕ್ತಿತ್ವವನ್ನು ಒಂದು ಆದರ್ಶ ಮಾದರಿಯೆಂಬಂತೆ ಕಟ್ಟಿಕೊಳ್ಳಬೇಕಾದ ನಾಯಕರು ಮೂರನೆಯ ದರ್ಜೆಯ ಸಿನಿಮಾಗಳ ಅಶ್ಲೀಲ ಸಂಭಾಷಣೆಗಿಂತ ಕೆಳಮಟ್ಟದಲ್ಲಿ ಮಾತನಾಡುವುದೂ `ಸಾಮಾನ್ಯ’ವಾಗಿಬಿಟ್ಟಿದೆಯೇ? ಪುರುಷರ ಅನುಚಿತ ವರ್ತನೆಗಳನ್ನು ಮಹಿಳೆಯರು ಸಹಜವಾಗಿ ಸ್ವೀಕರಿಸುವುದನ್ನು ಬಿಡಬೇಕು.

ಅಲೆಕ್ಸಾಂಡ್ರಿಯ ಸುದ್ದಿ ಮಾಡುತ್ತಿರುವುದು ಇದೇ ಮೊದಲೇನಲ್ಲ. 2018ರಲ್ಲಿ ಯಾವುದೇ ರಾಜಕೀಯ ಹಿನ್ನೆಲೆ ಅಥವಾ ಹಣಬಲವಿಲ್ಲದೇ ತನ್ನ ಬುದ್ಧಿಮತ್ತೆ, ಇಚ್ಛಾಶಕ್ತಿ ಮತ್ತು ಶ್ರಮದಿಂದ ಚುನಾವಣೆಯಲ್ಲಿ ಗೆದ್ದ ಸಂದರ್ಭದಿಂದ ಹಿಡಿದು ತನಗಿಂತ ನಲವತ್ತು ಐವತ್ತು ವರ್ಷ ಹಿರಿಯರಾದ ಅನುಭವಿ ರಾಜಕಾರಣಿಗಳನ್ನು ಎದುರಿಸುತ್ತಲೇ ಬಂದಿದ್ದಾಳೆ. 2019ರಲ್ಲಿ ಫೇಸ್‍ಬುಕ್‍ ನ  ಮಾರ್ಕ್‍ ಜುಕರ್‍ ಬರ್ಗ್‍ ನನ್ನು ಆತ `ಗೊತ್ತಿಲ್ಲ ಗೊತ್ತಿಲ್ಲ’ ಎಂದು ತಡವರಿಸುವಂತೆ ಪ್ರಶ್ನೆಗಳನ್ನು ಕೇಳಿದ ಅವಳ ತೀಕ್ಷ್ಣಮತಿಯ ವಿಡಿಯೋ ಕೂಡ ವೈರಲ್ ಆಗಿತ್ತು. ಇಂದು ವಿಶ್ವದ ಪ್ರಮುಖ ಮಾಧ್ಯಮಗಳು ಆಕೆಯನ್ನು `ಅಮೆರಿಕದ ಭವಿಷ್ಯ’ ಎಂದು ಕರೆಯುವ ಮಟ್ಟಕ್ಕೆ ಬೆಳೆದಿದ್ದಾಳೆ. `ನಾಕ್‍ ಡೌನ್‍ ದ ಹೌಸ್‍’ ಎಂಬ ಡಾಕ್ಯುಮೆಂಟರಿ ಒಬ್ಬ ಬಾರ್‍ ಟೆಂಡರ್‍ ಆಗಿದ್ದ ಅಲೆಕ್ಸಾಂಡ್ರಿಯ ಹೇಗೆ ತನ್ನ ದಿಟ್ಟತನ, ಆತ್ಮವಿಶ್ವಾಸದಿಂದ ಗೆಲುವು ಸಾಧಿಸುವುದಕ್ಕೆ ಸಾಧ್ಯವಾಯಿತು ಎಂಬುದನ್ನು ಚಿತ್ರೀಕರಿಸಿದೆ. (`ನಾಕ್‍ ಡೌನ್‍ ದ ಹೌಸ್‍’ ಸಾಕ್ಷ್ಯಚಿತ್ರ ನೆಟ್‍ಫ್ಲಿಕ್ಸ್‍ನಲ್ಲಿ ಲಭ್ಯವಿದೆ).

