ಉಡುಪಿಯಲ್ಲಿ ಜೀವವಿಮಾ ಕಂಪೆನಿಯ ನೌಕರರಾಗಿದ್ದ ಜಿ. ರಾಜಶೇಖರ್ ಕನ್ನಡದ ಪ್ರಮುಖ ಸಾಹಿತ್ಯ ವಿಮರ್ಶಕರಲ್ಲೊಬ್ಬರು. ತನಗೆ ಸತ್ಯ ಎನಿಸಿದ್ದನ್ನು ಯಾವುದೇ ಹಿಂಜರಿಕೆಯಿಲ್ಲದೇ ಗಟ್ಟಿದನಿಯಲ್ಲಿ ನೇರವಾಗಿ ಹೇಳುವುದು ಅವರ ಬರಹ ಮತ್ತು ಬದುಕುಗಳ ಸ್ಥಾಯೀಗುಣ. ಕರಾವಳಿ ಪ್ರದೇಶದ ಕೋಮುವಾದೀಕರಣ ಹೆಚ್ಚುತ್ತಿದ್ದಂತೆ ಸತ್ಯ ಹೇಳುವ ದಿಟ್ಟತನವೂ ರಾಜಶೇಖರ್ ಅವರಲ್ಲಿ ಹೆಚ್ಚುತ್ತಾ ಹೋಯಿತು. ತಾನು ಅಭಿಮಾನಿಸುವ ಎಡಪಂಥದ ಕುರಿತ ಭಿನ್ನಮತವನ್ನೂ ಅಷ್ಟೇ ದಿಟ್ಟವಾಗಿ ಮುಂದಿಡುತ್ತಾ, ನೆಲದ ಸಂಕಷ್ಟಕ್ಕೆ ಸದಾ ಓಗೊಡುವ ಸಾವಯವ ಬುದ್ಧಿಜೀವಿ.

ಇದು ಎಂತಹ ಕೆಟ್ಟಕಾಲ ಎಂದರೆ ಜನಸಾಮಾನ್ಯರಲ್ಲಿ ಹೆಚ್ಚಿನವರಿಗೆ ಸ್ವಾತಂತ್ರ್ಯವಿಲ್ಲ ಎಂಬ ಸತ್ಯ ಕೂಡ ಗೊತ್ತಿಲ್ಲ. ಅವರು ಈಗಲೂ ತಾವು ಸ್ವತಂತ್ರರು ಎಂಬ ಭ್ರಮೆಯಲ್ಲಿ ಇದ್ದಾರೆ. ಸ್ವಾತಂತ್ರ್ಯದ ಮರೀಚಿಕೆಯನ್ನೇ ಜನರೆಲ್ಲಾ ವಾಸ್ತವವೆಂದು ನಂಬಿದ್ದಾರೆ. ಇಂತಹ ಸನ್ನಿವೇಶದಲ್ಲಿ ಅವರಿಗೆ ಅವರ ಪರಾಧೀನತೆಯನ್ನು ಹೇಗೆ ಮನವರಿಕೆ ಮಾಡುವುದು? ಜಗತ್ತಿನಲ್ಲಿ ಯಾವ ಪ್ರಭುತ್ವವು ತನ್ನ ಪ್ರಜೆಗಳ ಬಗ್ಗೆ ಎಲ್ಲಾ ಸತ್ಯಗಳನ್ನು ಹೇಳುವುದಿಲ್ಲ ಎಂಬುದು ನಾವು ಎದುರಿಸಲೇಬೇಕಾದ ವಾಸ್ತವ. ಜಗತ್ತಿನ ಪ್ರಭುತ್ವಗಳ ನಡುವೆ ತರತಮ ವ್ಯತ್ಯಾಸಗಳಿವೆ. ಮೇಲುನೋಟಕ್ಕೆ ನಮಗೆಲ್ಲ ತಿಳಿದಿರುವ ಹಾಗೆ, ಕೆಲವು ಪ್ರಭುತ್ವಗಳು ಹೆಚ್ಚು ಪ್ರಜಾಪ್ರಭುತ್ವವಾದಿಗಳಾಗಿ ತಮ್ಮ ಆಳ್ವಿಕೆಯ ಬಗ್ಗೆ ಪ್ರಾಮಾಣಿಕವಾಗಿ ಜನರ ಮುಂದೆ ಹೇಳಿಕೊಳ್ಳುತ್ತವೆ. ಆದರೆ ಸದ್ಯಕ್ಕೆ ಮೋದಿ ಸರಕಾರದ ಆಳ್ವಿಕೆಯಲ್ಲಿ ಪ್ರಭುತ್ವ ತನ್ನ ಜೀವವಿರೋಧಿ ಹಾಗೂ ಮಾನವ ದ್ವೇಷಿಯಾದರೂ ಪ್ರಜಾಪ್ರಭುತ್ವದ ಮುಖವಾಡ ಹಾಕುವುದರಲ್ಲಿ ಸಫಲವಾಗಿದೆ.
