ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಬಾರಾಮತಿಯಲ್ಲಿ ಲ್ಯಾಂಡ್ ಆಗಲು ಪ್ರಯತ್ನಿಸುವಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ನಿಧನರಾದರು. ಈ ಅಪಘಾತ ಮೂಲಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವಶಾಲಿ ಮತ್ತು ಶಾಶ್ವತ ರಾಜಕೀಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ 66 ವರ್ಷದ ಅಜಿತ್ ಪವಾರ್ ಅವರ ಜೀವದ ಜೊತೆಗೆ ವೃತ್ತಿಜೀವನ್ನೂ ಮೊಟಕುಗೊಳಿಸಿತು.
ಜುಲೈ 22, 1959 ರಂದು ಅಹ್ಮದ್‌ನಗರ ಜಿಲ್ಲೆಯ ಡಿಯೋಲಾಲಿ ಪ್ರವರದಲ್ಲಿ ಜನಿಸಿದ ಅಜಿತ್ ಪವಾರ್, ಮಹಾರಾಷ್ಟ್ರದ ಸಾರ್ವಜನಿಕ ಜೀವನದಲ್ಲಿ ಆಳವಾಗಿ ಬೆಸೆದುಕೊಂಡಿದ್ದ ರಾಜಕೀಯ ಕುಟುಂಬದಲ್ಲಿ ಬೆಳೆದರು.
ಅಜಿತ್ 18 ವರ್ಷ ವಯಸ್ಸಿನವನಾಗಿದ್ದಾಗ ಅವರ ತಂದೆ ಅನಂತರಾವ್ ಪವಾರ್ ನಿಧನರಾದರು. ನಂತರ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರ ಜೊತೆಗೆ ಸಕ್ರಿಯ ರಾಜಕೀಯಕ್ಕೆ ಸೇರಿಸಿಕೊಂಡರು. 1982 ರಲ್ಲಿ ಸಕ್ಕರೆ ಸಹಕಾರಿ ಸಂಸ್ಥೆಯ ಮಂಡಳಿಗೆ ಆಯ್ಕೆಯಾಗುವ ಮೂಲಕ ತಮ್ಮ ಸಾರ್ವಜನಿಕ ಜೀವನವನ್ನು ಪ್ರಾರಂಭಿಸಿದರು.
ಅವರ ಆರಂಭಿಕ ವರ್ಷಗಳು, ಪಶ್ಚಿಮ ಮಹಾರಾಷ್ಟ್ರದಲ್ಲಿ ರಾಜಕೀಯವನ್ನು ರೂಪಿಸಿದ ಸಹಕಾರಿ ಸಂಸ್ಥೆಗಳ ಸುತ್ತ ಕಳೆದವು. ಅವರು ಪ್ರಮುಖ ರಾಜಕೀಯ ಹುದ್ದೆಯನ್ನು ವಹಿಸಿಕೊಳ್ಳುವ ಮೊದಲೇ ಸಕ್ಕರೆ ಕಾರ್ಖಾನೆಗಳು, ಹಾಲು ಒಕ್ಕೂಟಗಳು ಮತ್ತು ಸ್ಥಳೀಯ ಬ್ಯಾಂಕ್‌ಗಳೊಂದಿಗೆ ಕೆಲಸ ಮಾಡುವ ಮೂಲಕ ತಮ್ಮ ರಾಜಕೀಯವಾಗಿ ಭದ್ರಗೊಂಡರು.
1991 ರಲ್ಲಿ, ಅವರು ಪುಣೆ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದರು, 16 ವರ್ಷಗಳ ಕಾಲ ಆ ಹುದ್ದೆಯನ್ನು ಅಲಂಕರಿಸಿದರು.
ಪವಾರ್ ಅವರ ಮೊದಲ ಚುನಾವಣಾ ಸ್ಪರ್ಧೆಯು 1991 ರಲ್ಲಿ ಬಾರಾಮತಿಯಿಂದ ಲೋಕಸಭೆಗೆ ಆಯ್ಕೆಯಾದಾಗುವ ಮೂಲಕ ಆರಂಭವಾಯಿತು. ನರಸಿಂಹರಾವ್ ಸರ್ಕಾರದಲ್ಲಿ ಶರದ್ ಪವಾರ್ ರಕ್ಷಣಾ ಸಚಿವರಾದ ನಂತರ ಅವರು ಆ ಸ್ಥಾನವನ್ನು ತೊರೆದು ರಾಜ್ಯ ರಾಜಕೀಯಕ್ಕೆ ಬಂದರು. ಅದೇ ವರ್ಷ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಗೆದ್ದರು.
ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ನಿರಂತರವಾಗಿ ಪ್ರತಿನಿಧಿಸುತ್ತಿದ್ದ ಸ್ಥಾನ ಇದು. ನವೆಂಬರ್ 2024 ರಲ್ಲಿ, ಅವರು ಎಂಟನೇ ಬಾರಿಗೆ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಅಲ್ಲಿ ಗೆದ್ದರು.
ಅಲ್ಲಿಂದ, ಪವಾರ್ ಅವರ ರಾಜಕೀಯ ಏರಿಕೆ ಸ್ಥಿರವಾಗಿತ್ತು. ಅವರು ತಮ್ಮ ಆಡಳಿತಾತ್ಮಕ ದಕ್ಷತೆ ಮತ್ತು ರಾಜ್ಯ ನೀತಿಯಲ್ಲಿ, ವಿಶೇಷವಾಗಿ ಹಣಕಾಸು, ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಗಣನೀಯ ಪ್ರಭಾವ ಬೀರಿದ್ದಕ್ಕಾಗಿ ಹೆಸರುವಾಸಿಯಾದರು.