ಅಲೆಕ್ಸಾಂಡ್ರಿಯ ಭಾಷಣ ಅರ್ಧಜಗತ್ತನ್ನೇ ಸುತ್ತಿಬಂದರೂ, ಬಹಳಷ್ಟು ಸದ್ದು ಮಾಡಿದರೂ ಅದರ ದನಿ ನಮ್ಮವರೆಗೆ ಬರಲೇ ಇಲ್ಲ. ಅಂದರೆ ಇಂತಹ ಘಟನೆಗಳು ಹೊಂದಿರುವ ಮಹತ್ವವನ್ನು ಗ್ರಹಿಸುವುದರಲ್ಲಿ ನಮ್ಮ ಸಮಾಜ ಸೋತಿರುವುದು ಸ್ಪಷ್ಟವಾಗುತ್ತದೆ. ಅವಳ ಮಾತುಗಳನ್ನು ಕೇಳಿಲ್ಲದವರು ಕೇಳಬೇಕು, ಅವರಿಗೆ ಕೇಳಿಸಬೇಕು. ಅವಳ ಮಾತುಗಳನ್ನು ಇಂದು ಕೇಳಿಸುವಂತೆ ಮಾಡದಿದ್ದರೆ, ಮತ್ತೆ ಮುಂದಿನ ದಿನಗಳಲ್ಲಿ ಅಂತಹುದೇ ಘಟನೆಗೆ ನಾವೇ ದಾರಿ ಹಾಸಿಕೊಡುತ್ತಿರುತ್ತೇವೆ. ಅದರಲ್ಲೂ ನಮ್ಮ ದೇಶದ ರಾಜಕಾರಣಿಗಳಿಗೆ, ಮೇಲ್ಮನೆ, ಕೆಳಮನೆ, ರಾಜ್ಯಸಭೆ, ಲೋಕಸಭೆ, ಇಲ್ಲೆಲ್ಲಾ ದೊಡ್ಡ ಎಲ್‍ ಸಿ ಡಿ ಪರದೆ ಹಾಕಿ ಆಕೆಯ ಭಾಷಣವನ್ನು ತೋರಿಸಬೇಕು. ಪೊಲಿಯೋ ಮುಕ್ತ ದೇಶವಾಗುವ ತನಕ ಲಸಿಕೆ ಕೊಡುತ್ತಿರುವ ಹಾಗೇ.

ವೈರಲ್ ಆಗಿರುವ ಅಲೆಕ್ಸಾಂಡ್ರಿಯಾ ಮಾತುಗಳ ಸಾರ ಈ ಕೆಳಗಿನಂತಿದೆ.

“… ನನ್ನ ಪಾಡಿಗೆ ನಾನು ಹೋಗುತ್ತಿರುವಾಗ ಟೆಡ್ ನನ್ನತ್ತ ಬೊಟ್ಟು ಮಾಡಿ ನನ್ನನ್ನು ಅಸಹ್ಯಕರ ಎಂದರು, ನನ್ನನ್ನು ಹುಚ್ಚಿ ಎಂದರು, ನನ್ನ ತಲೆ ಸರಿ ಇಲ್ಲ ಎಂದರು, ನನ್ನನ್ನು ಅಪಾಯಕಾರಿ ಎಂದರು. ಅಲ್ಲಿದ್ದ ಪತ್ರಕರ್ತರ ಎದುರಿಗೇ ಯೋಹೋ ನನ್ನನ್ನು ವೇಶ್ಯೆ ಎಂದರು.  ಇವು  ಒಬ್ಬ ಚುನಾಯಿತ ಪ್ರತಿನಿಧಿಯನ್ನು ಉದ್ದೇಶಿಸಿ ಯೋಹೋ ಬಳಸಿದ ಪದಗಳು. ಇವು ಕೇವಲ ನನ್ನ ವಿರುದ್ಧ ಬಳಸಿದ ಪದಗಳಾಗುವುದಿಲ್ಲ, ಏಕೆಂದರೆ ನಾನು ಕೇವಲ ನನ್ನ ಕ್ಷೇತ್ರದ ಪ್ರತಿನಿಧಿಯಲ್ಲ. ನಾನಿಲ್ಲಿ ಚುನಾಯಿತ ಮಹಿಳೆಯರ ಪ್ರತಿನಿಧಿಯಾಗಿದ್ದೇನೆ ಇಡೀ ದೇಶದ ಮಹಿಳೆಯರ ಪ್ರತಿನಿಧಿಯಾಗಿದ್ದೇನೆ. ಏಕೆಂದರೆ ನಾವೆಲ್ಲರೂ ನಮ್ಮ ಬದುಕಿನಲ್ಲಿ ಒಂದಲ್ಲಾ ಒಂದು ಸಂದರ್ಭದಲ್ಲಿ ಒಂದಲ್ಲಾ ಒಂದು ರೂಪದಲ್ಲಿ, ಒಂದಲ್ಲಾ ಒಂದು ರೀತಿಯಲ್ಲಿ ಇಂತಹ ಸನ್ನಿವೇಶವನ್ನು ನಿಭಾಯಿಸಿದ್ದಿದೆ… ಇಂತಹ ಭಾಷೆ ನನಗೆ ಹೊಸತಲ್ಲ, ಯೋಹೋ ಬಳಸಿದಂತಹ ಭಾಷೆಯನ್ನೇ ಹೊರ ಜಗತ್ತಿನಲ್ಲಿ ಅನೇಕ ಪುರುಷರೂ ಬಳಸುತ್ತಾರೆ. ಇದೇನು ಹೊಸದಲ್ಲ ಮತ್ತು ಹೊಸದಾಗಿಲ್ಲದಿರುವುದೇ ನಿಜವಾದ ಸಮಸ್ಯೆ.