ಈ ದೃಷ್ಟಿಯಿಂದ ನೋಡಿದರೆ ಕಾಶ್ಮೀರದಲ್ಲಿ ಸದ್ಯಕ್ಕೆ ಇರುವ ಕತ್ತು ಹಿಸುಕುವ ವಾತಾವರಣ ಇಡೀ ದೇಶದ ರೂಪಕವಾಗಿದೆ. ಶ್ರೀಮಂತ ಪಟ್ಟಭದ್ರರು ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಅವುಗಳ ನಿಯಂತ್ರಣದಲ್ಲಿರುವ ಮಾಧ್ಯಮಗಳ ಒತ್ತಾಸೆಯೊಂದಿಗೆ ನರೇಂದ್ರ ಮೋದಿ ಮತ್ತು ಅವರ ಬಿಜೆಪಿ ಪಕ್ಷ ಚುನಾವಣೆಗಳನ್ನು ಗೆದ್ದುಕೊಂಡು ಅಧಿಕಾರಕ್ಕೆ ಬಂದಿದೆ. ಇದಕ್ಕೆ ಭಾರತದ ಎಡ ಪಕ್ಷಗಳನ್ನು ಹೊರತುಪಡಿಸಿ ಇತರ ಸೋ ಕಾಲ್ಡ್ ಲಿಬರಲ್, ಸೆಕ್ಯುಲಾರ್, ರಾಜಕೀಯ ಪಕ್ಷಗಳು – ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಗೋಸುಂಬೆ ನೀತಿಯು ಸ್ವಲ್ಪ ಕಾರಣವೆಂಬುದನ್ನು ನಾವು ಮರೆಯಕೂಡದು.
ನಿಜಕ್ಕೂ ಜನಾಂಗ ದ್ವೇಷಿ ರಾಜಕೀಯ ಪಕ್ಷ ಬಿಜೆಪಿ ಮತ್ತು ಅದಕ್ಕೆ ಎದುರಾಗಿ ಇನ್ನೊಂದು ಮಾನವೀಯತೆಯ ಮುಖವಾಡ ತೊಟ್ಟ ಆದರೆ ತನ್ನ ಎದುರಾಳಿಯಷ್ಟೇ ಅಲ್ಪಸಂಖ್ಯಾತರನ್ನು ತಿರಸ್ಕಾರದಿಂದ ಕಾಣುವ ರಾಜಕೀಯ ಪಕ್ಷ ಕಾಂಗ್ರೆಸ್, ಸದ್ಯಕ್ಕೆ ಇದು ನಮ್ಮ ರಾಜಕೀಯ ಸನ್ನಿವೇಶ! (ಈ ಮಾತು ಉತ್ಪ್ರೇಕ್ಷೆ ಎಂದು ಭಾವಿಸುವವರು ಬಾಬರಿ ಮಸೀದಿ ಧ್ವಂಸದ ನಂತರ ಮುಂಬೈ ಶಹರದಲ್ಲಿ ಕಾಂಗ್ರೆಸ್ ಸರಕಾರದ ಆಳ್ವಿಕೆಯಲ್ಲಿ ಭುಗಿಲೆದ್ದ ಮುಸ್ಲಿಮ್ ವಿರೋಧಿ ಹಿಂಸೆಯನ್ನು ಮರೆಯಬಾರದು). ಈ ಹಿನ್ನೆಲೆಯಲ್ಲಿ ಪ್ರಜೆಗಳ ಪ್ರಜಾಸತ್ತಾತ್ಮಕ ಆಯ್ಕೆಯ ಸ್ವಾತಂತ್ರ್ಯ ಎಂಬುದು ನಿಜಕ್ಕೂ ಒಂದು ಮರೀಚಿಕೆಯೇ ಸರಿ!