ಇತ್ತೀಚಿನ ವರ್ಷಗಳಲ್ಲಿ, ಅವರು ನೀರಾವರಿ, ಜಲಸಂಪನ್ಮೂಲಗಳು ಮತ್ತು ಹಣಕಾಸು ಸೇರಿದಂತೆ ಹಲವಾರು ಹೆವಿವೇಯ್ಟ್ ಖಾತೆಗಳನ್ನು ನಿರ್ವಹಿಸಿದರು. ಮಹಾರಾಷ್ಟ್ರದ ಬಜೆಟ್ ತಯಾರಿಕೆ ಮತ್ತು ಅಧಿಕಾರಶಾಹಿ ನಿರ್ಧಾರ ತೆಗೆದುಕೊಳ್ಳುವಿಕೆಯ ಪ್ರಮುಖ ವ್ಯಕ್ತಿಯಾದರು.
ಅವರು ಉಪಮುಖ್ಯಮಂತ್ರಿಯಾಗಿ ಹಲವು ಅವಧಿಗೆ ಸೇವೆ ಸಲ್ಲಿಸಿದರು. ಆ ಹುದ್ದೆಯಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ರಾಜಕಾರಣಿಗಳಲ್ಲಿ ಒಬ್ಬರಾದರು.
ಅವರ ರಾಜಕೀಯ ಪ್ರಯಾಣವು ಹಲವಾರು ತಿರುವುಗಳಿಂದ ಗುರುತಿಸಲ್ಪಟ್ಟಿದೆ. ನವೆಂಬರ್ 2019 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ, ಭಾರತೀಯ ಜನತಾ ಪಕ್ಷ ಮತ್ತು ಶಿವಸೇನೆಯ ನಡುವಿನ ವಿಭಜನೆಯ ನಂತರ, ಅವರು ಮತ್ತು ದೇವೇಂದ್ರ ಫಡ್ನವಿಸ್ ಅವರು ರಾಜಭವನದಲ್ಲಿ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಪವಾರ್ ತಮ್ಮೊಂದಿಗೆ ಸಾಕಷ್ಟು ಶಾಸಕರನ್ನು ಕರೆದೊಯ್ಯಲು ಸಾಧ್ಯವಾಗದ ಕಾರಣ ಸರ್ಕಾರ ಕೇವಲ 80 ಗಂಟೆಗಳ ಕಾಲ ನಡೆಯಿತು.
ಜುಲೈ 2023 ರಲ್ಲಿ, ಅವರು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷವನ್ನು ವಿಭಜಿಸಿದರು. ಐದನೇ ಬಾರಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ನಡೆ ಶರದ್ ಪವಾರ್ ಅವರೊಂದಿಗಿನ ಅವರ ಅತ್ಯಂತ ನಾಟಕೀಯ ಸಂದರ್ಭಕ್ಕೆ ಸದಾಕ್ಷಿಯಾಯಿತು.
ಡಿಸೆಂಬರ್ 5, 2024 ರ ಹೊತ್ತಿಗೆ, ಅವರು ಮುಂಬೈನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಆರನೇ ಬಾರಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಅವರು ಮಹಾರಾಷ್ಟ್ರದ ರಾಜಕೀಯದಲ್ಲಿ ಪ್ರಬಲರಾಗಿ ಹೊರಹೊಮ್ಮಿದರು.
ಶರದ್ ಪವಾರ್ ಅವರ ರಾಜಕೀಯ ಪ್ರಭಾವದ ಹೊರತಾಗಿಯೂ, ಬಾರಾಮತಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅಜಿತ್ ಪವಾರ್ ಅವರ ನೆಲೆ ದೃಢವಾಗಿತ್ತು. ಅವರ ತಳಮಟ್ಟದ ಸಂಪರ್ಕ, ಸಹಕಾರಿ ವಲಯದ ಬಲ ಮತ್ತು ಬಿಗಿಯಾದ ಸಾಂಸ್ಥಿಕ ನಿಯಂತ್ರಣದ ಸಂಯೋಜನೆಯು ಅವರನ್ನು ಬದಲಾಗುತ್ತಿರುವ ಮೈತ್ರಿಗಳ ಮೂಲಕ ರಾಜಕೀಯವಾಗಿ ಸುರಕ್ಷಿತವಾಗಿರಿಸಿತು.
ತಮ್ಮ ವೇಗದ ಕಾರ್ಯಶೈಲಿ ಮತ್ತು ನಿಯಮಿತ ಸಾರ್ವಜನಿಕ ಸಂವಹನಕ್ಕೆ ಹೆಸರುವಾಸಿಯಾದ ಪವಾರ್, ಕೊನೆಯವರೆಗೂ ಸರ್ಕಾರದಲ್ಲಿ ಸಕ್ರಿಯರಾಗಿದ್ದರು. ಅವರು ಸಾಯುವ ಸಮಯದಲ್ಲಿ ಪ್ರಸ್ತುತ ಮಹಾರಾಷ್ಟ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಅಜಿತ್ ಪವಾರ್ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಅವರ ಸಾವು ಮಹಾರಾಷ್ಟ್ರ ರಾಜಕೀಯದಲ್ಲಿ ಗಮನಾರ್ಹವಾಗಿ ಶೂನ್ಯ ಆವರಿಸುವಂತೆ ಮಾಡಿದೆ.