“ನಾನು 65 ವರ್ಷದ ಯೋಹೋರಿಂದ ಕ್ಷಮೆಯನ್ನೇನೂ ಬಯಸುತ್ತಿಲ್ಲ. ಆದರೆ ಅವರ ವರ್ತನೆಯು ಮಹಿಳೆಯರೊಂದಿಗಿನ ವರ್ತನೆಯ ಸಮಸ್ಯೆಯ ಲಕ್ಷಣವಾಗಿದೆ. ಇಂತಹದ್ದನ್ನು ನಿರ್ದಿಷ್ಟ ರೀತಿಯಲ್ಲಿ ಎದುರಿಸಬೇಕಾಗಿದೆ. ಇದು ಸಂಸ್ಕೃತಿಯಾಗಿ ಬಿಟ್ಟಿದೆ. ಮಹಿಳೆಯರ ವಿರುದ್ಧದ ದೌರ್ಜನ್ಯ ಮತ್ತು ನಿಂದನೆಯನ್ನು ಸ್ವೀಕರಿಸಿರುವ ಸಂಸ್ಕೃತಿಯಾಗಿದೆ. ಅಧಿಕಾರದ ಒಟ್ಟು ವ್ಯವಸ್ಥೆಯೇ ಇದಕ್ಕೆ ಬೆಂಬಲವಾಗಿ ನಿಲ್ಲುತ್ತದೆ. ಪುತ್ರಿಯಿದ್ದ ಮಾತ್ರಕ್ಕೆ ಪುರುಷನೊಬ್ಬ ಸಭ್ಯನಾಗಲಾರ. ಪತ್ನಿಯಿದ್ದ ಮಾತ್ರಕ್ಕೆ ಪುರುಷನೊಬ್ಬ ಸಭ್ಯನಾಗಲಾರ. ಜನರನ್ನು ಘನತೆಯಿಂದ ಕಾಣುವುದು ಮತ್ತು ಗೌರವಿಸುವುದು ವ್ಯಕ್ತಿಯೊಬ್ಬನನ್ನು ಸಭ್ಯನನ್ನಾಗಿಸುತ್ತದೆ” ಎಂದು ದಿಟ್ಟವಾಗಿ ಎಲ್ಲರ ಎದುರು ಟೆಡ್‍ ನಡವಳಿಕೆಯ ಬಗೆಗ ತನ್ನ ವಿರೋಧ ವ್ಯಕ್ತಪಡಿಸಿದರು.