ಚುನಾವಣೆ ಎಂಬುದು ಕೇವಲ ದುಡ್ಡಿನ ಚೀಲಗಳ ಮೇಲಾಟವಲ್ಲ. ಅದು ಮತಾಂಧತೆ ಧರ್ಮನಿರಪೇಕ್ಷತೆ ಸಮಾಜವಾದ ಮುಂತಾದ ಛದ್ಮವೇಶ ವೇಷಗಳನ್ನು ತೊಟ್ಟು ದುಡ್ಡಿನ ಚೀಲಗಳು ಆಡುವ ನಾಟಕ ಕೂಡ! ಇಂತಹ ಸೋಗಲಾಡಿ ಪ್ರಜಾಪ್ರಭುತ್ವವಿರುವಾಗಲೇ ನಮ್ಮ ದೇಶದಲ್ಲಿ ಗೌರಿ ಲಂಕೇಶ್ ಮಾತ್ರವಲ್ಲ, ನರೇಂದ್ರ ಧಾಬೋಲ್ಕರ್ ಗೋವಿಂದ ಪನ್ಸಾರೆ ಎಂಎಂ ಕಲಬುರ್ಗಿ ಮುಂತಾದವರು ಕೊಲೆಯಾಗುತ್ತಾರೆ ಎಂದರೆ ಈ ನಾಡು ಎಂತಹ ದುಸ್ಥಿತಿಯಲ್ಲಿದೆ ಎಂದು ಯಾರಿಗಾದರೂ ದಿಗ್ಭ್ರಮೆ ಆದೀತು.
ಮೊನ್ನೆ ಸೆಪ್ಟೆಂಬರ್ 5ಕ್ಕೆ ಗೌರಿ ಕೊಲೆಯಾಗಿ ಎರಡು ವರ್ಷಗಳಾದವು. ಕರ್ನಾಟಕದಲ್ಲಿ ಆಕೆಯ ಸಂಸ್ಮರಣೆಯ ಕುರಿತ ಕಾರ್ಯಕ್ರಮವನ್ನು ನನಗೆ ಗೊತ್ತಿರುವ ಮಟ್ಟಿಗೆ ಯಾರು ಹಮ್ಮಿಕೊಳ್ಳಲಿಲ್ಲ. ಅಥವಾ ನಮ್ಮ ಪತ್ರಿಕೆಗಳು ಆ ಬಗ್ಗೆ ವರದಿ ಮಾಡಲೇ ಇಲ್ಲವೇ? ಅದು ಹೇಗಿದ್ದರೂ ಈ ನಾಡನ್ನು ನಾಡಿನ ಜನತೆಯನ್ನು ಇನ್ನಿಲ್ಲದಂತೆ ಪ್ರೀತಿಸಿದ ಜನಸಾಮಾನ್ಯರ ಏಳಿಗೆಯನ್ನು ನನ್ನ ಬದುಕಿನ ಉಸಿರಾಗಿ ಮಾಡಿಕೊಂಡ ಒಂದು ಜೀವದ ಕೊಲೆಯಾಗಿ ಇದೇ ಸೆಪ್ಟೆಂಬರ್ 5ಕ್ಕೆ ಎರಡು ವರ್ಷ ಕಳೆಯಿತು. ನನಗೆ ಗೊತ್ತಿರುವ ಮಟ್ಟಿಗೆ ಕರ್ನಾಟಕದಲ್ಲಿ ಯಾರು ಅಷ್ಟೊಂದು ತೀವ್ರವಾಗಿ ಹಚ್ಚಿಕೊಂಡಂತೆ ಕಾಣಲಿಲ್ಲ. ಗೌರಿ ಲಂಕೇಶ್, ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ ಎಂಎಂ ಕಲಬುರ್ಗಿ ಮುಂತಾದ ಈ ನಾಡಿನ ಸಂಸ್ಕೃತಿಯ ಹೀರೋಗಳು. ಹೀರೋಗಳು ಎಂಬ ಕಾರಣಕ್ಕೇನೆ ಕೊಲೆಯಾಗಿ ಜನ ಅದನ್ನು ತೀವ್ರವಾಗಿ ಹಚ್ಚಿಕೊಳ್ಳದಿದ್ದರೆ ಕ್ರಮೇಣ ಮಾನವ ದ್ವೇಷಿಗಳು ಸಾಮಾನ್ಯರನ್ನು ಸಹ ಕಾರಣವಿಲ್ಲದೆ ಕೊಲೆ ಮಾಡುವುದು ಸುಲಭವಾಗುತ್ತದೆ.