ನಂತರ ಸದನದಲ್ಲಿರುವ ಡೆಮಾಕ್ರಟಿಕ್ ಪಕ್ಷದ ಇತರ ಮಹಿಳೆಯರನ್ನೂ ಈ ವಿಚಾರದ ಕುರಿತು ಮಾತನಾಡಲು ಅಲೆಕ್ಸಾಂಡ್ರಿಯಾ ಆಹ್ವಾನಿಸಿದಾಗ, 13 ಮಹಿಳೆಯರು ಮತ್ತು ಮೂವರು ಪುರುಷರು ಕೂಡ ತಾವು ಅನುಭವಿಸಿದ ಕಿರುಕುಳದ ಕತೆಗಳನ್ನು ಹಂಚಿಕೊಂಡರು. ಟೆಡ್‍ ಕ್ಷಮಾಪಣೆ ಕೇಳುತ್ತಾರೆಂಬುದು ಗೊತ್ತಾದ ಮೇಲೆ ಈ ಘಟನೆಯನ್ನು ಅಲ್ಲಿಗೇ ಬಿಟ್ಟುಬಿಡಲು ಅಲೆಕ್ಸಾಂಡ್ರಿಯ ಸಿದ್ಧಳಿದ್ದಳು. ಆದರೆ ಯಾವಾಗ ಟೆಡ್ ಕ್ಷಮೆಯನ್ನೇ ಕೇಳದೆ “ಅವು ಬಡತನದ ಬಗೆಗಿನ ಕಾಳಜಿಯಿಂದ ಮಾತನಾಡುವ ಸಂದರ್ಭದಲ್ಲಿ ಹೊರಬಿದ್ದ ಮಾತುಗಳಷ್ಟೇ. ನನ್ನ ದೇವರು, ನನ್ನ ಕುಟುಂಬ ಮತ್ತು ನನ್ನ ದೇಶವನ್ನು ಪ್ರೀತಿಸುವುದಕ್ಕಾಗಿ ನಾನು ಕ್ಷಮೆಯಾಚಿಸಲು ಸಾಧ್ಯವಿಲ್ಲ” ಎಂದು ತಿಪ್ಪೆ ಸಾರಿಸಿದರೋ, ಅಷ್ಟೇ ಅಲ್ಲ ತನಗೆ ಮದುವೆಯಾಗಿ 45 ವರ್ಷಗಳಾಗಿದ್ದು ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಹೀಗಾಗಿ ತಾನಾಡುವ ಭಾಷೆಯ ಬಗ್ಗೆ ಅರಿವುಳ್ಳವನಾಗಿದ್ದೇನೆ  ಎಂದು ತನ್ನ ನಡೆಯನ್ನು ಸಮರ್ಥಿಸಿಕೊಂಡರೋ ಆಗ ಇದನ್ನು ಹೀಗೆ ಬಿಟ್ಟುಬಿಡುವುದಕ್ಕೆ ಸಾಧ್ಯವಿಲ್ಲ ಮತ್ತು ಈ ಮಾತುಗಳನ್ನು ಕ್ಷಮಾಪಣೆ ಎಂದು ಪರಿಗಣಿಸುವುದಕ್ಕೆ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದು ಈ ವಿಚಾರವನ್ನು ಅಲೆಕ್ಸಾಂಡ್ರಿಯ ಎಲ್ಲರೆದುರು ಚರ್ಚಿಸುತ್ತಾರೆ.

65 ವರ್ಷದ ಟೆಡ್ ಯೋಹೋ ತಮ್ಮ ರಾಜಕೀಯ ನಿವೃತ್ತಿಯ ಅಂಚಿನಲ್ಲಿದ್ದಾರೆ. ಈ ಘಟನೆಯ ಬಳಿಕ, ಟೆಡ್, ಆಡಳಿತ ಮಂಡಳಿಯ ಸದಸ್ಯರಾಗಿರುವ ಮತ್ತೊಂದು ಸಂಸ್ಥೆ ಅವರ ರಾಜೀನಾಮೆಯನ್ನು ಪಡೆದಿದೆ.

ಇದು ಜಗತ್ತಿನ ಮತ್ತೊಂದು ಮೂಲೆಯಲ್ಲಿ ನಡೆದ ಪ್ರಕರಣವಾದರೂ ಪ್ರಮುಖವಾದ ವಿದ್ಯಮಾನವಾಗಿದೆ. ಒಬ್ಬೊಬ್ಬರಾಗಿ ಇಳಿದು ಬಂದು ಅಲೆಕ್ಸಾಂಡ್ರಿಯಳ ದನಿಗೆ ದನಿ ಸೇರಿಸಿದರಲ್ಲ, ಬಾಲ್ಯದಲ್ಲಿ ಕೇಳಿದ ಕತೆಯೊಂದು ನೆನಪಾಯಿತು – ಒಂದಷ್ಟು ಹಕ್ಕಿಗಳು ಬೇಟೆಗಾರನ ಬಲೆಯಲ್ಲಿ ಸಿಲುಕಿಕೊಳ್ಳುತ್ತವೆ, ಹೊರಗಿರುವ ಇತರ ಹಕ್ಕಿಗಳು ಬಂಧನದಲ್ಲಿರುವ ಹಕ್ಕಿಗಳನ್ನು ಬಿಡಿಸಲು ಹರಸಾಹಸ ಪಟ್ಟರು ಸಾಧ್ಯವಾಗುವುದಿಲ್ಲ, ಬಲೆ ಬೀಸಿದವ ಎಲ್ಲೋ ಹೋಗಿದ್ದವನು ಆ ಹಕ್ಕಿಗಳನ್ನು ಕೊಂಡೊಯ್ಯಲು ಈಗ ಬರುತ್ತಿದ್ದಾನೆ, ಇನ್ನೇನು ಕೆಲವೇ ನಿಮಿಷಗಳಲ್ಲಿ ಬಲೆಯೊಳಗಿರುವ ಹಕ್ಕಿಗಳೆಲ್ಲಾ ಬೇಟೆಗಾರನ ಪಾಲು, ಆಗ ಹೊರಗಿದ್ದ ಹಕ್ಕಿಗಳೂ ಬಲೆಯೊಳಗೆ ಸಿಲುಕಿಕೊಂಡು ಇಡೀ ಬಲೆಯನ್ನೇ ಎತ್ತಿಕೊಂಡು ಹಾರತೊಡಗುತ್ತವೆ, ಅವುಗಳೊಂದಿಗೇ ಈಗ ಬಲೆಯೊಳಗಿರುವ ಹಕ್ಕಿಗಳೂ ಹಾರುತ್ತಿವೆ!

ಬಹಳಷ್ಟು ಕ್ಷೇತ್ರಗಳಲ್ಲಿ ಬಹುಸಂಖ್ಯಾತ ಪುರುಷರೆದುರು ಮಹಿಳೆಯರದ್ದು ಒಂಟಿದನಿಯೇ ಆಗಿರುತ್ತದೆ. ಆದರೆ ಈ ಘಟನೆಯಲ್ಲಿ ಅಲೆಕ್ಸಾಂಡ್ರಿಯಳಿಗೆ ಸಣ್ಣ ಪ್ರಮಾಣದಲ್ಲಾದರೂ ತನ್ನ ಸಹೋದ್ಯೋಗಿಗಳಿಂದ ದೊರೆತ ನೈತಿಕ ಸ್ಥೈರ್ಯ ಗಮನಾರ್ಹವಾದುದು. ಮತ್ತು ಇಂತಹ ದಿಟ್ಟ ನಾಯಕಿಯರ ಕಾರ್ಯಗಳನ್ನು ಪ್ರಪಂಚದಾದ್ಯಂತ ಪಸರಿಸಿದ ಇಂದಿನ ಮಾಧ್ಯಮಗಳ ಪಾತ್ರ ಭರವಸೆ ಮೂಡಿಸುವಂತಿದೆ.

ಈ ವಿಚಾರದಲ್ಲಿ ನಮ್ಮ ದೇಶದ ಪುರುಷ ರಾಜಕಾರಣಿಗಳೇನೂ ಹಿಂದೆಬಿದ್ದಿಲ್ಲ, ಮಹಿಳಾ ರಾಜಕಾರಣಿಗಳ ಬಗ್ಗೆ ಮಾಡಿರುವ ಟೀಕೆಗಳನ್ನು ಇಲ್ಲಿ ಮತ್ತೆ ನೆನಪಿಸಿಕೊಳ್ಳಲೂ ಹಿಂಸೆಯಾಗುತ್ತದೆ. ಅಭಿವೃದ್ಧಿ ಕಾರ್ಯ ಎಷ್ಟೇ ಹಿಂದುಳಿದಿದ್ದರೂ ಪ್ರತಿಪಕ್ಷದವರೊಂದಿಗಿನ ಜಟಾಪಟಿಯಲ್ಲಿ ಅವಕಾಶ ಸಿಕ್ಕಾಗಲೆಲ್ಲಾ `ನಾವೇನು ಕೈಗೆ ಬಳೆ ತೊಟ್ಟುಕೊಂಡು ಕುಳಿತಿಲ್ಲ’ ಎನ್ನುವುದನ್ನು ಅವರ್ಯಾರೂ ಮರೆಯುವುದಿಲ್ಲ.

ತೇಜಸ್ವಿ ಸೂರ್ಯ ಅರಬ್ ಮಹಿಳೆಯರ ಬಗ್ಗೆ ಹೇಳಿದ ಮಾತುಗಳು ಇಡೀ ವಿಶ್ವದೆದುರು ಭಾರತ ತಲೆತಗ್ಗಿಸುವಂತೆ ಮಾಡಿತ್ತು. ಸಂಸದೆ ಸುಮಲತಾ ಅವರು ಚುನಾವಣಾ ಕಣಕ್ಕಿಳಿದಾಗ ಸಚಿವರಾಗಿದ್ದ ಎಚ್‌.ಡಿ. ರೇವಣ್ಣ ಅವರು ‘ಗಂಡ ಸತ್ತು ಒಂದೆರಡು ತಿಂಗಳಾಗಿಲ್ಲ, ಸುಮಲತಾ ಅವರಿಗೆ ರಾಜಕೀಯ ಯಾಕೆ ಬೇಕಿತ್ತು’ ಎಂಬ ಹೇಳಿಕೆ ನೀಡಿದ್ದರು, ಅಲ್ಲದೆ ಕ್ಷಮಾಪಣೆ ಕೇಳಿದಾಗ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ”ಕ್ಷಮೆ ಕೇಳಲು ನನಗೇನು ಹುಚ್ಚು ಹಿಡಿದಿಲ್ಲ. ಯಾರ ಕ್ಷಮೆಯನ್ನೂ ಕೇಳುವುದಿಲ್ಲ, ನಾನು ಕೆಟ್ಟ ಭಾವನೆಯಿಂದ ಆ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಗೆ ಅಪಾರ್ಥ ಕಲ್ಪಿಸಬೇಡಿ. ಹಿಂದೂ ಸಂಪ್ರದಾಯದ ಹಿನ್ನೆಲೆಯಲ್ಲಿ ನಾನು ಮಾತನಾಡಿದ್ದೇನೆ,” ಎಂದೂ ಹೇಳಿದ್ದರು.