ಇದಕ್ಕೆ ಒಂದು ಉದಾಹರಣೆ ಎಂದರೆ ಎರಡು ವರ್ಷಗಳ ಕೆಳಗೆ, ನಿಖರವಾಗಿ ಹೇಳಬೇಕು ಎಂದರೆ 2017ರ ಜೂನ್ ತಿಂಗಳ 27ನೇ ತಾರೀಖಿನಂದು ರಾಜಧಾನಿ ನವದೆಹಲಿಯ ಹೊರವಲಯದಲ್ಲಿ ಸಂಚರಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕನಾಗಿದ್ದ ಹದಿಹರೆಯದ ಮುಸ್ಲಿಂ ಯುವಕ ಹಾಫೀಸ್ ಜುನೈದ್ ಖಾನ್ ಎಂಬ ಮುಸ್ಲಿಂ ತರುಣನನ್ನು ಅವನಿಗೆ ಚೂರು ಪರಿಚಯವಿಲ್ಲದ ಅವನ ಸಹಪ್ರಯಾಣಿಕರು ಹಣ್ಣು ಕತ್ತರಿಸುವ ಸಾಮಾನ್ಯ ಚಾಕುವಿನಲ್ಲಿ ಇರಿದು ಇರಿದು ಕೊಂದರು. ಈ ಕೊಲೆಗೆ ಕಾರಣವಾದದ್ದು ಹಾಫೀಸ್ ಜುನೈದ್ ಧರಿಸಿದ ಟೊಪ್ಪಿಗೆ. ಅದು ಮುಸ್ಲಿಮರು ಮಾತ್ರ ಧರಿಸುವಂತಹ ನಮೂನೆಯ ಟೊಪ್ಪಿಗೆ ಆಗಿತ್ತು. ಜುನೈದ್ ಅದನ್ನು ಧರಿಸಿದ್ದೆ ಅವನು ಒಬ್ಬ ಮುಸ್ಲಿಂ ಎಂದು ಅವನ ಪ್ರಯಾಣಿಕರಿಗೆ ಗೊತ್ತಾಗಿ ಅವನು ಕೊಲೆಯಾದ. ಹಾಫೀಸ್ ಜುನೈದ್‍ಗೆ ತನ್ನ ಕೊಲೆಗಡುಕರಲ್ಲಿ ಯಾರ ಪರಿಚಯವೂ ಇರಲಿಲ್ಲ. ಹಾಫೀಸ್‍ನನ್ನು ಕೊಂದವರಿಗೆ ಸಹ ಅವನ ಪರಿಚಯವಿರಲಿಲ್ಲ. ಹಾಫೀಸ್‍ನನ್ನು ಕೊಲ್ಲುವ ಆ ಅಪರಾಧಿ ಕೃತ್ಯಕ್ಕೆ ಅವನು ಕೊಲೆಗಡುಕರ ಧರ್ಮಕ್ಕಿಂತ ಭಿನ್ನವಾದ ಇನ್ನೊಂದು ಧರ್ಮಕ್ಕೆ ಸೇರಿದವನು ಎಂಬ ಕಾರಣ ಬಿಟ್ಟರೆ ಬೇರೆ ಕಾರಣವೇ ಇರಲಿಲ್ಲ.