ಸಜ್ಜನ ಎಂದು ಬಿಂಬಿತರಾದ ಹಿರಿಯ ರಾಜಕಾರಣಿ ಮಾಜಿ ಸ್ಪೀಕರ್ ರಮೇಶ್‍ ಕುಮಾರ್‍ ಸದನದಲ್ಲಿ ತಮ್ಮ ಮೇಲಿನ ಭ್ರಷ್ಟಾಚಾರ ಆರೋಪವನ್ನು ಅತ್ಯಾಚಾರಕ್ಕೆ ಹೋಲಿಸಿಕೊಂಡಿದ್ದರು. ನನ್ನ  ಸ್ಥಿತಿ ಅತ್ಯಾಚಾರ ಸಂತ್ರಸ್ತೆಯಂತಾಗಿದೆ ಎನ್ನುವ ಮೂಲಕ ವಿಧಾನಸಭೆಯಲ್ಲಿಯೇ ವಿವಾದಿತ ಹೇಳಿಕೆಯನ್ನು ನೀಡಿದ್ದರು.  ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಮರೆತು ಸುಮ್ಮನೇ ಹೊರಟುಹೋಗಿದ್ದರೆ ಏನು ಆಗುತ್ತಿರಲಿಲ್ಲ. ಆದರೆ ಪೊಲೀಸ್​ ಗೆ ದೂರು ನೀಡಿದ್ದು ತಪ್ಪಾಯ್ತು. ಕೋರ್ಟ್‌ ಮುಂದೆ ಹಾಜರಾದಾಗ ಯಾರು ರೇಪ್ ಮಾಡಿದ್ದು? ಯಾವಾಗ ರೇಪ್ ಮಾಡಿದ್ದು? ಹೇಗೆ ಮಾಡಿದರು? ಎಷ್ಟು ಸಾರಿ ಮಾಡಿದರು ಎಂದು ಪ್ರಶ್ನಿಸುವಂತೆ ನನ್ನ ಪರಿಸ್ಥಿತಿಯೂ ಆಗಿದೆ”. ಹಾಗೆ ಎರಡೂ ಕಡೆಯವರು ಸೇರಿ ನನ್ನನ್ನು ರೇಪ್ ಮಾಡ್ತಾ ಇದ್ದಾರೆ. ಇದಕ್ಕಿಂತ ಐವತ್ತು ಕೋಟಿ ಆರೋಪನೇ ಒಳ್ಳೆಯದಿತ್ತು. ನಿಮ್ಮಿಂದ ದಿನಾ ರೇಪ್ ಮಾಡಿಸಿಕೊಳ್ಳುವ ತೊಂದರೆ ಯಾರಿಗೆ ಬೇಕು ಎಂದು ಸಂವೇದನಾರಹಿತರಾಗಿ ಮಾತನಾಡಿದ್ದರು.

`ಸಿಯಾಪತಿ’ ರಾಮಚಂದ್ರಜೀ ಕಿ ಜೈ ಎನ್ನುವ ಪ್ರಧಾನಿ ಮೋದಿಯವರು ಸಹ ಶಶಿ ತರೂರ್‍ ಅವರನ್ನು ಆಡಿಕೊಳ್ಳಲು ಅವರ ವೈಯಕ್ತಿಕ ವಿಚಾರವನ್ನು ತಂದು  ಐವತ್ತು ಕೋಟಿಯ ಗರ್ಲ್‍ ಫ್ರೆಂಡ್ ಇದ್ದಾರೆ ಅವರಿಗೆ, ಎಂದಿದ್ದರು. ಜಾರ್ಜ್‍ ಬರ್ನಾರ್ಡ್ ಶಾ, ‘Politics is the last resort for the scoundrel’ ಎಂದಿರುವಂತೆಯೇ, ಅವರವರ ಅಭಿರುಚಿಗೆ ತಕ್ಕ ಹಾಗೆ ರಾಜಕೀಯ ಕ್ಷೇತ್ರವನ್ನು ಆಟದ ಮೈದಾನವನ್ನಾಗಿ ಮಾಡಿಕೊಂಡಿದ್ದಾರೆ.

ಹೆಣ್ಣನ್ನು ಕುರಿತು ಬಳಸುವ ಈ ಪರಿಭಾಷೆ ಸೃಷ್ಟಿಯಾದದ್ದು ಇಂದು ನಿನ್ನೆಗಳಲ್ಲಲ್ಲ. ಇದು ಹೆಣ್ಣಿಗೂ ಗಂಡಿಗೂ ಹೊಸತಲ್ಲ ಹಾಗಾಗಿಯೇ ನಿವಾರಿಸಿಕೊಳ್ಳುವುದು ಅಷ್ಟು ಸುಲಭವೂ ಅಲ್ಲ, ಅರಿಸ್ಟಾಟಲ್ ತನ್ನ ಪೊಲಿಟಿಕ್ಸ್ ಕೃತಿಯಲ್ಲಿಯೇ “The female is a female by virtue of a certain lack of qualities”  ಕೆಲವು ಗುಣಗಳ ಕೊರತೆಯೇ ಹೆಣ್ಣು, ಅವಳಿಗಿರುವುದು `ನ್ಯಾಚುರಲ್ ಡಿಫೆಕ್ಟಿವ್‍ನೆಸ್’ ಎನ್ನುತ್ತಾನೆ. ಅರಿಸ್ಟಾಟಲ್ ನ ಈ ದೃಷ್ಟಿಕೋನವು ಶತಮಾನಗಳ ಕಾಲ ಸಮಾಜವನ್ನು ಪ್ರಭಾವಿಸಿದೆ. ಹೆಣ್ಣಿನ ಬಗೆಗಿನ ಈ ಅಪವ್ಯಾಖ್ಯಾನಗಳು ಇಂದಿಗೂ ಸ್ಥಾನ ಪಡೆದಿರುಕೊಂಡಿವುದು ದೊಡ್ಡ ದುರಂತ. ಪುರುಷನನ್ನು ಮಾನವ ಎಂದು ಗುರುತಿಸಿ, ಸ್ತ್ರೀಯನ್ನು `ಹೆಣ್ಣು’ ಎಂದು ಪರಿಗಣಿಸುವ ಮೂಲಕ ಸಮಾಜವು ಗಂಡು ಮತ್ತು ಹೆಣ್ಣಿನ ಪಾತ್ರಗಳ ನಡುವೆ ಒಂದು ಗೆರೆ ಎಳೆಯುತ್ತದೆ ಎಂದು ಸ್ತ್ರೀವಾದಿ ಚಿಂತಕಿ ಸಿಮನ್‍ ದಿ ಬೋವಾ ಹೇಳುತ್ತಾಳೆ. ಇದೇ ಮುಂದೆ ಅಸಮಾನ ಅಧಿಕಾರಕ್ಕೂ ಎಡೆಮಾಡಿಕೊಟ್ಟಿದೆ.

ಕವಯತ್ರಿ ಅನಸೂಯ ಸೇನ್‍ ಗುಪ್ತಾ ಅವರ ಬಹುಚರ್ಚಿತ ಪದ್ಯ `ಸೈಲೆನ್ಸ್’ನ ಆರಂಭದ ಸಾಲು ಹೀಗಿದೆ-  ‘Too many women in too many countries speak the same language of silence… They say it is different now ‘  ಹೀಗೆ ಆರಂಭವಾಗಿ `ಮಾತನಾಡಬೇಕೆಂದರೆ ಸ್ವಾತಂತ್ರ್ಯವಿರಬೇಕು, ನಮ್ಮ ಮಾತು ಕೇಳಿಸಬೇಕೆಂದಿದ್ದರೆ ಅಧಿಕಾರವಿರಬೇಕು.’ ಎಂದು ಕೊನೆಯಾಗುತ್ತದೆ. ಅಲ್ಲಿಂದ ಇಲ್ಲಿಯವರೆಗಿನ ಈ ಪಯಣ ಕೊಟ್ಟಿರುವ ಸ್ಥೈರ್ಯ ಇನ್ನಷ್ಟು ದೂರದ ದಾರಿ ಸಾಗಲು ಶಕ್ತಿ ತುಂಬುವಂತಹುದು. ವೈಯಕ್ತಿಕ ನೆಲೆಯ ತಂತ್ರಗಾರಿಕೆಗಳು ಸಾಮುದಾಯಿಕ ಹೊರಾಟದ ದೃಷ್ಟಿಕೋನಗಳನ್ನು ಪ್ರಭಾವಿಸುತ್ತವೆ. ಆಧುನಿಕೋತ್ತರ ಸ್ತ್ರೀವಾದವು ಪುರುಷಾಧಿಪತ್ಯವನ್ನು ಭಿನ್ನ ನೆಲೆಯಲ್ಲಿ ನಿರ್ವಚಿಸಿದೆ. ಪುರುಷಾಧಿಕಾರ ಜಾಗತಿಕವಾದರೂ, ಕಾಲದೇಶಗಳಿಗನುಗುಣವಾಗಿ ಭಿನ್ನ ಸ್ವರೂಪದಲ್ಲಿರುತ್ತದೆ ಎಂಬ ವಾದವನ್ನು ಮಂಡಿಸಿ, ಅದನ್ನು ಸ್ಥಳೀಕರಿಸಿ ಸ್ತ್ರೀವಾದವನ್ನು ಹೊಸದಾಗಿ ವ್ಯಾಖ್ಯಾನಿಸಿದೆ. ಆಧುನಿಕೋತ್ತರ ನೆಲೆಯ ಸ್ತ್ರೀವಾದದಲ್ಲಿ ಅಧಿಕಾರವನ್ನು ಬಹು ಆಯಾಮಗಳ ನೆಲೆಯಿಂದ ನೋಡುವ ದೃಷ್ಟಿಕೋನವಿದೆ. ಮತ್ತು ಅಧಿಕಾರವನ್ನು ಬಹಳ ಸಂಕೀರ್ಣ ಹಾಗೂ ಸೂಕ್ಷ್ಮ ಸಂಗತಿ ಎಂದೇ ಪರಿಗಣಿಸಲಾಗಿದೆ.