ತಮ್ಮ ಧರ್ಮ ಕೊಲೆಗಡುಕ ಎಂದು ಕರೆದರೆ ಬಹುಸಂಖ್ಯಾತ ಹಿಂದೂಗಳು ಈಗಲೂ ಬೆಚ್ಚಿಬೀಳುತ್ತಾರೆ. ಆದರೆ ಈ ವರ್ತಮಾನ ಕಾಲದಲ್ಲೂ ಹಿಡಿಯಷ್ಟು ಸಂಖ್ಯೆಯ ಹಿಂದುತ್ವವಾದಿಗಳು ಹಿಂದೂ ಧರ್ಮವನ್ನು ಒಂದು ಕೊಲೆಗಡುಕ ಶ್ರದ್ಧೆಯನ್ನಾಗಿ ಪರಿವರ್ತಿಸಲು ತಮ್ಮ ಸಂಘಟಿತ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕಿಂತ ದುರದೃಷ್ಟಕರವಾದ ಸಂಗತಿಯೆಂದರೆ ನಮ್ಮ ಸದ್ಯದ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯ ಮತ್ತು ಪ್ರಜೆಗಳ ಹಕ್ಕುಗಳ ಸಂವಿಧಾನದ ಚೌಕಟ್ಟನ್ನು ಬಳಸಿಕೊಂಡೆ ಅವರು ತಮ್ಮ ಸಂಘಟನೆಯ ಮತೀಯ ದ್ವೇಷದ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಹಾಫೀಸ್ ಜುನೈದ್‍ನನ್ನು ಸಲೀಸಾಗಿ ಕೊಲ್ಲುವ ಸಮಾಜದಲ್ಲಿ ಅಷ್ಟೇ ಸುರಳೀತವಾಗಿ ಗೌರಿ ಲಂಕೇಶ್, ದಾಬೋಲ್ಕರ್, ಪನ್ಸಾರೆ ಮತ್ತು ಕಲಬುರ್ಗಿ ಅಂತವರನ್ನು ಕೊಲ್ಲಲಾಗುತ್ತದೆ. ಹಾಗಾಗಿ ಸಾಮಾನ್ಯರ ಕೊಲೆ ಬುದ್ಧಿಜೀವಿಗಳ ಕೊಲೆ ಎಂದು ಕೊಲೆಗಳನ್ನು ನಾವು ವಿಂಗಡಿಸುವುದು ಮತ್ತು ಬುದ್ಧಿಜೀವಿಗಳ ಕೊಲೆಯನ್ನು ಮಾತ್ರ ಮುಖ್ಯವಾಗಿ ಪರಿಗಣಿಸುವುದು ಸರಿಯಲ್ಲ. ನಮ್ಮ ಸೂಕ್ಷ್ಮಜ್ಞರು ಈ ಸತ್ಯಗಳನ್ನು ಇನ್ನಾದರೂ ಗಮನಿಸಬೇಕು.