ಹೆಣ್ಣಿನ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಮೌಲ್ಯಯುತವಾದುದು ಎಂದು ಪುರುಷಲೋಕ ಮಾನ್ಯಮಾಡುವುದಿಲ್ಲ ಮತ್ತು ಸೈರಿಸುವುದೂ ಇಲ್ಲ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಮುಂದುವರಿಯುತ್ತಿರುವಾಗ ಮಹಿಳೆಯ ಸಮಾನತೆಯನ್ನು, ಸ್ವಾತಂತ್ರ್ಯವನ್ನು ಹತ್ತಿಕ್ಕಲು ಮೃಗೀಯ ವರ್ತನೆಯನ್ನು ತೋರುತ್ತಿದೆ. ತನ್ನಂತೆಯೇ ಅವಳು ಎಂದು ಬಗೆಯದಿದ್ದರೆ, ಅವಳನ್ನೂ ಒಳಗೊಳ್ಳದಿದ್ದರೆ ಇಂತಹ ಬಿಕ್ಕಟ್ಟುಗಳು ಕೊನೆಯಾಗುವುದೇ ಇಲ್ಲ. ಗಂಡು- ಹೆಣ್ಣಿನ ನಡುವಿನ ಭಾವನಾತ್ಮಕ ಸಂಬಂಧವನ್ನು ಯಾವುದೇ ಶಾಸನ- ಕಾನೂನುಗಳು ರೂಪಿಸುವುದಕ್ಕೆ ಸಾಧ್ಯವಿಲ್ಲ.

ಬೆಳಗ್ಗೆ ಅವಸರದಲ್ಲಿ ಕಾಲೇಜಿಗೆ ಹೊರಟಿದ್ದೆ, ಕ್ಷಣಗಳ ಮೌಲ್ಯವನ್ನು `ಬಯೋಮೆಟ್ರಿಕ್‍’ ಕ್ಷಣಕ್ಷಣಕ್ಕೂ ಹೆಚ್ಚಿಸುತ್ತಿತ್ತು, ಹಾಗೆಯೇ ನನ್ನ ದ್ವಿಚಕ್ರ ವಾಹನದ ವೇಗವನ್ನೂ! ವಾಹನಗಳು ಒಂದಕ್ಕೊಂದು ರೇಸಿಗೆ ಇಳಿದಿದ್ದವು, ಹುಡುಗಿಯೊಬ್ಬಳು ಪಕ್ಕದ ಬೈಕ್‍ಸವಾರನನ್ನು ಹಿಂದಿಕ್ಕಿ ಮುಂದೆ ಸಾಗಿದಳು. ಬೈಕ್‍ ಸವಾರನ ಬಾಯಿಂದ ಪದವೊಂದು ಹಾರಿ ಬಂತು- ಅವ್ಳ್ ಅ*ನ್‍ …

“ಪೆಣ್ಣಲ್ಲವೆ ಪಡೆದ ತಾಯಿ, ಪೆಣ್ಣಲ್ಲವೆ ಪೊರೆದವಳು” ಎಷ್ಟೋ ವರ್ಷಗಳಿಂದ ಎಷ್ಟೆಲ್ಲಾ ಶಿಕ್ಷಕರು ಬೋಧಿಸಿದ್ದು ಕಿಟಕಿ ಬಾಗಿಲುಗಳಿಗೆ?!

– ಡಾ. ಕಾವ್ಯಶ್ರೀ ಎಚ್, ಲೇಖಕಿ- ಉಪನ್ಯಾಸಕಿ. (ಚಿಂತಕಿ ಚಿಮಮಾಂಡ ಅಡಿಚಿ ಅವರ ಫೆಮಿನಿಸ್ಟ್ ಮ್ಯಾನಿಫೆಸ್ಟೋ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ)

______

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...